ADVERTISEMENT

ರಾತ್ರಿ ಪ್ರಕಾಶಮಾನ ಬೆಳಕಿನಿಂದ ಹೃದಯಾಘಾತದ ಅಪಾಯ ಶೇ 56ರಷ್ಟು ಹೆಚ್ಚಳ: ಅಧ್ಯಯನ

ಪಿಟಿಐ
Published 25 ಅಕ್ಟೋಬರ್ 2025, 7:37 IST
Last Updated 25 ಅಕ್ಟೋಬರ್ 2025, 7:37 IST
<div class="paragraphs"><p>ಕತ್ತಲಲ್ಲಿ ಮೊಬೈಲ್ ಬಳಕೆ</p></div>

ಕತ್ತಲಲ್ಲಿ ಮೊಬೈಲ್ ಬಳಕೆ

   

ಚಿತ್ರ ಕೃಪೆ: ಎಐ

ನವದೆಹಲಿ: ರಾತ್ರಿಯಾದರೂ ಮೊಬೈಲ್‌ ಪರದೆಯನ್ನು ನೋಡುವುದು ಅಥವಾ ಪ್ರಕರ ಬೆಳಕಿನಲ್ಲಿ ತಡರಾತ್ರಿಯಾದರೂ ನಿದ್ದೆ ಮಾಡದೆ ಕೆಲಸ ಮಾಡುವುದು ಹೃದಯಾಘಾತದ ಅಪಾಯವನ್ನು ಶೇ 56ರಷ್ಟು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ADVERTISEMENT

ಈ ವಿಷಯದ ಕುರಿತು ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ತಂಡ ಅಧ್ಯಯನ ನಡೆಸಿದೆ. ಸಂಶೋಧನೆಗೆ 9 ವರ್ಷಗಳಿಗೂ ಅಧಿಕ ಸಮಯ ತೆಗೆದುಕೊಂಡಿದ್ದು, ಬ್ರಿಟನ್‌ನ ಸುಮಾರು 89,000 ಜನರ ಮಣಿಕಟ್ಟಿಗೆ ಸೆನ್ಸರ್ ಅಳವಡಿಸಿ, 13 ಮಿಲಿಯನ್ ಗಂಟೆಗಳಿಗೂ ಅಧಿಕ ಸಮಯದ ದತ್ತಾಂಶ ವಿಶ್ಲೇಷಿಸಿ ವರದಿ ನೀಡಿದ್ದಾರೆ.

ರಾತ್ರಿ ಸಮಯದಲ್ಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹೃದಯಾಘಾತದ ಅಪಾಯವು ಶೇ 47ರಷ್ಟು ಹೆಚ್ಚಾಗುತ್ತದೆ. ಶೇ 32ರಷ್ಟು ಪರಿಧಮನಿ (ಹೃದಯದ ರಕ್ತನಾಳಗಳು ಕಿರಿದಾಗುವಿಕೆ) ಕಾಯಿಲೆಯ ಅಪಾಯ ಇರಲಿದೆ ಹಾಗೂ ಶೇ. 28 ರಷ್ಟು ಪಾರ್ಶ್ವವಾಯುವಿನ ಅಪಾಯ ಉಂಟಾಗಲಿದೆ ಎಂದು ಅಧ್ಯಯನ ತಿಳಿಸಿದೆ.

‘40 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಲು ರಾತ್ರಿ ವೇಳೆಯ ಪ್ರಕಾಶಮಾನವಾದ ಬೆಳಕಿನ ಪ್ರಭಾವ ಪ್ರಮುಖ ಅಂಶವಾಗಿದೆ’ ಎಂದು ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ​​(JAMA) ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಲೇಖಕರು ತಿಳಿಸಿದ್ದಾರೆ.

‘ರಾತ್ರಿಯ ಬೆಳಕಿಗೆ ಒಡ್ಡಿಕೊಳ್ಳುವುದು ಹೃದಯ ಸಂಬಂಧಿ ಕಾಯಿಲೆ ಹೆಚ್ಚಿಸುವ ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ತೋರಿಸುವ ಜಗತ್ತಿನ ಮೊದಲ ಅತೀ ದೊಡ್ಡ ಅಧ್ಯಯನ ಇದಾಗಿದೆ’ ಎಂದು ಫ್ಲಿಂಡರ್ಸ್ ವಿವಿಯ ಸಂಶೋಧನಾ ಸಹವರ್ತಿ ಮತ್ತು ಪ್ರಮುಖ ಲೇಖಕ ಡೇನಿಯಲ್ ವಿಂಡ್ರೆಡ್ ತಿಳಿಸಿದ್ದಾರೆ.

‘ರಾತ್ರಿಯ ಪ್ರಕಾಶಮಾನ ಬೆಳಕಿಗೆ ಪದೇ ಪದೇ ಒಡ್ಡಿಕೊಳ್ಳುವುದು ನಿಮ್ಮ ದೇಹದಲ್ಲಿನ ಆಂತರಿಕ ಸಿರ್ಕಾಡಿಯನ್ ಕ್ಲಾಕ್ (ಜೀವಿಗೆ ನಿದ್ರೆ, ಎಚ್ಚರಗಳನ್ನು ಸೂಚಿಸುವ ಜೈವಿಕ ಗಡಿಯಾರ) ಅನ್ನು ಅಡ್ಡಿಪಡಿಸುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ’ ಎಂದು ವಿಂಡ್ರೆಡ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.