ADVERTISEMENT

ಶೀತ ಜ್ವರಕ್ಕೆ ಮನೆಮದ್ದು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 17:30 IST
Last Updated 13 ಜುಲೈ 2020, 17:30 IST
ಮನೆಯ ಮದ್ದು–ಸಾಂದರ್ಭಿಕ ಚಿತ್ರ
ಮನೆಯ ಮದ್ದು–ಸಾಂದರ್ಭಿಕ ಚಿತ್ರ   

ಮಳೆಗಾಲದಲ್ಲಿ ವಾತಾವರಣ ಬದಲಾವಣೆಯ ಕಾರಣ ಮತ್ತು ತೇವಾಂಶ ಹೆಚ್ಚಳದಿಂದ ಶೀತ, ಕೆಮ್ಮು, ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು, ಸುಲಭವಾಗಿ ಮನೆಯವರಿಗೆಲ್ಲಾ ಬರುವ ಸಾಧ್ಯತೆ ಹೆಚ್ಚು. ಅದರಲ್ಲೂ ಚಿಕ್ಕ ಮಕ್ಕಳಿದ್ದರೆ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇದರ ಜೊತೆಗೆ ಮಳೆಗಾಲದಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಸಂತಾನ ಉತ್ಪತ್ತಿಯಾಗುವುದರಿಂದ ಮತ್ತು ಕಲುಷಿತ ಆಹಾರ, ಕಲುಷಿತ ನೀರನ್ನು ಸೇವಿಸುವುದರಿಂದ ಸಾಮಾನ್ಯವಾಗಿ ಡೆಂಗೆ ಜ್ವರ, ಮಲೇರಿಯಾ, ಟೈಫಾಯ್ಡ್‌, ಕಾಮಾಲೆ, ಚಿಕೂನ್ ಗುನ್ಯಾ, ಹೆಪಟೈಟಿಸ್‌, ಕಾಲರಾ, ಅತಿಸಾರ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಕಾಲಮಾನಗಳು ಬದಲಾದ ಹಾಗೆ ದೈಹಿಕವಾಗಿಯೂ ಬದಲಾವಣೆ ಉಂಟಾಗಿ, ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.

ರೋಗಗಳು ಬರುವುದನ್ನು ತಡೆಯಬೇಕೆಂದರೆ, ನಮ್ಮ ದೇಹ ಕಾಯಿಲೆಗಳ ವಿರುದ್ಧ ಹೋರಾಡಬೇಕಾಗುತ್ತದೆ. ಹೀಗಾಗಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯಕ.

ADVERTISEMENT

ಬಿಸಿ ಸೂಪ್: ಇದು ಅಜೀರ್ಣ, ಹೊಟ್ಟೆ ಸಮಸ್ಯೆಗಳನ್ನು ತಡೆಯುತ್ತದೆ. ಸ್ವಲ್ಪ ಕರಿಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿದ ತರಕಾರಿ ಸೂಪ್‌ ಕುಡಿಯಬೇಕು. ಇದು ಶೀತ, ಕೆಮ್ಮು, ಜ್ವರದಿಂದ ಮುಕ್ತಿ ಕೊಡುತ್ತದೆ. ಗಂಟಲಿನ ಅಲರ್ಜಿಗೂ ಇದು ರಾಮಬಾಣ.

ಸೋರೆಕಾಯಿ: ಮಳೆಗಾಲದಲ್ಲಿ ಇದು ಆರೋಗ್ಯಕರ ತರಕಾರಿ ಎಂದೇ ಹೇಳಬಹುದು. ಹೇರಳವಾದ ನಾರಿನಾಂಶ ಹೊಂದಿರುವ ಇದು ಜೀರ್ಣವ್ಯವಸ್ಥೆ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಕಬ್ಬಿಣದ ಅಂಶ, ವಿಟಮಿನ್ ಬಿ, ಸಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ.

ಒಂದು ಚಿಕ್ಕ ಚಮಚ ಅರಿಸಿನ ಪುಡಿ ಬಿಸಿ ನೀರಿಗೆ ಅಥವಾ ಬಿಸಿಹಾಲಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದಲೂ ಕೆಮ್ಮು ಮತ್ತು ಶೀತವನ್ನು ದೂರವಿಡಬಹುದು.

ಬೆಳ್ಳುಳ್ಳಿ: ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ಮತ್ತು ವೈರಸ್ ನಿವಾರಕ ಗುಣಗಳಿವೆ. ಮೂರು– ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಸುಲಿದು ಹಸಿಯಾಗಿಯೆ ಜಗಿದು ತಿನ್ನಬೇಕು. ಖಾರ ಎನಿಸಿದರೆ ಸ್ವಲ್ಪ ಹಾಲು ಮತ್ತು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ಕುಡಿಯಬೇಕು. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.

ಕಹಿ ಬೇವು: ಮಳೆಗಾಲದಲ್ಲಿ ಕಾಡುವ ಕಾಯಿಲೆಗಳಿಗೆ ಸರಳ ಆಯುರ್ವೇದ ಪರಿಹಾರಗಳಿಂದಲೇ ರಕ್ಷಣೆ ಪಡೆದುಕೊಳ್ಳಬಹುದು. ಬೇವಿನ ಎಲೆಗಳು, ವೈರಸ್ ಎದುರಿಸಲು ತುಂಬಾ ಪರಿಣಾಮಕಾರಿ. ಕೊಂಚ ನೀರಿನಲ್ಲಿ 10–12 ಬೇವಿನ ಎಲೆಗಳನ್ನು ಕುದಿಸಿ. ತಣ್ಣಗಾದ ಬಳಿಕ ಸೋಸಿ ನೀರನ್ನು ಸಂಗ್ರಹಿಸಿಟ್ಟುಕೊಂಡು ದಿನಕ್ಕೆ ಮೂರು– ನಾಲ್ಕು ಬಾರಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಅಮೃತಬಳ್ಳಿ: ಇದರ ಕಾಂಡದಲ್ಲಿ ಔಷಧೀಯ ಗುಣಗಳು ಇರುವುದರಿಂದ, ಅದರ ಕಷಾಯ ಕುಡಿಯುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತುಳಸಿ: ತುಳಸಿ ಎಲೆಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿದ್ದು ಜ್ವರ, ಶೀತ, ಮಲೇರಿಯಾ, ಗಂಟಲು ಬೇನೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಕೊಂಚ ನೀರನ್ನು ಕುದಿಸಿ ಅದರಲ್ಲಿ 10–15 ಎಲೆಗಳನ್ನು ಸೇರಿಸಿ ಸೋಸಿ. ಬಿಸಿಬಿಸಿ ಇದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಬೇಕು.

ಮುಂಜಾಗ್ರತೆ ಕ್ರಮಗಳು

ತಣ್ಣಗಿನ ನೀರಿನ ಸೇವನೆ ಒಳ್ಳೆಯದಲ್ಲ. ಕುದಿಸಿ ಆರಿಸಿದ ನೀರನ್ನೆ ಕುಡಿಯಬೇಕು.

ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಸೊಳ್ಳೆಗಳು ಹೆಚ್ಚಾಗುವುದರಿಂದ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು.

ಹಸಿ ತರಕಾರಿ ಸೇವನೆಯಿಂದ ಅಜೀರ್ಣ ಉಂಟಾಗಬಹುದು. ಆದ್ದರಿಂದ ಬೇಯಿಸಿದ ಆಹಾರವನ್ನೇ ಸೇವಿಸಬೇಕು.

ಸೊಪ್ಪು ಬಳಸುವಾಗ ಚೆನ್ನಾಗಿ ತೊಳೆದು ಬಳಸಬೇಕು.

ಮಸಾಲೆ ಟೀ: ಏಲಕ್ಕಿ, ದಾಲ್ಚಿನ್ನಿ, ಲವಂಗ, ತುಳಸಿ, ಶುಂಠಿ ಹಾಕಿ ಟೀ ಮಾಡಿ ಕುಡಿದರೆ ದೇಹವೂ ಬಿಸಿ ಇರುತ್ತದೆ, ಜೊತೆಗೆ ಪ್ರತಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

ವಿಟಮಿನ್ ಸಿ ಹೆಚ್ಚಿರುವ ಅಹಾರಗಳನ್ನು ಸೇವಿಸಬೇಕು. ಇದು ರೋಗಾಣುಗಳನ್ನು ಕೊಲ್ಲುವ ಶಕ್ತಿ ಹೊಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣು, ನಿಂಬೆರಸ, ಬೆಟ್ಟದ ನೆಲ್ಲಿಕಾಯಿಗಳಲ್ಲಿ ವಿಟಮಿನ್ ಸಿ ಇರುವುದರಿಂದ ಯಾವುದಾದರೂ ಒಂದು ರೂಪದಲ್ಲಿ ಇವುಗಳು ದೇಹಕ್ಕೆ ಸೇರುತ್ತಿದ್ದರೆ ಸಾಕು, ಮಳೆಗಾಲದಲ್ಲಿನ ಕಾಯಿಲೆಗಳನ್ನು ತಡೆಯಬಹುದು.

(ಲೇಖಕಿ: ಆಯುರ್ವೇದ ವೈದ್ಯೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.