ADVERTISEMENT

ನಂದಿಬಟ್ಟಲಲ್ಲಿದೆ ಕಾಡಿಗೆ

ಡಾ.ಗೀತಾ ಸತ್ಯ
Published 26 ಅಕ್ಟೋಬರ್ 2018, 19:35 IST
Last Updated 26 ಅಕ್ಟೋಬರ್ 2018, 19:35 IST
ನಂದಿಬಟ್ಟಲು ಹೂವು
ನಂದಿಬಟ್ಟಲು ಹೂವು   

ನವರಾತ್ರಿಯ ಪೂಜೆಯ ಸಂದರ್ಭ. ನಮ್ಮ ಬಡಾವಣೆಯ ಹೂವಾಡಗಿತ್ತಿ ಜಯಮ್ಮನ ಬಳಿಗೆ ಹೋಗಿದ್ದೆ. ಹೊಸ ನಮೂನೆಯ ದೊಡ್ಡ ಮಲ್ಲಿಗೆ ಮೊಗ್ಗಿನಂತಹ ಹಾರಗಳನೇಕ ಜೋತಾಡುತ್ತಿತ್ತು. ಅದೇನು ಜಯಮ್ಮ ಹೊಸ ತರಹದ ಹೂವಿನ ಹಾರ ಇದೆಯಲ್ಲ ಎಂದೆ. ‘ಅಮ್ಮಾವ್ರೇ, ಈ ಬಾರಿ ಮಳೆ ಜಾಸ್ತಿ ಅಲ್ವಾ. ಅದಕ್ಕೆ ಮಲ್ಲಿಗೆ ಗಿಡ ಎಲ್ಲಾ ಹಾಳಾಗಿ ಬಿಡ್ತು. ಇದು ಮಲ್ಲಿಗೆ ಥರಾನೇ ಇದೆಯಲ್ಲ. ರೇಟೂ ಅಗ್ಗ. ಹಾರ ಜೋಡಿಗೆ ಕೇವಲ ಐವತ್ತು ರೂಪಾಯಿ!’

ಹೂವಿನ ಹಾರ ಕೈಯಲ್ಲಿ ಹಿಡಿದು ನೋಡಿದೆ. ಅಂದವಾಗಿ ಪೋಣಿಸಿದ ಬಿಳಿಯ ಹೂ ಮೊಗ್ಗಿನ ಹಾರ. ಕಂಪು ಕಡಿಮೆ. ಮಲ್ಲಿಗೆಯಂದ ಘಮಲು ಇಲ್ಲ. ಆದರೆ ದಪ್ಪನೆಯ ಗಟ್ಟಿ ಎಸಳುಗಳು. ಯಜಮಾನರು ಹೇಳಿದರು. ‘ಇದು ನಮ್ಮ ಅಂಗಳದ ನಂದಿ ಬಟ್ಟಲು ಅಲ್ಲವಾ!’ ಜಯಮ್ಮ ಕೂಡ ಗೋಣು ಆಡಿಸಿ ಹೌದು ಎಂದಳು. ಒಂದು ಜೋಡಿ ಹಾರ ಕೊಂಡು ತಂದೆವು. ಆಯುಧಪೂಜೆ ಮುಗಿಯಿತು. ಹೂವಿನ ಹಾರ ಕೊಂಚ ಬಾಡಿತ್ತು. ಕಾಡಿಗೆ ಮಾಡಲು ಬಳಸಿದೆ. ಸೊರಬದ ಮೀನಾಕ್ಷಮ್ಮ ನಂದಿಬಟ್ಟಲಿನ ಹೂಕಾಡಿಗೆ ಮಾಡುವ ವಿಧಾನ ಹೇಳಿ ಕೊಟ್ಟಿದ್ದರು. ತುಂಬ ಸುಲಭದ ವಿಧಾನವಿದು. ಪುಸ್ತಕದಲ್ಲಿ ಬರೆದಿಟ್ಟಿದ್ದೆ. ಪುಸ್ತಕ ಹುಡುಕಿ ಈ ಬಾರಿಯ ಮಳೆಗಾಲದಲ್ಲಿ ಮಾಡಿ ನಿತ್ಯ ಬಳಸುತ್ತಿದ್ದೇನೆ.

ಅಚ್ಚ ಬಿಳಿಯ ಸ್ವಚ್ಛ ನಂದಿಬಟ್ಟಲಹೂವನ್ನು ಕನಿಷ್ಠ ಒಂದು ಬೊಗಸೆಯಷ್ಟು ಆಯ್ದುಕೊಳ್ಳಿರಿ. ಅರೆಯಲು ಸ್ವಚ್ಛ ಮಿಕ್ಸಿಯನ್ನು ಬಳಸಿರಿ. ಒಂದೆರಡು ನಿಮಿಷದಲ್ಲಿ ಅದು ಬಿಳಿಯ ಮುದ್ದೆಯಾಗಿಬಿಡುತ್ತದೆ. ಅದನ್ನು ಒತ್ತಿ ರಸ ಹಿಂಡಿಕೊಳ್ಳಿರಿ. ಹಸನಾದ ಹತ್ತಿಯ ಬಟ್ಟೆಯನ್ನು ಆ ರಸದಲ್ಲಿ ಅದ್ದಿರಿ. ನೆರಳಲ್ಲಿ ಎರಡು ದಿನ ಒಣಗಿಸಿಕೊಳ್ಳಿರಿ. ಅನಂತರದ ಉಪಚಾರ ಇನ್ನೂ ಸರಳ. ಕಂಚಿನ ಪುಟ್ಟ ಹಣತೆ ಇದ್ದರೆ ಒಳಿತು. ಮಣ್ಣಿನದಾದರೂ ಸೈ. ಅದರ ತುಂಬ ಹರಳೆಣ್ಣೆ ಅಥವಾ ತುಪ್ಪ ಸುರಿಯಿರಿ. ಒಣಗಿದ ಹತ್ತಿಯ ಬಟ್ಟೆಯನ್ನು ಬತ್ತಿಯಾಕಾರದಲ್ಲಿ ಹೊಸೆದುಕೊಳ್ಳಿರಿ. ದೀಪ ಹಚ್ಚಿ ಬಿಡಿರಿ. ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ತಟ್ಟೆ ಬೋರಲು ಹಾಕಬೇಕು. ದೀಪ ಉರಿಯುವಲ್ಲಿ ಗಾಳಿಯ ರಭಸ ಕಡಿಮೆ ಇದ್ದರೆ ಒಳಿತು. ಎಳೆಯ ಮಕ್ಕಳು, ಬಟ್ಟೆ ಬರೆಯ ರಾಶಿ ನಡುವೆ ಅಂತಹ ದೀಪ ಉರಿಸದಿರಿ. ದೀಪ ಪೂರ್ಣ ಉರಿಯುವ ತನಕ ಎಚ್ಚರದಿಂದಿರಿ. ನಂದಿ ಬಟ್ಟಲ ಹೂವಿನ ರಸವನ್ನು ತಟ್ಟೆಗೆ ಸಹ ಕೊಂಚ ಲೇಪನ ಮಾಡಿದರೆ ಲೇಸು. ಉರಿಯುವ ದೀಪದ ಕರಿಯ ಮಸಿ ತಟ್ಟೆ ತುಂಬ ಹರಡಿಕೊಳ್ಳುತ್ತದೆ. ನಾಜೂಕಾಗಿ ಅದನ್ನು ಗಾಜಿನ ಅಥವಾ ಬೆಳ್ಳಿಯ ಪುಟ್ಟ ಭರಣಿಯಲ್ಲಿ ತುಂಬಿಡಿರಿ. ಪ್ಲಾಸ್ಟಿಕ್ ಡಬ್ಬ ಬೇಡ. ವರ್ಷಗಟ್ಟಲೆ ಕೆಡದ ಕಾಡಿಗೆ ಇದು. ಒಂದು ಮಾತು ನೆನಪಿಡಿ. ಬಿಳಿಯ ಹೂವನ್ನು ಕರಿಯ ಕಾಡಿಗೆಯಾಗಿ ಪರಿವರ್ತಿಸುವ ಸಂದರ್ಭ. ಬಿಳಿಯ ಗುಡ್ಡೆಯ ನಡುವಣ ಕರಿಯ ಕಣ್ಣು ಪಾಪೆಯ ಆರೋಗ್ಯದಾಯಿ ಕಾಡಿಗೆ ಇದು. ವಸ್ತುವಿನ ರೂಪಾಂತರದ ಪ್ರಕ್ರಿಯೆಯಲ್ಲಿ ದೊರಕುವ ಅಂತಿಮ ಫಲ ಅಂದರೆ ಕಾಡಿಗೆ ಪ್ರಮಾಣ ಮಾತ್ರ ಬಹಳ ಕಡಿಮೆ. ಇಂತಹ ಭೌತಿಕ ಪರಿವರ್ತನೆಯ ಅದ್ಭುತ ಸಂಗತಿಗಳನ್ನು ಅದೆಂತು ನಮ್ಮ ಪೂರ್ವಿಕರು ಕಂಡು ಹುಡುಕಿದರೋ ಅಚ್ಚರಿಯಾಗುತ್ತದೆ. ಇಂತಹ ಕಾಡಿಗೆಯನ್ನು ಅಂದಕ್ಕಾಗಿ ಮಾತ್ರ ಹಚ್ಚಿಕೊಳ್ಳುವುದಲ್ಲ. ಈ ಕಾಡಿಗೆಯ ಅಪರಿಮಿತ ಗುಣಪ್ರಶಂಸೆಯ ಬಗ್ಗೆ ತಿಳಿದುಕೊಳ್ಳೋಣವೆ?

ADVERTISEMENT

ಮೂರು ಸಹಸ್ರ ವರ್ಷಗಳ ಪೂರ್ವದ ಆಯುರ್ವೇದ ಗ್ರಂಥಗಳಲ್ಲಿ ’ತಗರ’ ಎಂಬ ಸುಂದರ ಹೂಗಿಡದ ಬಣ್ಣನೆ ಇದೆ. ಆದರೆ ಅದು ಹಿಮಾಲಯ ಕಣಿವೆಯ ಸಸ್ಯ. ಅತಿ ಕೊಯಿಲಿನ ದೆಸೆಯಿಂದ ಇಂದು ಈ ತಗರ ಎಂಬ ಪೊದರು ಸಸ್ಯ ಸರ್ವನಾಶಗೊಂಡಿದೆ. ಆದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಕೂಡ ಎಂಟು ನೂರು ವರ್ಷಗಳ ಹಿಂದೆಯೆ ನಮ್ಮ ಪೂರ್ವಿಕರು ಕಂಡುಕೊಂಡರು. 'ತಗರಮೆನೆ ನಂದ್ಯಾವರ್ತಂ' ಎಂಬ ಅಚ್ಚಗನ್ನಡದ ಉಲ್ಲೇಖವು ಇದೆ. ‘ಶಬ್ದಮಣಿದರ್ಪಣ’ದ ಕೇಶಿರಾಜನ ಕಾಲದಲ್ಲಿ ಇಂತಹ ಪ್ರಸಿದ್ಧ ಪಡೆದ ಸಸ್ಯ ನಮ್ಮ ನೆರೆಯ ನಂದಿ ಬಟ್ಟಲು. ನೆರೆ ನಾಡಿನ ತೆಲುಗರು ಇಂದಿಗೂ ಈ ಹೂವನ್ನು ನಂದ್ಯಾವಟ್ಟಂ ಎಂದೇ ಕರೆಯುವರು. ಕೆಲವೆಡೆ ತಗರ ಪದದ ಬಳಕೆ ಇದೆ. ಅಂತಹ ತಗರವು ಕೆಮ್ಮು, ದಮ್ಮು, ಮೂರ್ಛೆರೋಗ, ನರದೌರ್ಬಲ್ಯ, ನೋವು ಮತ್ತು ತ್ರಿದೋಷಶಾಮಕ. ನೇತ್ರವ್ಯಾಧಿಗಳನ್ನು ತಡೆಯುವ ಹಾಗೂ ಗುಣ ಪಡಿಸುವ ಬಗ್ಗೆಯೂ ಆಯುರ್ವೇದಗ್ರಂಥಗಳಲ್ಲಿ ಉಲ್ಲೇಖವಿದೆ. ಇಂತಹ ಗ್ರಾಂಥಿಕ ಮಾಹಿತಿಯು ಸೊರಬದ ಮೀನಾಕ್ಷಮ್ಮನಂತಹ ಗ್ರಾಮೀಣ ಮಹಿಳೆಗೆ ತಿಳಿದುದಷ್ಟೆ ಅಲ್ಲ; ಅವರು ಬಳಸುತ್ತಿದ್ದುದು ನಮ್ಮ ಸೌಭಾಗ್ಯ.

ದೇಹದ ನಂಜು, ಅಂದರೆ ವಿಷ ಕಳೆಯುವ ಅದ್ಭುತ ಸಸ್ಯ ‘ನಂಜು(ದಿ) ಬಟ್ಟಲು’ ಎನ್ನುತ್ತದೆ ‘ಭಾವಪ್ರಕಾಶ’ ಎಂಬ ಆಯುರ್ವೇದ ನಿಘಂಟು. ಅಂತಹ ವಿಷಾಂಶಗಳು ದೇಹದಲ್ಲಿ ಯದ್ವಾತದ್ವಾ ಏರಿದರೆ ಅರ್ಬುದದಂತಹ ರೋಗ ಉಂಟಾಗುತ್ತದೆ. ಮಡಗಾಸ್ಕರ್ ಪೆರಿವಿಂಕಲ್ ಎಂಬ ‘ನಿತ್ಯಪುಷ್ಪಿ’ ಎಂದರೆ ‘ಕಾಶಿಕಣಗಿಲೆ’ಯ ಕ್ಯಾನ್ಸರ್ ಗುಣಕಾರಿ ಶಕ್ತಿ ಜಗತ್ತಿಗೆ ಇಂದು ತಿಳಿದಿದೆ. ಅದರ ಸೋದರ ಸಸ್ಯವೇ ಈ ನಂದಿಬಟ್ಟಲು ಎನ್ನುತ್ತದೆ ಆಧುನಿಕ ಸಸ್ಯಶಾಸ್ತ್ರ. ವೈದ್ಯಕೀಯ ಔಷಧಶಾಸ್ತ್ರದಲ್ಲಿ ಮದ್ದುಗಳನ್ನು ದೇಹಕ್ಕೆ ರವಾನಿಸುವ ದಾರಿಗಳಲ್ಲಿ ಸಬ್ ಕಂಜಕ್ಟೈವಲ್, ಅರ್ಥಾತ್ ಕಣ್ಣುಗುಡ್ಡೆಯ ಮೂಲಕವೂ ರವಾನಿಸುವ ವಿಧಾನವು ಪರಿಗಣಿತ. ಎಲ್ಲವನ್ನೂ ಮಾತ್ರೆ, ಚುಚ್ಚುಮದ್ದು ಅಥವಾ ಡ್ರಿಪ್ಸ್ ಮೂಲಕವೇ ರವಾನಿಸಬೇಕೆಂದಿಲ್ಲ. ಅಂತಹ ಮಾರ್ಗಗಳ ಪೈಕಿ ಒಂದು ಕಾಡಿಗೆ ಹಚ್ಚುವ ವಿಧಾನ. ಈ ಮಾರ್ಗದ ಮೂಲಕ ನಂದಿಬಟ್ಟಲಿನ ಉಪಕಾರಿ ರಾಸಾಯನಿಕಗಳು ಬಹಳ ಸೂಕ್ಷ್ಮ ಅಂದರೆ ನ್ಯಾನೋ ಕಣಗಳೋಪಾದಿ ಕಣ್ಣುಗುಡ್ಡೆಯನ್ನು ಸೇರುವವು. ಅಲ್ಲಿಂದ ಹತ್ತಿರದ ಮೆದುಳಿಗೆ ರವಾನಿತವಾಗುತ್ತದೆ. ನಂದಿಬಟ್ಟಲನ್ನು ಮೂರ್ಛೆರೋಗ ಪರಿಹಾರಿ ಎಂದು ಗ್ರಂಥಗಳು ಬಣ್ಣಿಸಿವೆ. ಏಕೆಂದರೆ ಮೂರ್ಛೆರೋಗವೂ ಸಹ ಮೆದುಳಿನ ತಾತ್ಕಾಲಿಕ ಮರೆವಿನ ಸ್ಥಿತಿ. ಅದನ್ನು ‘ಅಪಸ್ಮಾರ’ ಎಂದಿವೆ ಆಯುರ್ವೇದ ಸಂಹಿತೆಗಳು. ಗಿಡಮೂಲಿಕೆಗಳನ್ನು ಬಳಸಿ ಅದನ್ನು ತಡೆಯುವ, ವಿಷ ಕಳೆಯುವ ಹಾದಿಯನ್ನು ಸಂಹಿತೆಗಳು ಹುಡುಕಿದವು. ಆಗಿನವರು ಅವನ್ನು ಬಳಸಿ ಫಲಶ್ರುತಿಯನ್ನೂ ಕಂಡರು.

ಇಷ್ಟೊಂದು ಸಂಗತಿಗಳನ್ನು ಕಾಡಿಗೆ ಸಸ್ಯ ನಂದಿಬಟ್ಟಲಿನ ಬಗ್ಗೆ ತಿಳಿದಾಯಿತು. ಇದು ಕಾಡಿನ ಸಸ್ಯ ಅಲ್ಲ; ಅಪ್ಪಟ ನಾಡಿನ ಸಸ್ಯ. ನರ್ಸರಿಗಳಲ್ಲಿ ಸಸಿಗಳು ಲಭ್ಯ. ಸಿಂಗಲ್ ಪೆಟಲ್, ಅಂದರೆ ಒಂದೇ ದಳದ ಸಾಲಿನ ಹೂ ಬಿಡುವವು ಲಭ್ಯ. ಮಲ್ಟಿ ಪೆಟಲ್, ಎಂದರೆ ಬಹುದಳದ ಗುಚ್ಛರೂಪೀ ಹೂ ಬಿಡುವ ನಂದಿಬಟ್ಟಲು ಪ್ರಕಾರ ಸಹ ಲಭ್ಯ. ಎರಡರ ಹೂ ಬಳಕೆ ಸಾಧು. ಇಂತಹ ಕಾಡಿಗೆಯನ್ನು ನೀವೂ ಮಾಡಬಹುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.