ADVERTISEMENT

ತುಂಟ ಮಕ್ಕಳ ನಿಯಂತ್ರಣಕ್ಕಿರಲಿ ತಾಳ್ಮೆ

ಮನಸ್ವಿ
Published 18 ನವೆಂಬರ್ 2020, 19:30 IST
Last Updated 18 ನವೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಖಾಸಗಿ ಕಂ‍ಪನಿಯಲ್ಲಿ ಅಕೌಂಟೆಂಟ್ ಆಗಿರುವ ವಂದನಾ ಹಗಲಿಡೀ ಕೆಲಸದಲ್ಲಿ ಬ್ಯುಸಿ. ಒಮ್ಮೆ ಸಂಜೆಯಾಗಲಿ ಮನೆ ಸೇರಿ ರೆಸ್ಟ್ ಮಾಡುತ್ತೇನೆ ಎಂಬ ಭಾವನೆಯೊಂದಿಗೆ ಮನೆಗೆ ಬಂದರೆ ಒಳಗೆ ಕಾಲಿಡುತ್ತಲೇ ಕೋಪ ನೆತ್ತಿಗೇರುತ್ತದೆ. ಅದಕ್ಕೆ ಕಾರಣ ಅವಳ ಮುದ್ದು ಮಕ್ಕಳ ತುಂಟಾಟ. ಮನೆಯೊಳಗೇ ಇರುವ ಮಕ್ಕಳು ಮನೆಯಿಡೀ ಗೊಂಬೆ, ಆಟದ ಸಾಮಾನು ಹರಡಿರುತ್ತಾರೆ. ಗೋಡೆ, ಬಟ್ಟೆಗಳಿಗೆಲ್ಲಾ ಬಣ್ಣ ಬಳಿದಿರುತ್ತಾರೆ. ಸುಸ್ತಾಗಿ ಮನೆಗೆ ಬರುವ ವಂದನಾ ಕೋಪ ಮಾಡಿಕೊಳ್ಳಬಾರದು ಎಂದುಕೊಂಡರೂಸಾಧ್ಯವಾಗುವುದಿಲ್ಲ. ತಕ್ಷಣಕ್ಕೆ ಸಿಕ್ಕ ವಸ್ತುವಿನಿಂದ ಮಕ್ಕಳಿಗೆ ಹೊಡೆಯುತ್ತಾಳೆ. ಸಿಟ್ಟು ಇಳಿದ ಸ್ವಲ್ಪ ಹೊತ್ತಿಗೆ ಮಕ್ಕಳ ಮೇಲೆ ಬೇಸರವಾಗಿ ಸಂಕಟಪಡುತ್ತಾಳೆ.

ಇದು ಹೊರಗೆ ದುಡಿಯಲು ಹೋಗುವ ಹಲವು ತಾಯಂದಿರ ಕಥೆ. ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಗದ ಕಾರಣ ಅಮ್ಮಂದಿರು ಕೋಪ, ಹತಾಶೆ ಮತ್ತು ಕೆಲವೊಮ್ಮೆ ತಪ್ಪಿತಸ್ಥ ಭಾವನೆ ಅನುಭವಿಸುತ್ತಾರೆ.

‘ತಾಯಂದಿರ ಇಂತಹ ವರ್ತನೆಗೆ ಆತಂಕ, ಕಿರಿಕಿರಿ, ತಪ್ಪಿತಸ್ಥ ಭಾವನೆ, ಮನಸ್ಸಿನಲ್ಲಿನ ತಲ್ಲಣ, ಸ್ವ–ಕಾಳಜಿಯ ಬಗೆಗಿನ ನಿರ್ಲಕ್ಷ್ಯ, ಮಕ್ಕಳನ್ನು ನಿಭಾಯಿಸಲು ಸರಿಯಾದ ತಂತ್ರಗಳನ್ನು ರೂಪಿಸದೇ ಇರುವುದು ಕಾರಣ. ಮಕ್ಕಳಿಗೆ ಹೊಡೆಯುವುದು, ಬಯ್ಯುವುದು ಮಾಡಿದ ಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ ಕೆಲವೊಂದು ತಂತ್ರಗಳಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬಹುದು’ ಎನ್ನುತ್ತಾರೆ ಆಪ್ತಸಮಾಲೋಚಕಿ ಪಲ್ಲವಿ ಭಟ್‌.

ADVERTISEMENT

ಶಾಂತವಾಗಿರಿ: ಮಕ್ಕಳ ತುಂಟತನ ನೋಡಿ ತಕ್ಷಣಕ್ಕೆ ನಿಯಂತ್ರಣ ಕಳೆದುಕೊಂಡು ಹೊಡೆಯುವುದು, ಬಡಿಯವುದು ಮಾಡಬಾರದು. ಸ್ವಲ್ಪ ಹೊತ್ತು ತಾಳ್ಮೆ ತೆಗೆದುಕೊಂಡು ಪರಿಸ್ಥಿತಿ ಗಮನಿಸಬೇಕು. ಶಾಂತ ಮನೋಭಾವದೊಂದಿಗೆ ಮಕ್ಕಳೊಂದಿಗೆ ಮಾತನಾಡಬೇಕು. ಅಲ್ಲದೇ ಮಕ್ಕಳು ಮಾಡಿದ ರಂಪಾಟದಿಂದ ನಿಮಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ವಿವರಿಸಬೇಕು.

ಸಂವಹನ ನಡೆಸಿ: ಮನೆಯೊಳಗೆ ಬಂದ ಕೂಡಲೇ ಕೋಪ ಮಾಡಿಕೊಳ್ಳುವುದಕ್ಕಿಂತ ಮಕ್ಕಳ ಮೇಲೆ ಅನುಭೂತಿ ತೋರಬೇಕು. ಬೆಳಿಗ್ಗೆಯಿಂದ ತಾನಿಲ್ಲದೇ ಮಕ್ಕಳು ಮನೆಯಲ್ಲಿದ್ದರೂ, ಅವರು ತಾನೇ ಮನೆಯೊಳಗೇ ಇದ್ದು ಏನು ಮಾಡಲು ಸಾಧ್ಯ ಎಂದು ಯೋಚಿಸಬೇಕು.

ಮಕ್ಕಳೊಂದಿಗೆ ಸೇರಿ ಮನೆ ಸ್ವಚ್ಛ ಮಾಡಿ: ಮನೆಯಿಡೀ ಗಲೀಜಾಗಿದೆ ಎಂದು ಗೊಣಗುತ್ತಾ ಕೂರುವ ಬದಲು ಮಕ್ಕಳನ್ನೂ ಸೇರಿಸಿಕೊಂಡು ಮನೆ ಸ್ವಚ್ಛ ಮಾಡಬೇಕು. ಮೊದಲಿನಂತೆ ಮನೆಯೊಳಗಿನ ಸಾಮಗ್ರಿಗಳನ್ನು ಜೋಡಿಸಬೇಕು. ಇದರಿಂದ ಮಕ್ಕಳೂ ಕೆಲಸ ಕಲಿತಂತಾಗುತ್ತದೆ. ಸ್ವಚ್ಛತೆಯ ಕೆಲಸ ಬೇಗ ಮುಗಿದು ತಾಯಿಗೂ ವಿರಾಮ ಸಿಗುತ್ತದೆ.

ಮಕ್ಕಳ ತುಂಟತನ ನಿಭಾಯಿಸಲು ಕೆಲವೊಂದು ಮಾರ್ಗಗಳನ್ನು ಅನುಸರಿಸಬಹುದು.

ಮಕ್ಕಳನ್ನು ದೂಷಿಸಬೇಡಿ: ‘ನಿನ್ನಿಂದ ನನಗೆ ತುಂಬಾನೇ ಬೇಸರವಾಗಿದೆ ಅಥವಾ ನಿನ್ನ ಈ ವರ್ತನೆಯಿಂದ ನಾನು ಬೇಸತ್ತು ಹೋಗಿದ್ದೇನೆ’ ಎಂಬ ಮಾತು ಮಗುವಿನ ಮನಸ್ಸಿಗೆ ನೋವುಂಟು ಮಾಡಬಹುದು. ಅದರ ಬದಲು ‘ನೋಡು ಮನೆಯಿಡೀ ಗಲೀಜು ಮಾಡಿದ್ದರಿಂದ ಅಮ್ಮನಿಗೆ ಎಷ್ಟು ಕಷ್ಟವಾಯ್ತು, ಅಲ್ಲದೇ ನೀನೂ ನನ್ನೊಂದಿಗೆ ಸೇರಿ ಮನೆ ಸ್ವಚ್ಛ ಮಾಡಬೇಕಾಯ್ತು’ ಎಂದು ತಿಳಿಸಿ ಹೇಳಬೇಕು ಎನ್ನುತ್ತಾರೆ ಪಲ್ಲವಿ.

ಪ್ರೀತಿ ತೋರಿ: ಮಕ್ಕಳನ್ನು ದೂಷಿಸಿ ದೂರ ಹೋಗಿ ನಿಮ್ಮ ಪಾಡಿಗೆ ಇರಬೇಡಿ. ತಕ್ಷಣಕ್ಕೆ ಮಕ್ಕಳನ್ನು ಅಪ್ಪಿ ಮುದ್ದಾಡಿ. ‘ಅಮ್ಮ ದಣಿದಿದ್ದಾಳೆ. ನಿನಗೆ ಹೊಡೆದಿದ್ದಕ್ಕೆ ಕ್ಷಮೆ ಇರಲಿ ಕಂದಾ’ ಎಂದು ಮಕ್ಕಳ ಬಳಿ ನಮ್ರತೆಯಿಂದ ಮಾತನಾಡಿ.

ವರ್ತನೆಯ ಕಾರಣ ತಿಳಿಯಿರಿ: ಮಕ್ಕಳು ಯಾವ ಕಾರಣಕ್ಕೆ ಮನೆಯಿಡೀ ರಂಪ ಮಾಡಿದ್ದರು. ಅವರು ಬೆಳಿಗ್ಗೆಯಿಂದ ಹಸಿದುಕೊಂಡಿದ್ದು ಹೀಗೆ ಮಾಡಿದ್ದಾರಾ? ಅವರಿಗೆ ಮನೆಯಲ್ಲಿ ತಾಯಿ ಇಲ್ಲದೇ ಮನಸ್ಸಿಗೆ ಒತ್ತಡವಾಗಿತ್ತಾ ಎಂಬುದನ್ನೆಲ್ಲಾ ಯೋಚಿಸಿ. ಆಗ ಮಕ್ಕಳ ಮೇಲೆ ಋಣಾತ್ಮಕ ಭಾವನೆ ಮೂಡುವುದಿಲ್ಲ. ಕೋಪವು ಕಡಿಮೆ ಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.