ADVERTISEMENT

ಆರೋಗ್ಯ: ಟೆಸ್ಟೋಸ್ಟಿರಾನ್‌ ಮಟ್ಟದ ನಿರ್ವಹಣೆ ಹೇಗೆ?

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 23:05 IST
Last Updated 19 ಜುಲೈ 2024, 23:05 IST
   

ಮನುಷ್ಯನ ಜೀವನದಲ್ಲಿ ವಯಸ್ಸು ಎಂಬುದು ಸಹಜ ಪ್ರಕ್ರಿಯೆ ಇದು ಜೀವನದ ಪ್ರತೀ ಹಂತದಲ್ಲಿಯೂ ದೇಹದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ಈ ಪ್ರಕ್ರಿಯೆಯಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್‌ ಇಳಿಮುಖವಾಗುತ್ತದೆ. ಟೆಸ್ಟೋಸ್ಟಿರಾನ್ ಪುರುಷರಲ್ಲಿನ ಪ್ರಮುಖ ಹಾರ್ಮೋನ್‌ . ಮಹಿಳೆಯರಲ್ಲಿ ಇದು ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಸ್ನಾಯು, ಮೂಳೆಯ ತೂಕ, ಕೆಂಪು ರಕ್ತ ಕಣದ ಮಟ್ಟದಲ್ಲಿ ಜೀವನದ ಸಂತೋಷದಲ್ಲಿ ಈ ಹಾರ್ಮೋನ್‌ ಪ್ರಮುಖ ಪಾತ್ರವಹಿಸುತ್ತದೆ.

ಪ್ರತಿ ಡೆಸಿಲೀಟರ್‌ಗೆ 300 ನ್ಯಾನೋಗ್ರಾಮ್‌ ಟೆಸ್ಟೋಸ್ಟಿರಾನ್‌ ಹಾರ್ಮೋನ್‌ ಪುರುಷರಲ್ಲಿರುವುದು ಸಾಮಾನ್ಯ. ಇದಕ್ಕಿಂತ ಕಡಿಮೆ ಪ್ರಮಾಣದ ಟೆಸ್ಟೋಸ್ಟಿರಾನ್‌ ಹಾರ್ಮೋನಿನ ಇಳಿಕೆಯನ್ನು ಸೂಚಿಸುತ್ತದೆ. 19 ಅಥವಾ ಹೆಚ್ಚಿನ ವರ್ಷದ ಮಹಿಳೆಯರಲ್ಲಿ, 15–17 ನ್ಯಾನೋಗ್ರಾಮ್‌ನಷ್ಟು ಹಾರ್ಮೋನ್‌ ಪ್ರಾಥಮಿಕವಾಗಿ ಉತ್ಪಾದನೆಯಾಗುತ್ತದೆ. ಪ್ರಾಥಮಿಕವಾಗಿ ಪುರುಷರ ವೃಷಣದಲ್ಲಿ ಈ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಮಹಿಳೆಯರ ಅಂಡಾಶಯದಲ್ಲಿ ಅಲ್ಪ ಪ್ರಮಾಣದ ಟೆಸ್ಟೋಸ್ಟಿರಾನ್‌ ಉತ್ಪತ್ತಿಯಾಗುತ್ತದೆ. ಪುರುಷರ ಸ್ನಾಯು, ಮೂಳೆಯ ಬೆಳವಣಿಗೆ, ದೇಹದ ಕೂದಲುಗಳು ಹಾಗೂ ಸ್ವರದ ಬದಲಾವಣೆ, ಲೈಂಗಿಕತೆ, ಮಾನಸಿಕ ಸ್ಥಿತಿಯ ಮೇಲೆ ಈ ಹಾರ್ಮೋನ್ ಪ್ರಭಾವವನ್ನು ಬೀರುತ್ತದೆ. 

 30 ವರ್ಷ ದಾಟಿದ ನಂತರ ಪುರುಷರಲ್ಲಿ ಶೇ 1ರಷ್ಟು ಹಾರ್ಮೋನ್‌ ಪ್ರತಿ ವರ್ಷ ಇಳಿಮುಖವಾಗುತ್ತದೆ. ಇದು ಜ್ವರದ ಸ್ವಭಾವವನ್ನು ಹಾಗೂ ಲೈಂಗಿಕ ನಿರಾಸಕ್ತಿ ತಂದೊಡ್ಡುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ನಿದ್ರಾಹೀನತೆ, ನಿದ್ರೆಯ ವೇಳಾಪಟ್ಟಿಯಲ್ಲಿ ಬದಲಾವಣೆ, ಒಂದೆಡೆ ಗಮನವಿಡಲು ಸಾಧ್ಯವಾಗದೇ ಇರುವುದು, ಮಾಂಸಖಂಡವು ಬಲಹೀನಗೊಳ್ಳುವುದನ್ನು ಗಮನಿಸಬಹುದು. ಮೂಳೆಯ ಶಕ್ತಿ ಕುಂದುವುದು ಮೂಳೆ ಮುರಿತ ಹಾಗೂ ಎದೆಯ ಹೆಚ್ಚಿನ ಬೆಳವಣಿಗೆ ಕಾರಣವಾಗುತ್ತದೆ.

ADVERTISEMENT

ಹಾರ್ಮೋನ್ ಬದಲಾವಣೆಯಿಂದ ಖಿನ್ನತೆ ಹಾಗೂ ನಿಃಶಕ್ತಿ ಉಂಟಾಗಬಹುದು. ಕೆಲವು ಸೂಚನೆಗಳನ್ನು ಪಾಲಿಸುವುದರಿಂದ ಇದನ್ನು ಹತೋಟಿಗೆ ತರಬಹುದು. 

ನಿಯಮಿತ ವ್ಯಾಯಾಮ: ಆರೋಗ್ಯ ಜೀವನ ಶೈಲಿಗಾಗಿ ನಿಯಮಿತ ವ್ಯಾಯಾಮ ಆಗತ್ಯ. ಇದರಿಂದ ಮಾಂಸಖಂಡಗಳ ಬೆಳವಣಿಗೆಯ ಜತೆಗೆ, ಹಾರ್ಮೋನ್‌ಗಳ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಟೆಸ್ಟೋಸ್ಟೀರನ್ ರೀತಿಯ ಪ್ರೋಟಿನ್ ಬಿಡುಗಡೆ ಮಾಡುತ್ತದೆ. ಸ್ಕ್ವಾಟ್, ಡೆಡ್‌ಲಿಪ್ಟ್, ಚೆಸ್ಟ್ ಪ್ರೆಸ್‌ನಂತಹ ವ್ಯಾಯಾಮಗಳು ಮಾಂಸಖಂಡ ಬಲಗೊಳಿಸಲು ಸಹಾಯಮಾಡುವ ಮೂಲಕ ಆರೋಗ್ಯ ಜೀವನ ಶೈಲಿಗೆ ಸಹಾಯಮಾಡುತ್ತವೆ. 

 ಸಮತೋಲಿತ ಆಹಾರ ಬಳಕೆ : ದೈಹಿಕ ಆರೋಗ್ಯದ ದೃಷ್ಟಿಯಿಂದ ಸಮತೋಲಿತ ಆಹಾರ ಅಗತ್ಯ. ಹೆಚ್ಚಿನ ಪ್ರೋಟಿನ್ ಹೊಂದಿರುವ, ಹಣ್ಣು, ತರಕಾರಿ, ಕಾಳುಗಳು ಹಾಗೂ ಕೊಬ್ಬಿನ ಅಂಶವಿರುವ ಆಹಾರ ಸೇವನೆ ಮಾಡಬೇಕು.  ನೀರಿನ ಪ್ರಮಾಣ ಸಮತೋಲಿತವಾಗಿರುವಂತೆ ಇರಬೇಕು. ಪ್ರೋಟಿನ್‌ ಅಂಶ ನಿಯಂತ್ರದಲ್ಲಿಟ್ಟುಕೊಳ್ಳುವುದರ ಜೊತೆ ವಿಟಮಿನ್ ಹಾಗೂ ಮಿನರಲ್‌ ಆಹಾರಗಳಾದ ಹಸಿರು ಆಹಾರ ಸೇವನೆ ಮಾಡಬೇಕು. 

 ಸರಿಯಾದ ನಿದ್ದೆ : 7ರಿಂದ 9ಗಂಟೆ ನಿದ್ದೆಮಾಡದ ಪುರುಷರಲ್ಲಿ ಟೆಸ್ಟೋಸ್ಟಿರನ್ ಮಟ್ಟ ಕಡಿಮೆಯಿರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾ ವೇಳಾಪಟ್ಟಿಯನ್ನು ಸರಿಯಾಗಿ ಪಾಲಿಸುವುದರ ಜೊತೆ, ನಿದ್ದೆಗೆ ಅವಶ್ಯಕವಿರುವ ವಾತಾವರಣ ನಿರ್ಮಿಸಿಕೊಳ್ಳಬೇಕು.  

 ಒತ್ತಡ ನಿರ್ವಹಣೆ : ಒತ್ತಡವು ಹಾರ್ಮೋನಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಕಡಿಮೆ ಪ್ರಮಾಣದ ಟೆಸ್ಟೋಸ್ಟಿರಾನ್ ಉತ್ಪತ್ತಿಯು ದೈಹಿಕ ಒತ್ತಡಕ್ಕೆ ಕಾರಣವಾಗುತ್ತದೆ. ನಿರಂತರವಾದ ವ್ಯಾಯಾಮದಿಂದ ಎಂಡೋಫಿನ್ ಹಾರ್ಮೋನ್‌ ಅನ್ನು ಬಿಡುಗಡೆಗೊಳಿಸುತ್ತದೆ. ಇದು  ಟೆಸ್ಟೋಸ್ಟಿರಾನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.

ದೇಹದ ತೂಕ ನಿರ್ವಹಣೆ : ಅತಿಯಾದ ತೂಕ, ಹೊಟ್ಟೆಯ ದಪ್ಪವನ್ನು ನಿರಂತರವಾದ ವ್ಯಾಯಾಮದಿಂದ ಕಡಿಮೆ ಮಾಡಿ  ಟೆಸ್ಟೋಸ್ಟಿರಾನ್ ಮಟ್ಟವನ್ನು ನಿರ್ವಹಿಸಬಹುದು. ಸರಿಯಾದ ಆಹಾರ ಕ್ರಮದ ಮತ್ತು ಯೋಗ ಮತ್ತು ವ್ಯಾಯಾಮದಿಂದ ದೇಹದ ತೂಕವನ್ನು ನಿಯಂತ್ರಣದಲ್ಲಿರಿಸಿ.

ಲೇಖಕರು: ಡಾ.ವೆಂಕಟೇಶ್ ಗಿರಿ, ಶ್ರೀ ಮಕ್ಕಳ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.