ADVERTISEMENT

ಹರ್ಪಿಸ್‌: ವೈರಾಣು ಸೋಂಕಿನ ಬಾಧೆ.. ಬೇಕಿದೆ ಜಾಗೃತಿ..

ಚಿಕಿತ್ಸೆ ಪಡೆಯದೆ ನೋವು ಅನುಭವಿಸುತ್ತಿರುವ ಗ್ರಾಮೀಣ ಭಾಗದ ಜನರು: ಬೇಕಿದೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:32 IST
Last Updated 30 ಆಗಸ್ಟ್ 2025, 5:32 IST
ಹರ್ಪಿಸ್ ಬಾಧೆಯಿಂದ ಬಳಲುತ್ತಿರುವ ವ್ಯಕ್ತಿ  ದೇಹದ ಮೇಲೆ ವಿಭೂತಿಯಿಂದ ಚಿತ್ರ ಬರೆಸಿಕೊಂಡಿರುವುದು
ಹರ್ಪಿಸ್ ಬಾಧೆಯಿಂದ ಬಳಲುತ್ತಿರುವ ವ್ಯಕ್ತಿ  ದೇಹದ ಮೇಲೆ ವಿಭೂತಿಯಿಂದ ಚಿತ್ರ ಬರೆಸಿಕೊಂಡಿರುವುದು   

ಯಳಂದೂರು: ತಾಪಮಾನದಲ್ಲಾಗುತ್ತಿರುವ ಬದಲಾವಣೆ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತಿದ್ದು ಮಳೆಗಾಲದಲ್ಲಿ ಕಾಡುತ್ತಿರುವ ರೋಗಗಳು ಜನರನ್ನು ಬಾಧಿಸುತ್ತಿವೆ.

ತಾಲ್ಲೂಕಿನಾದ್ಯಂತ ಹರ್ಪಿಸ್ ವೈರಾಣು ಸೋಂಕಿನ ಬಾಧೆ ಹೆಚ್ಚಾಗಿದ್ದು ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬದಲು ಮೌಢ್ಯಗಳ ಬೆನ್ನತ್ತಿದ್ದಾರೆ. ದೇಹದ ಭಾಗಗಳ ಮೇಲೆ ವಿಭೂತಿಯಿಂದ ದೇವರ ಚಿತ್ರಗಳನ್ನು ಬರೆಸಿಕೊಂಡು ಮನೆಯಲ್ಲಿಯೇ ನರಳುತ್ತಿದ್ದಾರೆ.

ತಾಲ್ಲೂಕಿನ ವಿವಿಧೆಡೆ ಮಧ್ಯ ವಯಸ್ಕರಲ್ಲಿ ಹರ್ಪಿಸ್ ಸೋಂಕು ಹೆಚ್ಚಾಗಿ ಕಂಡುಬಂದಿದ್ದು ವಿಪರೀತ ಉರಿ, ನೋವಿನಿಂದ ಬಳಲುತ್ತಿದ್ದಾರೆ. ಹೊಟ್ಟೆ, ಬೆನ್ನಿನ ಭಾಗಗಳಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿ ಮೂರ್ನಾಲ್ಕು ದಿನಗಳಲ್ಲಿ ನೀರ್ಗುಳ್ಳೆಯಷ್ಟು ದೊಡ್ಡದಾಗಿ ಕೀವು ಸ್ರವಿಸುತ್ತಿದ್ದು ಸೋಂಕಿತರು ಹಿಂಸೆ ಅನುಭವಿಸುತ್ತಿದ್ದಾರೆ.

ADVERTISEMENT

ಇಂತಹ ಪರಿಸ್ಥಿಯಲ್ಲೂ ಆಸ್ಪತ್ರಗೆ ತೆರಳದೆ ಮನೆಯಲ್ಲಿದ್ದು ವಿಭೂತಿಯಲ್ಲಿ ದೇಹದ ಮೇಲೆ ದೇವರ ವಾಹನಗಳ ಚಿತ್ರಗಳಾದ ಸಿಂಹ, ಸರ್ಪ, ಗರುಡನ ಚಿತ್ರ ಬರೆಸಿಕೊಳ್ಳುತ್ತಿದ್ದಾರೆ. ಹೀಗೆ ಬರೆಸಿಕೊಂಡರೆ ರೋಗ ಬಹುಬೇಗ ಮಾಯುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿ ದಟ್ಟವಾಗಿದ್ದು ಯಾತನೆ ಅನುಭವಿಸುತ್ತಿದ್ದಾರೆ.

ಹರ್ಪೀಸ್‌ ಕಾಯಿಲೆಗೆ ಚಿಕಿತ್ಸೆ ಲಭ್ಯವಿದ್ದು ಆರಂಭದಲ್ಲಿಯೇ ಶುಶ್ರೂಷೆ ಪಡೆದರೆ ಮೂರು ದಿನಗಳಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.  

ಆರಂಭದಲ್ಲಿ ಹೊಟ್ಟೆ ಮತ್ತು ಬೆನ್ನಿನ ಸುತ್ತಲೂ ಸಣ್ಣ ಗಾತ್ರದ ಗುಳ್ಳೆಗಳು ಕಾಣಿಸಿಕೊಂಡು ವಿಪರೀತ ಜ್ವರ ಮತ್ತು ಚಳಿ ಕಾಣಿಸಿಕೊಂಡಿತು. ನಂತರ ಗುಳ್ಳೆಗಳು ದೊಡ್ಡದಾಗಿ ದೇಹದ ಮೇಲೆ ಬಟ್ಟೆ ಧರಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಹಿರಿಯರ ಸಲಹೆಯಂತೆ ರೋಗ ವಾಸಿಯಾಗಲು ಮೈಮೇಲೆ ದೇವರ ಚಿತ್ರ ಬರೆಸಿಕೊಂಡಿದ್ದೇನೆ ಎಂದು ಗೂಳಿಪುರ ಗ್ರಾಮದ ಬಷೀರ್ ಹೇಳಿದರು.

ಮುನ್ನೆಚ್ಚರಿಕೆ ಇರಲಿ:

ಹರ್ಪಿಸ್ ರೋಗವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸರ್ಪ ಸುತ್ತು, ಆನೆಗಚ್ಚು ಮತ್ತಿತರ ಹೆಸರುಗಳಿಂದ ಕರೆಯುತ್ತಾರೆ. ಚರ್ಮ ಕಾಯಿಲೆ ಉಂಟುಮಾಡುವ ಈ ಸೋಂಕಿಗೆ ಚಿಕಿತ್ಸೆ ಲಭ್ಯವಿದೆ. ಮಾತ್ರೆ, ಮುಲಾಮು, ಚುಚ್ಚುಮದ್ದು ಪಡೆದು ಸೋಂಕಿನ ತೀವ್ರತೆ ತಹಬದಿಗೆ ತರಬಹುದು ಎನ್ನುತ್ತಾರೆ ವೈದ್ಯರು.

ಲಕ್ಷಣಗಳು:

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದಾಗ ಹರ್ಪಿಸ್ ಬಾಧಿಸುತ್ತದೆ. ದೇಹದ ನಿರ್ಧಿಷ್ಟ ಭಾಗದಲ್ಲಿ ತುರಿಕೆ, ಉರಿ, ನೋವು, ನವೆಯ ಅನುಭವದಿಂದ ಕಾಯಿಲೆಯನ್ನು ಗುರುತಿಸಬಹುದು. ವಿಪರೀತ ನೋವು ಮತ್ತು ಉರಿಯ ಅನುಭವ ಉಂಟಾಗುತ್ತದೆ. ಕ್ಯಾನ್ಸರ್, ಸಿಡುಬು ಪೂರ್ತಿ ಗುಣವಾಗದೆ ಇದ್ದವರಲ್ಲೂ ಬಹಳ ವರ್ಷಗಳ ನಂತರ ಹರ್ಪಿಸಿ ಕಾಡುತ್ತದೆ. ಹರ್ಪಿಸ್ ಸೋಂಕು ಕಾಣಿಸಿಕೊಂಡರೆ ಪೌಷ್ಟಿಕ ಆಹಾರ ಸೇವಿಸಬೇಕು ಎನ್ನುತ್ತಾರೆ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ತನುಜಾ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ ತಾಲ್ಲೂಕಿನ ಸುತ್ತಮುತ್ತ ಹರ್ಪಿಸ್ ಬಾಧಿಸುತ್ತಿದ್ದು ಸ್ತ್ರೀಯರಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಮಹಿಳೆಯರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಾರದು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು ಪಡೆದುಕೊಂಡರೆ ವಾರದಲ್ಲಿ ರೋಗ ವಾಸಿಯಾಗುತ್ತದೆ. ಮೌಢ್ಯಾಚರಣೆ ಹೆಸರಿನಲ್ಲಿ ಚಿಕಿತ್ಸೆ ಪಡೆಯದೆ ಮನೆಯಲ್ಲಿ ಉಳಿದರೆ ರೋಗಬಾಧೆ ತೀವ್ರವಾಗಲಿದೆ ಎನ್ನುತ್ತಾರೆ ಯಳಂದೂರು ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ತನುಜಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.