ADVERTISEMENT

ಡಿ.ಎಂ.ಹೆಗಡೆ ಅವರ ಸಮಾಧಾನ ಅಂಕಣ: ನನ್ನ ಮಗನ ಇಂಗ್ಲಿಷ್‌ ಓಕೆ,ಕನ್ನಡ ಬರಲ್ಲ ಯಾಕೆ?

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 20:20 IST
Last Updated 7 ಡಿಸೆಂಬರ್ 2025, 20:20 IST
   

ನನ್ನ ಮಗ ಕಾನ್ವೆಂಟ್‌ನಲ್ಲಿ ಐದನೇ ತರಗತಿ ಓದುತ್ತಿದ್ದಾನೆ. ಇಂಗ್ಲಿಷ್ ಬಹಳ ನಿರರ್ಗಳವಾಗಿ ಮಾತನಾಡುತ್ತಾನೆ. ಆಟ–ಪಾಠಗಳಲ್ಲಿ ಮುಂದಿದ್ದಾನೆ. ಆದರೆ, ಕನ್ನಡ ಮಾತನಾಡುವಾಗ ತೊದಲುತ್ತಾನೆ. ಇದರಿಂದ ಬಂಧು– ಬಳಗದ ವಲಯದಲ್ಲಿ ಮುಜುಗರ ಉಂಟಾಗುತ್ತದೆ. ಮನೆಯಲ್ಲಿ ಎಲ್ಲರೂ ಅಪ್ಪಟ ಕನ್ನಡವನ್ನೇ ಮಾತನಾಡಿದರೂ ಅವ ಯಾಕೆ ಹೀಗಾದ ಎನ್ನುವುದು ಅರ್ಥವಾಗುತ್ತಿಲ್ಲ. ಅವನಿಗೆ ಚಂದಕ್ಕೆ ಕನ್ನಡವನ್ನು ಕಲಿಸುವುದು ಹೇಗೆ ಎಂದು ಹೇಳುವಿರಾ? –ಆಶಾ ಅನಂತ, ಬಾಳೇಬೈಲು

ತುಂಬಾ ಒಳ್ಳೆಯ ಪ್ರಶ್ನೆ. ಇಂದಿನ ಮೆಟ್ರೊ ನಗರಗಳ ಬಹುತೇಕ ಮನೆಗಳಲ್ಲಿನ ಸಾಮಾನ್ಯ ಸಮಸ್ಯೆ ಇದು. ಮಗುವಿಗೆ ಇಂಗ್ಲಿಷ್‌ ಪ್ರಭಾವ ಜಾಸ್ತಿಯಾಗಿರುವುದರಿಂದ ಕನ್ನಡದಲ್ಲಿ ಮಾತನಾಡಲು ಹಿಂಜರಿಯುವುದು ಸಹಜ. ಇದನ್ನು ದಂಡನೆ ಅಥವಾ ಬಲವಂತದಿಂದ ಸರಿಪಡಿಸಲಿಕ್ಕೆ ಸಾಧ್ಯವಿಲ್ಲ. ಮಗುವಿನಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಲು ಪ್ರಯತ್ನಿಸುವ ಮೂಲಕ ಹಾಗೂ ಅವನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಕಲಿಕೆಯ ವಿಷಯದಲ್ಲಿ ಮಕ್ಕಳು ಸಹಜವಾಗಿ ಮುಂದಿರುತ್ತಾರೆ. ನನ್ನ ಬಾಲ್ಯದಲ್ಲಿ ಆರೇಳು ತಿಂಗಳು ಗೋವಾದಲ್ಲಿದ್ದೆ. ಅಲ್ಲಿಂದ ವಾಪಸಾಗುವಷ್ಟರಲ್ಲಿ ನನಗೆ ಕನ್ನಡ ಮಾತನಾಡಲು ತಡಕಾಡುವಂತೆ ಆಗಿತ್ತು ಎನ್ನುವುದು ನೆನಪಿದೆ. ಅಷ್ಟರಮಟ್ಟಿಗೆ ನಾನು ಅಲ್ಲಿಯ ಮರಾಠಿ ಮಿಶ್ರಿತ ಕೊಂಕಣಿಯನ್ನು ಕಲಿತಿದ್ದೆ. ಅವಕಾಶವಿದ್ದಾಗ ಮಗು ಸಹಜವಾಗಿ ಒಂದೆರಡು, ಮೂರ್ನಾಲ್ಕು ಭಾಷೆಗಳಲ್ಲಿ ಮಾತನಾಡುವುದನ್ನು ಲೀಲಾಜಾಲವಾಗಿ ಕಲಿಯುವ ಸಾಧ್ಯತೆ ಇರುತ್ತದೆ. ನಗರದ ಅಪಾರ್ಟ್‌ಮೆಂಟುಗಳಲ್ಲಿ ವಾಸಿಸುವ ಮಕ್ಕಳಿಗೆ ಇಂಥ ಅವಕಾಶಗಳು ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ. ಹೆಚ್ಚು ಭಾಷೆಗಳನ್ನು ಕಲಿಯುವುದು ನಿಜಕ್ಕೂ ಹೆಚ್ಚು ಪ್ರಯೋಜನಕಾರಿ.

ADVERTISEMENT

ಮಗ ಕನ್ನಡದಲ್ಲಿ ಮಾತನಾಡಲು ತೊದಲುವಾಗ ನೀವು ನಗಬೇಡಿ. ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಗದರಿಸಬೇಡಿ. ಅವನ ಹಿಂಜರಿಕೆಯನ್ನು ಪ್ರೋತ್ಸಾಹಿಸಬೇಡಿ. ಅವನು ಕನ್ನಡದಲ್ಲಿ ನಿಧಾನವಾಗಿ, ಶಬ್ದಗಳನ್ನು ಹುಡುಕಿ, ಹೇಳುವಂತೆ ಮಾಡಿ. ಶಬ್ದಗಳ ಹುಡುಕಾಟಕ್ಕೆ ಅವನಿಗೆ ನೀವು ಸಹಾಯ ಮಾಡಬಹುದು. ನಿಮ್ಮ ಮಗ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದಾಗ ‘ಭೇಷ್‌, ಚೆನ್ನಾಗಿ ಮಾತನಾಡಿದೆ’ ಎಂದು ಪ್ರೋತ್ಸಾಹಿಸಿ. ಅವನ ಮಾತು ಗಳಲ್ಲಿರುವ ತಪ್ಪನ್ನು ಸಾವಕಾಶವಾಗಿ ತಿದ್ದಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.