ADVERTISEMENT

HIV ಸೋಂಕಿತರ ಮಾನಸಿಕ ಆರೋಗ್ಯ ಸುಧಾರಿಸಲು ಸಮಾಲೋಚನೆ ಮುಖ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 7:13 IST
Last Updated 19 ಡಿಸೆಂಬರ್ 2025, 7:13 IST
<div class="paragraphs"><p>ಗೆಟ್ಟಿ ಚಿತ್ರ</p></div>

ಗೆಟ್ಟಿ ಚಿತ್ರ

   

ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಎದುರಾಗುವ ರೋಗಿಗಳು ಮಾನಸಿಕವಾಗಿ ಕುಗ್ಗುವ ಸನ್ನಿವೇಶಗಳು ಎದುರಾಗುತ್ತವೆ. ಅಂತಹದರಲ್ಲಿ ಎಚ್‌ಐವಿ (HIV) ಸೋಂಕಿಗೆ ಒಳಗಾದ ಆರಂಭಿಕ ಹಂತದಲ್ಲಿ ಎದುರಾಗುವ ಆತಂಕ ಮತ್ತು ಖಿನ್ನತೆಯನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲೇ ಸರಿ.

ಸೋಂಕಿಗೆ ಒಳಗಾದವರು ಭಯ, ಆತಂಕ, ತಪ್ಪು ಮಾಡಿದ ಎಂಬ ಭಾವನೆ ಹೀಗೆ ನಾನಾ ರೀತಿಯ ಆಲೋಚನೆಯಿಂದ ಮಾನಸಿಕವಾಗಿ ಕುಗ್ಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಮಾಲೋಚನೆಯ ಮೂಲಕವೇ ರೋಗಿಗಳ ಮಾನಸಿಕ ಆರೋಗ್ಯ ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಸುಭಾಷ್ ಎಚ್.ಜೆ.

ADVERTISEMENT

ಹೆಚ್‌ಐವಿ ಸೋಂಕು ತಗುಲಿದೆ ಎಂದು ಗೊತ್ತಾದಾಗ ಎದುರಾಗುವ ಆಘಾತ ಅಷ್ಟಿಷ್ಟಲ್ಲ. ಭಾವನಾತ್ಮಕವಾಗಿ ಕುಗ್ಗುತ್ತಾರೆ. ಹಲವರು ಸಿಟ್ಟಿಗೆ ಒಳಗಾಗುತ್ತಾರೆ. ತಾನು ತಪ್ಪು ಮಾಡಿಲ್ಲ ಎಂಬ ಹಠಕ್ಕೆ ಬೀಳುತ್ತಾರೆ. ಕೆಲವರು ತಮಗೆ ಸೋಂಕು ಹೇಗೆ ಬಂತು ಎಂದು ತಿಳಿದು ಅಪರಾಧ ಪ್ರಜ್ಞೆ ಅಥವಾ ಅವಮಾನದಿಂದ ನರಳುತ್ತಾರೆ. ಈ ಸಮಯದಲ್ಲಿ ಮಾನಸಿಕ ತಜ್ಞರು ಜೊತೆಗಿದ್ದರೆ ಇಂತಹ ಭಾವನೆಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯ ಎನ್ನುತ್ತಾರೆ ತಜ್ಞರು.

ವ್ಯಕ್ತಿಯು ಸೋಂಕಿಗೆ ಒಳಪಟ್ಟಿದ್ದೇನೆ ಎಂದು ತಿಳಿದ ನಂತರ ಜನರಿಂದ ದೂರ ಉಳಿಯುವುದು ಮತ್ತು ಸಮಾಜಕ್ಕೆ ತಿಳಿದರೆ ನನ್ನನ್ನು ಬೇರೆ ರೀತಿಯಾಗಿ ನೋಡುತ್ತಾರೆ ಎಂಬ ಭಯ ರೋಗಿಯನ್ನು ಕಾಡಲಾರಂಭಿಸುತ್ತದೆ. ಇದರಿಂದ ಅವರು ಸಾಮಾಜಿಕ ಜೀವನ, ಕುಟುಂಬ ಮತ್ತು ಸ್ನೇಹಿತರಿಂದ ದೂರ ಉಳಿಯಲು ಬಯಸುತ್ತಾರೆ. ಈ ಒಂಟಿತನವೇ ಮಾನಸಿಕವಾಗಿ ಕುಗ್ಗುವಿಕೆ, ಆತ್ಮವಿಶ್ವಾಸದ ಕೊರತೆಗೆ ಕಾರಣವಾಗುತ್ತದೆ. ಅಲ್ಲದೇ ಇದು ರೋಗಿಯ ಕುಟುಂಬ ಮತ್ತು ವೈವಾಹಿಕ ಜೀವನದ ಮೇಲೂ ಪ್ರಭಾವ ಬೀರುತ್ತದೆ.

‌ಮಾನಸಿಕವಾಗಿ ಬಳಲುತ್ತಿರುವ ರೋಗಿಗಳು ಔಷಧ ತೆಗೆದುಕೊಳ್ಳಲು ನಿರ್ಲಕ್ಷ್ಯ ತೋರಬಹುದು. ಖಿನ್ನತೆ, ಆತಂಕ ಮತ್ತು ಇನ್ನೊಬ್ಬರಿಗೆ ವಿಷಯ ಎಲ್ಲಿ ಗೊತ್ತಾಗುತ್ತದೋ ಎಂಬ ಕಾರಣಕ್ಕೂ ಔಷಧ ಸೇವನೆ ಮಾಡದಿರಬಹುದು. ಅದಲ್ಲದೆ ತಮ್ಮ ದೈನಂದಿನ ಆರೋಗ್ಯಕರ ಚಟುವಟಿಕೆಗಳಾದ ಜಿಮ್‌, ಈಜು ಇವುಗಳಿಂದ ದೂರ ಉಳಿದರೆ ರೋಗಿಗಳಲ್ಲಿ ಒತ್ತಡ ಮತ್ತು ಮಾನಸಿಕ ತೊಳಲಾಟ ಮತ್ತಷ್ಟು ಹೆಚ್ಚುತ್ತದೆ. ಕೆಲವರಿಗೆ ಆರ್ಥಿಕ ಪರಿಸ್ಥಿತಿಯು ಮಾನಸಿಕ ಸಂಕಷ್ಟಕ್ಕೆ ಸಿಲುಕಿಸಬಹುದು.

ಜೀವನಪೂರ್ತಿ ಚಿಕಿತ್ಸೆ ಪಡೆಯಲು ಹಣಬೇಕು. ಇದರ ಜೊತೆಗೆ ಉದ್ಯೋಗ ಕಳೆದುಕೊಳ್ಳುವ ಭಯ, ಯುವಜನರು, LGBTQ+ ಸಮುದಾಯದವರು ಮತ್ತು ಆರ್ಥಿಕವಾಗಿ ಹಿಂದುಳಿದವರು ಚಿಕಿತ್ಸಾ ವೆಚ್ಚ ಭರಿಸಲು ಕಷ್ಟವಾಗಬಹುದು. ಹೀಗಾಗಿ ಆರ್ಥಿಕ ಒತ್ತಡಕ್ಕೆ ಒಳಗಾಗುವುದರ ಜೊತೆಗೆ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಇದರಿಂದ ರೋಗಿಗಳ ಮಾನಸಿಕ ಹೊರೆ ಇನ್ನಷ್ಟು ಹೆಚ್ಚುತ್ತದೆ ಎಂದು ತಜ್ಞರು ವಿವರಿಸಿದರು.

ಹೆಚ್‌ಐವಿ ಎಂಬುದು ನಿರ್ವಹಿಸಬಹುದಾದ ಕಾಯಿಲೆಯೇ ಹೊರತು ಜೀವನವೇ ಮುಗಿದು ಹೋಯಿತು ಎಂಬ ಕಾಯಿಲೆಯಲ್ಲ ಎಂಬುದನ್ನು ನಾವು ಬಲವಾಗಿ ಅವರ ಮನಸ್ಸಿನಲ್ಲಿ ತುಂಬಬೇಕು. ಸೋಂಕಿತರೊಂದಿಗೆ ಸಂಪರ್ಕದಲ್ಲಿರುವುದು, ನಿಯಮಿತ ಕೌನ್ಸೆಲಿಂಗ್ ಪಡೆಯುವುದು. ಮತ್ತು ಉತ್ತಮ ಸಾಮಾಜಿಕ ಬಾಂಧವ್ಯ ಬೆಳೆಸಿಕೊಳ್ಳುವುದು ದೀರ್ಘಕಾಲದ ಆರೋಗ್ಯಕ್ಕೆ ಅನುಕೂಲಕರ. ಕೇವಲ ಎಚ್‌ಐವಿ ಪಾಸಿಟಿವ್ ರೋಗಿಗಳು ಮಾತ್ರವಲ್ಲದೆ ಅವರ ಮೇಲೆ ಅವಲಂಬಿತವಾಗಿರುವ ಕುಟುಂಬದವರ ಅಗತ್ಯಗಳನ್ನು ಪೂರೈಸುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ತಜ್ಞ ಸುಭಾಷ್‌ ಹೆಚ್‌.ಜೆ ಒತ್ತಿ ಹೇಳಿದರು.

(ಲೇಖಕರು: ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಸುಭಾಷ್ ಎಚ್.ಜೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.