ADVERTISEMENT

ಹೃದಯ ಶಸ್ತ್ರಚಿಕಿತ್ಸೆ ಬಳಿಕ ನೀವು ಏನು ಮಾಡಬೇಕು? ಏನನ್ನು ಮಾಡಬಾರದು? ನಿಮಗಿದು ಗೊತ್ತೇ?

National Doctors Day: ಫೋರ್ಟಿಸ್ ಆಸ್ಪತ್ರೆ ಹೃದ್ರೋಗ ತಜ್ಞ ಡಾ. ವಿವೇಕ್ ಜವಳಿ ಅವರಿಂದ ಸಲಹೆ

ಪ್ರಜಾವಾಣಿ ವಿಶೇಷ
Published 1 ಜುಲೈ 2023, 3:38 IST
Last Updated 1 ಜುಲೈ 2023, 3:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಂದು ವಿಶ್ವ ವೈದ್ಯರ ದಿನ. ವೈದ್ಯೋ ನಾರಾಯಣ ಹರಿ ಎಂದು ಎಲ್ಲರೂ ವೈದ್ಯರನ್ನು ಗೌರವಿಸುತ್ತಾರೆ. ವೈದ್ಯರಾದವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಜನರ ಜೀವ ಉಳಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳಿಗೂ ಸಹ ವೈದ್ಯರು ಹಲವು ಹೊಸ ತಂತ್ರಜ್ಞಾನಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಹೃದಯ ಸಂಬಂಧಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಬಳಿಕವೂ ಒಂದಷ್ಟು ಅನುಮಾನಗಳು ಜನರನ್ನು ಕಾಡುತ್ತಲೇ ಇರುತ್ತವೆ. ಶಸ್ತ್ರಚಿಕಿತ್ಸೆ ಬಳಿಕ ತಮ್ಮ ಹೃದಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಏನು ಮಾಡಬೇಕು? ಮಾಡಬಾರದು? ಯಾವ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸೂಕ್ತ ಎಂಬಿತ್ಯಾದಿ ಗೊಂದಲ ಇದ್ದೇ ಇರುತ್ತದೆ, ವೈದ್ಯರ ದಿನದಂದು ಈ ಎಲ್ಲಾ ಅನುಮಾನಗಳಿಗೂ ಫೋರ್ಟಿಸ್‌ ಆಸ್ಪತ್ರೆಯ ಹಿರಿಯ ಹೃದಯ ತಜ್ಞ ಡಾ. ವಿವೇಕ್‌ ಜವಳಿ ಅವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಹೃದಯ ಶಸ್ತ್ರಚಿಕಿತ್ಸೆ ಬಳಿಕ ವ್ಯಾಯಾಮ ಒಳ್ಳೆಯದೇ?

ಕೆಲವರಿಗೆ ಹೃದಯ ಶಸ್ತ್ರಚಿಕಿತ್ಸೆಯಾದ ಬಳಿಕ ಕೂಡಲೇ ವ್ಯಾಯಮ ಮಾಡುವುದು ಒಳ್ಳೆಯದೇ ಅಥವಾ ಕೆಲವು ಸಮಯದ ನಂತರ ವ್ಯಾಯಾಮ ಪ್ರಾರಂಭಿಸಬಹುದೇ, ಯಾವ ರೀತಿಯ ವ್ಯಾಯಾಮ ಮಾಡಿದರೆ ಒಳಿತು ಎಂಬ ಗೊಂದಲವಿರುತ್ತದೆ. ಶಸ್ತ್ರಚಿಕಿತ್ಸೆ ಬಳಿಕ ನೇರವಾಗಿ ವೈದ್ಯರ ಬಳಿ, ನೀವು ವ್ಯಾಯಾಮ ಮಾಡುವ ಸಮಯವನ್ನು ಕೇಳಬಹುದು. ಸಾಮಾನ್ಯವಾಗಿ 3 ತಿಂಗಳ ಅವಧಿ ವರೆಗೂ ಸಣ್ಣ ಪ್ರಮಾಣದ ವ್ಯಾಯಾಮ, ಸ್ಟ್ರೆಚಸ್‌ ಮಾಡಬಹುದು. ಆದರೆ, ದೇಹಕ್ಕೆ ಹೆಚ್ಚು ಶ್ರಮ ನೀಡುವ ವ್ಯಾಯಮ ಬೇಡ. ಗುಣಮುಖರಾದ ಬಳಿಕ ಸಂಪೂರ್ಣವಾಗಿ ದೇಹವನ್ನು ದಂಡಿಸುವ ವ್ಯಾಯಮ ಮಾಡಬಹುದು.

ADVERTISEMENT

ಯಾವ ಶಸ್ತ್ರಚಿಕಿತ್ಸೆ ಒಳ್ಳೆಯದು?

ಹಿಂದೆಲ್ಲಾ ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ಮ್ಯಾನ್ಯುವಲ್‌ ಶಸ್ತ್ರಚಿಕಿತ್ಸೆ ಸರ್ವೇ ಸಾಮಾನ್ಯವಾಗಿತ್ತು, ಇಂದು ರೋಬೋಟಿಕ್‌ ಶಸ್ತ್ರಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಹಾಗೂ ಪ್ರಚಲಿತದಲ್ಲಿದೆ, ರೋಬೋಟಿಕ್‌ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರ ಹಾಗೂ ನೋವು ರಹಿತವಾಗಿರುತ್ತದೆ. ಈ ಚಿಕಿತ್ಸೆಯಿಂದ ಶೀಘ್ರವೇ ಗುಣವಾಗುವ ಸಾಧ್ಯತೆಯೂ ಹೆಚ್ಚು. ಹೀಗಾಗಿ, ಹೃದಯ ಸಂಬಂಧಿ ಯಾವುದೇ ಶಸ್ತ್ರಚಿಕಿತ್ಸೆ ಇದ್ದರೂ ರೋಬೋಟಿಕ್‌ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ,

ಪ್ರತಿ ಹೃದಯಾಘಾತಕ್ಕೂ ಬೈಪಾಸ್‌ ಅಗತ್ಯವಿದೆಯೇ?

ಖಂಡಿತ ಇಲ್ಲ. ಎಲ್ಲಾ ಹೃದಯಾಘಾತಗಳು ತೀವ್ರ ಸ್ವರೂಪದಿಂದ ಕೂಡಿರುವುದಿಲ್ಲ. ಕೆಲವು ಸಣ್ಣ ಪ್ರಮಾಣದ ಹೃದಯಾಘಾತವೂ ಸಂಭವಿಸಬಹುದು, ಈ ಪ್ರಮಾಣವೇ ಹೆಚ್ಚು, ಇಂಥವರಿಗೆ ಆಂಜಿಯೋಪ್ಲ್ಯಾಸ್ಟಿ ಅಥವಾ ಸ್ಟೆಂಟಿಂಗ್‌ನಂತಹ ಪರ್ಯಾಯ ಚಿಕಿತ್ಸೆಗಳು ಸೂಕ್ತವಾಗಬಹುದು. ಹೃದಯಾಘಾತದ ತೀವ್ರತೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ವೈದ್ಯರು ಇದನ್ನು ನಿರ್ಧರಿಸಲಿದ್ದಾರೆ.

ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಮುಂದೆಂದೂ ಹೃದಯಾಘಾತವಾಗುವುದಿಲ್ಲವೇ?

ಕೆಲವರು ಬೈಪಾಸ್‌ ಸರ್ಜರಿ ಮಾಡಿಸಿದರೆ ಮತ್ತೆಂದೂ ಹೃದಯಾಘಾತವಾಗುವುದಿಲ್ಲ ಎಂದು ಭಾವಿಸಬಹುದು. ಆದರೆ ಇದು ತಪ್ಪು ಕಲ್ಪನೆ, ಬೈಪಾಸ್‌ ಸರ್ಜರಿಯಿಂದ ಕೇವಲ ನಿರ್ಬಂಧಿತ ಅಪಧಮನಿಗಳನ್ನು ಮರುಹೊಂದಿಸಬಹುದೇ ಹೊರತು, ಮತ್ತೊಮ್ಮೆ ಹೃದಯಾಘಾತವಾಗುವುದಿಲ್ಲ ಎನ್ನಲಾಗುವುದಿಲ್ಲ. ರೋಗಿಯ ಆರೋಗ್ಯ ನಿರ್ವಹಣೆ ಮೇಲೆ ಇದು ಅವಲಂಬಿತವಾಗಲಿದೆ.

ಅನುವಂಶಿಕ ಹೃದಯಘಾತವಿದ್ದರೆ ಅದನ್ನು ತಡೆಯಬಹುದೇ?

ಖಂಡಿತವಾಗಿಯೂ ತಡೆಯಬಹುದು. ಸಾಕಷ್ಟು ಜನರು ಕುಟುಂಬದಲ್ಲಿ ಹೃದಯಾಘಾತದ ಇತಿಹಾಸವಿದ್ದರೆ ತಮಗೂ ಹೃದಯಾಘಾತದ ಅಪಾಯ ಹೆಚ್ಚು ಎನ್ನುವುದು ಸತ್ಯ. ಆದರೆ, ಈ ಸತ್ಯ ಅರಿತವರು, ತಮ್ಮ ಆರೋಗ್ಯವನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಂಡರೆ, ಈ ಅನುವಂಶಿಕ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು. 30 ವರ್ಷದ ಬಳಿಕ ಪ್ರತಿ ವರ್ಷ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುವುದು, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಕ್ರಮ ಉತ್ತಮ ಜೀವನ ಶೈಲಿ ಹೊಂದಿರುವವರು ಇದರ ತೀವ್ರತೆಯಿಂದ ಹೊರಗುಳಿಯಬಹುದು.

ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದೇ?

ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಿದ್ದರೆ, ಹೃದಯಾಘಾತವಾಗುವ ಸಂಭವ ಹೆಚ್ಚು ಎನ್ನುವುದು ಸತ್ಯ. ಮಾರುಕಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಕಷ್ಟು ಔಷಧಗಳು ಲಭ್ಯವಿದೆ. ಈ ಔಷಧ ತೆಗೆದುಕೊಂಡು ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಂಡು ಬಳಿಕ ಜಂಕ್‌ಫುಡ್‌ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ವ್ಯಾಯಾಮ ಮಾಡದೇ ಇರುವುದನ್ನು ಮಾಡಿದರೂ ಸಹ ಹೃದಯಾಘಾತವಾಗುವ ಸಾಧ್ಯತೆ ಇರಲಿದೆ. ಮನುಷ್ಯದ ದೇಹವನ್ನು ಪ್ರಕೃತಿದತ್ತವಾಗಿಯೇ ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು, ಇದಕ್ಕೆ ಅಡ್ಡದಾರಿ ಹಿಡಿದರೆ, ಅದರಿಂದ ದೇಹದಲ್ಲಿ ಇತರೆ ಸೈಡ್‌ಎಫೆಕ್ಟ್‌ ಆಗುವ ಸಾಧ್ಯತೆ ಇದ್ದು, ಇದರಿಂದ ಬೇರೆ ರೀತಿಯ ಕಾಯಿಲೆಯೂ ದೇಹ ಹೊಕ್ಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.