ADVERTISEMENT

ಮಹಿಳೆ | ಆ ದಿನಗಳಲ್ಲಿ ಬೇಕು ವಿರಾಮ..

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 14:35 IST
Last Updated 11 ಆಗಸ್ಟ್ 2020, 14:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತಿಂಗಳ ಆ ಮೂರು ದಿನಗಳೆಂದರೆ ಮಹಿಳೆಯರಿಗೆ ಅದೇನೊ ಹೇಳಿಕೊಳ್ಳಲಾಗದ ಸಂಕಟ. ಮುಟ್ಟಿನ ದಿನಗಳಲ್ಲಿ ರಕ್ತಸ್ರಾವದ ಜೊತೆಗೆ ಕಿಬ್ಬೊಟ್ಟೆಯ ನೋವು, ಸುಸ್ತು, ಸ್ನಾಯುಗಳಲ್ಲಿನ ಸೆಳೆತ, ಮಾನಸಿಕ ಕಿರಿಕಿರಿಯಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಈ ಸಮಯದಲ್ಲಿ ಉದ್ಯೋಗಸ್ಥ ಮಹಿಳೆಯರ ಪಾಡು ಇನ್ನೂ ಕಷ್ಟ. ಪ್ಯಾಡ್ ಬದಲಿಸುವ ಸಲುವಾಗಿ ಪದೇ ಪದೇ ಬಾತ್‌ರೂಮ್‌ಗೆ ಓಡುವ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುತ್ತಾರೆ.

ಮುಟ್ಟಿನ ಕಿರಿಕಿರಿ ತಪ್ಪಿಸುವ ಸಲುವಾಗಿ ಹೆಣ್ಣುಮಕ್ಕಳಿಗೆ ಈ ದಿನಗಳಲ್ಲಿ ರಜೆ ನೀಡಬೇಕು ಎಂಬ ವಾದ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.ಇದಕ್ಕೆ ಪರ–ವಿರೋಧ ಚರ್ಚೆಗಳೂ ಹುಟ್ಟಿಕೊಂಡಿದ್ದವು. ಜಪಾನ್‌, ತೈವಾನ್, ದಕ್ಷಿಣ ಕೊರಿಯಾ, ಚೀನಾ ಮುಂತಾದ ದೇಶಗಳಲ್ಲಿ ಮುಟ್ಟಿನ ರಜೆ ನೀಡಲು ಸರ್ಕಾರವೇ ಕಾನೂನು ಹೊರಡಿಸಿದೆ.

ಭಾರತದಲ್ಲೂ ಕಲ್ಚರ್‌ ಮೆಷಿನ್‌ ಸೇರಿದಂತೆ ಒಂದೆರಡು ಕಂಪನಿಗಳು, ಬಿಹಾರ ಸರ್ಕಾರ ತನ್ನ ಉದ್ಯೋಗಿಗಳಿಗೆ ಈಗಾಗಲೇ ಮುಟ್ಟಿನ ದಿನಗಳಲ್ಲಿ ರಜೆ ನೀಡುವ ಮೂಲಕ ಹೆಣ್ಣುಮಕ್ಕಳ ಕಷ್ಟಕ್ಕೆ ದನಿಯಾಗಿವೆ. ಈಗ ಅವರೊಂದಿಗೆ ಕೈ ಜೋಡಿಸಿದೆ ದೇಶದ ಪುಡ್ ಡೆಲಿವರಿ ಸಂಸ್ಥೆ ‘ಜೊಮ್ಯಾಟೊ’.

ADVERTISEMENT

ಆಹಾರ ಡೆಲಿವರಿ ನೀಡುವಲ್ಲಿ ಅಗ್ರಸ್ಥಾನ ಪಡೆದಿರುವ ಜೊಮ್ಯಾಟೊ ಸಂಸ್ಥೆ ಮುಟ್ಟಿನ ದಿನಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ರಜೆ ನೀಡುವುದಾಗಿ ಘೋಷಿಸಿದೆ. ತಮ್ಮ ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ವರ್ಷದಲ್ಲಿ 10 ದಿನ ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಇದರಿಂದ ದೇಶದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಆ ಮೂಲಕ ಮಹಿಳಾ ಉದ್ಯೋಗಿಗಳಲ್ಲಿ ಭರವಸೆ ಮೂಡುವಂತೆ ಮಾಡಿದೆ.

ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಜೊಮ್ಯಾಟೊ ಸಂಸ್ಥೆ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ‘ಮುಟ್ಟಿನ ರಜೆ ಪಡೆಯಲು ನಾಚಿಕೆ ಪಡಬೇಕಾಗಿಲ್ಲ. ತಂಡದ ಸಿಬ್ಬಂದಿಗೆ ತಿಳಿಸುವ ಅಥವಾ ಇ–ಮೇಲ್ ಸಂದೇಶ ಕಳುಹಿಸುವ ಮೂಲಕ ರಜೆ ಪಡೆಯಬಹುದು. ಮಹಿಳಾ ಸಿಬ್ಬಂದಿ ಮುಟ್ಟಿನ ರಜೆ ಪಡೆಯುವುದರ ಬಗ್ಗೆ ಇತರ ಸಿಬ್ಬಂದಿ ಕಿರಿಕಿರಿ ಮಾಡಬಾರದು. ಆ ದಿನಗಳಲ್ಲಿ ಹೆಣ್ಣುಮಕ್ಕಳು ತುಂಬಾ ನೋವು ಅನುಭವಿಸುತ್ತಾರೆ.ಸಹಕಾರ ಸಂಸ್ಕೃತಿ ಬಯಸುವ ಜೊಮ್ಯಾಟೊ ಆ ದಿನಗಳಲ್ಲಿ ಹೆಣ್ಣುಮಕ್ಕಳ ಪರ ನಿಲ್ಲುತ್ತದೆ’ ಎಂದಿದ್ದಾರೆ‌.

ಲೈಂಗಿಕಅಲ್ಪಸಂಖ್ಯಾತರು ಕೂಡ ವರ್ಷದ ಈ 10 ದಿನಗಳ ರಜೆಗೆ ಅರ್ಹರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.