ಹುಬ್ಬಳ್ಳಿ:ಇದೇ ಫೆ. 7ರಂದು ತೆರೆ ಕಾಣಲಿರುವ ತಮ್ಮ ‘ಮಾಲ್ಗುಡಿ ಡೇಸ್’ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ವಿಭಿನ್ನ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. 70 ವರ್ಷದ ವೃದ್ಧನಾಗಿ ಹಾಗೂ 16 ವರ್ಷದ ಹೈಸ್ಕೂಲು ಹುಡುಗನಾಗಿ ನಟಿಸಿರುವ ಅವರು, ಹರೆಯದ ಹುಡುಗನ ಪಾತ್ರಕ್ಕಾಗಿ ಬರೊಬ್ಬರಿ 19 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.
ಹೇಳಿ ಕೇಳಿ ಅವರು ನಿತ್ಯ ಮಾಂಸಾಹಾರಿ. ಚಾಕೊಲೇಟ್, ಐಸ್ ಕ್ರೀಂ ಹಾಗೂ ಕೇಕ್ ಪ್ರಿಯ. ಆದರೂ, ಸಿನಿಮಾವೊಂದಕ್ಕಾಗಿ ದೇಹವನ್ನು ಇಷ್ಟೊಂದು ಮಾರ್ಪಾಡು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿದ್ದು ಆರಂಭದಿಂದಲೂ ಕಾಯ್ದುಕೊಂಡು ಬಂದಿದ್ದ ಫಿಟ್‌ನೆಸ್.
‘ಪಾತ್ರಗಳಿಗೆ ಮನಸ್ಸನ್ನು ಒಗ್ಗಿಸಿಕೊಂಡಷ್ಟೇ ದೇಹವನ್ನು ಹದಗೊಳಿಸಿಕೊಳ್ಳುವುದು ಕಲಾವಿದರಿಗೆ ಸವಾಲು. ಇಂಥ ಸವಾಲುಗಳು ದಿಢೀರನೆ ಎದುರಾದಾಗ, ನಿಭಾಯಿಸುವುದು ಬಹಳ ಕಷ್ಟ. ಆದರೆ, ನಾನು ಆರಂಭದಿಂದಲೂ ಫಿಟ್‌ನೆಸ್ ಕಡೆಗೆ ಗಮನ ಕೊಡುತ್ತಿದ್ದರಿಂದ ನನಗೆ ಕಷ್ಟವೆನಿಸಲಿಲ್ಲ’ ಎನ್ನುವುದು ವಿಜಯರಾಘವೇಂದ್ರ ಅಭಿಪ್ರಾಯ.
‘ಸೋಮಾರಿತನ ಬಿಡುವುದೇ ಫಿಟ್‌ನೆಸ್ ಮಂತ್ರ. ಊಟ–ತಿಂಡಿಯಂತೆಯೇ, ವ್ಯಾಯಾಮವೂ ದಿನಚರಿಯ ಭಾಗವಾಗಬೇಕು. ನಾನೆಷ್ಟೇ ಫುಡ್ಡಿಯಾಗಿದ್ದರೂ, ವ್ಯಾಯಾಮವನ್ನು ಮಿಸ್ ಮಾಡುವುದಿಲ್ಲ. ಹಾಗಾಗಿಯೇ, ಡಯಟ್ ಹಂಗಿಲ್ಲದೆ ನನಗಿಷ್ಟವಾಗಿದ್ದನ್ನು ಮನಸಾರೆ ತಿನ್ನುತ್ತೇನೆ’ ಎನ್ನುತ್ತಾರೆ ಅವರು.
ಇತ್ತೀಚೆಗೆ ‘ಸಿಕ್ಸ್ ಪ್ಯಾಕ್ಸ್’ ಎನ್ನುವುದು ಸಿನಿಮಾ ಮಂದಿಯ ಟ್ರೆಂಡ್ ಆಗಿದೆ. ಆದರೆ, ದೇಹವನ್ನು ಹುರಿಗೊಳಿಸಿಕೊಳ್ಳುವುದೇ ಫಿಟ್‌ನೆಸ್ ಅಲ್ಲ ಎಂಬುದನ್ನು ಅಲ್ಲಗಳೆಯುವ ವಿಜಯ ರಾಘವೇಂದ್ರ, ‘ನಡೆದರೆ, ಓಡಿದರೆ, ದೈಹಿಕ ಶ್ರಮ ಬೇಡುವಂತಹ ಕೆಲಸಗಳನ್ನು ಮಾಡಿದರೂ ದೇಹ ದಣಿಯದಂತೆ ನೋಡಿಕೊಳ್ಳುವುದೇ ಫಿಟ್‌ನೆಸ್. ಅದಕ್ಕೆ ಮಾನಸಿಕ ಚೈತನ್ಯವೂ ಬೇಕು’ ಎಂದು ಫಿಟ್‌ನೆಸ್ ಕುರಿತು ವ್ಯಾಖ್ಯಾನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.