ಮೇಡಂ 2018ರಲ್ಲಿ ಮಗು ಆಯ್ತು. ಋತುಚಕ್ರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ ಹೋದ ತಿಂಗಳು ಮಾತ್ರ ಒಂದೇ ತಿಂಗಳಲ್ಲಿ ಎರಡು ಸಲ ಋತುಚಕ್ರವಾಗಿದೆ. ಮತ್ತೆ ಮಕ್ಕಳು ಆಗಲಿಲ್ಲ ದಯವಿಟ್ಟು ಸಲಹೆಕೊಡಿ?
ಅನುಶ್ರೀ, ಧಾರವಾಡ
ಸಾಮಾನ್ಯವಾಗಿ ತಿಂಗಳಲ್ಲಿ ಎರಡು ಬಾರಿ ಋತುಚಕ್ರವಾಗುವುದು ಅಂಡಾಶಯದಲ್ಲೇನಾದರೂ ನೀರುಗುಳ್ಳೆಗಳಾದಲ್ಲಿ(ಸಿಸ್ಟ್) ಅಥವಾ ಗರ್ಭಕೋಶಕ್ಕೆ ಸೋಂಕುಂಟಾದ ಸಂದರ್ಭಗಳಲ್ಲಿ ನೀವು ಯಾವುದಕ್ಕೂ ತಜ್ಞ ವೈದ್ಯರ ಹತ್ತಿರ ಕೂಲಂಕಶವಾಗಿ ಪರೀಕ್ಷಿಸಿಕೊಳ್ಳಿ. ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರು ಪರೀಕ್ಷಿಸಿ ಅವಶ್ಯವಿದ್ದಲ್ಲಿ ಸೂಕ್ತ ಆ್ಯಂಟಿಬಯೋಟಿಕ್ ಬರೆದುಕೊಡುತ್ತಾರೆ. ನೀವು ಇನ್ನೊಂದು ಮಗು ಪಡೆಯಲು ಪ್ರಯತ್ನಿಸುತ್ತಿದ್ದರೆ ಗರ್ಭಧಾರಣೆಗೆ ಆರುವಾರ ಮೊದಲೇ ಫೋಲಿಕ್ ಆ್ಯಸಿಡ್‌ನ ಐದು ಮಿಲಿ ಗ್ರಾಂ ಮಾತ್ರೆಗಳನ್ನು ಪ್ರತಿದಿನವೂ ಸೇವಿಸಿ. ನಿಮಗೆ ಖಂಡಿತ ಇನ್ನೊಂದು ಮಗು ಬೇಗನೆ ಆಗಲಿ.
ನನಗೆ ಈಗ 32ವರ್ಷ. 20ವರ್ಷದ ಹುಡುಗಿಯನ್ನು ಮದುವೆ ಆದರೆ ಹುಡುಗಿಗೆ ಮಕ್ಕಳಾಗುವ ಸಂಭವ ಕಡಿಮೆ ಆಗುತ್ತದೆಯೇ ಅಥವಾ ಅವಳಿಗೆ ಏನಾದರು ತೊಂದರೆ ಆಗಬಹುದಾ ಮುಂದೆ.
ಹೆಸರು, ಊರುಬೇಡ
ನಿಮಗಿಬ್ಬರಿಗೂ ಹನ್ನೆರಡು ವರ್ಷ ವಯಸ್ಸಿನ ಅಂತರವಿದ್ದರೂ ಮಕ್ಕಳಾಗುವುದಕ್ಕೆ ಯಾವುದೇ ತೊಂದರೆ ಇಲ್ಲ. ಸಹಜವಾಗಿ ಆರೋಗ್ಯವಂತ ಪುರುಷರಲ್ಲಿ (ವಯಸ್ಸಿಗೆ ತಕ್ಕ ಸಮತೂಕ ಹೊಂದಿದ್ದು ಯಾವುದೇ ದುಶ್ಚಟ ಹೊಂದಿಲ್ಲದಿದ್ದಲ್ಲಿ) ಸಂತಾನೋತ್ಪತ್ತಿ ಸಾಮರ್ಥ್ಯ 40ರಿಂದ50 ವರ್ಷಗಳವರೆಗೂ ಉತ್ತಮವಾಗಿರುತ್ತದೆ. ನೀವು ಆ ಬಗ್ಗೆ ಯೋಚಿಸದೇ ಒಂದು ವರ್ಷದವರೆಗೂ ನೀವಿಬ್ಬರೂ ಮಕ್ಕಳನ್ನು ಪಡೆಯಲು ಸಹಜವಾಗಿ ಪ್ರಯತ್ನಿಸಿದಾಗಲೂ ಮಕ್ಕಳಾಗದಿದ್ದಲ್ಲಿ ಖಂಡಿತವಾಗಿಯೂ ತಜ್ಞವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಿ ನಿಮ್ಮಿಬ್ಬರಲ್ಲಿ ಏನೂ ತೊಂದರೆ ಇಲ್ಲದಿದ್ದರೆ ಒಂದು ವರ್ಷದೊಳಗೆ ನಿಮಗೆ ಮಗು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಪತ್ನಿಗೂ ಕೂಡಾ ಮುಂದೆ ತೊಂದರೆಯಾಗುವ ಸಂಭವ ಕಡಿಮೆ.
ಮೇಡಂ ನನಗೆ 25ವರ್ಷ. ಮದುವೆಯಾಗಿ ಒಂದು ವರ್ಷ, ಇನ್ನೂ ಮಕ್ಕಳಿಲ್ಲ. ನನಗೆ ಪ್ರತಿಬಾರಿ ಜನನಾಂಗದ ಭಾಗದಲ್ಲಿ ಹೇರ್‌ರಿಮೂವಿಂಗ್‌ಕ್ರೀಮ್ ಉಪಯೋಗಿಸಿದಾಗ ಒಂದೆರಡು ದಿನ ಉರಿ, ಕಡಿತ ಎಲ್ಲಾ ಆಗುತ್ತದೆ. ಆಗ ನಾನು ಬೆಟ್ನೋವೇಟ್ ಕ್ರೀಮ್ ಹಚ್ಚಿದಾಗ ಸರಿಹೋಗುತ್ತದೆ. ಡಾಕ್ಟರ್ ಹತ್ತಿರ ಹೋಗಲು ಸಂಕೋಚ. ಏನು ಮಾಡಲಿ?
ಹೆಸರುಬೇಡ, ಊರುಬೇಡ
ನಿಮಗೆ ನೀವು ಹಚ್ಚಿರುವ ಕ್ರೀಮ್‌ನಿಂದ ಅಲರ್ಜಿ ಆಗಿರಬಹುದು ಅನಿಸುತ್ತದೆ. ನೀವು ಅಷ್ಟೇನೂ ನಿಯಮಿತವಾಗಿ ಯೋನಿಭಾಗದ ಕೂದಲು ತೆಗೆಯುವ ಅಗತ್ಯವಿಲ್ಲ. ದೇಹದ ಬೇರೆ ಬೇರೆ ಭಾಗದ ಕೂದಲಿನ ಹಾಗೆ ಯೋನಿಯ ಕೂದಲು ಕೂಡಾ ಧೂಳು, ಬೆವರುಗಳನ್ನೆಲ್ಲ ಹಿಡಿದಿಟ್ಟು, ಲೈಂಗಿಕ ಸೋಂಕನ್ನೂ ಮೂತ್ರದ ಸೋಂಕನ್ನೂ ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಈ ಭಾಗದ ಕೂದಲು ಶರೀರದ ಬೇರೆ ಭಾಗಕ್ಕಿಂತ ಹೆಚ್ಚು ವಾಸನೆ ಹೊಂದಿರಬಹುದು. ಅದಕ್ಕಾಗಿ ನೀವು ಆ ಜಾಗವನ್ನು ಸ್ವಚ್ಛವಾಗಿ ನೀರಿನಿಂದ ನಿಯಮಿತವಾಗಿ ತೊಳೆಯುತ್ತಿದ್ದರೆ ಸಾಕು. ಅಷ್ಟೇ ಹೊರತು ವೈದ್ಯಕೀಯ ಕಾರಣಕ್ಕಾಗಿ, ಸ್ವಚ್ಛತೆಯ ಕಾರಣಕ್ಕಾಗಿ ಕೂದಲನ್ನು ತೆಗೆಯಬೇಕೆಂದೇನಿಲ್ಲ. ಜನಸಾಮಾನ್ಯರಲ್ಲಿ ಅವರದ್ದೇ ಆದ ಕಾರಣಕ್ಕಾಗಿ, ಲೈಂಗಿಕವಾಗಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂಬ ಭಾವನೆಯಿಂದ ಅಥವಾ ಹಾಗೆ ಮಾಡಿದರೆ ನೈರ್ಮಲ್ಯತೆಯ ಭಾವನೆ ಉಂಟಾಗಬಹುದು ಎನ್ನುವುದಕ್ಕಾಗಿ ಕೂದಲು ತೆಗೆಯಬೇಕೆ ಹೊರತು ವೈದ್ಯಕೀಯ ಕಾರಣಕ್ಕಲ್ಲ. ಅದಕ್ಕಾಗಿಯೇ ಮೀಸಲಾದ ಒಳ್ಳೆಯ ಕತ್ತರಿ ಅಥವಾ ಟ್ರಿಮ್ಮರ್‌ನಿಂದ ಸ್ವಚ್ಛಗೊಳಿಸುವುದು ಉತ್ತಮ ವಿಧಾನ. ಶೇವಿಂಗ್ ಕ್ರೀಮ್, ರೇಜರ್ ಇತ್ಯಾದಿ ಬಳಸುವ ಅವಶ್ಯಕತೆ ಇಲ್ಲ.
ನನಗೆ 32ವರ್ಷ. 5ವರ್ಷದ ಮಗಳಿದ್ದಾಳೆ. ನನಗೆ ಸಹಜ ಹೆರಿಗೆಯಾಗಿದೆ. ಕಳೆದ 2ವರ್ಷಗಳಿಂದ ಪಿಸಿಓಡಿ ಸಮಸ್ಯೆಯಿಂದ ತುಂಬಾ ದಪ್ಪ ಆಗಿದ್ದೇನೆ. ನಾನು ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಸೂಕ್ತ ಸಲಹೆ ನೀಡಿ ಮೇಡಂ?
ಶೃತಿ, ಶಿರಾ
ಉತ್ತರ: ಶೃತಿಯವರೇ ನೀವು ಮೊದಲು ನಿಮ್ಮ ಏರಿದ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಇದಕ್ಕೆ ನೀವು ಸಾಕಷ್ಟು ಆಹಾರಕ್ರಮದಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಈ ಬಗ್ಗೆ ಹಿಂದಿನ ಅಂಕಣಗಳಲ್ಲಿ ಸಾಕಷ್ಟು ಬಾರಿ ನಾನು ತಿಳಿಸಿರುತ್ತೇನೆ. ನೀವು ನಿಮ್ಮ ಎತ್ತರವನ್ನು ಸೆಂ.ಮೀನಲ್ಲಿ ಅಳೆದು ಅದರಲ್ಲಿ 105ನ್ನು ಕಳೆದರೆ ನೀವಿರಬೇಕಾದ ತೂಕ ಅದರಿಂದ ತಿಳಿಯುತ್ತದೆ. ಸಮತೂಕ ಹೊಂದಲು ಪ್ರಯತ್ನಿಸಿ. ಹಿತಮಿತವಾದ ಹೆಚ್ಚು ಪ್ರೋಟಿನ್ ಹಾಗೂ ಕಡಿಮೆ ಕ್ಯಾಲೋರಿ ಕೊಡುವ ಆಹಾರ ಸೇವನೆ ಅತಿಮುಖ್ಯ ಹಾಗೂ ಸ್ಥಳೀಯವಾಗಿ ಹಾಗೂ ಋತುಗನುಣವಾಗಿ ಸಿಗುವ ಹಣ್ಣು, ತರಕಾರಿಗಳನ್ನು ಹೇರಳವಾಗಿ ಸೇವಿಸಿ. 6ರಿಂದ 8ತಾಸು ಪ್ರತಿರಾತ್ರಿ ನಿದ್ರೆ, ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ (ವಾಕಿಂಗೆ, ಸ್ವಿಮ್ಮಿಂಗ್, ಎರೋಬಿಕ್ಸ್, ಡ್ಯಾನ್ಸಿಂಗ್, ಯೋಗ ಇತ್ಯಾದಿ) ಪ್ರತಿದಿನ ಒಂದುಗಂಟೆಯಾದರೂ ನಡೆಸಲೇಬೇಕು. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಆದಷ್ಟು ಬೇಗನೆ ಇನ್ನೊಂದು ಮಗುವನ್ನು ಪಡೆಯಲು ಪ್ರಯತ್ನಿಸಿ.
-----------------------------
ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
ಡಾ. ವೀಣಾ ಎಸ್. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.