
ದಿನನಿತ್ಯದ ಜೀವನದಲ್ಲಿ ಬಾಯಿರುಚಿಗೆ ಅದರದೇ ಆದ ಪ್ರಾಮುಖ್ಯವಿದೆ. ನಮ್ಮ ಸಂಸ್ಕೃತಿಯ ಆಧಾರದಲ್ಲಿ ವಿವಿಧ ಜನರಿಗೆ ಅವರವೇ ಆದ ಆಹಾರಪದ್ಧತಿಗಳಿವೆ. ದೇಹದ ಆರೋಗ್ಯಕ್ಕೆ ಸಮಪ್ರಮಾಣದಲ್ಲಿ ಪೋಷಕಾಂಶಗಳಿರುವ ಆಹಾರ ಅಗತ್ಯವೆಂಬುದು ಎಲ್ಲರಿಗೂ ಅರಿವಿದ್ದರೂ ಆ ಆಹಾರದ ರುಚಿಯ ಬಗ್ಗೆ ಎಲ್ಲರಿಗೂ ಅವರದೇ ಆದ ಇಷ್ಟ-ಕಷ್ಟಗಳು ಇರುತ್ತವೆ
ಮನುಷ್ಯನ ನಾಲಗೆಯಲ್ಲಿರುವ ವಿಶೇಷ ಕಣಗಳು ವಿವಿಧ ಬಗೆಯ ರುಚಿಯನ್ನು ನಿಖರವಾಗಿ ಗ್ರಹಿಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ರುಚಿಯನ್ನು ಗ್ರಹಿಸುವ ಮೊಗ್ಗುಗಳು (Taste Buds) ನಾಲಗೆಯ ಮೇಲೆ ಸ್ಥಾಪಿತವಾಗಿರುವ ವಿಶೇಷ ಕಣಗಳಾಗಿವೆ. ಅವುಗಳ ಮೂಲಕ ಸಿಹಿ, ಉಪ್ಪು, ಹುಳಿ, ಕಹಿ ಮತ್ತು ಖಾರದ ಅಂಶವನ್ನು ನಮ್ಮ ಮಿದುಳು ಗುರುತಿಸಬಲ್ಲದು. ಈ ರುಚಿಯ ಮೊಗ್ಗುಗಳು ಆಹಾರ ಪದಾರ್ಥಗಳ ಸಂಪರ್ಕಕ್ಕೆ ಬಂದ ನಂತರ ನಡೆಯುವ ರಾಸಾಯನಿಕ ಕ್ರಿಯೆಯು ನರಗಳ ಮೂಲಕ ಸಂಚರಿಸಿ ಮಿದುಳನ್ನು ತಲುಪಿದ ನಂತರ, ಮಿದುಳು (Gustatory Cortex) ಆ ಸಂವಹನವನ್ನು ವಿವಿಧ ಬಗೆಯ ರುಚಿಯನ್ನಾಗಿ ಅರ್ಥೈಸಿ ಕೊಳ್ಳುತ್ತದೆ. ಮನುಷ್ಯನ ದಿನನಿತ್ಯದ ಜೀವನದಲ್ಲಿಯೂ ಬಾಯಿರುಚಿಗೆ ಅದರದೇ ಆದ ಪ್ರಾಮುಖ್ಯವಿದೆ. ನಮ್ಮ ಸಂಸ್ಕೃತಿಯ ಆಧಾರದಲ್ಲಿ ವಿವಿಧ ಜನರಿಗೆ ಅವರವೇ ಆದ ಆಹಾರಪದ್ಧತಿಗಳಿವೆ. ನಮ್ಮ ದೇಹದ ಆರೋಗ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳಿರುವ ಆಹಾರ ಅಗತ್ಯವೆಂಬುದು ಎಲ್ಲರಿಗೂ ಅರಿವಿದ್ದರೂ ಆ ಆಹಾರದ ರುಚಿಯ ಬಗ್ಗೆ ಎಲ್ಲರಿಗೂ ಅವರದೇ ಆದ ಇಷ್ಟ-ಕಷ್ಟಗಳು ಇರುತ್ತವೆ.
ಮಾನವನ ರುಚಿಸಂವೇದನೆಯ ವಿಕಾಸವು ಲಕ್ಷಾಂತರ ವರ್ಷಗಳ ಸತತ ಬದಲಾವಣೆಗಳ ಫಲಿತಾಂಶವಾಗಿದೆ. ಇದು ಆಹಾರದ ಆಯ್ಕೆ, ಬದುಕುಳಿಯುವ ಹಂಬಲ ಮತ್ತು ಪೌಷ್ಟಿಕಾಂಶದ ಅಗತ್ಯಗಳ ಆಧಾರದ ಮೇಲೆ ರೂಪಿತವಾಗಿದೆ. ಪ್ರಾಣಿಗಳಿಗೆ ಹೋಲಿಸಿದರೆ ಮಾನವನ ರುಚಿಗ್ರಹಿಕೆಯು ವಿಶಿಷ್ಟವಾಗಿದೆ. ಮನುಷ್ಯನ ನಾಲಗೆಯಲ್ಲಿ ಸುಮಾರು ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿ ಕಂಡುಬರುವ ರುಚಿಯ ಮೊಗ್ಗುಗಳು ಹುಟ್ಟಿಕೊಂಡ ಮೂಲ ಉದ್ದೇಶವು ಆಹಾರವನ್ನು ಗುರುತಿಸುವುದು ಮತ್ತು ವಿಷಯುಕ್ತ ಪದಾರ್ಥ ಗಳನ್ನು ಸೇವಿಸದಿರುವುದೇ ಆಗಿದೆ. ಮಾನವನ ವಿಕಸನದ ಪ್ರಾರಂಭದಲ್ಲಿ ಮಾನವರು ಕಾಡಿನಲ್ಲಿ ಸಿಗುವ ಹಣ್ಣು, ಬೇರುಗಳನ್ನು ತಿನ್ನುತ್ತಿದ್ದರು. ವಿಷಕಾರಿ ಸಸ್ಯಗಳನ್ನು ಸೇವಿಸುವುದನ್ನು ತಪ್ಪಿಸಲು ಕಹಿರುಚಿಯನ್ನು ನಾಲಗೆಯು ಗುರುತಿಸಲು ಕಲಿಯಿತು; ತದನಂತರ ಪೌಷ್ಟಿಕಯುಕ್ತ ಅಂಶಗಳನ್ನು ನೀಡಬಲ್ಲ ವಿವಿಧ ಹಣ್ಣುಗಳನ್ನು ಗುರುತಿಸಲು ಮತ್ತು ಅವುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಿಹಿರುಚಿಯನ್ನು ಗುರುತಿಸುವ ಸಾಮರ್ಥ್ಯವೂ ನಮ್ಮಲ್ಲಿ ವಿಕಸನಗೊಂಡಿತು. ಬೆಂಕಿಯ ಆವಿಷ್ಕಾರದ ನಂತರ ಮನುಷ್ಯರು ಬೇಯಿಸಿದ ಆಹಾರವನ್ನು ಮತ್ತು ಬೇಯಿಸಿದ ಮಾಂಸವನ್ನು ತಿನ್ನಲು ಪ್ರಾರಂಭಿಸಿದರು. ಬೇಯಿಸುವುದು ಮತ್ತು ಅಡುಗೆ ಮಾಡುವುದು ವಿಷಕಾರಿ ಆಹಾರವನ್ನು ಸೇವಿಸುವ ಅಪಾಯವನ್ನು ಕಡಿಮೆ ಮಾಡಿತು. ಇದೇ ಸಮಯದಲ್ಲಿ ಖಾರದ ರುಚಿಯನ್ನು ಗ್ರಹಿಸುವ ಸಾಮರ್ಥ್ಯವು ಮನುಷ್ಯರಲ್ಲಿ ಮೂಡಿತು. ‘ವಿಟಮಿನ್ ಸಿ’ ಎಂಬ ಬಹಳ ಮುಖ್ಯವಾದ ಪದಾರ್ಥವನ್ನು ಮಾನವನ ದೇಹಕ್ಕೆ ತಯಾರಿ ಸಿಕೊಳ್ಳುವ ಶಕ್ತಿಯಿರುವುದಿಲ್ಲ. ವಿಟಮಿನ್ ಸಿ ದೇಹಕ್ಕೆ ದೊರೆಯುವುದು ಮನುಷ್ಯ ಬದುಕುಳಿಯಲು ಅಗತ್ಯವಾಗಿದೆ. ವಿಟಮಿನ್ ಸಿ ಪದಾರ್ಥವು ಹುಳಿಯ ಅಂಶವಿರುವ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡುಬರುವ ಕಾರಣ ಮನುಷ್ಯರು ಹುಳಿಯ ರುಚಿಯನ್ನು ಗ್ರಹಿಸಲು ವಿಕಸನಗೊಂಡರು.
ಮಾನವರು ಮಾಂಸ ಮತ್ತು ಸಸ್ಯ – ಎರಡನ್ನೂ ತಿನ್ನುವವರಾದ್ದರಿಂದ, ಐದು ಮುಖ್ಯ ರುಚಿಗಳನ್ನು (ಸಿಹಿ, ಹುಳಿ, ಉಪ್ಪು, ಕಹಿ, ಖಾರ) ಗ್ರಹಿಸುವ ಸಾಮರ್ಥ್ಯವನ್ನು ಕಾಲಕ್ರಮೇಣ ರೂಢಿಸಿಕೊಂಡರು. ಬರಿಯ ಸಸ್ಯಾಹಾರ ವನ್ನು ಮತ್ತು ಬೇಯಿಸಿದ ಆಹಾರವನ್ನು ಸೇವಿಸದೆ ವಿವಿಧ ಬಗೆಯ ಹುಲ್ಲುಗಳನ್ನು ಮೇಯುವ ಹಸುವಿನಲ್ಲಿ ವಿಷಯುಕ್ತ ಹುಲ್ಲುಗಳನ್ನು ಗುರುತಿಸುವ ಕಾರಣಕ್ಕಾಗಿ ಮನುಷ್ಯರಿಗಿಂತ ಎರಡು ಪಟ್ಟು ಹೆಚ್ಚು ರುಚಿಯ ಮೊಗ್ಗುಗಳು ಹಸುವಿನಲ್ಲಿದೆ. ಮಾಂಸಾಹಾರವನ್ನು ಮಾತ್ರ ಸೇವಿಸುವ ಹುಲಿ ಮತ್ತು ಚಿರತೆಯ ನಾಲಗೆಗಳಲ್ಲಿ ಸಿಹಿಯ ರುಚಿಯನ್ನು ಗ್ರಹಿಸುವ ರುಚಿಯ ಮೊಗ್ಗುಗಳು ಇರುವುದಿಲ್ಲ. ನಮ್ಮ ವಿಕಸನದಲ್ಲಿ ಬೇಯಿಸಿದ ಮಾಂಸಕ್ಕೆ ಹೊಂದಿಕೊಂಡಿರುವ ಮನುಷ್ಯರ ನಾಲಗೆ ರುಚಿಯ ಮೊಗ್ಗುಗಳು ಹಸಿಮಾಂಸದ ರುಚಿಯನ್ನು ಬೇರೆ ಪ್ರಾಣಿಗಳಂತೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿಲ್ಲ.
ಹಲವು ಕಾಯಿಲೆಗಳ ಸಂದರ್ಭದಲ್ಲಿ ಮನುಷ್ಯನ ನಾಲಗೆಯು ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಳೆದು ಕೊಳ್ಳುತ್ತದೆ ಅಥವಾ ಕೆಲವು ಸಂದರ್ಭಗಳಲ್ಲಿ ರುಚಿಯನ್ನು ತಪ್ಪಾಗಿ ಗ್ರಹಿಸುತ್ತದೆ. ಸಂಪೂರ್ಣವಾಗಿ ರುಚಿ ತಿಳಿಯದ ಸ್ಥಿತಿಯನ್ನು ‘ಏಜೂಸಿಯಾ’ ಎಂದು ಕರೆಯುತ್ತೇವೆ. ಇದು ಬಹಳ ಅಪರೂಪ. ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುವ ಕಾಯಿಲೆಯನ್ನು ನಾವು ‘ಹೈಪೋಜೂಸಿಯಾ’ ಎಂದು ಕರೆಯುತ್ತೇವೆ. ಬಾಯಿಯಲ್ಲಿ ಸದಾ ಲೋಹದಂತಹ ಅಥವಾ ಉಪ್ಪಿನ ರುಚಿಯಂತೆ ಕಂಡುಬರುವ ಕಾಯಿಲೆಯನ್ನು ‘ಡಿಸ್ಜೂಸಿಯಾ’ ಎಂದು ಕರೆಯುತ್ತೇವೆ. ಕೆಲವು ಸಂದರ್ಭಗಳಲ್ಲಿ ರುಚಿಯ ಮೊಗ್ಗುಗಳಲ್ಲಿ ಸಮಸ್ಯೆಗಳು ಕಂಡು ಬಂದಾಗ ಒಂದು ವಸ್ತುವಿನ ರುಚಿ ಮತ್ತೊಂದರಂತೆ ಕಂಡುಬರುವುದನ್ನು ‘ಪ್ಯಾರಾಜೂಸಿಯಾ’ ಎಂದು ಕರೆಯುತ್ತೇವೆ.
ರುಚಿಯ ಮೊಗ್ಗುಗಳು ರುಚಿಯನ್ನು ಕಳೆದುಕೊಳ್ಳಲು ಹಲವು ಕಾರಣಗಳಿವೆ. ಮುಖ್ಯವಾಗಿ ವೈರಲ್ ಸೋಂಕುಗಳು ಬಂದಾಗ ಅವು ರುಚಿಯ ಮೊಗ್ಗುಗಳನ್ನು ನಾಶ ಮಾಡುತ್ತವೆ. ರುಚಿಯ ಮೊಗ್ಗುಗಳು ಮತ್ತೆ ಚೇತರಿಸಿಕೊಳ್ಳಲು ಕೆಲವು ವಾರಗಳು ಬೇಕಾಗುತ್ತದೆ. ಕೋವಿಡ್ ವೈರಸ್ ಸೋಂಕು ಬಂದ ಸಂದರ್ಭದಲ್ಲಿ ಅದು ರುಚಿಯನ್ನು ನಾಶ ಮಾಡಿತ್ತು. ಕೆಲವು ಆ್ಯಂಟಿಬಯಾಟಿಕ್ ಔಷಧಗಳು, ಬಿಪಿಮಾತ್ರೆಗಳು ಕೂಡ ರುಚಿಯನ್ನು ಕೆಡಿಸಬಲ್ಲವು. ವಿಟಮಿನ್ ಮತ್ತು ಝಿಂಕ್ ಪ್ರಮಾಣವು ದೇಹದಲ್ಲಿ ಕಡಿಮೆಯಾದಾಗಲೂ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗಬಲ್ಲದು. ಹಲ್ಲಿನ ಸಮಸ್ಯೆಗಳು, ಒಸಡಿನ ಸಮಸ್ಯೆಗಳು ಮತ್ತು ಧೂಮಪಾನ ಕೂಡ ರುಚಿಯ ಮೊಗ್ಗನ್ನು ನಾಶಮಾಡಬಲ್ಲವು. ಪಾರ್ಕಿನ್ಸನ್ ಮತ್ತು ಆಲ್ಝೀಮರ್ಸ್ ಕಾಯಿಲೆಗಳು ರುಚಿಯ ಮೇಲೆ ತಮ್ಮ ಪ್ರಮಾಣ ಬೀರುತ್ತವೆ. ನಾಲಗೆಯು ರುಚಿಯನ್ನು ಸರಿಯಾಗಿ ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡರೆ ದೇಹವು ತನಗೆ ಅಗತ್ಯವಾದ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವಲ್ಲಿ ಎಡವಬಹುದು. ಮನುಷ್ಯರಲ್ಲಿ ವಿಶೇಷವಾಗಿ ವಿಕಸನಗೊಂಡ ರುಚಿಯನ್ನು ಗ್ರಹಿಸುವ ಶಕ್ತಿಯು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.