ADVERTISEMENT

ಸೊಂಪಾದ ಕೂದಲಿಗೆ ಆಲಿವ್‌ ಎಣ್ಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 19:30 IST
Last Updated 26 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆರೋಗ್ಯಕರ ಅಡುಗೆ ಎಣ್ಣೆ ಆಲಿವ್‌ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟು, ಕೂದಲು ಉದುರುವುದು ಮುಂತಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದು ಕೇಶರಾಶಿಯನ್ನು ಬಲಗೊಳಿಸುತ್ತದೆ. ಅಲ್ಲದೇ ಹೊಳೆಯುವಂತೆ ಮಾಡುತ್ತದೆ. ಪೌಷ್ಟಿಕಾಂಶಗಳನ್ನು ಹೊಂದಿರುವ ಆಲಿವ್ ಎಣ್ಣೆ ಕೂದಲ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಹಲವು ಮಂದಿ ಇದನ್ನು ಬಳಸುತ್ತಿದ್ದಾರೆ. ಹಾಗಾದರೆ ಕೂದಲಿಗೆ ಆಲಿವ್ ಎಣ್ಣೆ ಬಳಸುವುದರಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳಿವೆ ತಿಳಿಯೋಣ.

* ತಲೆಹೊಟ್ಟಿನ ಸಮಸ್ಯೆ ಹಾಗೂ ಅಕಾಲಿಕ ನೆರೆಗೂದಲನ್ನು ತಡೆಯುತ್ತದೆ

ಒಣಗಿದ ನೆತ್ತಿಯ ಭಾಗ ತಲೆಹೊಟ್ಟಿಗೆ ಮುಖ್ಯ ಕಾರಣ. ಆಲಿವ್‌ ಎಣ್ಣೆಯನ್ನು ನೆತ್ತಿಯ ಭಾಗಕ್ಕೆ ಹಚ್ಚುವುದರಿಂದ ಕೂದಲಿಗೆ ಪೋಷಣೆ ನೀಡುವುದಲ್ಲದೇ ನೆತ್ತಿಯ ಭಾಗವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಈ ಎಣ್ಣೆಯನ್ನು ಕೂದಲು ಹಾಗೂ ನೆತ್ತಿಗೆ ಬಳಸುವುದರಿಂದ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಬಹುದು. ಅಲ್ಲದೇ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

ADVERTISEMENT

* ಸೂರ್ಯನ ವಿಕಿರಣಗಳಿಂದ ಕೂದಲನ್ನು ಕಾಪಾಡುತ್ತದೆ

ಅತಿಯಾಗಿ ಕೂದಲನ್ನು ಬಿಸಿಲಿಗೆ ಒಡ್ಡುವುದರಿಂದ ಕೂಡ ಕೂದಲು ಅಕಾಲಿಕವಾಗಿ ಬೆಳ್ಳಗಾಗುತ್ತದೆ. ಇದರಿಂದಲೂ ನೆತ್ತಿ ಭಾಗ ಒಣಗುತ್ತದೆ. ಆಲಿವ್‌ ಎಣ್ಣೆ ಹಚ್ಚುವುದರಿಂದ ಕೂದಲು ತೇವಾಂಶದಿಂದ ಕೂಡಿರುತ್ತದೆ. ಅಲ್ಲದೇ ಕೂದಲ ಬುಡದಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡಿರುತ್ತದೆ. ಹೀಗೆ ಆಲಿವ್‌ ಎಣ್ಣೆ ಸೂರ್ಯನ ವಿಕಿರಣದಿಂದ ಕೂದಲನ್ನು ಕಾಪಾಡುತ್ತದೆ.

* ಫಾಲಿಕಲ್ಸ್‌ ಪಿಎಚ್‌ ಮಟ್ಟವನ್ನು ಕಾಪಾಡುತ್ತದೆ

ಕೂದಲು ಬಣ್ಣಗೆಡುವುದನ್ನು ತಪ್ಪಿಸಲು ಫಾಲಿಕಲ್ಸ್‌ ಪಿಎಚ್‌ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಪ್ರತಿದಿನ ಆಲಿವ್ ಎಣ್ಣೆಯನ್ನು ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಮೆಲನಿನ್ ಉತ್ಪಾದನೆ ಹೆಚ್ಚುತ್ತದೆ. ಇದರಿಂದ ಅಕಾಲಿಕ ನೆರೆಗೂದಲು ಬರುವುದಿಲ್ಲ. ಅಲ್ಲದೇ ಸದೃಢವಾಗಿ ಬೆಳೆಯುತ್ತದೆ.

* ಹಾನಿಗೊಳಗಾದ ಕೂದಲನ್ನು ಸದೃಢಗೊಳಿಸುತ್ತದೆ

ಅತಿಯಾದ ರಾಸಾಯನಿಕ ಹಾಗೂ ಡ್ರೈಯರ್‌ನಂತಹ ಉಪಕರಣಗಳ ಬಳಕೆಯಿಂದ ಕೂದಲು ಬಣ್ಣಗೆಟ್ಟು ಹಾಳಾಗಬಹುದು. ಫಾಲಿಕಲ್ಸ್‌ಗೆ ಹಾನಿಯಾದರೆ ಈ ಸಮಸ್ಯೆ ಉಂಟಾಗುತ್ತದೆ. ಆಲಿವ್‌ ಎಣ್ಣೆ ಕೂದಲಿನ ಹಾನಿಯ ವಿರುದ್ಧ ಹೋರಾಡುತ್ತದೆ. ಅಲ್ಲದೆ ಕೂದಲಿಗೆ ಹೊಳಪು ನೀಡಲು ಇದು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.