ADVERTISEMENT

ಆರೋಗ್ಯ: ರೋಗನಿರೋಧ ಶಕ್ತಿ ಎಂಬ 'ಆಂತರಿಕ ಸೈನ್ಯ'

ಡಾ.ಕಿರಣ್ ವಿ.ಎಸ್.
Published 23 ಡಿಸೆಂಬರ್ 2025, 0:30 IST
Last Updated 23 ಡಿಸೆಂಬರ್ 2025, 0:30 IST
   
ಯಾವುದಾದರೂ ಕಾರಣಗಳಿಗೆ ಶರೀರದ ರಕ್ಷಕ ವ್ಯವಸ್ಥೆ ದುರ್ಬಲಗೊಂಡಾಗ ದೇಹವು ರೋಗಾಣುಗಳ ದಾಳಿಗೆ ಸುಲಭವಾಗಿ ತುತ್ತಾಗುತ್ತದೆ. ಇದರಿಂದ ಸಣ್ಣಪುಟ್ಟ ಹವಾಮಾನ ಬದಲಾವಣೆಗಳಿಗೂ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು, ಸೋಂಕುಗಳು ಆಗಾಗ ಕಾಡುತ್ತವೆ.

‘ನಿಮಗೆ ಇಮ್ಯುನಿಟಿ ಕೊರತೆಯಿದೆ. ನೀವು ಸರಿಯಾಗಿ ಊಟ ಮಾಡಬೇಕು. ದಿನವೂ ವ್ಯಾಯಾಮ ಮಾಡಬೇಕು. ಇಲ್ಲವಾದರೆ ಹೀಗೆಯೇ ಪದೇ ಪದೇ ಕಾಯಿಲೆ ಬೀಳುತ್ತೀರಿ’ – ಎಂದು ವೈದ್ಯರು ಎಚ್ಚರಿಸುವುದು ಹೊಸತಲ್ಲ. ಅದರಲ್ಲೂ ವೃದ್ಧರಿಗೆ, ಬೆಳೆಯುತ್ತಿರುವ ಮಕ್ಕಳಿಗೆ, ಮಧುಮೇಹದಂತಹ ದೀರ್ಘಕಾಲಿಕ ಅನಾರೋಗ್ಯಗಳಿಂದ ಬಳಲುತ್ತಿರುವವರಿಗೆ ಇಂತಹ ಸೂಚನೆಗಳು ಆಗಾಗ ಬರುತ್ತವೆ. ‘ಇಮ್ಯುನಿಟಿ’ ಅಥವಾ ದೇಹದ ರೋಗನಿರೋಧ ಶಕ್ತಿ ಎಂದರೇನು? ಅದನ್ನು ಬೆಳೆಸಿಕೊಳ್ಳುವುದು ಹೇಗೆ? ಅದು ಕಡಿಮೆಯಾದರೆ ಯಾವ ತೊಂದರೆಗಳಾಗುತ್ತವೆ? ಈ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ:

ಭೂಮಿಯ ಸೃಷ್ಟಿವೈವಿಧ್ಯದಲ್ಲಿ ಮಾನವಪ್ರಾಣಿಯೂ ಒಂದು. ನಮ್ಮ ಪರಿಸರದಲ್ಲಿ ಕಣ್ಣಿಗೆ ಕಾಣದ ಲಕ್ಷಾಂತರ ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರ, ಏಕಕೋಶ ರೋಗಕಾರಕಗಳು ಮತ್ತು ಪರಾವಲಂಬಿ ಜೀವಿಗಳಿವೆ. ನಮ್ಮಂತೆಯೇ ಅವುಗಳಿಗೂ ಪ್ರಪಂಚದಲ್ಲಿ ಬದುಕಲು ಹೋರಾಟ ಅಗತ್ಯ. ಅವುಗಳ ನಿರಂತರ ದಾಳಿಯ ನಡುವೆಯೂ ನಾವು ಆರೋಗ್ಯವಾಗಿ ಇರಲು ಸಾಧ್ಯವಾಗಿರುವುದು ನಮ್ಮ ‘ರೋಗನಿರೋಧ ಶಕ್ತಿ’ಯಿಂದ. ಹೊರಗಿನಿಂದ ದೇಹದೊಳಗೆ ನುಗ್ಗುವ ರೋಗಾಣುಗಳನ್ನು ಗುರುತಿಸಿ, ಅವುಗಳನ್ನು ನಾಶಪಡಿಸುವ ದೇಹದ ಭದ್ರತೆಯ ವ್ಯವಸ್ಥೆಯೇ ರೋಗನಿರೋಧ ಶಕ್ತಿ. ಒಂದು ರೀತಿಯಲ್ಲಿ ಇದು ನಮ್ಮ ದೇಹದ ‘ಆಂತರಿಕ ಸೈನ್ಯ’. ದೇಹದೊಳಗೆ ಪ್ರವೇಶಿಸುವ ಯಾವುದೇ ಪ್ರತಿಜನಕವನ್ನು ತಕ್ಷಣವೇ ಗುರುತಿಸಿ, ಅದರ ವಿರುದ್ಧ ಹೋರಾಟ ಆರಂಭಿಸಬಲ್ಲ ಬಿಳಿರಕ್ತ ಕಣಗಳು, ಪ್ರತಿಕಾಯಗಳು, ದುಗ್ಧರಸ ವ್ಯವಸ್ಥೆ ಮತ್ತು ವಿವಿಧ ಅಂಗಾಂಶಗಳ ಸಂಕೀರ್ಣ ಜಾಲವಾದ ರೋಗನಿರೋಧ ಶಕ್ತಿ, ಕೇವಲ ರೋಗಗಳನ್ನು ತಡೆಯುವುದಕ್ಕಷ್ಟೇ ಸೀಮಿತವಲ್ಲ, ಬದಲಿಗೆ ಶರೀರದ ಕಾರ್ಯಕ್ಷಮತೆಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರೋಗನಿರೋಧ ಶಕ್ತಿ ಹಲವಾರು ಕಾರಣಗಳಿಂದ ಕುಂಠಿತವಾಗುತ್ತದೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ರೋಗನಿರೋಧ ಶಕ್ತಿ ಇನ್ನೂ ಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ. ಅಂತೆಯೇ, ವೃದ್ಧರಲ್ಲಿ ವಯೋಸಹಜವಾಗಿ ಈ ಶಕ್ತಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಮಧುಮೇಹ, ಸ್ಟೀರಾಯ್ಡ್ ಔಷಧ ಸೇವನೆ, ಅಂಗಕಸಿ, ಕ್ಯಾನ್ಸರ್ ಮೊದಲಾದ ಸಂದರ್ಭ ಗಳಲ್ಲಿ ಕೂಡ ರೋಗನಿರೋಧ ಶಕ್ತಿ ಇಳಿಮುಖವಾಗುತ್ತದೆ. ಇಷ್ಟೇ ಅಲ್ಲದೆ, ವೈಯಕ್ತಿಕ ಮಟ್ಟದಲ್ಲಿ ಮಾನಸಿಕ ಒತ್ತಡ, ಋತುಬದಲಾವಣೆ, ಜೀವನಶೈಲಿ, ಪ್ರಯಾಣ, ಆಹಾರದಲ್ಲಿನ ಅಶಿಸ್ತು, ಸೋಮಾರಿತನ ಮೊದಲಾದು ವು ಗಳಿಂದಲೂ ರೋಗನಿರೋಧ ಶಕ್ತಿ ಏರುಪೇರಾಗುತ್ತದೆ.

ADVERTISEMENT

ಯಾವುದೇ ಕಾರಣಕ್ಕೆ ಶರೀರದ ರಕ್ಷಕ ವ್ಯವಸ್ಥೆ ದುರ್ಬಲಗೊಂಡಾಗ ದೇಹವು ರೋಗಾಣುಗಳ ಸುಲಭ ತುತ್ತಾಗುತ್ತದೆ. ಇದರಿಂದ ಸಣ್ಣಪುಟ್ಟ ಹವಾಮಾನ ಬದಲಾವಣೆಗಳಿಗೂ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು, ಸೋಂಕುಗಳು ಆಗಾಗ ಕಾಡುತ್ತವೆ. ಸುಸ್ತು ಮತ್ತು ನಿಶ್ಶಕ್ತಿಗಳು ಆವರಿಸುತ್ತವೆ. ದೇಹದ ಅಂಗಾಂಶಗಳ ಪುನರುತ್ಪಾದನೆಯ ಸಾಮರ್ಥ್ಯ ಕಡಿಮೆಯಾಗಿ, ಸಣ್ಣ-ಪುಟ್ಟ ಗಾಯಗಳು ಗುಣವಾಗಲೂ ದೀರ್ಘಕಾಲತೆಗೆದು ಕೊಳ್ಳು ತ್ತವೆ. ಶರೀರದ ಶೇ. 70ರಷ್ಟು ರೋಗನಿರೋಧ ಕೋಶಗಳು ಜೀರ್ಣಾಂಗವ್ಯೂಹದಲ್ಲಿ ಇರುವುದರಿಂದ, ರೋಗನಿರೋಧ ಶಕ್ತಿ ಕಡಿಮೆಯಾದಾಗ ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕುಸಿಯುತ್ತಿರುವ ರೋಗನಿರೋಧ ಶಕ್ತಿಯನ್ನು ಮರಳಿ ಪಡೆಯಲು ಸಮಗ್ರ ಬದಲಾವಣೆ ಅಗತ್ಯ. ವಿಟಮಿನ್ ಸಿ (ಕಿತ್ತಳೆ, ನೆಲ್ಲಿಕಾಯಿ), ವಿಟಮಿನ್ ಡಿ ಮತ್ತು ಸತುವಿನ ಅಂಶಗಳಿರುವ ಆಹಾರಗಳ ಸೇವನೆ ಲಾಭದಾಯಕ. ಹಸಿರುಎಲೆಗಳ ತರಕಾರಿಗಳು, ಪ್ರೋಟೀನ್‌ಯುಕ್ತ ಆಹಾರಗಳು, ಬೇಳೆ-ಕಾಳುಗಳನ್ನು ದೈನಂದಿನ ಸೇವನೆಯಲ್ಲಿ ಸೇರಿಸಿಕೊಳ್ಳಬೇಕು. ಅರಿಶಿನ, ಶುಂಠಿ, ಬೆಳ್ಳುಳ್ಳಿಯಂತಹ ಸಾಂಪ್ರದಾಯಿಕ ಮಸಾಲೆ ಪದಾರ್ಥಗಳು ನೈಸರ್ಗಿಕ ರೋಗನಿರೋಧ ವರ್ಧಕಗಳಾಗಿರುತ್ತವೆ.

ಶಿಸ್ತುಬದ್ಧ ಜೀವನಶೈಲಿ ಮತ್ತು ಸಮತೋಲಿತ ಆಹಾರದ ಫಲಶ್ರುತಿಯೇ ರೋಗನಿರೋಧ ಶಕ್ತಿ.

ಒಳ್ಳೆಯ ಆಹಾರದ ಜೊತೆಗೆ ದೈಹಿಕ ಚಟುವಟಿಕೆಯು ರಕ್ತಪರಿಚಲನೆಯನ್ನು ಸುಧಾರಿಸಿ, ಬಿಳಿರಕ್ತಕಣಗಳ ಸಾಮರ್ಥ್ಯವನ್ನು ಅಧಿಕಗೊಳಿಸುತ್ತದೆ. ಕ್ರಮಬದ್ಧ ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮಗಳು ದೇಹದ ಆಂತರಿಕ ಅಂಗಗಳಿಗೆ ಚೈತನ್ಯ ನೀಡುತ್ತವೆ. ದೇಹವು ತನ್ನನ್ನು ತಾನು ಪುನಶ್ಚೇತನಗೊಳಿಸಲು ಪ್ರತಿ ದಿನ 7-8 ಗಂಟೆಗಳ ನಿದ್ರೆಯ ಅಗತ್ಯವಿದೆ. ರೋಗನಿರೋಧ ಕೋಶಗಳ ಉತ್ಪಾದನೆಗೆ ನಿಶ್ಚಿಂತೆಯ ನಿದ್ರೆ ಪೂರಕವಾಗಿರುತ್ತದೆ. ಅತಿಯಾದ ಮಾನಸಿಕ ಒತ್ತಡವು ‘ಕಾರ್ಟಿಸೋಲ್’ ಮೊದಲಾದ ಹಾರ್ಮೋನುಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇವುಗಳು ರೋಗನಿರೋಧ ವ್ಯವಸ್ಥೆಯನ್ನು ಶಿಥಿಲಗೊ ಳಿಸುತ್ತದೆ. ಇದನ್ನು ತಡೆಗಟ್ಟಲು ಮನಸ್ಸಿನ ಶಾಂತಿ ಮುಖ್ಯ. ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಗಳು ಮಾನಸಿಕ ನೆಮ್ಮದಿಗೆ ಪೂರಕ.

ಪ್ರಕೃತಿಸಹಜವಾಗಿ ಬಂದ ರೋಗನಿರೋಧ ಶಕ್ತಿಯ ಜೊತೆಗೆ, ಅವುಗಳ ಸಾಮರ್ಥ್ಯವನ್ನು ಒಂದು ನಿರ್ದಿಷ್ಟ ನಿಟ್ಟಿನಲ್ಲಿ ಹೆಚ್ಚಿಸಿ ಕೊಂಡು, ಕೆಲವು ಸೋಂಕುಗಳು ಕಾಡದಂತೆಯೂ ಬಳಸಿಕೊಳ್ಳಬಹುದು. ಲಸಿಕೆಗಳು ಪ್ರಯೋಗಿಸುವುದು ಈ ತಂತ್ರವನ್ನೇ. ಯಾವುದೇ ರೋಗಕಾರಕ ಜೀವಿಯನ್ನು ಪ್ರಯೋಗಾಲಯದಲ್ಲಿ ದುರ್ಬಲಗೊಳಿಸಿದರೆ, ಅವುಗಳು ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಆದರೆ, ಶರೀರದ ರಕ್ಷಕ ವ್ಯವಸ್ಥೆಯನ್ನು ಪ್ರಚೋದಿಸುವಷ್ಟು ಬಲ ಅವುಗಳಿಗೆ ಇನ್ನೂ ಉಳಿದಿರುತ್ತದೆ. ಈ ಹಂತದಲ್ಲಿ ಅವುಗಳಿಂದ ತಯಾರಿಸಿದ ಲಸಿಕೆಗಳು ನಮ್ಮ ದೇಹವನ್ನು ಆಯಾ ರೋಗದ ವಿರುದ್ಧ ಸನ್ನದ್ಧವಾಗಿ ಇಡುತ್ತವೆ. ಒಂದು ವೇಳೆ ರೋಗಕಾರಕ ಜೀವಿಗಳು ದೇಹವನ್ನು ಹೊಕ್ಕರೂ, ರೋಗ ಉಲ್ಬಣವಾಗದಂತೆ ನಮ್ಮ ಶರೀರವನ್ನು ಕಾಪಾಡುತ್ತವೆ. ಮನುಕುಲವನ್ನು ಸುರಕ್ಷಿತವಾಗಿಸುವಲ್ಲಿ ಲಸಿಕೆಗಳು ಮಹಾಕ್ರಾಂತಿಯನ್ನೇ ಮಾಡಿವೆ.

‘ಆರೋಗ್ಯವೇ ಭಾಗ್ಯ’ ಎಂಬ ಮಾತು ಕೇವಲ ನಾಣ್ನುಡಿಯಲ್ಲ; ಅದು ನಮ್ಮ ಬದುಕಿನ ಆವಶ್ಯಕತೆ. ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲೇ ಇದೆ. ರೋಗನಿರೋಧಕ ಶಕ್ತಿಯು ರಾತ್ರೋರಾತ್ರಿ ಬರುವಂಥದ್ದಲ್ಲ; ಇದು ಶಿಸ್ತುಬದ್ಧ ಜೀವನಶೈಲಿ ಮತ್ತು ಸಮತೋಲಿತ ಆಹಾರದ ಫಲಶ್ರುತಿ. ರೋಗನಿರೋಧ ಶಕ್ತಿಯ ವರ್ಧನೆಯಲ್ಲಿ ಯಾವ ಕೃತಕ ಔಷಧಗಳೂ ನೈಸರ್ಗಿಕ ಜೀವನ ಪದ್ಧತಿಗಿಂತ ಹೆಚ್ಚು ಪರಿಣಾಮಕಾರಿಯಲ್ಲ. ಸಬಲವಾದ ರೋಗನಿರೋಧ ಶಕ್ತಿ ಆರೋಗ್ಯವಂತ ಬದುಕಿನ ಪ್ರಮುಖ ಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.