ADVERTISEMENT

ಇಲ್ಲದ ಪ್ರೀತಿಯನ್ನು ಎಲ್ಲಿಂದ ಕೊಡುವುದು?

ನಡಹಳ್ಳಿ ವಂಸತ್‌
Published 12 ಸೆಪ್ಟೆಂಬರ್ 2020, 19:31 IST
Last Updated 12 ಸೆಪ್ಟೆಂಬರ್ 2020, 19:31 IST
   

ವಯಸ್ಸು 26, ಶಿಕ್ಷಕಿ. 8 ವರ್ಷದಿಂದ ಪ್ರೀತಿಸುತ್ತಿರುವ ಹುಡುಗನನ್ನು ಮದುವೆಯಾಗಲು ಜಾತಿವ್ಯವಸ್ಥೆ ಅಡ್ಡಿಯಾಗುತ್ತಿದೆ. ತಮ್ಮನ ಪ್ರೇಮವಿವಾಹದಿಂದ ಅಮ್ಮನಿಗೆ ನೋವಾಗಿದೆ. ನನ್ನ ವಿಚಾರ ಮನೆಯಲ್ಲಿ ತಿಳಿಸಿದರೆ ಅವರಿಗೆ ಹೆಚ್ಚಿನ ನೋವಾಗುತ್ತದೆ ಎಂದು ಹಿಂಜರಿಯುತ್ತಿದ್ದೇನೆ. ಮದುವೆಯನ್ನು ಮುಂದೂಡುತ್ತಾ ಹುಡುಗನಿಗೂ ನೋವು ಕೊಡುತ್ತಿದ್ದೇನೆ. ಮದುವೆಯಾದ ಮೇಲೆ ಅಪ್ಪ– ಅಮ್ಮನಿಗೆ ಸಹಾಯ ಮಾಡಬೇಕೆಂದಿದ್ದರೂ ಅವರು ಅದನ್ನು ಒಪ್ಪಿಕೊಳ್ಳದಿರುವ ಭಯವಿದೆ. ಏನೂ ತೋಚದೆ ದಿಕ್ಕೆಟ್ಟಂತಾಗಿದೆ. ಸಹಾಯ ಮಾಡಿ.

ಚಂದ್ರಕಲಾ, ಊರಿನ ಹೆಸರಿಲ್ಲ

ನಡಹಳ್ಳಿ ವಸಂತ್‌

ಪೋಷಕರ ಬಗೆಗಿನ ನಿಮ್ಮ ಪ್ರೀತಿ ಕಾಳಜಿ ಮೆಚ್ಚು ವಂತಹದು. ಪೋಷಕರನ್ನು ಪ್ರೀತಿಸುವುದು ಎಂದರೆ ಅವರಿಚ್ಛೆಯಂತೆ ಬದುಕುವುದು ಎನ್ನುವ ತಪ್ಪು ತಿಳಿವಳಿಕೆ ಯಿಂದ ನಿಮ್ಮ ತೊಂದರೆಗಳು ಶುರುವಾಗುತ್ತವೆ. ಪೋಷಕ ರಿಗೆ ಜಾತಿವ್ಯವಸ್ಥೆಯನ್ನು ಮೀರಲಾಗದ ಹಿಂಜರಿಕೆ ಯಿದೆ. ಹಾಗಾಗಿ ನಿಮ್ಮ ನಿರ್ಧಾರದಿಂದ ಅವರಿಗೆ ತಾತ್ಕಾಲಿಕವಾಗಿ ನೋವಾಗುವುದು ಸಹಜ. ಆದರೆ ತಮ್ಮ ಸಂತೋಷಕ್ಕಾಗಿ ನಿಮ್ಮ ನೋವನ್ನು ಪೋಷಕರು ಬಯಸುತ್ತಾರೆ ಎಂದುಕೊಂಡಿದ್ದೀರಾ? ಬೇಕಿದ್ದರೆ ಅವರನ್ನೇ ಕೇಳಿನೋಡಿ. ನಿಮ್ಮ ಸಂತೋಷ ಮತ್ತು ಪ್ರೀತಿ ಮಾತ್ರ ಅವರಿಗೆ ನಿರಂತರ ಸಮಾಧಾನ ಕೊಡಬಲ್ಲದು. ನೀವು ಮೆಚ್ಚುವ ಹುಡುಗನನ್ನು ಮದುವೆಯಾಗಲಾರದ ನೋವಿನಲ್ಲಿ ಪೋಷಕರಿಗೆ ಪ್ರೀತಿ, ಸಂತೋಷವನ್ನು ಕೊಡುವ ಶಕ್ತಿಯಾದರೂ ನಿಮ್ಮಲ್ಲಿ ಹೇಗೆ ಉಳಿದೀತು? ನಮ್ಮೊಳಗೆ ಇಲ್ಲದಿರುವುದನ್ನು ನಾವು ಬೇರೆಯವರಿಗೆ ಕೊಡುವುದಾದರೂ ಹೇಗೆ?

ADVERTISEMENT

ಭಯ, ಹಿಂಜರಿಕೆಗಳ ಮಧ್ಯೆಯೇ ನಿಮ್ಮ ಆಯ್ಕೆ, ಕಷ್ಟಗಳು, ಕಾಳಜಿ, ಪ್ರೀತಿ ಎಲ್ಲವನ್ನೂ ಪೋಷಕರೊಡನೆ ಹಂಚಿಕೊಳ್ಳಿ. ಯಾವುದೇ ತಿರಸ್ಕಾರ, ಒತ್ತಡಗಳಿಗೆ ಒಳಗಾಗದೆ ನಿಮ್ಮ ಇಷ್ಟದಂತೆ ಮದುವೆಯಾಗಿ. ಪೋಷಕರಿಗೆ ಆಗುವ ನೋವನ್ನು ನಿಮ್ಮ ಪ್ರೀತಿ, ಕಾಳಜಿಯಿಂದ ಶಮನ ಮಾಡುವುದು ಸಾಧ್ಯವಾಗುತ್ತದೆ. ಹೆಚ್ಚೆಂದರೆ ಅದಕ್ಕಾಗಿ ಕಾಯಬೇಕಾಗಬಹುದು. ಮಕ್ಕಳ ಸಂತೋಷದಲ್ಲಿ ಪಾಲ್ಗೊಳ್ಳಲಾಗದಷ್ಟು ಪೋಷಕರು ಕಲ್ಲು ಹೃದಯದವರಾಗಿದ್ದರೆ ಹೆಚ್ಚು ಸಮಯ ಕಾಯಬೇಕಾಗಬಹುದು. ಪ್ರೀತಿಯಿಂದ ಸಾಮಾಜಿಕ ಕಟ್ಟಳೆಗಳನ್ನು ಮೀರುವುದು ಸಾಧ್ಯವಾಗುವುದಾದರೆ ರಕ್ತಸಂಬಂಧಗಳನ್ನು ಅದು ಹೇಗೆ ಕಡಿದೀತು?

8 ವರ್ಷಗಳಿಂದ ಹೊಟ್ಟೆನೋವು, ವಾಯುಪ್ರಕೋಪ ತಲೆನೋವಿನಿಂದ ನರಳುತ್ತಿದ್ದೇನೆ. ವೈದ್ಯರು, ದೇವರು ದಿಂಡರು ಮುಂತಾದವುಗಳಿಂದ ಪರಿಹಾರ ಸಿಗುತ್ತಿಲ್ಲ. ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದರೂ ಬದುಕಿ ಏನಾದರೂ ಸಾಧಿಸುವ ಆಸೆಯಿದೆ. ಆದರೆ ದೈಹಿಕ ಸಮಸ್ಯೆಗಳು ಅಡ್ಡಿಯಾಗುತ್ತಿದೆ. ಸಲಹೆನೀಡಿ.

ಚಂದ್ರು, ಊರಿನ ಹೆಸರಿಲ್ಲ

ನಿಮ್ಮ ವಯಸ್ಸು, ವೃತ್ತಿ ಮುಂತಾದವುಗಳ ವಿವರಗಳಿದ್ದರೆ ಸಹಾಯವಾಗುತ್ತಿತ್ತು. ನಿಮ್ಮೊಳಗೆ ಆಳವಾಗಿ ಕಾಡುತ್ತಿರುವ ಮಾನಸಿಕ ಅತೃಪ್ತಿಗಳ ಬಗೆಗೆ ನಿಮ್ಮನ್ನು ಎಚ್ಚರಿಸಲು ಮೆದುಳು ದೇಹದ ಮೂಲಕ ಸೂಚನೆಗಳನ್ನು ಕಳಿಸುತ್ತಿದೆ. ನೀವು ಅವುಗಳನ್ನು ಗಮನಿಸದೆ ಔಷಧಿಗಳ ಮೂಲಕ ಸೂಚನೆಗಳನ್ನು ಹತ್ತಿಕ್ಕುತ್ತಿದ್ದೀರಿ.

ದೈಹಿಕ ತೊಂದರೆಗಳಿಗೆ ಪರಿಹಾರ ನಿಮ್ಮೊಳಗೇ ಇದೆ. ನಿಮ್ಮ ಬಗೆಗೆ ನಿಮ್ಮೊಳಗೆ ಆಳವಾದ ಅತೃಪ್ತಿ ಬೇಸರಗಳಿರಬೇಕಲ್ಲವೇ? ಅವುಗಳೇನೆಂದು ಗುರುತಿಸಿದ್ದೀರಾ? ದೈಹಿಕ ನೋವುಗಳು ತೀವ್ರವಾದಾಗ ದೀರ್ಘವಾಗಿ ಉಸಿರಾಡುತ್ತಾ ಕುಳಿತು ದೇಹದ ನೋವುಗಳನ್ನು ಸುಮ್ಮನೆ ಗಮನಿಸಿ. ನಿಮ್ಮ ನೋವುಗಳಿಗೆ ಮಾತುಗಳು ಬರುವುದಾದರೆ ಅವು ಏನನ್ನು ಹೇಳುತ್ತಿರಬಹುದು ಎನ್ನುವುದನ್ನು ಗ್ರಹಿಸಲು ಪ್ರಯತ್ನಿಸಿ. ನಿನಗೆ ಬದುಕುವ ಯೋಗ್ಯತೆಯಿಲ್ಲ, ಪ್ರೀತಿಯನ್ನು ಪಡೆಯಲಾರೆ, ಯಾವುದರಲ್ಲಿಯೂ ಯಶಸ್ವಿ⇒ಯಾಗಲಾರೆ- ಅವು ಹೀಗೇನೇನೋ ಹೇಳುತ್ತಿರುತ್ತವೆ. ನೋವುಗಳು ಹೇಳುವುದು ನಿಮ್ಮ ಬಗೆಗಿನ ನಿಮ್ಮದೇ ಅಭಿಪ್ರಾಯಗಳು, ತೀರ್ಮಾನಗಳು. ಅವುಗಳನ್ನು ಪಟ್ಟಿ ಮಾಡಿಕೊಂಡು ಈ ಅಭಿಪ್ರಾಯಗಳನ್ನು ಬದಲಾಯಿಸವುದು ಹೇಗೆ ಎನ್ನುವ ಯೋಜನೆ ತಯಾರಿಸಿ. ಹಂತಹಂತವಾಗಿ ಜಾರಿಗೆ ತನ್ನಿ. ನಿಮ್ಮ ಅನುಭವಗಳ ಸ್ವರೂಪ ಬದಲಾದಂತೆ ದೇಹ ತನ್ನಿಂದ ತಾನೇ ಶಾಂತವಾಗುತ್ತದೆ.

ನಮಗೆ ತಾಯಿಯಿಲ್ಲ. ಅಜ್ಜಿ ಸಾಕುತ್ತಿದ್ದಾರೆ. ನನ್ನ ತಮ್ಮ 8ನೇ ತರಗತಿಯಲ್ಲಿ ಪೋನಿನ ಚಟದಿಂದ ಶಾಲೆ ಬಿಟ್ಟಿದ್ದನು. ಈಗ ಕೆಟ್ಟವರ ಸಹವಾಸದಿಂದ ಮನೆ ಬಿಟ್ಟಿದ್ದಾನೆ. ಅಜ್ಜಿಯ ಮಾತಿಗೂ ಎದುರುತ್ತರ ಕೊಡುತ್ತಾನೆ. ಅವನನ್ನು ಸರಿದಾರಿಗೆ ತರುವುದು ಹೇಗೆ?

ಊರು, ಹೆಸರು ಇಲ್ಲ

ನಿಮ್ಮ ತಮ್ಮನಿಗೆ ಬೇಕಾಗಿರುವುದು ಬುದ್ಧಿವಾದವಲ್ಲ, ಪ್ರೀತಿ ಮತ್ತು ಅವನ ಅಂತರಂಗದ ಮಾತುಗಳನ್ನು ಕೇಳುವ ಆತ್ಮೀಯ ಕಿವಿಗಳು. ಅವನನ್ನು ಒಬ್ಬ ಅಪರಾಧಿಯಂತೆ ನೋಡದೆ ಮಾತನಾಡಿಸಿ. ಅವನು ತುಳಿಯುತ್ತಿರುವ ದಾರಿಯಂದ ನಿಮಗಾಗುತ್ತಿರುವ ನೋವುಗಳ ಬಗೆಗೆ ಮಾತನಾಡಿ. ಅವನಿಗೆ ತನ್ನ ಬಗ್ಗೆ ಬೇಸರ, ಕೀಳರಿಮೆಗಳಿರುತ್ತವೆ. ಅವುಗಳಿಗೆ ಸಹಾನುಭೂತಿ ತೋರಿಸುವವರೆದುರು ಅವನು ಮನಸ್ಸು ತೆರೆಯುತ್ತಾನೆ. ಅವನನ್ನು ಗೌರವಿಸುತ್ತಾ ಅವನಿಗೆ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುವುದನ್ನು ಕಲಿಸಬೇಕು. ತಜ್ಞ ಮನೋಚಿಕಿತ್ಸಕರು ಲಭ್ಯವಿದ್ದರೆ ಸಹಾಯ ಪಡೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.