ಹೆಚ್ಚಾಗುತ್ತಿರುವಕೋವಿಡ್-19 ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಸೇವಿಸುವ ಜತೆಗೆ ಜಲನೇತಿಯಂತಹ ಅಭ್ಯಾಸ ಮಾಡಿದರೆ ಕೊರೊನಾ ಸೋಂಕು ತಗುಲುವುದನ್ನು ತಡೆಗಟ್ಟಬಹುದು. ಈ ಕುರಿತು ಮಾಹಿತಿ ನೀಡಿದ್ದಾರೆ ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಶಾಲಾಖ್ಯ ತಂತ್ರ (ಇಎನ್‌ಟಿ) ವಿಭಾಗದ ಮುಖ್ಯಸ್ಥೆಡಾ. ಅಶ್ವಿನಿ ಎಂ.ಜೆ.
ಏನಿದು ಜಲನೇತಿ?
ಮೂಗಿನ ಒಂದು ಹೊಳ್ಳೆಯ ಮೂಲಕ ನೀರು ಹಾಕಿ, ಮತ್ತೊಂದು ಹೊಳ್ಳೆಯ ಮೂಲಕ ಹೊರ ಬಿಡುವಯೋಗ ಕ್ರಿಯೆಯೇ ಜಲನೇತಿ. ಮೂಗಿನ ಸ್ವಚ್ಚತೆ, ಸೈನಸೈಟಿಸ್ ಸಮಸ್ಯೆ, ಕಫ ನಿವಾರಣೆಗೆ ಆಯುರ್ವೇದ ಚಿಕಿತ್ಸಾ ವಿಧಾನ.
ಅಭ್ಯಾಸ ಹೇಗೆ?
ಜಲನೇತಿ ಮಾಡಲು ತಾಮ್ರ ಅಥವಾ ಪ್ಲಾಸ್ಟಿಕ್ ಪಾಟ್ ಬೇಕು.ಆಯುರ್ವೇದ ಆಸ್ಪತ್ರೆಗಳಲ್ಲಿ ಜಲನೇತಿ ಕುಡಿಕೆ ದೊರೆಯುತ್ತದೆ. ಇದರಲ್ಲಿಉಗುರು ಬೆಚ್ಚಗಿನ ನೀರಿಗೆ ಚಿಟಕೆ ಉಪ್ಪು ಹಾಕಿ ಸಿದ್ಧ ಮಾಡಿಕೊಳ್ಳಿ. ಒಂದು ಬದಿಯ ಮೂಗಿನ ಹೊಳ್ಳೆ ಮುಚ್ಚಿ, ಮತ್ತೊಂದರಲ್ಲಿ ಐದು ಬಾರಿ ಉಸಿರನ್ನು ಜೋರಾಗಿ ಹೊರಗೆ ಬಿಡಿ. ಈ ರೀತಿ ಎರಡೂ ಮೂಗಿನ ಹೊಳ್ಳೆಯಲ್ಲಿ ಉಸಿರಾಡಿ.
ನಂತರ ಸ್ವಲ್ಪ ಮುಂದೆಕ್ಕೆ ಬಾಗಿ ನಿಂತುಕೊಳ್ಳಿ.ಕತ್ತನ್ನು ಒಂದು ಬದಿಗೆ ಸ್ವಲ್ಪ ಓರೆ ಮಾಡಿ ಮೂಗಿನ ಒಂದು ಹೊಳ್ಳೆಗೆ ನೀರು ಹಾಕಿ. ಅದು ಮತ್ತೊಂದು ಹೊಳ್ಳೆಯ ಮುಖಾಂತರ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ ಬಾಯಿ ಮೂಲಕ ಉಸಿರಾಡಬೇಕು. ಮೂಗಿನ ಮೂಲಕ ಉಸಿರಾಡಿದರೆ ನೀರು ನೆತ್ತಿಗೆ ಹತ್ತುತ್ತದೆ. ಆದ್ದರಿಂದ ತುಂಬಾ ಎಚ್ಚರಿಕೆ ಅಗತ್ಯ. ಜಲನೇತಿ ತಜ್ಞರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುವುದು ಉತ್ತಮ.
ಯಾವಾಗ ಜಲನೇತಿ ಮಾಡಬೇಕು?
ಇದನ್ನು ಬೆಳಗ್ಗೆ ಅಥವಾ ಸಂಜೆ ಮಾಡಬೇಕು. ಎರಡು ಹೊತ್ತು ಮಾಡಿದರೆ ತುಂಬಾ ಒಳ್ಳೆಯದು. ಯಾವುದೇ ಸೋಂಕು ಮೂಗಿನ ಮೂಲಕ ಒಳ ಹೋಗುವುದನ್ನು ತಡೆಗಟ್ಟುತ್ತದೆ. ಯೋಗಾಸನಗಳ ಜತೆ ಮಾಡಿದರೆ ಇನ್ನೂ ಒಳ್ಳೆಯದು.ಜಲನೇತಿ ಕ್ರಿಯೆ ಸೇರಿದಂತೆ ಯಾವುದೇ ಯೋಗಾಸನ ಮಾಡುವಾಗ ಹೊಟ್ಟೆ ಖಾಲಿ ಇರಬೇಕು.
ಜಲನೇತಿ ಪ್ರಯೋಜನಗಳು
*ಕೊರೊನಾ ವೈರಸ್ ಮೂಗು, ಬಾಯಿಯ ಮುಖಾಂತರ ಶ್ವಾಸಕೋಶ ಸೇರುತ್ತದೆ. ಅದನ್ನು ತಡೆಗಟ್ಟುವಲ್ಲಿ ಜಲನೇತಿ ಪರಿಣಾಮಕಾರಿ
*ಸೈನಸ್ ಸಮಸ್ಯೆಗೆ ಇದು ರಾಮಬಾಣ. ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಸೈನಸ್‌ನಿಂದ ಮುಕ್ತಿ ಹೊಂದಬಹುದು
* ಮೂಗು ಕಟ್ಟುವಿಕೆಯಿಂದ ಉಂಟಾಗುವ ಅರೆ ತಲೆನೋವನ್ನು ನಿವಾರಿಸಬಹುದು
*ಆಸ್ತಮಾ ಸಮಸ್ಯೆ ಇರುವವರು ಜಲನೇತಿ ಮಾಡುವುದರಿಂದ ಉಸಿರಾಟ ಸುಲಭವಾಗುತ್ತದೆ.
* ಕಿವಿ ಸೋಂಕು ತಡೆಗಟ್ಟಬಹುದು
* ಮನಸ್ಸುಶಾಂತಾವಾಗಿರುತ್ತದೆ.
*ಧೂಮಪಾನ ಬಿಡಲು ಜಲನೇತಿ ಪರಿಣಾಮಕಾರಿ
*ಜಲನೇತಿ ಅಭ್ಯಾಸದಿಂದ ಏಕಾಗ್ರತೆ ಹೆಚ್ಚುವುದು
ಜಲನೇತಿ ಮಾಡುವುದು ಹೇಗೆ ಈ ವಿಡಿಯೊ ನೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.