ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಬಹುತೇಕರಿಗೆ ಬೆನ್ನು ನೋವು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಐಟಿ ಉದ್ಯೋಗಿಗಳು ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ, ಹೀಗಾಗಿ ಅವರಲ್ಲಿ ಬೆನ್ನು ನೋವು ಬಹುಬೇಗನೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಬೆನ್ನು ನೋವಿಗೆ ಪರಿಹಾರವೇನು ಎಂಬುದಕ್ಕೆ ಇಲ್ಲಿದೆ ಪರಿಹಾರ.
ದಿನದ ಹೆಚ್ಚಿನ ಸಮಯ ಕಂಪ್ಯೂಟರ್ ಮುಂದೆ ವಿವಿಧ ಭಂಗಿಗಳಲ್ಲಿ ಕೂರುವುದು, ದೈಹಿಕ ಚಲನೆ, ವ್ಯಾಯಾಮ ಇಲ್ಲದೇ ಇರುವುದು ಪ್ರಮುಖ ಕಾರಣಗಳು. ಇದರಿಂದ ದಿನೇ ದಿನೇ ಬೆನ್ನು ಮೂಳೆ ಸಂಕುಚಿತಗೊಂಡು, ಬೆನ್ನಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬೆನ್ನಿನ ಸ್ನಾಯುಗಳು ದುರ್ಬಲಗೊಂಡ ಹಾಗೆ ನೋವು ತೀವ್ರವಾಗುತ್ತದೆ.
ಕುರ್ಚಿಯ ಮೇಲೆ ಅತಿಯಾಗಿ ಕುಳಿತು ಕಾಣಿಸಿಕೊಳ್ಳುವ ಬೆನ್ನು ನೋವು ಒಂದೆಡೆಯಾದರೆ ಕೆಲಸದ ಒತ್ತಡದಿಂದ ತಲೆನೋವಿನ ಸಮಸ್ಯೆಯನ್ನು ಕೂಡ ಉದ್ಯೋಗಿಗಳು ಅನುಭವಿಸುತ್ತಾರೆ. ಈ ತಲೆನೋವಿನ ಸಮಸ್ಯೆಯು ಅನೇಕ ಕಾರಣಗಳಿಂದಾಗಿ ಕಾಣಿಸಿಕೊಳ್ಳುತ್ತದೆ. ಅವುಗಳೆಂದರೆ ಒತ್ತಡ, ಕುರ್ಚಿಯ ಮೇಲೆ ಕುಳಿತುಕೊಳ್ಳುವ ಭಂಗಿ, ಸರಿಯಾಗಿ ನೀರು ಸೇವಿಸದಿರುವುದು ಹಾಗೂ ಹೆಚ್ಚಿನ ಸಮಯ ಕಂಪ್ಯೂಟರ್ ಅನ್ನು ನೋಡುವುದರಿಂದಲೂ ಉಂಟಾಗುತ್ತದೆ. ಈ ಆರೋಗ್ಯ ಸಮಸ್ಯೆಯು ಮಾರಣಾಂತಿಕವಲ್ಲವೆಂದೆನಿಸಿದರೂ ಕಾಲಕ್ರಮೇಣ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ತಲೆನೋವಿನ ಲಕ್ಷಣಗಳನ್ನು ಗಮನಿಸಿದಾಗ ತಲೆಯ ಎರಡೂ ಬದಿಯಲ್ಲಿ ನೋವು ಅಥವಾ ಒತ್ತಡ, ಹಣೆಯಲ್ಲಿ ಬಿಗಿತ ಉಂಟಾಗುವುದು, ನೆತ್ತಿ, ಕುತ್ತಿಗೆ ಮತ್ತು ಭುಜಗಳಲ್ಲಿ ಸ್ನಾಯುಗಳ ಸೆಳೆತ ಉಂಟಾಗುವುದು, ಭಾವನಾತ್ಮಕವಾಗಿ ಒತ್ತಡ ಉಂಟಾಗುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು.
ಪರಿಹಾರ ಹೀಗಿದೆ: ದೈಹಿಕ ಚಟುವಟಿಕೆಗಳನ್ನು ನಡೆಸಿ. ಕಂಪ್ಯೂಟರ್ ಮುಂದೆ ಕುಳಿತಾಗ ನೇರವಾಗಿ ಉತ್ತಮ ಭಂಗಿಯಲ್ಲಿ ಕೂರುವ ಪ್ರಯತ್ನ ಮಾಡುವುದು, ಆಗಾಗ್ಗೆ ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡುವುದು, ಕಚೇರಿಯಲ್ಲಿ ಸೂಕ್ತವಾದ ಕುರ್ಚಿಯ ಮೇಲೆ ಕುಳಿತು ಪಾದಗಳನ್ನು ನೆಲದ ಮೇಲಿಡಬೇಕು, ಕೆಲಸದ ನಡುವೆ 30 ನಿಮಿಷಗಳಿಗೊಮ್ಮೆ ನಿಲ್ಲುವುದು, ಕೈಗಳನ್ನು ಚಾಚುವುದು ಮತ್ತು ಒಂದೆರಡು ಹೆಜ್ಜೆ ನಡೆಯುವ ಅಭ್ಯಾಸವನ್ನು ಮಾಡಬೇಕು. ಆಗ ದೇಹ, ಕುತ್ತಿಗೆ ಮತ್ತು ಕೈ, ಕಾಲುಗಳಿಗೆ ಅಗತ್ಯ ವ್ಯಾಯಾಮ ದೊರೆಯುವುದರ ಜೊತೆಗೆ ದೇಹಕ್ಕೆ ಉತ್ಸಾಹ ದೊರೆಯುತ್ತದೆ.
ಉದ್ಯೋಗಿಗಳು ತಲೆ ನೋವನ್ನು ದೂರವಿಡಲು ಕೆಲಸದ ನಡುವೆ ಆಗಾಗ್ಗೆ ವಿರಾಮ ಅಗತ್ಯ, ನೀರಿನ ಸೇವನೆ, ಕೆಲಸದ ಒತ್ತಡ ಕಡಿಮೆಯಾಗಲು ಧ್ಯಾನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಕುರ್ಚಿಯ ಮೇಲೆ ಉತ್ತಮ ಭಂಗಿಯಲ್ಲಿ ಕೂರುವುದರಿಂದ ಸ್ನಾಯುಗಳ ಮೇಲೆ ಒತ್ತಡ ಬೀರುವುದನ್ನು ತಪ್ಪಿಸಬಹುದು. ನೋವಿನಿಂದ ಮುಕ್ತಿ ಹೊಂದಲು ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಮೂಲಕವೂ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದು. ಇಷ್ಟಾದರೂ ತಲೆ ನೋವು ಕಡಿಮೆಯಾಗದಿದ್ದಲ್ಲಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ವೈದ್ಯರನ್ನು ಸಂಪರ್ಕಿಸಿ.
-ಡಾ. ಪ್ರಥಮ್ ಬೈಸಾನಿ, ನರರೋಗತಜ್ಞ, ವಾಸವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.