ADVERTISEMENT

ಸಾಂಕ್ರಾಮಿಕ ಕಾಯಿಲೆಯೇ? ಅನಗತ್ಯ ಅಂಜಿಕೆ ಬಿಡಿ

ಎಂ.ಡಿ.ಸೂರ್ಯಕಾಂತ
Published 21 ಮಾರ್ಚ್ 2020, 2:32 IST
Last Updated 21 ಮಾರ್ಚ್ 2020, 2:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ತರಹದ ಸೋಂಕು ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಹರಡಿದಾಗ, ವ್ಯಕ್ತಿಗೆ ತನಗೂ ಈ ಸೋಂಕು ತಗುಲಬಹುದು ಎಂಬ ಆತಂಕ ಸಹಜ. ಈ ಕಾರಣದಿಂದಾಗಿ ತಪಾಸಣೆಗಾಗಿ ವೈದ್ಯರಲ್ಲಿಗೆ ದೌಡಾಯಿಸುವುದು ಕೂಡ ಸಾಮಾನ್ಯ. ಕೊರೊನಾ ಸೋಂಕು ಕುರಿತಂತೆ ಜನರಲ್ಲಿ ವಿಪರೀತ ಆತಂಕ, ಭಯ ಕಾಣಿಸಿಕೊಂಡಿದೆ. ಹೀಗೆ ಭೀತರಾಗುವುದನ್ನು ‘ಹೈಪರ್ ಕಾಂಡ್ರಿಯಾ’ ಎನ್ನುತ್ತೇವೆ. ಇಂತಹ ಭಯಕ್ಕೆ ಹಲವು ಕಾರಣಗಳಿವೆ.

ತಾನು ವಾಸಿಸುವ ಸ್ಥಳದಲ್ಲಿರುವ ಜನ ಸಾಂಕ್ರಾಮಿಕ ಕಾಯಿಲೆಯಿಂದ ಬಳಲಿದರೆ ಅಥವಾ ಮರಣ ಹೊಂದಿದರೆ, ತನಗೆ ಕೂಡ ಈ ಕಾಯಿಲೆ ಬರಬಹುದು ಎಂಬ ಹೆದರಿಕೆ.

ರೋಗ ಲಕ್ಷಣಗಳು ಇಲ್ಲದಿದ್ದರೂ ಇದೆ ಎಂದು ಭಾವಿಸುವುದು.

ADVERTISEMENT

ಅಪಾರ್ಥ: ಸಹಜವಾದ ತೊಂದರೆಗಳನ್ನು ಈಗಾಗಲೇ ಹರಡಿರುವ ಸೋಂಕು ರೋಗದ ಲಕ್ಷಣವೆಂದು ತಪ್ಪಾಗಿ ಭಾವಿಸುವುದು. ಉದಾಹರಣೆಗೆ ಅಜೀರ್ಣದ ವಾಕರಿಕೆಯನ್ನು ಕೊರೊನಾ ಲಕ್ಷಣಗಳು ಎಂದು ಗಾಬರಿಗೊಳ್ಳುವುದು.

ಹೆಮ್ಮಾರಿಗಳ ಹಾವಳಿ: ಸಾರ್ಸ್, ಎಚ್1ಎನ್1, ಡೆಂಗಿಯಂತಹ ಕಾಯಿಲೆಗಳು ಸತತವಾಗಿ ಕಾಡುತ್ತಿದ್ದರೆ ಈ ಸಲ ಯಾವುದಾದರೂ ಕಾಯಿಲೆ ತನಗೆ ಬರಬಹುದು ಎಂಬ ಹದರಿಕೆ.

ಅಂತರ್ಜಾಲ, ಸಾಮಾಜಿಕ ಜಾಲತಾಣ, ಮಾಧ್ಯಮಗಳು: ಕಾಯಿಲೆ ಬಗ್ಗೆ ಮಾಹಿತಿಗಾಗಿ ವೆಬ್‌ಸೈಟ್‌ಗಳನ್ನು ಹುಡುಕಾಡಿದರೆ ಮಾಹಿತಿಗಳ ಭಂಡಾರವೇ ದೊರೆಯುತ್ತದೆ. ಇವುಗಳಲ್ಲಿ ಕೆಲವು ದ್ವಂದ್ವ, ಅಪೂರ್ಣ ಮಾಹಿತಿ ದೊರೆಯುವ ಸಾಧ್ಯತೆ ಇದೆ. ಇವುಗಳಲ್ಲಿ ಯಾವುದು ಸರಿ ಎಂದು ನಿರ್ಧರಿಸುವುದು ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಟಿವಿಯಲ್ಲಿ ಕಾಯಿಲೆ ಕುರಿತ ವಿಚಾರಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುವುದರಿಂದ ಮತ್ತು ಸಣ್ಣ ಘಟನೆಗಳನ್ನು ಅತಿಶಯೋಕ್ತಿವಾಗಿ ಬಿಂಬಿಸುವುದರಿಂದ ರೋಗ ಭೀತಿಯ ಸಾಧ್ಯತೆ ಹೆಚ್ಚು.

ಒತ್ತಡದಿಂದ ಬಿಡುಗಡೆ: ಮಾನಸಿಕ ಒತ್ತಡದಿಂದ ಬಳಲುವ ವ್ಯಕ್ತಿ ಒತ್ತಡದಿಂದ ಹೊರಬರಲು ತನಗೆ ಮಾರಕ ಕಾಯಿಲೆ ತಗುಲಿದೆ ಎಂದು ವಿಶ್ರಾಂತಿ, ಅನುಕಂಪಕ್ಕಾಗಿ ಅಪ್ರತ್ಯಕ್ಷವಾಗಿ ಹೇಳಿಕೊಳ್ಳಲು ದಾರಿಯಾಗಬಹುದು.

ರೋಗದ ಬಗ್ಗೆ ಸ್ಪಷ್ಟ, ಸಂಪೂರ್ಣ ಮಾಹಿತಿಯ ಅಭಾವವಿದ್ದರೆ ತಾನು ಬಳಲುವ ತೊಂದರೆಗಳಿಗೆ ಕಾರಣ ಗೊತ್ತಾಗದೆ ಭಯಗೊಳ್ಳುತ್ತಾನೆ.

ಭೀತಿಗೆ ತಡೆ ಹೇಗೆ?

ರೋಗದ ಸಂಪೂರ್ಣ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಸಂಪರ್ಕಿಸಿ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಅಧಿಕೃತ, ನಿರಂತರ ಮಾಹಿತಿ ಲಭ್ಯವಾಗುವುದರಿಂದ ಈ ಸಂಸ್ಥೆಯ ವೈದ್ಯರನ್ನು ಸಂಪರ್ಕಿಸಿರಿ.

ಯಾವುದೇ ಕಾಯಿಲೆಗೆ ಸರ್ಕಾರದ ಅಧಿಕೃತ ಅಂತರ್ಜಾಲ ತಾಣ www.mohfw.nic.in ಅಥವಾ ವಿಶ್ವ ಆರೋಗ್ಯ ಸಂಸ್ಥೆ www.who.int ಸಂಪರ್ಕಿಸಿ. ಕೊರೊನಾ ವಿಶೇಷ ಇ-ಮೇಲ್: ncov2019@gmail.com

ರೋಗದ ಹೆಸರು ಹೇಳಿಕೊಳ್ಳುತ್ತ ವೈದ್ಯರ ಜೊತೆ ಚರ್ಚೆ ಬೇಡ. ನಿಮಗಿರುವ ತೊಂದರೆ ಬಗ್ಗೆ ಚರ್ಚಿಸಿರಿ. ಹೀಗೆ ಮಾಡುವುದರಿಂದ ನಿಮ್ಮ ತೊಂದರೆಗೆ ಕಾರಣ ಗುರುತಿಸಲು ಮತ್ತು ನಿಮಗೆ ಪರಿಣಾಮಕಾರಿಯಾಗಿ ಧೈರ್ಯ ನೀಡಲು ಸಾಧ್ಯ.

ರೋಗದ ಭಯವನ್ನು ಮನದಲ್ಲಿ ಹತ್ತಿಕ್ಕಿಕೊಳ್ಳಬೇಡಿ. ಮಾಹಿತಿಯಿರುವ, ಆಪ್ತ ಸ್ನೇಹಿತರು/ ಸಂಬಂಧಿಕರೊಂದಿಗೆ ಚರ್ಚೆ ಮಾಡಿ.

ಕೆಲವು ವೆಬ್‌ಸೈಟ್‌, ಮಾಧ್ಯಮದಲ್ಲಿರುವ ಮಾಹಿತಿ ಒಂದು ಆರೋಗ್ಯದ ವಿಷಯಕ್ಕಾಗಿ ಹಲವಾರು ಮೂಲಗಳಿಂದ ಸಂಗ್ರಹಿಸಿದ ವಿವರಗಳ ಸಾರಾಂಶವಾಗಿರುತ್ತದೆ. ಈ ರೀತಿ ವಿವರಿಸಿರುವ ಎಲ್ಲ ರೋಗ ಲಕ್ಷಣಗಳು, ಅಪಾಯಗಳು ನಿಮ್ಮಲ್ಲಿ ಕಾಣಿಸಬಹುದು ಎಂಬ ಗಾಬರಿ ಬೇಡ.

ಕೆಲವು ಕಾಯಿಲೆಗಳು ವ್ಯಾಪಕವಾಗಿ ಹರಡಿದರೂ ಇವುಗಳಿಂದ ಅಪಾಯ ಕಡಿಮೆ. ಉದಾ: ಚಿಕುನ್ ಗುನ್ಯದಿಂದ ಸಾವು ಅಪರೂಪ. ಹಂದಿ ಜ್ವರದಿಂದ ಸಾವು ಕೇವಲ ಶೇ 1ರಷ್ಟು ಮಾತ್ರ. ಆದ್ದರಿಂದ ಭೀತಿ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.