ADVERTISEMENT

ಇನ್ನೂ ತಿಂಡಿ ತಿಂದಿಲ್ಲವೇ?

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:30 IST
Last Updated 6 ಮಾರ್ಚ್ 2020, 19:30 IST
   

ಬೆಳಿಗ್ಗೆ ಬೇಗ ಉಪಾಹಾರ ಸೇವಿಸಬೇಕೆ ಅಥವಾ ತಡವಾಗಿ ತಿಂದರೆ ಏನೂ ತೊಂದರೆಯಿಲ್ಲವೆ ಎಂಬುದರ ಬಗ್ಗೆ ಹಲವರಲ್ಲಿ ಗೊಂದಲವಿದೆ. ಆದರೆ ಅದು ಅವರವರ ದೇಹದ ಪ್ರಕೃತಿಗೆ ಸಂಬಂಧಿಸಿದ್ದು ಎನ್ನುತ್ತಾರೆ ತಜ್ಞರು.

ಬೆಳಗಿನ ಉಪಾಹಾರ ಎಷ್ಟು ಮುಖ್ಯ ಎಂಬುದಕ್ಕೆ ಎರಡು ಮಾತಿಲ್ಲ. ರಾತ್ರಿಯಿಂದ ಬೆಳಗಿನವರೆಗೆ ಹಸಿದ ಹೊಟ್ಟೆಗೆ ಶಕ್ತಿಯನ್ನು ನೀಡುವ ಈ ಉಪಾಹಾರ ಉಪವಾಸವನ್ನು ಮುರಿಯುವಂತಹದ್ದು (ಬ್ರೇಕ್‌ಫಾಸ್ಟ್‌). ಬೆಳಗಿನ ತಿಂಡಿಯನ್ನು ರಾಜನಂತೆ ತಿನ್ನಬೇಕು ಎಂಬ ಮಾತೂ ಇದೆ. ಯಾವತ್ತೂ ಮುಂಜಾನೆಯ ಉಪಾಹಾರವನ್ನು ಮಾತ್ರ ತಪ್ಪಿಸಬೇಡಿ ಎಂದು ಡಯಟೀಶಿಯನ್‌ ಕೂಡ ಹೇಳುತ್ತಲೇ ಇರುತ್ತಾರೆ.

ಮಧ್ಯರಾತ್ರಿ ಎಚ್ಚರವಾದರೆ ಕೆಲವರಿಗೆ ತಿನ್ನುವ ಅಭ್ಯಾಸವಿರುತ್ತದೆ. ಹಾಸಿಗೆಯ ಪಕ್ಕ ಹಣ್ಣು, ಹಾಲನ್ನು ಇಟ್ಟುಕೊಂಡು, ಎಚ್ಚರವಾದ ಕೂಡಲೇ ತಿಂದು ಪುನಃ ಗೊರಕೆ ಹೊಡೆಯುವವರಿದ್ದಾರೆ. ಆದರೆ ಬೆಳಿಗ್ಗೆ ಮತ್ತೆ ಗಡದ್ದಾಗಿ ತಿಂಡಿ ಸೇವಿಸಿ, ಕಾಫಿ/ ಟೀ ಕುಡಿದು ಮುಂದಿನ ಕೆಲಸ. ರಾತ್ರಿ ಸೇವಿಸಿದ ಆಹಾರದ ಕ್ಯಾಲರಿ ಲೆಕ್ಕ ಹಾಕುತ್ತ ಕೂರುವ ವ್ಯವಧಾನವಾದರೂ ಯಾರಿಗಿದೆ ಎನ್ನುತ್ತೀರಾ?

ADVERTISEMENT

ಇರಲಿ, ಈಗಿನ ಇಂಟರ್‌ಮಿಟೆಂಟ್‌ ಡಯಟ್‌ ಜನಪ್ರಿಯತೆಯ ಕಾಲದಲ್ಲಿ ಬೆಳಗಿನ ಉಪಾಹಾರ ತಿಂದರೂ ಅಷ್ಟೇ, ಬಿಟ್ಟರೂ ಅಷ್ಟೆ ಎನ್ನುವವರಿಗೇನೂ ಕೊರತೆಯಿಲ್ಲ. ರಾತ್ರಿ ಎಂಟು ಗಂಟೆಗೇ ಊಟ ಮಾಡಬೇಕು; ಬೆಳಿಗ್ಗೆ ಎದ್ದ ಅರ್ಧ– ಒಂದು ತಾಸಿನೊಳಗೆ ಉಪಾಹಾರ ಸೇವಿಸಿದರೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ವೈದ್ಯರ, ಆಹಾರ ತಜ್ಞರ ಮಾತು.

ಬೆಳಿಗ್ಗೆ ಉಪಾಹಾರ ತ್ಯಜಿಸುವುದು, ಬಿಡುವುದು ಅಥವಾ ತಡವಾಗಿ ಸೇವಿಸುವುದು ಅವರವರ ಆರೋಗ್ಯವನ್ನು ಅವಲಂಬಿಸಿರುತ್ತದೆ. ದಿನವೊಂದಕ್ಕೆ ಎಷ್ಟು ಕ್ಯಾಲರಿ, ಅಂದರೆ 1200– 1800 ಕ್ಯಾಲರಿ ಆಹಾರ ಸೇವಿಸಬೇಕು ಎಂಬುದನ್ನು ಲೆಕ್ಕ ಹಾಕಿದರೆ ಸಾಕು ಎಂಬುದು ಕೆಲವು ತಜ್ಞರ ಅಂಬೋಣ. ಇಂಟರ್‌ಮಿಟೆಂಟ್‌ ಡಯಟ್‌ ಪ್ರಕಾರ 16 ತಾಸುಗಳ ಕಾಲ ಉಪವಾಸ ಇರಬಹುದು. ಆದರೆ ಯಾವುದು ನಿಮಗೆ ಸೂಕ್ತ ಎಂಬುದನ್ನು ನೀವೇ ನಿರ್ಧರಿಸಿ.

ಚಯಾಪಚಯ

ರಾತ್ರಿ ಬೇಗ ಊಟ ಮಾಡಿ ಎಂಬುದಕ್ಕೆ ಚಯಾಪಚಯದ ಕಾರಣಗಳಿವೆ. ಊಟದ ನಂತರ ಕನಿಷ್ಠ 2–3 ಗಂಟೆಯ ನಂತರ ಮಲಗಿದರೆ ನಿಮ್ಮ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ; ಹೊಟ್ಟೆಯುಬ್ಬರ, ಆಮ್ಲೀಯತೆ ಮೊದಲಾದ ಸಮಸ್ಯೆಗಳಿಂದ ದೂರ ಇರಬಹುದು ಎನ್ನುತ್ತಾರೆ ತಜ್ಞರು. ಜೊತೆಗೆ ರಾತ್ರಿ ನಮ್ಮ ದೇಹದಲ್ಲಿ ವಿವಿಧ ಬದಲಾವಣೆಗಳು ನಡೆಯುತ್ತಿರುತ್ತವೆ. ಅಂದರೆ ಜೀವಕೋಶಗಳ ವಿಭಜನೆ, ಅವುಗಳ ಕಾರ್ಯನಿರ್ವಹಣೆ, ಹಾರ್ಮೋನ್‌ ಸ್ರವಿಸುವಿಕೆ.. ಎಲ್ಲವೂ ರಾತ್ರಿಯೇ ಹೆಚ್ಚಾಗಿ ನಡೆಯುವುದು.

ರಾತ್ರಿ ಬೇಗ ತಿಂದು, ಬೆಳಿಗ್ಗೆ ಸ್ವಲ್ಪ ತಡವಾಗಿ ಉಪಾಹಾರ ಸೇವಿಸಿದರೆ ಹಲವು ಲಾಭಗಳಿವೆ ಎನ್ನುತ್ತದೆ ಇತ್ತೀಚಿನ ಅಧ್ಯಯನ. ಇದು ಇನ್ಸುಲಿನ್‌ ರೆಸಿಸ್ಟೆನ್ಸ್‌ ಅನ್ನು ಕಡಿಮೆ ಮಾಡುತ್ತದಂತೆ. ಉಪಾಹಾರಕ್ಕಿಂತ ಮುಂಚಿನ ರಕ್ತದಲ್ಲಿನ ಸಕ್ಕರೆ ಅಂಶ (ಎಫ್‌ಬಿಎಸ್‌)ವನ್ನು ಶೇ 15– 30ರಷ್ಟು ಕಡಿಮೆ ಮಾಡುತ್ತದೆ. ಮಧುಮೇಹ ಬರುವುದನ್ನು ಇದರಿಂದ ತಡೆಗಟ್ಟಬಹುದು. ಜೊತೆಗೆ ಉರಿಯೂತದಿಂದ ಬರುವ ಇನ್ನು ಕೆಲವು ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು ಎನ್ನುತ್ತಾರೆ ತಜ್ಞರು.

ಆದರೆ ಉಪಾಹಾರ ಸೇವಿಸುವ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅವರ ಆರೋಗ್ಯ, ಹಸಿವನ್ನು ತಡೆದುಕೊಳ್ಳುವ ಸಾಮರ್ಥ್ಯ, ಬೆಳಗಿನ ವ್ಯಾಯಾಮ, ರಾತ್ರಿಯೂಟದಲ್ಲಿ ಪೌಷ್ಟಿಕಾಂಶದ ಮಟ್ಟ ಎಷ್ಟಿತ್ತು... ಇವೇ ಮೊದಲಾದವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಹಸಿವು. ಅಂಥವರು ಉಗುರು ಬೆಚ್ಚಗಿನ ನೀರು ಕುಡಿದು, ರಾತ್ರಿ ನೆನೆ ಹಾಕಿದ ಬಾದಾಮಿಯನ್ನೋ, ಒಂದು ಬಾಳೆಹಣ್ಣನ್ನೋ ತಿನ್ನಬಹುದು. ನಂತರ ಸ್ವಲ್ಪ ಸಮಯ ಬಿಟ್ಟು ಉಪಾಹಾರ ಸೇವಿಸಬಹುದು. ಮಧ್ಯಾಹ್ನ ಊಟವನ್ನು ತಡವಾಗಿ ಸೇವಿಸುವವರು ಉಪಾಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಒಳಿತು. ಆದರೆ ಪ್ರೊಟೀನ್‌, ಕಾರ್ಬೊಹೈಡ್ರೇಟ್‌, ಕೊಬ್ಬಿನಂಶ ಎಲ್ಲವೂ ಇದರಲ್ಲಿರಲಿ. ಹಣ್ಣಿನ ಚೂರುಗಳು ಜೊತೆಗಿದ್ದರೆ ಒಳ್ಳೆಯದು. ಆದಷ್ಟೂ ಭಾರತೀಯ ಸಾಂಪ್ರದಾಯಿಕ ಆಹಾರವಾದ ಇಡ್ಲಿ, ದೋಸೆ, ಉಪ್ಪಿಟ್ಟು, ಚಪಾತಿ– ಪಲ್ಯ ತಿಂದರೆ ಈ ಎಲ್ಲವೂ ಸಿಗುವುದಲ್ಲದೇ ರಾತ್ರಿ 10– 12 ತಾಸು ಖಾಲಿಯಿದ್ದ ಹೊಟ್ಟೆಯನ್ನು ತಂಪಾಗಿಸಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.