
ಪ್ರಾತಿನಿಧಿಕ ಚಿತ್ರ
ಕೋವಿಡ್ ಬಳಿಕ ಈಗ ಭಾರತದಲ್ಲಿ ನಿಫಾ ಸೋಂಕು ಭೀತಿ ಹುಟ್ಟಿಸಿದೆ. ಕೇರಳದಲ್ಲಿ 2025ರಲ್ಲಿ ನಾಲ್ವರಿಗೆ ನಿಫಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು..
ಈಗ ಜನವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸೋಂಕು ಉಲ್ಬಣಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನಿಫಾ ಭೀತಿ ಆವರಿಸಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಥೈಲ್ಯಾಂಡ್, ಮಲೇಷ್ಯಾ, ಸಿಂಗಪುರದಲ್ಲಿ ರೋಗ ನಿರ್ಣಯ ಮತ್ತು ತಪಾಸಣೆ ಕ್ರಮಗಳನ್ನು ಆರಂಭಿಸಲಾಗಿದೆ.
ಏನಿದು ನಿಫಾ ವೈರಸ್?
ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಹೆಂಡ್ರಾ ವೈರಸ್‌ನಂತೆಯೇ, ನಿಫಾ ಕೂಡ ಹೆನಿಪಾವೈರಸ್‌ಗಳ ವರ್ಗಕ್ಕೆ ಸೇರಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದೆ. 1998ರಲ್ಲಿ ಈ ವೈರಸ್ ಮೊದಲು ಮಲೇಷ್ಯಾದಲ್ಲಿ ಕಾಣಿಸಿಕೊಂಡಿತ್ತು. ಈ ಸೋಂಕು ಮೂರು ರೀತಿಯಲ್ಲಿ ಹರಡುತ್ತದೆ.
ಮೊದಲ ವಿಧಾನ ಎಂದರೆ ಬಾವಲಿಗಳ ಮೂಲಕ. ಸೋಂಕಿತ ಬಾವಲಿಯ ಲಾಲಾರಸ, ಮೂತ್ರ ಅಥವಾ ಮಲದ ಸಂಪರ್ಕದ ಮೂಲಕ ಈ ಸೋಂಕು ಹರಡಬಲ್ಲದು.
ಕಲುಷಿತ ಆಹಾರದ ಮೂಲಕವೂ ನಿಫಾ ಸೋಂಕು ಹರಡುತ್ತದೆ.
ಇನ್ನೊಂದು ವಿಧಾನ ಮನುಷ್ಯರಿಂದ ಮನುಷ್ಯರಿಗೆ. ಸೋಂಕಿತ ವ್ಯಕ್ತಿಯ ಆರೈಕೆ ಸಂದರ್ಭದಲ್ಲಿ ನಿಕಟ ಸಂಪರ್ಕದ ಮೂಲಕ ಮನುಷ್ಯರಿಂದ ನಿಫಾ ಹರಡಿದ ಪ್ರಕರಣವೂ ವರದಿಯಾಗಿದೆ. ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ ಸೋಂಕಿತ ವ್ಯಕ್ತಿಗಳ ಆರೈಕೆ ವೇಳೆ ವೈರಸ್ ಹರಡುವ ಸಾಧ್ಯತೆ ಹೆಚ್ಚು.
ನಿಫಾ ಸೋಂಕಿನ ಲಕ್ಷಣಗಳು
ನಿಫಾ ವೇಗವಾಗಿ ಹರಡುವ ಸೋಂಕಾಗಿದೆ. ನಾಲ್ಕು ದಿನಗಳಿಂದ ಮೂರು ವಾರದ ಅಂತರದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಕೆಲವೊಮ್ಮೆ ಸೋಂಕಿನ ತೀವ್ರತೆ ಹೆಚ್ಚಿದ್ದಾಗ ಮರಣವೂ ಸಂಭವಿಸಬಹುದು.
ನಿಫಾ ವೈರಸ್ ತಾಗಿದರೆ ನ್ಯುಮೋನಿಯಾಕ್ಕೆ ಕಾರಣವಾಗಬಹುದು.
ಜ್ವರ, ಉಸಿರಾಟದಲ್ಲಿ ತೊಂದರೆ, ಪ್ರಜ್ಞೆ ತಪ್ಪುವುದು, ಅತಿಯಾದ ತಲೆನೋವು, ಅಲುಗಾಡಿಸಲು ಸಾಧ್ಯವಾಗದಷ್ಟು ಮೈಕೈನೋವು, ಮಾನಸಿಕ ಬದಲಾವಣೆಯ ಲಕ್ಷಣಗಳನ್ನು ಕಾಣಬಹುದು.
ಲಸಿಕೆಯಿಲ್ಲ; ಆದರೂ, ಆತಂಕ ಬೇಡ
ಸದ್ಯಕ್ಕೆ ನಿಫಾ ಸೋಂಕಿಗೆ ಅಧಿಕೃತ ಲಸಿಕೆ ಲಭ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ m102.4 ಎನ್ನುವ ಲಸಿಕೆ ಸಿದ್ಧವಾಗುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ. ಭಾರತದಲ್ಲಿ ನಿಫಾ ಸೋಂಕು ಹರಡುತ್ತಿರುವುದು ಆತಂಕಕಾರಿಯಾಗಿದೆ. ಅದಕ್ಕೆ ಕಾರಣ ಸೂಕ್ತ ಚಿಕಿತ್ಸೆ ಮತ್ತು ಸೋಂಕು ನಿಯಂತ್ರಣ ಕ್ರಮ ಇಲ್ಲದಿರುವುದು. ಆದರೆ ನಿಫಾ, ಕೋವಿಡ್ ಹರಡಿದ ಪ್ರಮಾಣದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗುವ ಸಾಧ್ಯತೆಯಿಲ್ಲ ಎನ್ನುತ್ತಾರೆ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.