ADVERTISEMENT

ಮಕ್ಕಳಲ್ಲಿ ಕ್ರೀಡಾ ಗಾಯತಡೆಯುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 19:30 IST
Last Updated 17 ಜನವರಿ 2020, 19:30 IST
ಚಿಕ್ಕ ಮಕ್ಕಳಲ್ಲಿ ಆಟವಾಡುವಾಗ ಆಗುವ ಗಾಯಗಳು
ಚಿಕ್ಕ ಮಕ್ಕಳಲ್ಲಿ ಆಟವಾಡುವಾಗ ಆಗುವ ಗಾಯಗಳು   

ಮಕ್ಕಳು ಆಟ ಆಡುವಾಗ ಬಿದ್ದು ಗಾಯಗೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಈ ಗಾಯ ಗಂಭೀರ ಸ್ವರೂಪದ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ.

ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ವ್ಯಾಯಾಮ ಮತ್ತು ಕ್ರೀಡೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ಗೊತ್ತೇ ಇದೆ. ಇದು ಅವರ ಮಾನಸಿಕ ಆರೋಗ್ಯ ಮತ್ತು ದೈಹಿಕ ಫಿಟ್‌ನೆಸ್‌ಗೆ ಸಹಕಾರಿ. ವಿಶ್ವದೆಲ್ಲೆಡೆ ಕ್ರೀಡೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಭಾರತದಲ್ಲೂ ‘ಖೇಲೋ ಇಂಡಿಯಾ’, ‘ಮಾರ್ಕ್ಸ್‌ ಫಾರ್‌ ಸ್ಪೋರ್ಟ್ಸ್’ ಮೊದಲಾದ ಆಂದೋಲನಗಳು ಆರೋಗ್ಯ, ಫಿಟ್‌ನೆಸ್‌ ಕುರಿತ ಜಾಗೃತಿ ಹೆಚ್ಚಿಸಲು ಮತ್ತು ಯುವ ಕ್ರೀಡಾಳುಗಳನ್ನು ಉತ್ತೇಜಿಸಲು ತೊಡಗಿಸಿಕೊಂಡಿವೆ. ಕ್ರೀಡೆ, ಆಟ ಎಂದರೆ ಗಾಯಗಳು ಸಾಮಾನ್ಯ. ಹೀಗಾಗಿ ಕ್ರೀಡಾ ಅಕಾಡೆಮಿಗಳು, ಶಾಲೆಗಳು, ಆರೋಗ್ಯ ನಿರ್ವಾಹಕರು ಮಕ್ಕಳಿಗೆ ಗಾಯ ಮಾಡಿಕೊಳ್ಳದಂತೆ ಮುನ್ನೆಚ್ಚರಿಕೆ, ಗಾಯವಾದ ಸಂದರ್ಭದಲ್ಲಿ ಹೇಗೆ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕಾಗುತ್ತದೆ.

ಪಾಶ್ಚಿಮಾತ್ಯ ದೇಶಗಳ ಅಂಕಿ– ಅಂಶಗಳ ಪ್ರಕಾರ ಶೇ 3– 11ರಷ್ಟು ಶಾಲಾಮಕ್ಕಳು ಗಾಯಗೊಳ್ಳುತ್ತಾರೆ. ಇದು ವಯಸ್ಕರಲ್ಲಿ ಕಂಡುಬರುವುದಕ್ಕಿಂತ ಸ್ವಲ್ಪ ಕಡಿಮೆ. ಶೇ 16ರಷ್ಟು ಗಾಯ ತಲೆಗೆ ಆಗುತ್ತದೆ. ಶೇ 60 ರಷ್ಟು ಗಾಯಗಳು ಉಳುಕು, ಜಜ್ಜಿದಂತಾಗುವುದು ಮತ್ತು ಸೀಳಿದಂತಾಗುವಿಕೆಯೇ ಆಗಿರುತ್ತವೆ. ಆದರೆ, ಸೂಕ್ತವಾದ ಮುನ್ನೆಚ್ಚರಿಕೆಯಿಂದ ಕ್ರೀಡಾ ಗಾಯಗಳನ್ನು ತಡೆಯಬಹುದು.

ADVERTISEMENT

ಮನುಷ್ಯನ ಅಸ್ಥಿಪಂಜರ ವ್ಯವಸ್ಥೆಯಲ್ಲಿ ಅತ್ಯಂತ ದುರ್ಬಲ ರಚನೆಯೆಂದರೆ ಎಪೆಫಿಸೀಲ್‌ ಪ್ಲೇಟ್‌. ಇದನ್ನು ಬೆಳವಣಿಗೆಯ ಫಲಕ ಎಂದೂ ಕರೆಯಲಾಗುತ್ತದೆ. ಹೀಗಾಗಿ ಆಘಾತದ ಪ್ರಕರಣಗಳಲ್ಲಿ, ಮೂಳೆಗಳ ಮುಂದಿನ ಬೆಳವಣಿಗೆಗೆ ಧಕ್ಕೆ ಉಂಟಾಗಬಹುದು. ಬೆಳೆಯುವ ಮೂಳೆಗಳು ಬಾಗುವಿಕೆ/ ಶಕ್ತಿ ಮತ್ತು ಬಯೋಮೆಕ್ಯಾನಿಕಲ್ ಗುಣಲಕ್ಷಣಗಳಲ್ಲಿ ಬದಲಾವಣೆಯನ್ನು ತೋರಿಸುತ್ತವೆ. ಶಾರೀರಿಕ ತೂಕ ಮೂಳೆಗಳಿಗೆ ಲಾಭದಾಯಕವೇ ಆದರೂ ಒಮ್ಮೆಲೇ ತೂಕ ಹೆಚ್ಚುವುದು ಅಥವಾ ದೀರ್ಘಕಾಲೀನ ಅತಿಯಾದ ಭಾರ ಗಂಭೀರವಾದ ಹಾನಿ ಉಂಟುಮಾಡಬಹುದು. ಗ್ರೋಥ್‌ ಪ್ಲೇಟ್‌ನ ಪಲ್ಲಟವು ಅಂಗಾಂಗಗಳ ಬೆಳವಣಿಗೆಯಲ್ಲಿ ವ್ಯತ್ಯಾಸ, ವಿರೂಪಗಳು ಮತ್ತು ದೀರ್ಘಕಾಲೀನ ಗಮನಾರ್ಹ ಅಂಗವೈಕಲ್ಯ ಉಂಟುಮಾಡಬಹುದು. ಪ್ರೌಢಾವಸ್ಥೆಯವರೆಗೆ ಹುಡುಗರು ಮತ್ತು ಹುಡುಗಿಯರು ಒಂದೇ ರೀತಿಯ ಅಸ್ಥಿಪಂಜರ ಬೆಳವಣಿಗೆ ಹೊಂದಿರುತ್ತಾರೆ. ಹೀಗಾಗಿ ಮಕ್ಕಳು ಆಡುವಾಗ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯವಾಗುವಂತೆ ಪ್ಯಾಡಿಂಗ್‌, ಹೆಲ್ಮೆಟ್‌ಗಳು, ಶೂಗಳು, ಮುಖ ರಕ್ಷಕಗಳಂತಹ ಸೂಕ್ತವಾದ ರಕ್ಷಣಾ ಸಾಮಗ್ರಿಗಳನ್ನು ಒದಗಿಸುವುದು ತುಂಬಾ ಮುಖ್ಯ.

ಕ್ರೀಡೆಯ ಗಾಯಗಳು

ತೀಕ್ಷ್ಣ ಗಾಯ: ಮೂಳೆ ಮುರಿತ, ಸ್ನಾಯುಗಳ ಹರಿಯುವಿಕೆ ಅಥವಾ ಜಜ್ಜುವಿಕೆ ಮುಂತಾದವುಗಳಿಂದ ಕೂಡಿರುವ ಈ ಗಾಯ ತಕ್ಷಣದಲ್ಲಿ ಸಂಭವಿಸುವಂಥದ್ದು. ತೀಕ್ಷ್ಣ ಗಾಯದಲ್ಲಿ ಎರಡು ವಿಧಗಳಿವೆ. ತರಚುವುದು, ಸೆಳೆತ, ಉಳುಕು, ಮುರಿದ ಮೂಳೆಗಳು ಮತ್ತು ಲಿಗಾಮೆಂಟ್‌ ಟೀಯರ್‌ ಒಂದು ವಿಧ. ಹದಿಹರೆಯದವರಲ್ಲಿ ಈ ರೀತಿಯ ಗಾಯಗಳು ಸಾಮಾನ್ಯ. ಇನ್ನೊಂದು ವಿಧದಲ್ಲಿ ಗಂಭೀರ ಹೊಡೆತ, ಕಣ್ಣಿನ ಗಾಯಗಳು, ತಲೆಬುರುಡೆಗೆ ಹಾನಿ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಬೆನ್ನುಹುರಿಯ ಗಾಯಗಳು ಸೇರಿವೆ.

ಅತಿಯಾದ ಬಳಕೆಯ ಗಾಯಗಳು: ಮರುಕಳಿಸುವ ಆಘಾತದಿಂದ ಬರುವ ಸ್ನಾಯುರಜ್ಜುವಿನ ಉರಿಯೂತ ಅಥವಾ ಒತ್ತಡದಿಂದಾಗುವ ಮುರಿತದಂತಹ ಯಾವುದೇ ರೀತಿಯ ಸ್ನಾಯು ಅಥವಾ ಸಂದು ಗಾಯಗಳು ಇದರಡಿಯಲ್ಲಿ ಬರುತ್ತವೆ. ಇದು ತಪ್ಪಾದ ತರಬೇತಿ ವಿಧಾನ, ಅಂದರೆ ಅತೀ ವೇಗವಾಗಿ, ಹೆಚ್ಚು ದೈಹಿಕ ವ್ಯಾಯಾಮ ಮಾಡುವುದರಿಂದ ಇದು ಉಂಟಾಗಬಹುದು.

ಮರುಗಾಯಗಳು: ಅಂದರೆ ಎರಡನೇ ಬಾರಿಗೆ ಅಥವಾ ಹೆಚ್ಚಿನ ಬಾರಿ ಮರುಕಳಿಸುವ ಗಾಯಗಳು.

ಕ್ರೀಡೆಗಳನ್ನು ವೃತ್ತಿಯಾಗಿ ಮುಂದುವರಿಸಲು ಬಯಸುವ ಮಕ್ಕಳಿಗೆ ಮತ್ತು ಕ್ರೀಡೆಯನ್ನೇ ಜೀವನೋಪಾಯ ಮಾಡಿಕೊಳ್ಳುವವರಿಗೆ ಗಾಯಗಳು ತುಂಬಾ ಕಷ್ಟಕರವೆಂದು ಸಾಬೀತಾಗಿದೆ. ಆದ್ದರಿಂದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಮೊದಲ ಹಂತದಲ್ಲೇ ಗಾಯವನ್ನು ತಪ್ಪಿಸುವುದು ಹೇಗೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

* ಗಾಯಗೊಳ್ಳುವುದನ್ನು ತಪ್ಪಿಸುವ ಕೆಲವು ವಿಧಾನಗಳು

* ಅಭ್ಯಾಸ ಮಾಡುವಾಗ ಸರಿಯಾದ ಸಾಧನಗಳನ್ನು ಬಳಸುವುದು.

* ಆಟ ಆಡುವಾಗ ಪ್ಯಾಡಿಂಗ್‌, ಹೆಲ್ಮೆಟ್‌, ಶೂಗಳು, ಬಾಯಿ ರಕ್ಷಕ, ಕಣ್ಣಿನ ದಿರಿಸು ಮುಂತಾದ ಪ್ರಮುಖ ಸಾಧನಗಳನ್ನು ಬಳಸಬೇಕು.

* ಸೂಕ್ತವಾದ ಆಟದ ಮೇಲ್ಮೈಗಳು, ಹೊಡೆತ ಹೆಚ್ಚಿರುವ ಕ್ರೀಡೆಗಳಿಗೆ ಸೂಕ್ತವಾದ ಮೇಲ್ಮೈ, ಹೊಂಡ ಮತ್ತು ರಂಧ್ರಗಳನ್ನು ತಪ್ಪಿಸುವುದು ಮುಖ್ಯ.

* ತರಬೇತುದಾರರು / ತರಬೇತಿ ಸಿಬ್ಬಂದಿಗೆ ಈ ಬಗ್ಗೆ ಜ್ಞಾನ ಇರಬೇಕಾಗುತ್ತದೆ.

* ಮಕ್ಕಳು ತಮ್ಮ ಕೌಶಲ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳಿಗೆ ಹೊಂದಿಕೆಯಾಗುವ ಕ್ರೀಡೆಗಳನ್ನು ಆಡಲು ಅವಕಾಶ ಮಾಡಿಕೊಡುವುದು.

* ಸರಿಯಾದ ತಯಾರಿ (ಹೆಚ್ಚಾಗಿ ಗಾಯಗಳನ್ನು ತಪ್ಪಿಸಲು) ಮತ್ತು ಸರಿಯಾದ ವಿಶ್ರಾಂತಿ ಪಡೆಯುವುದು ಮತ್ತು ನೋವಿನಿಂದ ಬಳಲುತ್ತಿರುವಾಗ ಆಟವನ್ನು ಆಡದಿರುವುದು.

(ಲೇಖಕರು ಕ್ರೀಡಾ ಆರ್ಥೋಪೆಡಿಕ್ ಸರ್ಜನ್, ಸ್ಫೋರ್ಥೋ, ಸ್ಪರ್ಶ್‌ ಆಸ್ಪತ್ರೆಯ ಕ್ರೀಡಾ ಔಷಧ ಕೇಂದ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.