ADVERTISEMENT

ಬಾಯಿ ಕ್ಯಾನ್ಸರ್‌ ಬಂದೀತು...

ಅಮೃತ ಕಿರಣ ಬಿ.ಎಂ.
Published 2 ಮಾರ್ಚ್ 2019, 4:04 IST
Last Updated 2 ಮಾರ್ಚ್ 2019, 4:04 IST
ತಂಬಾಕು ಸೇವನೆ (ಸಾಂದರ್ಭಿಕ ಚಿತ್ರ)
ತಂಬಾಕು ಸೇವನೆ (ಸಾಂದರ್ಭಿಕ ಚಿತ್ರ)   

ತುಟಿ ಮತ್ತು ಬಾಯಿ ಕ್ಯಾನ್ಸರ್ ಭಾರತೀಯರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಕೆ ಕೊಟ್ಟಿದೆ. ಹೃದಯಾಘಾತವನ್ನು ಹೊರತುಪಡಿಸಿದರೆ ಅತಿಹೆಚ್ಚು ಜನರ ಸಾವಿಗೆ ಕಾರಣ ಎಂಬ ಹಣೆಪಟ್ಟಿಯನ್ನುಕ್ಯಾನ್ಸರ್ ಹೊತ್ತುಕೊಂಡಿದೆ. ಕ್ಯಾನ್ಸರ್‌ಗಳ ಪೈಕಿ ಸ್ತನಕ್ಯಾನ್ಸರ್ ಮೊದಲ ಸ್ಥಾನದಲ್ಲಿದ್ದರೆ, ತುಟಿ ಮತ್ತು ಬಾಯಿ ಕ್ಯಾನ್ಸರ್ ಎರಡನೇ ಸ್ಥಾನ ಆಕ್ರಮಿಸಿಕೊಂಡಿದೆ.

ತುಟಿ ಹಾಗೂ ಬಾಯಿ ಕ್ಯಾನ್ಸರ್ ಪ್ರಮಾಣ ಈ ಹಿಂದೆ ಅಷ್ಟಿರಲಿಲ್ಲ. 2012ರಿಂದೀಚೆಗೆ ಇದಕ್ಕೆ ತುತ್ತಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜಾಗತಿಕವಾಗಿ ಕ್ಯಾನ್ಸರ್ ಕುರಿತ ದತ್ತಾಂಶ ವಿಶ್ಲೇಷಿಸುವ ಗ್ಲೊಬೊಕಾನ್ 2018ರ ವರದಿ ಪ್ರಕಾರ ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಪ್ರಮಾಣ ಶೇ 114.2ರಷ್ಟು ಏರಿಕೆ ಕಂಡಿದೆ. 2012ರಲ್ಲಿ 56 ಸಾವಿರ ಇದ್ದ ರೋಗಿಗಳ ಸಂಖ್ಯೆ 2018ರಲ್ಲಿ 1,19,992ಕ್ಕೆ ಏರಿದೆಎಂಬುದು ಸೋಜಿಗ ಹಾಗೂ ಆತಂಕಕಾರಿ ಬೆಳವಣಿಗೆ.

ಧೂಮಪಾನ, ಮದ್ಯಪಾನ ತ್ಯಜಿಸುವುದು, ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವುದು ಹಾಗೂ ಯಾವುದೇ ರೂಪದಲ್ಲಿ ತಂಬಾಕು ಸೇವನೆ ನಿಗ್ರಹಿಸುವುದರಿಂದ ಕ್ಯಾನ್ಸರ್‌ನಿಂದ ದೂರವಿರಬಹುದು ಎಂಬ ಸಲಹೆ ವೈದ್ಯರದ್ದು.

ADVERTISEMENT

***
ದವಡೆಯನ್ನೇ ಕಳೆದುಕೊಂಡ...
ಕಳೆದ ವರ್ಷ 11.5 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಕ್ಯಾನ್ಸರ್‌ನಿಂದಲೇ ಮೃತಪಟ್ಟವರ ಪ್ರಮಾಣ ಶೇ 12.1 ಎಂಬುದು ಎಚ್ಚರಿಕೆಯ ಸಂಗತಿ. ಸತತವಾಗಿ ತಂಬಾಕು ಅಗಿಯುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬ ಬಾಯಿ ಹುಣ್ಣು ಕಾರಣದಿಂದ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಗೆ ಬಂದಿದ್ದ. ಆತನಿಗೆ ಬಾಯಿ ಕ್ಯಾನ್ಸರ್ ಆಗಿರುವುದನ್ನು ವೈದ್ಯರು ಖಚಿತಪಡಿಸಿದರು. ವಿಚಿತ್ರವೆಂದರೆ ಆತನ ಬಾಯಿಯಲ್ಲಿದ್ದ ಹುಣ್ಣಿನಲ್ಲಿ ಹುಳು ತುಂಬಿಕೊಂಡಿದ್ದವು. ಬಾಯಿ ದುರ್ನಾತವಿದ್ದರೂ ಆತ ವೈದ್ಯರನ್ನು ಭೇಟಿ ಮಾಡುವ ಗೋಜಿಗೇ ಹೋಗಿರಲಿಲ್ಲ. ರೋಗಿಯ ದವಡೆಯ ಅರ್ಧಭಾಗ ಎಲುಬನ್ನು ತೆಗೆಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.

ಬೆಂಗಳೂರಿಗರಿಗೂ ಇದೆ ಅಭ್ಯಾಸ..
ತಂಬಾಕಿನ ಯಾವುದೇ ರೂಪ ನಮ್ಮ ದೇಹ ಸೇರಿದರೂ ಅದು ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯವೂ ತಪ್ಪದಂತೆ ಅಡಿಕೆ, ಪಾನ್‍ಮಸಾಲಾ, ತಂಬಾಕು ಜಗಿಯುವ ಜನರಿದ್ದಾರೆ. ಅವರಲ್ಲಿ ಅರಿವಿನ ಕೊರತೆಯಿದೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿಯೂ ಕೆಲವು ಜನರಲ್ಲಿ ಈ ಅಭ್ಯಾಸ ಇದೆ ಎಂಬುದು ಸೋಜಿಗ.

ಬಾಯಿ ಕ್ಯಾನ್ಸರ್‌ಗೆ ಧೂಮಪಾನವೂ ಕಾರಣ. ಹೀಗಿದ್ದರೂ ಜನರು ಅದರ ಜೊತೆ ತಂಬಾಕು ಸೇವೆನೆಯನ್ನು ರೂಢಿ ಮಾಡಿಕೊಂಡಿದ್ದರೆ ಅಪಾಯ ಹೆಚ್ಚು. ಬಾಯಿಯೊಳಗೆ ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ತಂಬಾಕನ್ನು ಇರಿಸಿಕೊಳ್ಳುವುದು ಕೂಡಾ ಅದರ ಅಪಾಯವನ್ನು ಇನ್ನಷ್ಟು ಖಚಿತಪಡಿಸುತ್ತದೆ. ತಿಂಗಳಿಗೆ ಇಂತಹ ಮೂರ್ನಾಲ್ಕು ಪ್ರಕರಣಗಳು ಸಿಗುತ್ತವೆ. 35- 40 ವರ್ಷದ ವ್ಯಕ್ತಿಗಳೇ ಇದಕ್ಕೆ ಈಡಾಗುತ್ತಿದ್ದಾರೆ.

ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು:(ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಗುರುತಿಸಿದಂತೆ..)
*ಮದ್ಯಸೇವನೆ ಪ್ರಮಾಣದಲ್ಲಿ ಏರಿಕೆ
*ಅಡಿಕೆ ಜಗಿಯುವ ಪ್ರಮಾಣ ಹೆಚ್ಚಳ
*ತಂಬಾಕು ಅಂಶ ಇರುವ ಸ್ವೀಟ್ ಸುಪಾರಿ, ಪಾನ್ ಸೇವನೆ

***
ಬದಲಾದ ಜೀವನಶೈಲಿ ಕಾರಣ
ಜನರು ರೂಢಿಸಿಕೊಂಡಿರುವ ಅವರದೇ ಜೀವನಶೈಲಿ, ಬಾಯಿಯ ಸ್ವಚ್ಛತೆ ಬಗ್ಗೆ ಗಮನ ಕೊಡದಿರುವುದು ಹಾಗೂ ಲೈಂಗಿಕ ನಿಯಮಗಳ ಬದಲಾವಣೆ ಬಾಯಿ ಕ್ಯಾನ್ಸರ್‌ಗೆ ನೇರ ಕಾರಣಗಳು. ಲೈಂಗಿಕತೆಯ ಮೂಲಕ ಹರಡುವ ರೋಗಾಣು (ಎಚ್‍ಪಿವಿ-ಹ್ಯೂಮನ್ ಪ್ಯಾಪೊಲೊಮವೈರಸ್) ಪುರುಷರಲ್ಲಿ ವ್ಯಾಪಕಗೊಳ್ಳುತ್ತಿದೆ. ಎಚ್‍ಪಿವಿ ಲಸಿಕೆ ಹಾಕುವುದೇ ಇದಕ್ಕಿರುವ ಪರಿಹಾರ.
-ಡಾ. ವಿನೀತ್ ಗುಪ್ತಾ,ಮುಖ್ಯಸ್ಥರು ಆಂಕಾಲಜಿ ಮತ್ತು ಹೆಮಟಾಲಜಿ, ಸಕ್ರಾ ವರ್ಲ್ಡ್‌ ಆಸ್ಪತ್ರೆ

***
ತುಟಿ ಕ್ಯಾನ್ಸರ್ ಎಂಬುದು ಓರಲ್ ಕ್ಯಾವಿಟಿ ಕ್ಯಾನ್ಸರಿನ ಒಂದು ಭಾಗ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಅದರ ಪ್ರಮಾಣ ಭಾರತದಲ್ಲಿ ಕಡಿಮೆ
- ಡಾ. ರಾಜಶೇಖರ್, ಆಂಕಾಲಜಿಸ್ಟ್ ಸರ್ಜನ್, ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.