ADVERTISEMENT

ಸಾಧನೆಯ ಬದುಕಿಗೆ ಅಡ್ಡಿಯಾಗದ ಮೂತ್ರಪಿಂಡ ಕಸಿ: 11 ಕಿ.ಮೀ. ಓಡಿದ 67ರ ಪ್ರದೀಪ್

ಪಿಟಿಐ
Published 9 ಫೆಬ್ರುವರಿ 2024, 10:21 IST
Last Updated 9 ಫೆಬ್ರುವರಿ 2024, 10:21 IST
<div class="paragraphs"><p>ಪ್ರದೀಪ್ ಕುಮಾರ್</p></div>

ಪ್ರದೀಪ್ ಕುಮಾರ್

   

ಬಿಜಿಎಸ್ ಗ್ಲೆನೆಗಲ್ ಗ್ಲೋಬಲ್ ಆಸ್ಪತ್ರೆಯ ಯುಟ್ಯೂಬ್ ಚಿತ್ರ

ಬೆಂಗಳೂರು: ಮೂತ್ರಪಿಂಡ ಕಸಿಗೆ ಒಳಪಟ್ಟು 11 ವರ್ಷಗಳು ಕಳೆದ ನಂತರವೂ ಸಾಧನೆಯ ಛಲ ಬಿಡದ 67 ವರ್ಷದ ವ್ಯಕ್ತಿಯೊಬ್ಬರು 11 ಕಿ.ಮೀ. ದೂರದ ಓಟವನ್ನು ಯಶಸ್ವಿಯಾಗಿ ಕ್ರಮಿಸುವ ಮೂಲಕ ತಮ್ಮಂಥ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ADVERTISEMENT

ಅನಿಯಂತ್ರಿತ ರಕ್ತದೊತ್ತಡದಿಂದ ಬಳಲುತ್ತಿದ್ದ ಪ್ರದೀಪ್‌, ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿದ್ದರು. ದೇಹದ ತುರಿಕೆ ಹಾಗೂ ಕಾಲಿನ ಊತ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಹೀಗಾಗಿ 2006ರಿಂದ 2013ರವರೆಗೆ ನಿರಂತರವಾಗಿ ಡಯಾಲಿಸಿಸ್‌ಗೆ ಒಳಪಟ್ಟಿದ್ದರು. ಈ ಅವಧಿಯಲ್ಲಿ ಪ್ರದೀಪ್‌, 3ಕೆ, 5ಕೆ ಹಾಗೂ ಇದೇ ರಿತಿಯ ಓಟದಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿರಲಿಲ್ಲ.

ಆದರೆ, ಅವರ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಬಿಜಿಎಸ್ ಗ್ಲೆನೆಗಲ್ಸ್‌ ಆಸ್ಪತ್ರೆಯ ಮೂತ್ರಪಿಂಡ ವಿಭಾಗದ ತಜ್ಞ ವೈದ್ಯ ಡಾ. ಅನಿಲ್ ಕುಮಾರ್, ಡಾ. ನರೇಂದ್ರ ಅವರ ಮಾರ್ಗದರ್ಶನದಲ್ಲಿ ಮೂತ್ರಪಿಂಡ ಕಸಿಗೆ ಒಳಪಟ್ಟಿದ್ದರು. ಇದಾದ ನಂತರ ರೋಗಿಯಾಗಿಯೇ ಉಳಿದು ಜೀವನ ನಡೆಸುವ ಬದಲು, ಫಿಟ್‌ನೆಸ್‌ ರಾಯಭಾರಿಯಾಗಿ ಸಾಧನೆಯ ಹಾದಿಯಲ್ಲಿ ಪ್ರದೀಪ್ ಸಾಗಿದರು. 

ನಿರಂತರ ವ್ಯಾಯಾಮ, ಯೋಗ, ನಿಯಮಿತ ಆಹಾರ ಹಾಗೂ ನೀರು ಸೇವನೆ, ವೈದ್ಯರ ಸಲಹೆಯಂತೆ ಔಷಧೋಪಚಾರಗಳನ್ನು ಪ್ರದೀಪ್ ಚಾಚೂತಪ್ಪದೆ ಪಾಲಿಸುತ್ತಿದ್ದರು. ಇವರ ಅರೋಗ್ಯದಲ್ಲಿ ಕಂಡುಬಂದ ಗಮನಾರ್ಹ ಸುಧಾರಣೆ ನಂತರ ವೈದ್ಯರೇ ಇವರಿಗೆ ತಮ್ಮ ಕ್ರೀಡಾ ಚಟುವಟಿಕೆಯಲ್ಲಿ ತೊಡಗಲು ಸಲಹೆ ನೀಡಿದರು. ವೈದ್ಯರ ಪ್ರೇರಣೆ ಮತ್ತು ಮಾರ್ಗದರ್ಶನದ ಪರಿಣಾಮ 2ಕೆ, 5ಕೆ, 10ಕೆ, 21ಕೆ ಓಟದಲ್ಲಿ ಪಾಲ್ಗೊಂಡರು. ಈ ಸಾಧನೆಗಾಗಿ ಅವರಿಗೆ 10ಕ್ಕೂ ಹೆಚ್ಚು ಚಿನ್ನದ ಪದಕಗಳು ದೊರೆತಿವೆ ಎಂದು ಪಿಟಿಐ ವರದಿ ಮಾಡಿದೆ.

‘ಬದುಕು ಅತ್ಯಮೂಲ್ಯ. ಈವರೆಗೂ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ಅದ್ಭುತ ಪಯಣ, ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಯ ನಿರಂತರ ಬೆಂಬಲ, ಆಧಾರಸ್ತಂಬದಂತೆ ನಿಂತ ಕುಟುಂಬವೇ ನನ್ನ ಶಕ್ತಿ’ ಎಂದು ಪ್ರದೀಪ್ ಹೇಳಿದ್ದಾರೆ.

‘ಅಂಗಾಂಗ ಕಸಿ ನಂತರ ವ್ಯಕ್ತಿ ಕೇವಲ ಬದುಕುಳಿಯುತ್ತಾರೆ ಎಂದಷ್ಟೇ ಅಲ್ಲದೆ, ಅದರಾಚೆಗೂ ಸಾಧನೆಯ ಹಾದಿಗೆ ಇದು ನೆರವಾಗಲಿದೆ. ಆರೋಗ್ಯವಂತ ಬದುಕಿಗೆ ಪ್ರದೀಪ್ ಅವರ ಬದ್ಧತೆ ನಮ್ಮೆಲ್ಲರಿಗೂ ಸ್ಫೂರ್ತಿ. ಅವರ ಸಕಾರಾತ್ಮಕ ಮನಸ್ಥಿತಿಯು ಅಂಗಾಂಗ ಕಸಿ ನಂತರವೂ ಮುಂದುವರಿದಿರುವುದೇ ಅವರ ಯಶಸ್ವಿ ಬದುಕಿನ ಮೂಲ’ ಎಂದು ಡಾ. ಬಿ.ಟಿ.ಅನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರದೀಪ್‌ ಅವರಿಗೆ ಈಗ 67 ವರ್ಷ. ಮೂತ್ರಪಿಂಡ ಕಸಿಗೂ ಮೊದಲು ಅಥ್ಲೀಟ್ ಆಗಿದ್ದ ಅವರು, ನಂತರವೂ ಅದನ್ನು ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.