ADVERTISEMENT

PV Web Exclusive | ಚಳಿಗಾಲ: ಗರ್ಭಿಣಿಯರಿಗೆ ಕಿವಿಮಾತು

ಸುಶೀಲಾ ಡೋಣೂರ
Published 16 ಡಿಸೆಂಬರ್ 2020, 8:15 IST
Last Updated 16 ಡಿಸೆಂಬರ್ 2020, 8:15 IST
ಮನೆಯಲ್ಲೇ ಇರಿ, ಬೆಚ್ಚಗಿರಿ, ಬಿಸಿ ಬಿಸಿ ಖಾದ್ಯ ಸೇವಿಸಿ, ಜನಸಂದಣೆಯಿಂದ ದೂರವಿರಿ...
ಮನೆಯಲ್ಲೇ ಇರಿ, ಬೆಚ್ಚಗಿರಿ, ಬಿಸಿ ಬಿಸಿ ಖಾದ್ಯ ಸೇವಿಸಿ, ಜನಸಂದಣೆಯಿಂದ ದೂರವಿರಿ...   

ಕೊರೊನಾ ಮತ್ತು ಚಳಿಗಾಲ ಈ ಅವಧಿ ಗರ್ಭಿಣಿಯರಿಗೆ ಹೆಚ್ಚು ಸವಾಲಿನಿಂದ ಕೂಡಿದೆ. ಈ ಅವಧಿಯಲ್ಲಿ ಗರ್ಭಿಣಿಯರು ಅನುಸರಿಸಬೇಕಿರುವ ಕೆಲವು ಸುರಕ್ಷಾ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ...

ಕೊರೊನಾ ಪ್ರಕರಣಗಳು ಇಳಿಮುಖವಾದಂತೆ ಕಂಡರೂ ಚಳಿಗಾಲ ಎನ್ನುವ ಕಾರಣಕ್ಕೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದ್ದು ಅತಿಮುಖ್ಯ. ಅದರಲ್ಲೂ ಗರ್ಭಿಣಿಯರು ಹೆಚ್ಚು ಸುರಕ್ಷಾ ನಿಯಮಗಳನ್ನು ಅನುಸರಿಸಬೇಕು. ಕೋವಿಡ್‌–19 ಗರ್ಭಿಣಿಗೆ ಮಾತ್ರವಲ್ಲದೆ, ಗರ್ಭದಲ್ಲಿರುವ ಶಿಶುವಿಗೂ ಸಹ ಅಪಾಯವನ್ನುಂಟು ಮಾಡಬಹುದು.

ಕೋವಿಡ್‌-19 ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುವ ರೋಗ ಎನ್ನುವುದು ಗೊತ್ತೇ ಇದೆ. ಹಾಗೆಯೇ ಶ್ವಾಸಕೋಶಗಳಿಗೆ ಸಂಬಂಧಿಸಿದ ಸೋಂಕುಗಳು ಹೆಚ್ಚಾಗುವುದು ಚಳಿಗಾಲದಲ್ಲಿಯೇ ಎನ್ನುವುದು ಸಹ ಎಲ್ಲರಿಗೂ ತಿಳಿದ ವಿಚಾರ. ಈ ಅವಧಿಯಲ್ಲಿ ಕೊರೊನಾ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಶುಷ್ಕ ಹವೆ ಮತ್ತು ತಂಪಾದ ವಾತಾವರಣದಲ್ಲಿ ಕೊರೊನಾ ವೈರಾಣು ದೀರ್ಘಕಾಲದವರೆಗೆ ಬದುಕುಳಿಯಬಲ್ಲವು. ಈ ಕಾರಣಕ್ಕೆ ಕೋವಿಡ್‌–19ನ 2ನೇ ಅಲೆಯ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ಚಳಿಗಾಲವನ್ನು ಅತ್ಯಂತ ಎಚ್ಚರಿಕೆಯಿಂದ ಕಳೆಯಬೇಕು. ಗರ್ಭಿಣಿಯರಿಗಂತೂ ಈ ಎರಡು ತಿಂಗಳು ಅತ್ಯಂತ ಮಹತ್ವದ ಕಾಲಘಟ್ಟ ಎಂದೇ ಹೇಳಬಹುದು.

ADVERTISEMENT

ಈ ಅವಧಿಯಲ್ಲಿ ಗರ್ಭಿಣಿಯರು ಅನುಸರಿಸಬೇಕಿರುವ ಕೆಲವು ಸುರಕ್ಷಾ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ ಸ್ತ್ರೀರೋಗ ತಜ್ಞೆ ಡಾ. ಟೀನಾ ಥಾಮಸ್‌.

‘ಮನೆಯಲ್ಲೇ ಇರಿ, ಬೆಚ್ಚಗಿರಿ, ಬಿಸಿ ಬಿಸಿ ಖಾದ್ಯ ಸೇವಿಸಿ, ಬಿಸಿ ಬಿಸಿ ನೀರು–ಕಷಾಯ ಸೇವಿಸಿ, ಜನಸಂದಣೆಯಿಂದ ದೂರವಿರಿ’ ಎನ್ನುವುದು ಅವರು ಹೇಳುವ ಪಂಚಸೂತ್ರಗಳು.

‘ಈ ಚಳಿಗಾಲದಲ್ಲಿ ಗರ್ಭಿಣಿಯರು ಸುರಕ್ಷಿತವಾಗಿರುವ ಮೊದಲ ಹೆಜ್ಜೆ ಎಂದರೆ ಮನೆಯಲ್ಲೇ ಇರುವುದು, ಬಿಸಿಬಿಸಿ ಆಹಾರ–ಪಾನೀಯ ಸೇವಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು. ಅನಿವಾರ್ಯ ಸಂದರ್ಭದಲ್ಲಿ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.ಮಾಸ್ಕನ್ನು ಸೂಕ್ತವಾಗಿ ಬಳಸುವುದೂ ಸಹ ಅಷ್ಟೇ ಮುಖ್ಯ. ಮಾಸ್ಕ್‌ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚುವಂತಿರಬೇಕು, ಮಾಸ್ಕ್‌ನ ಹಿಂಭಾಗ ಮತ್ತು ಮುಂಭಾಗವನ್ನು ಮುಟ್ಟಬಾರದು. ಹೊರಗೆ ಹೋಗಿ ಬಂದ ಕೂಡಲೇ ಉಟ್ಟ ಬಟ್ಟೆಯನ್ನು ನೀರಿಗೆ ಹಾಕಿ, ಸ್ನಾನ ಮಾಡುವುದು, ದಿನಕ್ಕೆ ಹಲವು ಬಾರಿ ಕೈತೊಳೆಯುವುದು ಬಹಳ ಮುಖ್ಯ. ಇದೆಲ್ಲ ಗೊತ್ತೇ ಇದ್ದರೂ ಇತ್ತೀಚೆಗೆ ಈ ಕ್ರಮಗಳನ್ನು ಕೈಬಿಡುತ್ತಿದ್ದೇವೆ. ಆದರೆ ಗರ್ಭಿಣಿಯರು ಇಂತಹ ನಿರ್ಲಕ್ಷ್ಯ ವಹಿಸುವುದು ಸಲ್ಲ.’ ಎನ್ನುತ್ತಾರೆ ಅವರು.

ಗರ್ಭಿಣಿಯರು ಮತ್ತು ಬಾಣಂತಿಯರು ಈ ಚಳಿಗಾಲವನ್ನು ಸುರಕ್ಷಿತವಾಗಿ ಮತ್ತು ಆರಾಮಾಗಿ ಕಳೆಯುವಂತೆ ಸಹಾಯ ಮಾಡಲು ಡಾ. ಟೀನಾ ಥಾಮಸ್‌ ಅವರು ಹೇಳುವ ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ:

ಹೆಚ್ಚು ನೀರು ಕುಡಿಯಿರಿ

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಹಾಗೆಂದು ಕಡಿಮೆ ನೀರು ಕುಡಿಯಬೇಡಿ. ಬಾಯಾರಿಕೆಯಾಗದಿದ್ದರೂ ಆಗಾಗ್ಗೆ ನೀರು ಕುಡಿಯುತ್ತಿರಿ. ನಿರ್ಜಲೀಕರಣವು ತಾಯಿ ಮತ್ತು ಮಗುವಿಗೆ ಬಹಳ ಅಪಾಯಕಾರಿ. ಇದು ವಿವಿಧ ಸೋಂಕುಗಳಿಗೆ ಕಾರಣವಾಗಬಹುದು ಮತ್ತು ಎದೆಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು.

ಫ್ಲೂ ಶಾಟ್ ಪಡೆಯಿರಿ

ಶೀತಜ್ವರ (ಇನ್ ಫ್ಲುಯೆಂಜ) ತಡೆಯಲು ಫ್ಲೂ ಶಾಟ್ (ಫ್ಲೂ ಲಸಿಕೆ) ಹಾಕಿಸಿಕೊಳ್ಳುವಂತೆ ಗರ್ಭಿಣಿಯರಿಗೆ ಸೂಚಿಸಲಾಗುತ್ತದೆ. ಚಳಿಗಾಲದಲ್ಲಿ ರೋಗನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುವುದರಿಂದ ಈ ಲಸಿಕೆ ನಿಮ್ಮನ್ನು ಮತ್ತು ಗರ್ಭದಲ್ಲಿರುವ ಶಿಶುವನ್ನು ಸಂಭಾವ್ಯ ಕಾಯಿಲೆಗಳಿಂದ ರಕ್ಷಿಸಬಲ್ಲದು.

ಮನೆಯೊಳಗೇ ಇರಿ

ಅನಗತ್ಯವಾಗಿ ಹೊರಗೆ ಓಡಾಡಬೇಡಿ. ನೀವು ಉದ್ಯೋಗಸ್ಥ ಮಹಿಳೆಯಾಗಿದ್ದರೆ ಮನೆಯಿಂದಲೇ ಕಾರ್ಯನಿರ್ವಹಿಸಲು ಪ್ರಯತ್ನಿಸಿ. ಏಕೆಂದರೆ ಗರ್ಭಿಣಿಯರ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಅವರು ಹವಾಮಾನ ವೈಪರಿತ್ಯಗಳಿಗೆ ಮತ್ತುಸೂಕ್ಷ್ಮಾಣುಜೀವಿಗಳಿಗೆ ಒಡ್ಡಿಕೊಳ್ಳುವುದು ಅಪಾಯಕಾರಿ.

ನಿಯಮಿತ ವ್ಯಾಯಾಮ

ಹವಾಮಾನ ತಣ್ಣಗಿರುವಾಗ ಗರ್ಭಿಣಿಯರಿಗೆ ಹೊರಾಂಗಣ ವ್ಯಾಯಾಮವನ್ನು ಶೀಫಾರಸ್ಸು ಮಾಡಲಾಗದು. ಆದರೆ ಕೆಲವು ಒಳಾಂಗಣ ವ್ಯಾಯಾಮಗಳು ಗರ್ಭಿಣಿಯರನ್ನು ಆರೋಗ್ಯಕರವಾಗಿಡಬಲ್ಲದು. ಯೋಗ ಸಹ ಉತ್ತಮ ಮಾರ್ಗ. ಹಾಗೆಯೇ ಉಸಿರಾಟದ ವ್ಯಾಯಾಮಗಳು ಸಹ ಗರ್ಭಾವಸ್ಥೆಯನ್ನು ಸುಗಮಗೊಳಿಸುತ್ತವೆ.

ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಿ

ಶ್ವಾಸಕೋಶ ಸಂಬಂಧಿತ ಸೋಂಕುಗಳು ಹೆಚ್ಚಲು ಮತ್ತೊಂದು ಮುಖ್ಯ ಕಾರಣ,ಸೂರ್ಯನ ಕಿರಣಗಳಿಗೆ ದೇಹ ಹೆಚ್ಚು ಒಡ್ಡಿಕೊಳ್ಳದೇ ಇರುವುದು. ದೇಹದಲ್ಲಿ ವಿಟಮಿನ್ ‘ಡಿ’ ಮಟ್ಟ ಇಳಿದಾಗ ರೋಗನಿರೋಧಕ ಶಕ್ತಿ ಕುಗ್ಗುತ್ತದೆ.ಹೀಗಾಗಿ ಮುಂಜಾನೆಯ ತೆಳು ಬಿಸಿಲಿನಲ್ಲಿ ಅರ್ಧ ಗಂಟೆ ಕುಳಿತುಕೊಳ್ಳುವುದು ಒಳಿತು.

ಸೊಗಸಾದಉಡುಗೆ

ಗರ್ಭಿಣಿಯರು ಸೊಗಸಾದ ಮತ್ತು ಆರಾಮದಾಯಕ ಉಡುಗೆಧರಿಸುವುದೂ ಸಹ ಅಷ್ಟೇ ಮುಖ್ಯ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಮತ್ತು ಆರಾಮದಾಯಕ ಅನುಭವ ನೀಡುವ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬೆಚ್ಚಗಿನ ಅನುಭವ ನೀಡುವ ಕಾರ್ಡಿಜನ್,ಬಟನ್ಡ್ ಶರ್ಟ್ ಮತ್ತು ಸ್ವೆಟರ್‌, ಟ್ಯಾಂಕ್ ಟಾಪ್ ಅಥವಾ ಟಿ ಶರ್ಟ್‌ಗಳನ್ನು ಧರಿಸಬಹುದು. 

ಮಾಯಿಶ್ಚರೈಸರ್ ಬಳಸಿ

ಚಳಿಗಾಲದಲ್ಲಿ ಚರ್ಮ ಒರಟಾಗುತ್ತದೆ ಮತ್ತು ಶುಷ್ಕವಾಗುತ್ತದೆ. ಇದರಿಂದಾಗಿ ಚರ್ಮ ಒಡೆಯುವುದು, ಕೆರೆಯುವುದು ಹೆಚ್ಚು. ಅಲ್ಲದೆ, ಗರ್ಭಧಾರಣೆ ಸಹಚರ್ಮದ ಶುಷ್ಕತೆಗೆಕಾರಣವಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಅತಿಯಾದ ಬಿಸಿನೀರಿನ ಸ್ನಾನಮಾಡುವುದನ್ನು ತಪ್ಪಿಸಿ. ಉಗುರು ಬಿಸಿ ನೀರು ಸಾಕು. ಸ್ನಾನವಾದ ತಕ್ಷಣವೇ ಸೂಕ್ತ ಮಾಯಿಶ್ಚರೈರ್‌ ಹಚ್ಚಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.