ADVERTISEMENT

World Heart Day: ಹೃದಯಾಘಾತ: ಯುವಜನರಲ್ಲಿ ಹೆಚ್ಚಳ- ತಜ್ಞರ ಕಳವಳ

ನಗರದ ಹೃದ್ರೋಗ ತಜ್ಞರು ಕಳವಳ * ಹೃದಯದ ಆರೋಗ್ಯಕ್ಕೆ ಆದ್ಯತೆ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 2:51 IST
Last Updated 29 ಸೆಪ್ಟೆಂಬರ್ 2022, 2:51 IST
   

ಬೆಂಗಳೂರು: ‘ಬದಲಾದ ಜೀವನಶೈಲಿ, ಧೂಮಪಾನದಂತಹ ವ್ಯಸನಗಳಿಂದ ಇತ್ತೀಚಿನ ವರ್ಷಗಳಲ್ಲಿ 50 ವರ್ಷದೊಳಗಿನವರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ’ ಎಂದು ನಗರದ ಹೃದ್ರೋಗ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವ ಹೃದಯ ದಿನದ ಪ್ರಯುಕ್ತ ಹೃದಯ ಆರೋಗ್ಯಕ್ಕೆ ಆದ್ಯತೆ ನೀಡಲು ಮನವಿ ಮಾಡಿಕೊಂಡಿರುವ ವೈದ್ಯರು, ‘ಬದಲಾದ ಜೀವನ ಶೈಲಿಯಿಂದ ಹೃದಯದ ಆರೋಗ್ಯವು ಹಂತ ಹಂತವಾಗಿ ಕ್ಷೀಣಿಸುತ್ತಿದೆ. ಹೃದಯದ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಹೃದಯಾಘಾತ ಸಂಭವಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಧೂಮಪಾನ, ಮಾದಕ ವಸ್ತು ಸೇವನೆ, ಒತ್ತಡದ ಜೀವನ, ವಾಯುಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಹೃದಯಾಘಾತ ಸಂಭವಿಸುತ್ತಿದೆ. ಅನುವಂಶೀಯತೆಯಿಂದಲೂ ಕೆಲವರಿಗೆ ಹೃದಯಾಘಾತವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿವಿಧ ಕ್ಷೇತ್ರಗಳ ಪ್ರಮುಖರು ಹಠಾತ್ ನಿಧನಗೊಂಡಿದ್ದರಿಂದಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಸಮಗ್ರ ಆರೋಗ್ಯ ಆರೈಕೆ ಸಂಸ್ಥೆ ಪ್ರಾಕ್ಟೊ ಅಧ್ಯಯನ ನಡೆಸಿದೆ.‘ಹೃದಯಾಘಾತಕ್ಕೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿಂದ ವಿಚಾರಿಸುವವರ ಪ್ರಮಾಣ ದೇಶದಲ್ಲಿ ಶೇ 200ರಷ್ಟು ಹೆಚ್ಚಳವಾಗಿದೆ. 50ವರ್ಷದೊಳಗಿನವರು ಹೆಚ್ಚಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಪುಣೆ ಒಳಗೊಂಡಂತೆ ಪ್ರಥಮ ಶ್ರೇಣಿಯ ನಗರದವರೇ ಹೃದಯಾಘಾತದ ಬಗ್ಗೆ ಹೆಚ್ಚಾಗಿ ವಿಚಾರಿಸಿದ್ದಾರೆ’ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

‘ಕಳೆದ ಮೂರು ತಿಂಗಳ ಅವಧಿಯಲ್ಲಿ ಅಧಿಕ ರಕ್ತದೊತ್ತಡ ಕುರಿತಾದ ವಿಚಾರಣೆ ಶೇ 60ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ವಿಚಾರಿಸಿದವರಲ್ಲಿ ಶೇ 92ರಷ್ಟು ಮಂದಿ ಪ್ರಥಮ ಶ್ರೇಣಿ ನಗರದವರೇ ಆಗಿದ್ದಾರೆ. ಶೇ 7ರಷ್ಟು ಮಂದಿ ದ್ವಿತೀಯ ಶ್ರೇಣಿ ನಗರದವರಾಗಿದ್ದಾರೆ. ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆನಮ್ಮಲ್ಲಿ ವೈದ್ಯಕೀಯ ಸಲಹೆ, ತಪಾಸಣೆ ಮಾಡಿಸಿಕೊಂಡವರಲ್ಲಿ ಶೇ 56ರಷ್ಟು ಜನರು 30ರಿಂದ 39 ವರ್ಷದವರಾಗಿದ್ದಾರೆ. ಸಮಾಲೋಚನೆಗೆ ಒಳಪಟ್ಟ ರೋಗಿಗಳಲ್ಲಿಶೇ 8ರಷ್ಟು ಮಂದಿ ಈ ಹಿಂದೆ ಕೋವಿಡ್ ಪೀಡಿತರಾದವರಾಗಿದ್ದಾರೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಡಾ.ಅಲೆಕ್ಸಾಂಡರ್ ಕುರುವಿಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.

ಹೃಗ್ರೋಗ ತಜ್ಞ ಡಾ.ಮನೋಜ್ ಬನ್ಸಾಲ್, ‘ಕೆಲವು ತಿಂಗಳಿಂದ ಹೃದ್ರೋಗಕ್ಕೆ ಸಂಬಂಧಿಸಿದಂತೆ ಯುವಜನರಲ್ಲಿ ಜಾಗೃತಿ ಹೆಚ್ಚಳವಾಗಿದೆ.24-25 ವಯೋಮಾನದ ಯುವಕರು ಹೃದಯ ಸಮಸ್ಯೆಗಳಿಗೆ ವಿಚಾರಿಸಿದ್ದಾರೆ. ಹೃದಯಾಘಾತ ತಪ್ಪಿಸಲು ನಿಯಮಿತವಾಗಿ ಯೋಗ ಮತ್ತು ಪ್ರಾಣಾಯಾಮದಂತಹ ದೈಹಿಕ ವ್ಯಾಯಾಮಗಳನ್ನು ಮಾಡಬೇಕು. ಇದನ್ನು ನಮ್ಮ ದೈನಂದಿನ ಜೀವನಶೈಲಿಯ ಭಾಗವಾಗಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.