ADVERTISEMENT

ಸ್ಪಂದನ: ಋತುಬಂಧದ ನಂತರವೂ ಸ್ರಾವ; ಕ್ಯಾನ್ಸರ್‌ ಇರಬಹುದೇ?

ಡಾ.ವೀಣಾ ಎಸ್‌ ಭಟ್ಟ‌
Published 1 ಅಕ್ಟೋಬರ್ 2021, 19:31 IST
Last Updated 1 ಅಕ್ಟೋಬರ್ 2021, 19:31 IST
   

1. 56 ವರ್ಷ. ಮುಟ್ಟು ನಿಂತು 4 ವರ್ಷವಾಗಿತ್ತು. ಈಗ ಮತ್ತೆ ಮುಟ್ಟು ಕಾಣಿಸಿಕೊಂಡಿದೆ. ನಾನು ಮಂಡಿನೋವೆಂದು ಕೆಲವು ನೋವಿನ ಮಾತ್ರೆ ತೆಗೆದುಕೊಂಡಿದ್ದೆ. ಅದರಿಂದ ಈ ರೀತಿ ಆಗಿರಬಹುದೇ? 10 ವರ್ಷದಿಂದ ಡಯಾಬಿಟಿಸ್‌ಗೆ ಮಾತ್ರೆ ತೆಗೆದುಕೊಳ್ಳುತ್ತಿರುವೆ.ಎಲ್ಲರೂ ಕ್ಯಾನ್ಸರ್‌ ಎಂದು ಹೆದರಿಸುತ್ತಿದ್ದಾರೆ. ಭಯವಾಗುತ್ತದೆ.
-
ರೂಪ, ಮೈಸೂರು

ರೂಪಾರವರೇ, ಮುಟ್ಟುನಿಂತು ಒಂದು ವರ್ಷಕ್ಕೂ ಹೆಚ್ಚಿನ ಸಮಯದ ನಂತರ ಮತ್ತೆ ಮುಟ್ಟಿನ ಸ್ರಾವ ಆರಂಭವಾದರೆ ಅದನ್ನು ಋತುಬಂಧದ ನಂತರದ ರಕ್ತಸ್ರಾವ (ಪೋಸ್ಟ್‌ ಮೇನೋಪಾಸಲ್ ಬ್ಲೀಡಿಂಗ್) ಎನ್ನುತ್ತೇವೆ. ಇಂತಹ ಸ್ರಾವ ನಿರ್ಲಕ್ಷಿಸುವುದು ಬೇಡ. ತಜ್ಞವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಲೇ ಬೇಕು. ಯಾಕೆಂದರೆ 60 ವರ್ಷದ ನಂತರ ಪೋಸ್ಟ್‌ ಮೇನೋಪಾಸಲ್ ಬ್ಲೀಡಿಂಗ್ ಆದವರಲ್ಲಿ ಶೇ 13-15ರಷ್ಟು ಮಹಿಳೆಯರಿಗೆ ಗರ್ಭಾಶಯದ ಒಳಾವರಣದ ಕ್ಯಾನ್ಸರ್‌ ಸಂಭವ ಉಂಟಾಗಬಹುದು. ಹಾರ್ಮೋನು ಪುನರ್ಭರಿಸುವ ಚಿಕಿತ್ಸೆಯನ್ನು ಋತುಬಂಧದ ನಂತರ ತೊಂದರೆಗಳಿಗಾಗಿ ತೆಗೆದುಕೊಂಡವರಲ್ಲಿ, ಅನುವಂಶಿಯವಾಗಿ ಪಾಲಿಪೋಸಿಸ್ ಇರುವವರಲ್ಲಿ, ಹೀಗೆ ಕ್ಯಾನ್ಸರ್‌ ಬರುವ ಸಂಭವ ಹೆಚ್ಚು. ಇದಲ್ಲದೇ ಇನ್ನಿತರ ಕಾರಣಗಳಿಂದಲೂ ಮುಟ್ಟಿನ ನಂತರ ರಕ್ತಸ್ರಾವ ಆಗಬಹುದು. ಉದಾಹರಣೆಗೆ ಯೋನಿಮಾರ್ಗದಲ್ಲಿ ಗಾಯ, ಉರಿಯೂತ, ಗರ್ಭಕಂಠದಲ್ಲಿ ಹುಣ್ಣು, ಗರ್ಭಕೋಶ ಜಾರುವಿಕೆಯಿಂದ ಹುಣ್ಣಾಗುವಿಕೆ, ಗರ್ಭಕೋಶದ ಒಳಪದರ ಬೆಳೆಯುವುದು ಹಾಗೂ ಒಳಪದರಕ್ಕೆ ಸೋಂಕು ಉಂಟಾಗುವುದು, ಏನೂ ನಿರ್ದಿಷ್ಟ ಕಾರಣಗಳಿಲ್ಲದ ಕೇವಲ ಹಾರ್ಮೋನು ಅಸಮತೋಲನದಿಂದಲೂ ಮುಟ್ಟಿನ ನಂತರ ರಕ್ತಸ್ರಾವವಾಗಬಹುದು.

ಗರ್ಭನಾಳ ಹಾಗೂ ಅಂಡಾಶಯದ ಹಾರ್ಮೋನು ಉತ್ಪಾದಿಸುವ ಗಡ್ಡೆಗಳಿಂದಲೂ, ಏರು ರಕ್ತದೊತ್ತಡ ಹಾಗೂ ರಕ್ತಹೆಪ್ಪುಗಟ್ಟುವ ತೊಂದರೆಗಳಿಂದಲೂ ಮುಟ್ಟುನಿಂತ ನಂತರ ರಕ್ತಸ್ರಾವವಾಗಬಹುದು. ಒಟ್ಟಾರೆ ಶೇ 30ಕ್ಕೂ ಹೆಚ್ಚಿನ ಸಂದರ್ಭದಲ್ಲಿ ಜನನಾಂಗವ್ಯೂಹದ ಕ್ಯಾನ್ಸರ್‌ ಇರುವ ಸಂದರ್ಭದಲ್ಲಿ ಪೋಸ್ಟ್‌ ಮೇನೋಪಾಸಲ್ ಬ್ಲೀಡಿಂಗ್ ಇರುತ್ತದೆ. ತಜ್ಞವೈದ್ಯರಿಂದ ಸೂಕ್ತ ತಪಾಸಣೆ ಹಾಗೂ ರಕ್ತ ಪರೀಕ್ಷೆಗಳು, ಅಗತ್ಯವಿದ್ದಲ್ಲಿ ಸಿ.ಟಿ ಸ್ಕ್ಯಾನಿಂಗ್ ಮಾಡಿಸಬೇಕಾಗಬಹುದು. ಸಂಕೋಚ ಹಾಗೂ ಮುಚ್ಚುಮರೆ ಮಾಡುತ್ತಾ ಈ ವಿಷಯದಲ್ಲಿ ಹಿಂಜರಿಯದೆ ಆದಷ್ಟು ಬೇಗ ತಜ್ಞರಿಂದ ಸೂಕ್ತಚಿಕಿತ್ಸೆ ತೆಗೆದುಕೊಳ್ಳಲೇಬೇಕು. ನಿಮಗೆ ಮಧುಮೇಹವೂ ಇರುವುದರಿಂದ ಜೊತೆಗೆ ಬೊಜ್ಜು, ಏರು ರಕ್ತದೊತ್ತಡ ಇವೆಲ್ಲವೂ ಎಂಡೋಮೆಟ್ರಯಲ್ ಕ್ಯಾನ್ಸರ್‌ (ಗರ್ಭಾಶಯ ಲೋಳೆಪದರದ ಕ್ಯಾನ್ಸರ್‌)ನ ಅಪಾಯಕಾರಿ ಅಂಶಗಳಾಗಿರುತ್ತವೆ. ಅದ್ದರಿಂದ ನಿರ್ಲಕ್ಷಿಬೇಡಿ.

ADVERTISEMENT

2. ವಯಸ್ಸು 20, ಮದುವೆ ಆಗಿಲ್ಲ. ತಿಂಗಳು ತಿಂಗಳು ಸರಿಯಾಗಿ ನನಗೆ ಮುಟ್ಟು ಆಗುವುದಿಲ್ಲ. ಪ್ರತಿಸಲವೂ ವೈದ್ಯರಿಗೆ ತೋರಿಸಿ ಮಾತ್ರೆ ತೆಗೆದುಕೊಂಡಾಗ ಮಾತ್ರ ಮುಟ್ಟಾಗುತ್ತದೆ. ಈಗ ಮುಟ್ಟಾಗದೆ 2 ತಿಂಗಳ ಮೇಲಾಗಿದೆ. ಏನು ಮಾಡಲಿ?
-ತೃಪ್ತಿ, ಊರಿನ ಹೆಸರಿಲ್ಲ

ನೀವು ನಿಮ್ಮ ತೂಕ ಎತ್ತರ ಎಷ್ಟಿದೆ ಎನ್ನುವುದನ್ನ ತಿಳಿಸಿಲ್ಲ. ನೀವು ದಪ್ಪನಾಗಿದ್ದರೆ ನಿಮಗೆ ಪಿ.ಸಿ.ಒ.ಡಿ. ಸಮಸ್ಯೆ ಇರಬಹುದು. ನಾನು ಎರಡು ವಾರಗಳ ಹಿಂದಿನ ಸಂಚಿಕೆಯಲ್ಲಿ ಹೇಗೆ ಜೀವನಶೈಲಿ ಬದಲಿಸಿಕೊಂಡರೆ ಪಿ.ಸಿ.ಒ.ಡಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದ್ದೇನೆ. ಅದನ್ನು ಓದಿ ಅನುಸರಿಸಿ. ಜೊತೆಗೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಗರ್ಭಕೋಶದ ಗಾತ್ರ ಹಾಗೂ ಅಂಡಾಶಯದ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಂಡು ತಿಳಿದುಕೊಳ್ಳಿ. ತಜ್ಞರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

3. ಮುಟ್ಟಿಗೆ ಮೊದಲು ಜನನಾಂಗ ಒಣಗಿದ ಹಾಗಾಗುತ್ತದೆ ಮತ್ತು ಪೀರಿಯಡ್ ಮುಗಿದ ಮೇಲೂ ಒಣಗಿದ ಹಾಗಿರುತ್ತದೆ. ಏನು ಮಾಡಲಿ?
-ಅರ್ಚನಾ, ಊರು ತಿಳಿಸಿಲ್ಲ

ಅರ್ಚನಾರವರೇ, ನಿಮ್ಮ ವಯಸ್ಸು ಎಷ್ಟೆಂದು ತಿಳಿಸಿಲ್ಲ. ನಿಮಗೆ 45 ವರ್ಷ ಅಗಿದ್ದು ಮುಟ್ಟು ನಿಲ್ಲುವ ಹಂತಕ್ಕೆ ಬಂದಿದ್ದರೆ ಹೆಣ್ತನದ ಹಾರ್ಮೋನ್ ಈಸ್ಟ್ರೋಜನ್ ಮಟ್ಟ ಕಡಿಮೆ ಆಗುವುದರಿಂದಲೂ ಈ ರೀತಿಯ ಅನುಭವವಾಗಬಹುದು. ನೀವು ವೈದ್ಯರ ಸಲಹೆಯ ಮೇರೆಗೆ ಯಾವುದಾದರೊಂದು ಲುಬ್ರಿಕೆಂಟ್ ಜೆಲ್‌ ಅನ್ನು ದಿನಾ ಬಳಸಿದರೆ ಈ ಸಮಸ್ಯೆ ಸರಿಹೋಗಬಹುದು. ಕೆಲವೊಮ್ಮೆ ಮಾತ್ರೆಗಳನ್ನು ತೆಗೆದುಕೊಳ್ಳ ಬೇಕಾಗಬಹುದು. ಯಾವುದಕ್ಕೂ ತಜ್ಞ ವೈದ್ಯರನ್ನು ಸಂಪರ್ಕಿಸಿ.

4. ನಮಗೆ ಮದುವೆಯಾಗಿ 9 ವರ್ಷಗಳಾದವು. ಮದುವೆಯಾಗಿ ಎರಡು ವರ್ಷಕ್ಕೆ ಒಂದು ಹೆಣ್ಣುಮಗುವಾಗಿದೆ. ನಂತರ ಈಗ 7 ವರ್ಷವಾದರೂ ಮತ್ತೆ ಗರ್ಭ ನಿಲ್ಲುತ್ತಿಲ್ಲ. ಏನು ಮಾಡಲಿ?
-ರೇಣುಕಾ, ವಯಸ್ಸು ತಿಳಿಸಿಲ್ಲ

ನಿಮಗೆ ಮತ್ತೆ ಈಗ ಮಕ್ಕಳಾಗಿಲ್ಲವೆಂದರೆ ನಿಮಗೂ ಮತ್ತು ನಿಮ್ಮ ಪತಿಗೂ ಕೂಲಂಕಶವಾಗಿ ಪರೀಕ್ಷೆ ಮಾಡಬೇಕು. ನಿಮ್ಮ ಪತಿಗೆ ವೀರ್ಯ ಪರೀಕ್ಷೆ ಮಾಡಿಸಿ ವೀರ್ಯಾಣುಗಳ ಸಂಖ್ಯೆ, ಚಲನೆ ಸರಿಯಿದೆಯೇ ಎಂದು ಪರೀಕ್ಷಿಸಬೇಕು. ನಿಮಗೂ ಕೂಡಾ ತಿಂಗಳು ತಿಂಗಳು ಅಂಡಾಣು ಬಿಡುಗಡೆಯಾಗುತ್ತಿದೆಯೇ ಇಲ್ಲವೆ ಎಂಬುದನ್ನು ಅಲ್ಟ್ರಾಸೌಂಡ್ ಫಾಲಿಕ್ಯೂಲರ್ ಪರೀಕ್ಷೆಯಿಂದ ತಿಳಿಯುತ್ತದೆ. ಕೆಲವೊಮ್ಮೆ ಒಂದು ಹೆರಿಗೆಯಾದ ನಂತರ ಗರ್ಭನಾಳದ ಅಡೆತಡೆ ಉಂಟಾಗಿ (ಟ್ಯೂಬಲ್ ಬ್ಲಾಕ್) ಉಂಟಾಗಿ ಮತ್ತೆ ಗರ್ಭ ನಿಲ್ಲದೇ ಇರಬಹುದು. ಹೀಗಾಗಿ ಟ್ಯೂಬ್‌ ಬ್ಲಾಕ್ ಆಗಿದೆಯೇ ಇಲ್ಲವೇ ಎಂದು ಪರೀಕ್ಷೆ ಮಾಡಿಸ ಬೇಕಾಗಬಹುದು. ಯಾವುದಕ್ಕೂ ಸೂಕ್ತ ತಜ್ಞರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದು ಆದಷ್ಟು ಬೇಗನೆ ಇನ್ನೋಂದು ಮಗುವನ್ನು ಪಡೆಯಿರಿ.

5. ನನಗೆ 29 ವರ್ಷ ಮತ್ತು ಮಗಳಿಗೆ 1 ವರ್ಷ. ನಾನು 95 ಕೆ.ಜಿ ಇದ್ದೀನಿ ಹಾಗೂ ನನ್ನ ಎತ್ತರ 5 ಅಡಿ ನಾಲ್ಕಿಂಚು. ನಾವು ಇನ್ನೊಂದು ಮಗುವನ್ನು ಪಡೆಯಲು ಪ್ರಯತ್ನಿನಸಿದರೂ ಆಗುತ್ತಿಲ್ಲ. ಆದರೆ ನನಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿದೆ. ಆದರೂ ಯಾಕೆ ಗರ್ಭಧಾರಣೆಯಾಗುತ್ತಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲ.
-ನಳಿನಾ, ಊರು ತಿಳಿಸಿಲ್ಲ

ನಳಿನಾರವರೇ, ನೀವು ನಿಮ್ಮ ಎತ್ತರಕ್ಕೆ ಕೇವಲ 60 ಕೆ.ಜಿ ಒಳಗಿರಬೇಕು. ಆದರೆ ನೀವು 90 ಕೆ.ಜಿ ಇದ್ದೀರಿ. ಆದ್ದರಿಂದ ನೀವು ದಯವಿಟ್ಟು ತೂಕ ಕಡಿಮೆ ಮಾಡಿಕೊಳ್ಳಿ. ನಂತರ ಗರ್ಭಧಾರಣೆಗೆ ಪ್ರಯತ್ನಿಸಿ. ಜೀವನಶೈಲಿ ಬದಲಾವಣೆ ಹಾಗೂ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಹಿಂದಿನ ಸಂಚಿಕೆಗಳಲ್ಲಿ ತಿಳಿಸಿದ್ದೇನೆ. ತಜ್ಞ ವೈದ್ಯರನ್ನು ಸಂಪರ್ಕಿಸಿ ಅವಶ್ಯಕ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಔಷಧಗಳನ್ನು ಬಳಸಿ, ಇನ್ನೊಂದು ಮಗು ಪಡೆದುಕೊಳ್ಳಿ.

ಡಾ. ವೀಣಾ ಎಸ್‌. ಭಟ್‌

*

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.