ಕ್ಷೇಮ–ಕುಶಲ: ಎಂದಿಗೂ ಬತ್ತದಿರಲಿ ಉತ್ಸಾಹದ ಹೊಳೆ!
ಮಿತ್ರರೊಬ್ಬರಿಗೆ ದೂರವಾಣಿ ಕರೆ ಮಾಡಿದ್ದೆ. ಉಭಯ ಕುಶಲೋಪರಿಯ ಬಳಿಕ ತಾವೇನು ಮಾಡುತ್ತಿದ್ದೀರಿ ಎಂದು ವಿಚಾರಿಸಿದೆ. ಕಾಫಿ ಸಿದ್ಧಪಡಿಸುತ್ತಿದ್ದೇನೆ, ಕುದಿಸಿದ ನೀರನ್ನು ಸುರಿದು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಎಂದರು. ಎರಡು ನಿಮಿಷದ ಬಳಿಕ, ಅಚಾತುರ್ಯವಾಗಿದೆ, ಶೋಧಿಸಲು ಉಪಯೋಗಿಸಿದ ಬಟ್ಟೆಯ ಎಳೆಯೆಲ್ಲ ಕೊಳವೆಯಾಗಿ ಕೆಲಸ ಮಾಡಿ ಅಡುಗೆ ಕಟ್ಟೆ ನೀರಿನ ಕಟ್ಟೆಯಾಗಿದೆ’ ಎಂದು ನಗುತ್ತಲೇ ತಿಳಿಸಿದರು.
ಎಳೆಯೊಂದು ಹೊಳೆಯಾಗಿ ಹರಿದುದದರಿಂದ ಮಿತ್ರರಿಗೆ ಕಟ್ಟೆಯನ್ನು ಶುದ್ಧಗೊಳಿಸುವ ಕಾಯಕ ಒದಗಿದರೂ ವಿಷಾದಿಸದೆ ನಗುತ್ತಲೇ ಉತ್ತರಿಸಿದ್ದು ನನ್ನ ಲೇಖನಕ್ಕೆ ಆಶಯವನ್ನು ಸೂಚಿಸಿಬಿಟ್ಟಿತು. ಎಳೆಯ ಹೊಳೆ! ಹೌದಲ್ಲ, ಎಳೆಯಾಗಿ ಹರಿದ ನೀರ ಝರಿಗಳು ಸೇರಿ ಹೊಳೆಯಾಗಿ ನದಿಯಾಗಿ ಹರಿದು ಕಡಲನ್ನು ಸೇರುತ್ತದೆ. ಬದುಕೆಂಬ ವಿಸ್ತರವೂ ಕೂಡ ಉತ್ಸಾಹದ ಎಳೆಯಾಗಿ ಹುಟ್ಟಿನಿಂದ ಪುಟಿದು ಬಾಲ್ಯದ ತುಂಟತನವಾಗಿ, ಕೌಮಾರ್ಯದ ಸಾಹಸವಾಗಿ, ಪ್ರೌಢಾವಸ್ಥೆಯ ಕುಶಲತೆಯಾಗಿ ವಾರ್ಧಕ್ಯದ ಅನುಭವವಾಗಿ ಕೊನೆಗೆ ಸಾವಸಾಗರದಲ್ಲಿ ಮುಕ್ತಾಯಗೊಳ್ಳುವುದು. ಇಲ್ಲಿ ಜೀವನದುದ್ದಕ್ಕೂ ಉತ್ಸಾಹವನ್ನು ಉಳಿಸಿಕೊಳ್ಳಬೇಕು ಎಂಬುದು ಮುಖ್ಯ. ಎಳೆತನದ ಹೊಳೆ ಬಾಳ ತುಂಬ ಹರಿಯಲಿ ಬಾಳ ತುಂಬಿ ಹರಿಯಲಿ ಎಂದು ಆಶಿಸೋಣ.
ಬದುಕಿನ ಎಲ್ಲ ಸವಾಲುಗಳೂ ಉತ್ಸಾಹದ ಹೊಳೆಯನ್ನು ಬತ್ತಿಸುವ ಪ್ರಯತ್ನವೇ ಆಗಿದೆ. ಅನೇಕ ಅಡೆತಡೆಗಳನ್ನು ಎದುರಿಸಿಯೇ ನಾವು ಮುಂಬರಿಯಬೇಕು. ಚಳಿ ಮಳೆ ಗಾಳಿಗಳನ್ನು ಎದುರಿಸಿದ ಸಸಿ ಮಾತ್ರವೇ ಹೆಮ್ಮರವಾಗಿ ಬೆಳೆಯಬಲ್ಲದು. ಬಹಳ ಸುರಕ್ಷಿತವಾಗಿ ಒಳಾಂಗಣದಲ್ಲಿ ಬೆಳೆದ ಸಸಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲಾಗದೆ ಮುದುರಿಕೊಳ್ಳುತ್ತದೆ. ಹೊಸ ಸ್ಫೂರ್ತಿಯಿಂದ ಸವಾಲುಗಳನ್ನು ಎದುರಿಸುತ್ತ ಮುಂದೆ ಸಾಗಬೇಕು.
ಜೀವನದ ಸ್ಫೂರ್ತಿಯನ್ನು, ಬದುಕಬೇಕೆಂಬ ಉತ್ಸಾಹವನ್ನು ತಡೆಯುವ ಅಂಶಗಳು ಮುಖ್ಯವಾಗಿ ಐದು. ಮೊದಲನೆಯದು ಸೋಲಿನ ಭಯ. ಈ ಸೋಲಿನ ಭಯದಿಂದಲೇ ಜಗತ್ತಿನ ಎಷ್ಟೋ ಕೆಲಸಗಳು ಆರಂಭವಾಗುವುದೇ ಇಲ್ಲ. ಸೋಲು ಗೆಲುವು ಮುಖ್ಯವಲ್ಲ ಪ್ರಯತ್ನವನ್ನು ಮುಂದುವರಿಸುವುದು ಮುಖ್ಯ. ಸೋಲಿನಿಂದಲೂ ಪಾಠಗಳನ್ನು ಕಲಿಯುತ್ತಾ ಮುಂದೆ ಸಾಗುತ್ತೇವೆ.
ಎರಡನೆಯದು, ಬದುಕಿನ ಸ್ಫೂರ್ತಿಯನ್ನು ಮಟ್ಟ ಹಾಕುವ ವೈರಾಣುಗಳಂತೆ ನಕಾರಾತ್ಮಕ ಚಿಂತನೆಗಳು ಮನಸ್ಸನ್ನು ಮುತ್ತಿಕೊಳ್ಳುತ್ತವೆ. ಜತೆಗೆ ಇಂತಹ ನಕಾರಾತ್ಮಕ ಚಿಂತನೆಗಳನ್ನು ಬಿತ್ತುವ ಜನರು ನಮ್ಮ ಸುತ್ತ ಆವರಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಕೊರೋನಾ ವೈರಾಣುವಿನಂತೆ 'ಕರೋ ನಾ' ಅಂದರೆ 'ಮಾಡಬೇಡ', 'ನಿನ್ನ ಕೈಲಿ ಇದನ್ನು ಸಾಧಿಸಲಾಗುವುದಿಲ್ಲ', 'ಯಾರೂ ಇದನ್ನು ಸಾಧಿಸಿಲ್ಲ' ಎಂದೆಲ್ಲ ನಮ್ಮೊಳಗೆ ಮತ್ತು ಹೊರಗೆ ದನಿಗಳು ಬರುತ್ತವೆ. ಹೇಗೆ ಚುಚ್ಚುಮದ್ದಿನಿಂದ ಅಥವಾ ಲಸಿಕೆಯಿಂದ ನಮ್ಮ ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೇವೋ ಹಾಗೆ ಸಕಾರಾತ್ಮಕ ಜನಗಳು ನಮ್ಮ ಸುತ್ತ ಇರುವಂತೆ ಮಾಡಿಕೊಳ್ಳಬೇಕು. ಜೊತೆಗೆ ಮನಸ್ಸಿಗೂ ಸಕಾರಾತ್ಮಕವಾದ, ಧೈರ್ಯ ತುಂಬುವ ವಿಚಾರಗಳನ್ನು ತುಂಬಬೇಕು.
ಮೂರನೆಯದು ಉದ್ದೇಶ ಅಥವಾ ಗುರಿಯ ಕೊರತೆ. ಎಷ್ಟೋ ಬಾರಿ ಪ್ರೌಢ ವಯಸ್ಸಿನವರಲ್ಲೂ ಬದುಕಿನ ಉದ್ದೇಶದ ಕೊರತೆ ಕಾಡುವುದನ್ನು ಕಾಣಬಹುದು. ಮನುಷ್ಯನಿಗೆ ತಾನೇಕೆ ಬದುಕಿದ್ದೇನೆ ತನ್ನ ಜೀವನದ ಗೊತ್ತು ಗುರಿಗಳೇನು ಎಂಬ ಅರಿವಿಲ್ಲದಿದ್ದರೆ ಅವನ ಜೀವನವು ದಿಕ್ಕು ತಪ್ಪಿದ ನಾವೆಯಂತಾಗುತ್ತದೆ. ಉದ್ದೇಶ ಹೊಂದಿರುವ ವ್ಯಕ್ತಿಯ ಜೀವನ ಖಂಡಿತವಾಗಿಯೂ ಉತ್ಸಾಹ ಭರಿತವಾಗಿ ಇರುತ್ತದೆ. ಆದುದರಿಂದ ಆದಷ್ಟು ಬೇಗ ನಾವು ನಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಬೇಕು.
ಉತ್ಸಾಹವನ್ನು ಹತ್ತಿಕ್ಕುವ ನಾಲ್ಕನೆಯ ಅಂಶವಿದ್ದರೆ ತೀವ್ರವಾದ ಸುಸ್ತು ಅಥವಾ ದಣಿವು. ಇದು ಏಕಾಗುತ್ತದೆಂದರೆ, ಗುರಿ ಇದ್ದು, ಸಕಾರಾತ್ಮಕ ಚಿಂತನಗಳಲ್ಲಿ ಅತಿಯಾಗಿ ಮುಳುಗಿ ಕೊಂಡಾಗ ಅದು ದೇಹ ಮತ್ತು ಮನಸ್ಸುಗಳನ್ನು ದಣಿಸಿ ಬಿಡುತ್ತದೆ. ಅಂದರೆ ನಾವು ಕೆಲಸ ಮಾಡಬೇಕೆ ಹೊರತು ಕೆಲಸಗಳು ನಮ್ಮನ್ನು ಆಳುವಂತಾಗಬಾರದು. ಹೀಗಾಗದಿರಬೇಕಾದರೆ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಮತ್ತು ಸರಿಯಾದ ಯೋಜನೆಗಳನ್ನು ರೂಪಿಸಿಕೊಂಡು ಮುಂಬರಿಯಬೇಕು.
ಸ್ಫೂರ್ತಿ ಅಥವಾ ಉತ್ಸಾಹದ ಕೊರತೆಗೆ ಕಾರಣವಾಗುವ ಕೊನೆಯ ಹಾಗೂ ಮುಖ್ಯ ಅಂಶವೆಂದರೆ ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುವುದು ಮತ್ತು ಜೀವನವನ್ನು ಸ್ಪರ್ಧೆ ಎಂದು ಭಾವಿಸುವುದು. ನಾವು ಪ್ರತಿಯೊಬ್ಬರೂ ವಿಶೇಷ ವ್ಯಕ್ತಿಗಳೇ, ವಿಶೇಷ ಕಾರಣಕ್ಕಾಗಿಯೇ ಈ ಜಗತ್ತಿನಲ್ಲಿ ಜನಿಸಿದವರು ಎಂದೇ ಭಾವಿಸಬೇಕು. ಏಕೆಂದರೆ ಒಬ್ಬರಂತೆ ಮತ್ತೊಬ್ಬರಿಲ್ಲ. ಒಬ್ಬರಲ್ಲಿರುವ ಸಾಮರ್ಥ್ಯ ಅವರಿಗೆ ಮಾತ್ರವೇ ಗೊತ್ತಿರುವಂತದ್ದು ಮತ್ತು ಆ ಸಾಮರ್ಥ್ಯದ ಪ್ರಕಾಶಕ್ಕಾಗಿಯೇ ಅವರು ಈ ಜಗತ್ತಿನಲ್ಲಿರುವುದು. ಹೀಗಾಗಿ ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದಾಗಲಿ ಅಥವಾ ಅವರನ್ನು ಸ್ಪರ್ಧಿಗಳೆಂದು ಭಾವಿಸುವಾಗಲಿ ತಪ್ಪಾಗುತ್ತದೆ. ನಮ್ಮ ನಮ್ಮ ಗುರಿ ಸಮಸ್ಯೆ ಮತ್ತು ದಾರಿಯ ಮೇಲೆ ಗಮನವಿದ್ದಾಗ ನಿರಂತರ ಉತ್ಸಾಹ, ನಿರಂತರ ಚಲನೆ ನಮ್ಮದಾಗುತ್ತದೆ.
ಇಷ್ಟೆಲ್ಲಾ ತಿಳಿದರೂ ಓದಿಕೊಂಡರೂ ಒಮ್ಮೊಮ್ಮೆ ನಮ್ಮೊಳಗೆ ಉತ್ಸಾಹದ ಚಿಲುಮೆ ಬತ್ತಿ ಹೋಗುತ್ತದೆ.
ಬಹಳ ದಿನಗಳಿಂದ ನಾನೊಂದು ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದೇನೆ. ನನಗೆ ಉತ್ಸಾಹ ಕಡಿಮೆಯಾಯಿತು ಎನಿಸಿದಾಗ ನಾನು ವಿವೇಕಾನಂದರ ಕೆಲವು ಮಾತುಗಳನ್ನು ಗಟ್ಟಿಯಾಗಿ ನನಗೆ ನಾನೇ ಹೇಳಿಕೊಳ್ಳುತ್ತೇನೆ ಮತ್ತು ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಈ ಉಕ್ತಿಯನ್ನು ಮತ್ತೆ ಮತ್ತೆ ಉಚ್ಚರಿಸುತ್ತೇನೆ. ಎಲ್ಲಿಯವರೆಗೆ ನನ್ನೊಳಗೆ ಮತ್ತೆ ಶಕ್ತಿಯ ಪ್ರವಾಹವನ್ನು ಕಾಣುವುದಿಲ್ಲವೋ ಅಲ್ಲಿಯವರೆಗೂ ಇದನ್ನು ಪಠಿಸುತ್ತಿರುತ್ತೇನೆ.
ಅದು ಹೀಗಿದೆ: ‘ನನ್ನವರಾದ ನೀವೆಲ್ಲ ಜಗತ್ತಿನಲ್ಲಿ ಮಹಾಸಾಧನೆಗಾಗಿ ಹುಟ್ಟಿರುವ ಧೀರರೆಂದು ತಿಳಿದುಕೊಳ್ಳಿ. ನಾಯಿ ಕುನ್ನಿಗಳ ಬೊಗಳಿಕೆಗೆ ಹೆದರಿದಿರಿ, ಆಗಸದ ಸಿಡಿಲುಗಳೂ ನಿಮ್ಮನ್ನು ಅಳುಕಿಸದಿರಲಿ. ಧೈರ್ಯವಾಗಿರಿ, ಎದ್ದೇಳಿ, ಕಾರ್ಯಶೀಲರಾಗಿ!' (Have faith that you are all my brave lads born to do great things. Let not the barks of puppies frighten you, nay, not even the thunderbolts from heaven. Be bold stand up and work!) ಈ ಶಕ್ತಿ ಮಂತ್ರ ಪವಾಡದಂತೆ ಕೆಲಸ ಮಾಡಬಲ್ಲದು.
ಹೀಗೆ ನಾವು ನಂಬುವ ಯಾವುದಾದರೂ ಒಂದು ಸೂತ್ರವನ್ನು ಬಾಳಿಗೆ ಪೋಣಿಸಿಕೊಳ್ಳುವುದರ ಮೂಲಕ ನಾವು ಉತ್ಸಾಹದ ಎಳೆಯನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳೋಣ ಮತ್ತು ಒಳ್ಳೆಯ ಬೆಳೆಯನ್ನು ಜಗತ್ತಿಗೆ ಸಮರ್ಪಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.