ADVERTISEMENT

ಕೊರೊನಾ ಸಾಂತ್ವನ: ಕೋವಿಡ್ ಪರೀಕ್ಷೆಗೆ ವಿಳಂಬ ಮಾಡಿದಲ್ಲಿ ಸಮಸ್ಯೆ

ಕೊರೊನಾ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 18:41 IST
Last Updated 18 ಏಪ್ರಿಲ್ 2021, 18:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಜ್ವರ, ಕೆಮ್ಮು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲುಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯ ಇನ್ನಷ್ಟು ಹದಗೆಡುವ ಜತೆಗೆ ಅವರಿಂದ ಮತ್ತಷ್ಟು ಮಂದಿಗೆ ವೈರಾಣು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಕೋವಿಡ್ ಲಕ್ಷಣಗಳು ಗೋಚರಿಸಿದರೆ ತಡಮಾಡದೆಯೇ ಪರೀಕ್ಷೆ ಮಾಡಿಸಿಕೊಂಡು, ಅಗತ್ಯ ಆರೈಕೆ ಮಾಡಿಕೊಳ್ಳಬೇಕು.’

ಡಾ. ವಾಸುನೇತ್ರ ಕಾಸರಗೋಡು, ವಿಕ್ರಮ್ ಆಸ್ಪತ್ರೆಯ ಶ್ವಾಸಕೋಶ ತಜ್ಞ

‘ಕೋವಿಡ್ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ಅವಧಿಯಲ್ಲಿ ವೈರಾಣು ವೇಗವಾಗಿ ಹರಡುತ್ತಿದೆ. ಅಲ್ಪಾವಧಿಯಲ್ಲಿಯೇ ಎಲ್ಲೆಡೆ ಸೋಂಕು ವ್ಯಾಪಿಸಿಕೊಳ್ಳುತ್ತಿದೆ. ವೈರಾಣುವಿನ ತೀವ್ರತೆ ಈ ಮೊದಲಿನಂತೆಯೇ ಇದೆ. ಹಾಗಾಗಿ, ಈ ಬಾರಿ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಜ್ವರ, ಮೈಕೈ ನೋವು, ಆಯಾಸ, ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದು, ರುಚಿ ತಿಳಿಯದಿರುವುದು, ಅತಿಸಾರ, ಮೂಗು ಮತ್ತು ಗಂಟಲು ನೋವು, ಉಸಿರಾಟ ಸಮಸ್ಯೆ, ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿ, ಫಲಿತಾಂಶ ಬರುವವರೆಗೂ ಮನೆಯಲ್ಲಿಯೇ ನಿಗಾ ವ್ಯವಸ್ಥೆಗೆ ಒಳಪಡಬೇಕು.’

‘ವೈರಾಣು ದೇಹವನ್ನು ಪ್ರವೇಶಿಸಿದ ಕೂಡಲೇ ಪತ್ತೆ ಮಾಡಿ, ಚಿಕಿತ್ಸೆ ನೀಡಿದಲ್ಲಿ ವ್ಯಕ್ತಿ ಬೇಗ ಚೇತರಿಸಿಕೊಳ್ಳುತ್ತಾನೆ. ಮನೆಯ ಹಿರಿಯ ಸದಸ್ಯರಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವುದನ್ನು ಯುವಜನತೆ ಮರೆಯಬಾರದು. ವೃದ್ಧರಲ್ಲಿರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿತರಾದಲ್ಲಿ ಅಸ್ವಸ್ಥರಾಗುವ ಸಾಧ್ಯತೆ ಇರಲಿದೆ. ಹಾಗಾಗಿ, ಅಂತಹವರು ಅನಿವಾರ್ಯತೆ ಇದ್ದಲ್ಲಿ ಮಾತ್ರ ಅಗತ್ಯ ಸುರಕ್ಷತೆಯೊಂದಿಗೆ ಹೊರಗಡೆ ಹೋಗಬೇಕು. ಸದ್ಯ ಪಡೆಯುತ್ತಿರುವ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸಬೇಕು.’

ADVERTISEMENT

‘ಈ ಸಂದರ್ಭದಲ್ಲಿ ನಮ್ಮ ಆಹಾರ ಕ್ರಮ ಹಾಗೂ ಜೀವನ ವಿಧಾನವನ್ನು ಬದಲಾಯಿಸಿಕೊಳ್ಳಬೇಕು. ಹಣ್ಣು, ತರಕಾರಿ, ಮೊಟ್ಟೆ ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ವ್ಯಾಯಾಮ, ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅರ್ಹ ಫಲಾನುಭವಿಗಳು ಆದಷ್ಟು ಬೇಗ ಲಸಿಕೆಯನ್ನು ಪಡೆದುಕೊಳ್ಳಬೇಕು. ಇದು ದೇಹದಲ್ಲಿ ಪ್ರತಿಕಾಯಗಳನ್ನು ವೃದ್ಧಿಸಲು ಸಹಾಕಾರಿಯಾಗಲಿದೆ. ಮುಖಗವಸು ಧರಿಸುವುದನ್ನು ಮತ್ತು ಅಂತರ ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.