ಬೆಂಗಳೂರು: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ತೋರಿದರೆ ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಘಟನೆ ನಡೆದಿದೆ. ಬೆಂಗಳೂರಿನ 32 ವರ್ಷದ ಯುವಕನೊಬ್ಬ ‘ಮ್ಯೂಕರ್‌ಮೈಕೋಸಿಸ್’ ಎಂಬ ಅಪರೂಪದ ಮತ್ತು ತೀವ್ರವಾದ ಫಂಗಲ್ ಸೋಂಕಿನಿಂದ ಬಳಲುತ್ತಿದ್ದರು, ಅಲ್ಲದೆ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ಕೂಡ ತಲುಪಿದ್ದರು. ಈ ರೀತಿಯ ಪ್ರಕರಣಗಳು ಕೋವಿಡ್ ಸಮಯದಲ್ಲಿ ಕಂಡುಬಂದಿತ್ತು. ಅದಾದ ನಂತರ ಈ ಕುರಿತು ಯಾರೂ ಎಚ್ಚೆತ್ತುಕೊಂಡಿಲ್ಲ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ರೋಗಿಯೊಬ್ಬರು ತಲೆ ಮತ್ತು ಕಣ್ಣಿನ ಸುತ್ತ ನೋವಿನಿಂದ ಬಳಲುತ್ತಿದ್ದರು. ಅನೇಕರಿಗೆ ಈ ಸಮಸ್ಯೆ ಕಾಡುತ್ತಿದ್ದರೂ ಇದರ ಬಗ್ಗೆ ಗಮನವಹಿಸುವುದಿಲ್ಲ. ತಲೆ, ಕಣ್ಣು, ಮೂಗಿನ ನೋವನ್ನು ನಿರ್ಲಕ್ಷಿಸುವುದರಿಂದ ಅವು ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಜ್ಞರು.
ರೋಗಿಯು ವಾಸವಿ ಆಸ್ಪತ್ರೆಗೆ ಭೇಟಿ ನೀಡಿದಾಗ ನಾಸಲ್ ಎಂಡೋಸ್ಕೋಪಿಗೆ ಒಳಪಡಿಸಲಾಯಿತು. ರೋಗಿಯ ಮುಖದ ಬಲ ಮಧ್ಯದ ಟರ್ಬಿನೇಟ್ ಮೇಲೆ ಕಪ್ಪಾದ ಡಿಸ್ಚಾರ್ಜ್ (blackish discharge) ಕಂಡುಬಂದಿತು. ನಂತರ ಫಂಗಲ್ ಪರೀಕ್ಷೆಯಲ್ಲಿ ಮ್ಯೂಕರ್‌ಮೈಕೋಸಿಸ್ ಇದೆ ಎಂಬುದು ದೃಢಪಟ್ಟಿತು. ಮಿದುಳಿನಲ್ಲಿ ಬಾವು (ಊದಿಕೊಳ್ಳವುದು) ಬಳಿಕ ಈ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದರೆ ಸೋಂಕು ಶಾಶ್ವತವಾಗಿ ಅಂಧತ್ವಕ್ಕೆ ಕಾರಣವಾಗುತ್ತಿತ್ತು. ಸೋಂಕಿತ ಸೈನಸ್ ಅನ್ನು ಸ್ವಚ್ಛಗೊಳಿಸಲು ಮತ್ತು ಕಪ್ಪಾದ ಡಿಸ್ಚಾರ್ಜ್ ಹರಡುವಿಕೆಯನ್ನು ತಡೆಗಟ್ಟಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ನಡೆಸುವುದು ತಡವಾಗಿದ್ದಿದ್ದರೆ ರಾತ್ರೋರಾತ್ರಿ ರೋಗಿಯು ತಮ್ಮ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರು. ಕೋವಿಡ್ ನಂತರದಲ್ಲಿ ಹಲವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದು, ಇಂಥವರಲ್ಲಿ ಸೋಂಕು ವೇಗವಾಗಿ ಹರಡುತ್ತದೆ ಎಂದು ಡಾ. ಶ್ರೀಕೌಳ ಅವರು ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ 6 ವಾರಗಳ ಕಾಲ ಇಂಟ್ರಾವೆನಸ್ ಆಂಫೋಟೆರಿಸಿನ್ ಬಿ (Amphotericin B) ಥೆರಪಿ ನೀಡಲಾಯಿತು. ತದನಂತರದಲ್ಲಿ ಕೈಗೊಂಡ ಎಂಆರ್‌ಐ ಸ್ಕ್ಯಾನ್ ಮೂಲಕ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಿರುವುದು ತಿಳಿದುಬಂದಿತು. ಇಲ್ಲಿ, ರೋಗಿಯು ಆರೋಗ್ಯದ ಜೊತೆಗೆ ದೃಷ್ಟಿಯನ್ನು ಕಳೆದುಕೊಳ್ಳುವುದು ತಪ್ಪಿತು. ತಲೆನೋವು, ಮೂಗಿನ ಅಸ್ವಸ್ಥತೆಯನ್ನು ವಿಶೇಷವಾಗಿ COVID-ನಂತರದ ದಿನಗಳಲ್ಲಿ ರೋಗಿಗಳು ನಿರ್ಲಕ್ಷಿಸಬಾರದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಯಾವುದೇ ಆರೋಗ್ಯ ಸಮಸ್ಯೆಯಾಗಲಿ ರೋಗಲಕ್ಷಣಗಳು ಕಂಡ ಕೂಡಲೇ ಶೀಘ್ರವಾಗಿ ತಜ್ಞರನ್ನು ಭೇಟಿ ಮಾಡುವುದು ಒಳಿತು ಎನ್ನುತ್ತಾರೆ ಡಾ. ಯಶಸ್ವಿ ಶ್ರೀಕೌಳ.
(ಲೇಖಕರು: ಡಾ. ಯಶಸ್ವಿ ಶ್ರೀಕೌಳ, ಇಎನ್‌ಟಿ ತಜ್ಞರು, ವಾಸವಿ ಆಸ್ಪತ್ರೆ ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.