ADVERTISEMENT

ಸಮಾಧಾನ ಅಂಕಣ: ಮಗನ ಮುಂಗೋಪ ಕಡಿಮೆ ಮಾಡುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 23:30 IST
Last Updated 3 ಆಗಸ್ಟ್ 2025, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini AI

ನಮಗೆ ಒಬ್ಬನೇ ಮಗ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. ಅವನಿಗೆ ವಿಪರೀತ ಸಿಟ್ಟು, ಮುಂಗೋಪಿ. ಶ್ರದ್ಧೆಯಿಂದ ಓದಿಕೋ ಎಂದರೆ ಸಾಕು, ಸಿಟ್ಟಿಗೇಳುತ್ತಾನೆ. ಸಿಟ್ಟು ಬಂದಾಗ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆಯುತ್ತಾನೆ. ಇದಕ್ಕೆ ಕಾರಣವೇನು? ಸರಿ ಮಾಡುವುದು ಹೇಗೆ?

ADVERTISEMENT

– ಅನುಪಮಾ ಕಾಮತ್‌, ಬೆಂಗಳೂರು

ನಿಮ್ಮ ಮಗ ಯಾವಾಗಿನಿಂದ ಹೀಗಾಗಿದ್ದಾನೆ,  ಮನೆಯಲ್ಲಿ ಎಷ್ಟು ಜನ ಇದ್ದೀರಿ ಎಂಬಂಥ ವಿವರಗಳು ಇದ್ದಿದ್ದರೆ ಅನುಕೂಲವಾಗುತ್ತಿತ್ತು, ಇರಲಿ. ಹದಿಹರೆಯದಲ್ಲಿ ಆಗುವ ದೈಹಿಕ, ಮಾನಸಿಕ ಬದಲಾವಣೆಗಳು ಮಗುವಿಗೆ ಹೊಸತು. ಇನ್ನು, ಒಂದೇ ಮಗುವಿರುವ ಮನೆಯಲ್ಲಿ ಮಗು ಒಂಟಿತನದ ಭಾವನೆ ಅನುಭವಿಸುವ ಸಾಧ್ಯತೆ ಇಲ್ಲದಿಲ್ಲ. ಆಗ ಅದರ ಮನಸ್ಸಿನಲ್ಲಿ ಅನೇಕ ಬಗೆಯ ಆಲೋಚನೆಗಳು ಬರುತ್ತವೆ. ಹೊಸ ಅನುಭವಗಳು ಆಗುತ್ತವೆ. ಅವುಗಳಿಗೆ ಮಗು ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಅಂಗೀಕರಿಸುತ್ತದೆ ಎನ್ನುವುದರ ಮೇಲೆ ಅದರ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಪಾಲಕರು ತಮ್ಮ ಹದಿಹರೆಯದ ಅನುಭವಗಳಲ್ಲಿ ಬಹಳಷ್ಟನ್ನು ಮರೆತಿರುತ್ತಾರೆ. ಮಗು ತಮ್ಮ ಹಾಗೆಯೇ ಶಿಸ್ತಿನ ಸಿಪಾಯಿಯಾಗಬೇಕು, ಜಾಣನಾಗಬೇಕು, ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಬಯಸುತ್ತಾರೆ. ಮಗುವಿನೊಂದಿಗೆ ಮಗುವಾಗಿ ಬೆರೆಯದೇ, ತಮ್ಮ ಹಾಗೇ ಪ್ರೌಢಿಮೆಯಿಂದ ವರ್ತಿಸಲಿ ಎಂದು ಆಶಿಸುತ್ತಾರೆ. ಇಲ್ಲಿಂದಲೇ ಸಮಸ್ಯೆ ಶುರುವಾಗುತ್ತದೆ. ಅದು ಒಂದೊಂದು ಮಗುವಿನಲ್ಲಿ ಒಂದೊಂದು ರೀತಿಯಲ್ಲಿ ವ್ಯಕ್ತವಾಗುತ್ತದೆ.

ನೀವು ಗಂಡ– ಹೆಂಡತಿ ಮಗುವಿನ ಎದುರಿನಲ್ಲಿಯೇ ಜಗಳವಾಡುವಿರಾ? ನಿಮ್ಮಿಬ್ಬರಲ್ಲಿ ಯಾರಿಗೆ ಕೋಪ ಜಾಸ್ತಿ ಇದೆಯೋ ಅವರದ್ದೇ ನಡೆಯುತ್ತದೆ ತಾನೆ? ಕೋಪ ಮಾಡಿಕೊಳ್ಳುವುದರಿಂದ ತನಗೆ ಬಹಳಷ್ಟು ಅನುಕೂಲಗಳಿವೆ ಎನ್ನುವುದನ್ನು ಕಂಡುಕೊಂಡ ನಂತರವೇ ನಿಮ್ಮ ಮಗ ಹಾಗಾಗಿರುತ್ತಾನೆ. ಮನೆಯಲ್ಲಿ ಎಂಥ ಸಂಸ್ಕಾರ ಸಿಗುತ್ತದೆಯೋ ಮಗು ಹಾಗೆಯೇ ಬೆಳೆಯುತ್ತದೆ. ಮಠದಲ್ಲಿ ಸಾಕಿದ ಗಿಳಿಗೂ, ಕಟುಕರ ಮನೆಯಲ್ಲಿ ಸಾಕಿದ ಗಿಳಿಗೂ ಇರುವ ವ್ಯತ್ಯಾಸದಂತೆಯೇ, ಮಕ್ಕಳ ಬೆಳವಣಿಗೆಯೂ ಆಗುತ್ತದೆ.

ಮಗು ಮುಂದೆ ಎಂಥ ವ್ಯಕ್ತಿಯಾಗಬೇಕೋ ಅಂಥ ವ್ಯಕ್ತಿತ್ವವನ್ನು ಮೊದಲು ಪಾಲಕರು ರೂಢಿಸಿಕೊಳ್ಳಬೇಕು. ತಪ್ಪು ಮಾಡುತ್ತಾ ಕಲಿಯುವುದು ಸರಿಯಾದ ಕ್ರಮ. ಮಕ್ಕಳನ್ನು ಸಾಧ್ಯವಾದಷ್ಟೂ ಸಹನೆಯಿಂದ, ಪ್ರೀತಿಯಿಂದ, ಗದರದೇ ಹೊಡೆಯದೇ ಬೆಳೆಸಬೇಕು. ಶಾಂತಿ, ಸಹನೆ, ಸೌಹಾರ್ದ, ಪ್ರೀತಿಯಿಂದ ವ್ಯವಹರಿಸಬೇಕು. ನಿಮ್ಮ ಮಗನಲ್ಲಿನ ಅನಿಯಂತ್ರಿತ ಮಟ್ಟದ ಉದ್ವಿಗ್ನತೆ, ಆತಂಕ ಕಡಿಮೆಯಾಗಬೇಕು. ನೀವು ಮೂವರೂ ಸಕಾರಾತ್ಮಕವಾಗಿ ಬದಲಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.