ADVERTISEMENT

ಸ್ಪಂದನ | ಕುಳ್ಳಗಿದ್ದವರಿಗೆ ಸಿಸೇರಿಯನ್‌ ಹೆರಿಗೆ ಖಚಿತವಂತೆ, ಹೌದಾ?

ಡಾ.ವೀಣಾ ಎಸ್‌ ಭಟ್ಟ‌
Published 28 ಅಕ್ಟೋಬರ್ 2022, 19:30 IST
Last Updated 28 ಅಕ್ಟೋಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನನಗೆ 28 ವರ್ಷ. ನಾನೀಗ ಏಳು ತಿಂಗಳು ಗರ್ಭಿಣಿ. ನಿಯಮಿತ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೇನೆ. 4 ಅಡಿ, 11 ಇಂಚು ಇದ್ದೇನೆ. ನನ್ನ ಅಕ್ಕಪಕ್ಕದವರು ಸ್ನೇಹಿತರು, ಎಲ್ಲರೂ ನೀನು ಕುಳ್ಳಗಿದ್ದೀಯ, ಗ್ಯಾರೆಂಟಿ ಸಿಸೇರಿಯನ್ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಖಚಿತವೇ? ನನಗೆ ಭಯವಾಗುತ್ತಿದೆ. ನಾನು ಯಾವಾಗಲೂ ಈ ಆತಂಕದಲ್ಲಿ ಇರುತ್ತೇನೆ ಏನು ಮಾಡಲಿ?
–ಜಯಲಕ್ಷ್ಮಿ, ಊರು ತಿಳಿಸಿಲ್ಲ.

ಉತ್ತರ: ಜಯಲಕ್ಷ್ಮಿಅವರೇ ನೀವು ಸಿಸೇರಿಯನ್ ಬಗ್ಗೆ ಅನಗತ್ಯ ಭಯಪಡುವುದರಿಂದ ನಿಮಗೇ ನಷ್ಟ. ಗಿಡ್ಡವಿದ್ದವರಿಗೆಲ್ಲಾ ಸಿಸೇರಿಯನ್ ಹೆರಿಗೆ, ಉದ್ದವಿರುವವರಿಗೆ ಸಹಜ ಹೆರಿಗೆ ಎನ್ನುವ ನಿಯಮವೇನೂ ಇಲ್ಲ.ಸಿಸೇರಿಯನ್ ಹೆರಿಗೆ ಎಂಬುದು, ಸಹಜ ಹೆರಿಗೆಯಿಂದ ತಾಯ, ಮಗುವಿಗೆ ತೊಡಕಾಗಬಹುದು ಎಂಬ ಸೂಚನೆ ಸಿಕ್ಕಾಗ ಮಾಡುವಂತಹ ಅತಿಸಾಮಾನ್ಯ ಶಸ್ತ್ರಚಿಕಿತ್ಸೆ. ಈ ಪ್ರಕ್ರಿಯೆಯಲ್ಲಿ ತಜ್ಞರು ತಾಯಿಗೆ ಅರಿವಳಿಕೆಕೊಟ್ಟು, ವೈದ್ಯರು ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ, ಸೋಂಕುರಹಿತ ವಾತಾವರಣದಲ್ಲಿ ಆಧುನಿಕ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ತಾಯಿ ಹಾಗೂ ಮಗುವನ್ನು ಅತ್ಯಂತ ಸುರಕ್ಷಿತವಾ ಗಿಡಲು ಎಲ್ಲ ವೈದ್ಯರು ಸೂಕ್ತ ಪ್ರಯತ್ನ ನಡೆಸುತ್ತಾರೆ.

ಮೊದಲನೆಯದಾಗಿ ನಿಮಗೆ ಸಿಸೇರಿಯನ್ ಹೆರಿಗೆಯೇ ಆಗುತ್ತದೆ, ಏನೋ ತೊಂದರೆ ಆಗುತ್ತದೆ ಎಂಬ ಭಯ, ಆತಂಕವನ್ನು ತಲೆಯಿಂದ ತೆಗೆದುಹಾಕಿ. ನೀವೀಗ ತಜ್ಞವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೀರಿ. ಅವರೇ ಈ ಬಗ್ಗೆ ನಿಮಗೆ ಸಲಹೆ ಸೂಚನೆ ನೀಡುತ್ತಾರೆ.

ADVERTISEMENT

ಗರ್ಭಿಣಿಯ ಎತ್ತರ 4 ಅಡಿ 11 ಇಂಚಿಗಿಂತಲೂ ಕಡಿಮೆ ಇದ್ದಾಗ ಅವಳ ಕಟಿರಭಾಗವೂ (ಪೆಲ್ವಿಸ್) ಸಂಕುಚಿತವಾಗಿರುವ ಸಾಧ್ಯತೆ ಹೆಚ್ಚೆನ್ನಬಹುದಷ್ಟೇ. ಆದರೆ ಕೆಲವೊಮ್ಮೆ ಮಗುವಿನ ಗಾತ್ರ ಚಿಕ್ಕದಿದ್ದು ಕಟಿರ ಭಾಗದ ಅಳತೆಗಳು ಸರಿಯಾಗಿದ್ದರೆ ಸಹಜ ಹೆರಿಗೆ ಆಗಬಾರದು ಎಂಬ ನಿಯಮವೇನೂ ಇಲ್ಲ. ಕೆಲವೊಮ್ಮೆ 5 ಅಡಿ 6 ಇಂಚಿಂಗಿಂತ ಎತ್ತರವಿದ್ದ ಎಷ್ಟೋ ಗರ್ಭಿಣಿಯರಿಗೆ ತುರ್ತು ಸ್ಥಿತಿಯಲ್ಲಿ ಸಿಸೇರಿಯನ್ ಹೆರಿಗೆ ಆಗಬಹುದು.

ಪೂರ್ವಯೋಜಿತವಾಗಿ ಸಿಸೇರಿಯನ್ ಆಗಬಹುದಾದ ಸಂದರ್ಭಗಳು ಕೆಲವಿವೆ. ಅಂದರೆ, ಗರ್ಭಿಣಿ ಕುಳ್ಳಗಿದ್ದು- 145 ಸೆಂ.ಮೀಗಿಂತ ಕಡಿಮೆ ಉದ್ದವಿದ್ದು, ಜೊತೆಗೆ ಕಟಿರ ಭಾಗವೂ ಸಂಕುಚಿತಗೊಂಡಿದ್ದರೆ, ಮಗು ತುಂಬಾ ದೊಡ್ಡದಾಗಿಬೆಳೆದು ಕಟಿರ ಭಾಗವನ್ನು ಸಹಜವಾಗಿ ದಾಟಲು ಸಾಧ್ಯವಾಗದೇ ಇದ್ದಾಗ, ಗರ್ಭದಲ್ಲಿ ಮಗು ಅಡ್ಡವಾಗಿದ್ದರೆ, ಕಸ/ಮಾಸು ಕೆಳಗಿದ್ದರೆ ಮೊದಲ ಹೆರಿಗೆ ಕಷ್ಟವಾಗಿ ಮಗು ಸತ್ತು ಹೆರಿಗೆಯಾಗಿದ್ದರೆ– ಇಂಥ ಕೆಲವುಸಂದರ್ಭಗಳಲ್ಲಿ ಮಾತ್ರ ಯೋಜಿತ ಸಿಸೇರಿಯನ್ ಹೆರಿಗೆ ಬಗ್ಗೆ ತಜ್ಞವೈದ್ಯರು ಸಂಬಂಧ ಪಟ್ಟವರಿಗೆ ತಿಳಿಸುತ್ತಾರೆ.

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ತುರ್ತುಚಿಕಿತ್ಸೆಯಾಗಿ ಸಿಸೇರಿಯನ್ ಹೆರಿಗೆ ಮಾಡಬೇಕಾಗುತ್ತದೆ. ಇದನ್ನು ಮೊದಲೇ ಹೇಳಲು ಸಾಧ್ಯವಾಗುವುದಿಲ್ಲ. ಹೆರಿಗೆ ನೋವು ಆರಂಭವಾದ ಮೇಲೆ ತಾಯಿಮಗು ತುಂಬಾ ಸುಸ್ತಾದಾಗ, ಹೆರಿಗೆ ನೋವು ಚೆನ್ನಾಗಿದ್ದರೂ ಗರ್ಭಕಂಠ ಸರ್ಮಪಕವಾಗಿ ತೆಗೆದುಕೊಳ್ಳದಿದ್ದರೆ, ಹೆರಿಗೆ ವೇಳೆ ಹೊಕ್ಕಳಬಳ್ಳಿ ಮೊದಲೇ ಜಾರಿ ಹೊರಬಂದರೆ, ಹೆರಿಗೆಗೂ ಮುನ್ನ ಕಸ/ಮಾಸು ಬಿಚ್ಚಿಕೊಂಡರೆ.. ಹೀಗೆ ಸಮಯ ಸಂದರ್ಭಗಳನ್ನು ನೋಡಿ ವೈದ್ಯರು ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡುತ್ತಾರೆ.

ಹಾಗಾಗಿ ನೀವಷ್ಟೇ ಅಲ್ಲ, ಯಾರೇ ಗರ್ಭಿಣಿಯರಾಗಲಿ ಹೆರಿಗೆಗೂ ಮುನ್ನವೇ ನನಗೆ ಸಿಸೇರಿಯನ್ ಹೆರಿಗೆಯೇಗತಿ ಎಂಬ ಭಯಕ್ಕೊಳಗಾಗಬೇಡಿ. ಬದಲಿಗೆ, ನನಗೆ ಸಹಜ ಹೆರಿಗೆಯೇ ಆಗಬಹುದು ಎಂಬ ಸಕಾರಾತ್ಮಕ ಭಾವನೆಯಿಂದ ಧೈರ್ಯವಾಗಿರಿ. ಜೊತೆಗೆ ನಿಮ್ಮ ತಜ್ಞವೈದ್ಯರ ಸಲಹೆಗಳನ್ನು ಕಾಲ ಕಾಲಕ್ಕೆ ಸರಿಯಾಗಿ ಪಾಲಿಸಿ. ಹೀಗೆ ಮಾಡಿದರೆ,ಹೆಚ್ಚಿನವರಿಗೆ ಸಹಜ ಹೆರಿಗೆಯೇ ಆಗುತ್ತದೆ. ಕೇವಲ ನೀವು ಕುಳ್ಳರಿದ್ದೀರೆಂಬ ಕಾರಣಕ್ಕೆ ಭಯಪಡಬೇಡಿ. ಧೈರ್ಯದಿಂದಿರಿ.

2. ನನಗೆ 38 ವರ್ಷ. ಕಳೆದ ಕೆಲವು ತಿಂಗಳಿಂದ ನನಗೆ ಮುಟ್ಟಾದಾಗ ಒಂದೆರಡು ದಿನ ಮಾತ್ರ ಬಹಳ ಕಡಿಮೆ ರಕ್ತಸ್ರಾವವಾಗುತ್ತಿದೆ. ನನ್ನ ತೂಕವೂ ಏರುತ್ತಿದೆ. ಶರೀರವೇ ಒಂದು ರೀತಿ ಭಾರ ಅನಿಸುತ್ತಿದೆ. ಸದ್ಯಕ್ಕೆ ಎಲ್ಲೂ ಚಿಕಿತ್ಸೆ ಪಡೆಯುತ್ತಿಲ್ಲ. ಪರಿಹಾರ ನೀಡಿ.

–ಲಲಿತಾ, ಚಿತ್ರದುರ್ಗ

ಉತ್ತರ: ಲಲಿತಾ ಅವರೇ, ಕೆಲವೊಮ್ಮೆ ಥೈರಾಯಿಡ್‌ ಗ್ರಂಥಿಯ ಸ್ರಾವದ ಏರುಪೇರು ಆದಾಗ, ಹೀಗೆ ಮುಟ್ಟಿನ ಸಮಯದಲ್ಲಿ ಕಡಿಮೆ ರಕ್ತಸ್ರಾವವಾಗುವುದು, ತೂಕ ಏರಿಕೆಯಾಗುವುದು, ಶರೀರಭಾರ ಎನಿಸುವಂತೆ ಆಗುವ ಸಾಧ್ಯತೆಗಳಿವೆ. ಮಕ್ಕಳಾಗದ ಹಾಗೆ ಯಾವುದಾದರೂ ಹಾರ್ಮೋನು ಮಾತ್ರೆಗಳನ್ನು ಅಥವಾ ಇಂಜೆಕ್ಷನ್‌ಗಳನ್ನು ಅಥವಾ ಇಂಪ್ಲಾಂಟ್ ಅಳವಡಿಸಿಕೊಂಡಿದ್ದರೆ, ಅದರಿಂದಲೂ ಈ ರೀತಿಯಾಗಿ ಕಡಿಮೆ ಮುಟ್ಟಾಗುವ ಸಾಧ್ಯತೆ ಇದೆ. ಇಂಥ ವಿಷಯಗಳ ಬಗ್ಗೆ ನೀವುಮಾಹಿತಿ ನೀಡಿಲ್ಲ. ಮತ್ತೊಂದು ಅಂಶವೆಂದರೆ; ಅತಿಯಾಗಿ ಉದ್ವೇಗ, ಭಯ ಇದ್ದಾಗ, ದೈನಂದಿನ ಚಟುವಟಿಕೆ ಅತಿಕಡಿಮೆಯಾದಾಗಲೂ ಈ ರೀತಿ ಕಡಿಮೆ ರಕ್ತಸ್ರಾವವಾಗಬಹುದು. ಹಾಗಾಗಿ ನೀವು ಹತ್ತಿರದ ತಜ್ಞವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮನ್ನು ಪರೀಕ್ಷಿಸಿ ಅವಶ್ಯವಿದ್ದಲ್ಲಿ ಥೈರಾಯಿಡ್ ಪರೀಕ್ಷೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ಸೇರಿಂದತೆ ಹಲವು ಪರೀಕ್ಷೆಗಳನ್ನು ಮಾಡಿಸಲು ಸೂಚಿಸಬಹುದು. ಒಂದು ನೆನಪಿಡಿ; ನಿಮ್ಮ ವಯಸ್ಸಿಗೆ ತಕ್ಕ ಹಾಗೆ ಸಮತೂಕ ಹೊಂದುವುದು ಬಹಳಮುಖ್ಯ.

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.