ADVERTISEMENT

ವಿವಾಹಪೂರ್ವ ಲೈಂಗಿಕ ಸಂಪರ್ಕ ಸರಿಯೇ?

ನಡಹಳ್ಳಿ ವಂಸತ್‌
Published 18 ಅಕ್ಟೋಬರ್ 2020, 20:00 IST
Last Updated 18 ಅಕ್ಟೋಬರ್ 2020, 20:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

*ವಯಸ್ಸು 22, ನನಗೆ 47ವರ್ಷದ ಮಹಿಳೆಯ ಜೊತೆ ಸಂಬಂಧವಿದೆ. ಇದರ ಬಗೆಗೆ ನಾನು ಯಾರಿಗೂ ಹೇಳಲು ಇಷ್ಟಪಡುವುದಿಲ್ಲ. ಇದರಿಂದ ಮುಂದೆ ಮದುವೆಗೆ ತೊಂದರೆಯಾಗುತ್ತದೆಯೇ?

ಹೆಸರು, ಊರು ಇಲ್ಲ.

-ಮದುವೆಯಾದ ಮೇಲೆ ಈ ಗುಟ್ಟನ್ನು ಉಳಿಸಿಕೊಂಡು ಬದುಕಲು ನಿರ್ಧರಿಸಿದ್ದೀರಲ್ಲವೇ? ಪತ್ನಿಯ ಎದುರು ಜೀವನವಿಡೀ ಮುಖವಾಡ ಹಾಕಿಕೊಂಡು ಬದುಕುವುದಾದರೆ ನೀವು ಅವರ ನಂಬಿಕೆಯ ಸಂಗಾತಿ ಹೇಗಾಗಬಲ್ಲಿರಿ? ಅವಳು ನಿಮ್ಮ ಮನದನ್ನೆ ಹೇಗಾದಾಳು? ಪತ್ನಿಗೂ ಇಂತಹ ಗುಟ್ಟುಗಳಿದ್ದರೆ ಅದಕ್ಕೆ ನಿಮ್ಮ ಒಪ್ಪಿಗೆಯೇ? ಮದುವೆಯಾದ ಮೇಲೆ ಪತಿಪತ್ನಿಯರು ಲೈಂಗಿಕತೆಯ ಹೊಸಲೋಕದಲ್ಲಿ ಒಟ್ಟಾಗಿ ಪುಳಕಗೊಳ್ಳುತ್ತಾ ಆತ್ಮೀಯರಾಗುತ್ತಾ ಹೋದಾಗ ಗಟ್ಟಿಯಾದ ಬಂಧ ಸೃಷ್ಟಿಯಾಗುತ್ತದೆ. ಲೈಂಗಿಕತೆಯಲ್ಲಿ ಅನುಭವ ಪಡೆದು ಬಹಳ ಮುಂದೆ ಹೋಗಿರುವ ನಿಮಗೆ ಇನ್ನೂ ಪ್ರಾಥಮಿಕ ಪಾಠಗಳನ್ನು ಕಲಿಯುತ್ತಿರುವ ಪತ್ನಿಯೊಡನೆ ಸೇರುವುದು ಆಕರ್ಷಕ ಎನ್ನಿಸದಿರುವ ಸಾಧ್ಯತೆಗಳೇ ಹೆಚ್ಚು. ಆಗ ಮತ್ತೆ ಹೊರಸಂಬಂಧಗಳನ್ನು ಹುಡುಕಿಕೊಳ್ಳುತ್ತೀರಾ?

ADVERTISEMENT

ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಪ್ರಶ್ನೆಯನ್ನು ನೀವು ಕೇಳುತ್ತಿದ್ದೀರಿ ಎಂದಾದರೆ ಈ ಸಂಬಂಧದ ಬಗೆಗೆ ನಿಮಗೆ ಹಿಂಜರಿಕೆ, ಪಾಪಪ್ರಜ್ಞೆ, ಗೊಂದಲಗಳಿರಬೇಕಲ್ಲವೇ? ಇವುಗಳ ಭಾರವನ್ನು ಜೀವಮಾನವೆಲ್ಲಾ ಹೊರುವುದಕ್ಕೆ ಬದಲಾಗಿ ಈ ಸಂಬಂಧವನ್ನು ಮುಕ್ತಾಯಗೊಳಿಸಿದಾಗ ನಿಮ್ಮ ಬಗ್ಗೆ ನಿಮಗೇನೆನ್ನಿಸಬಹುದು? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡರೆ ನಿಮ್ಮ ದಾರಿ ನಿಚ್ಚಳವಾಗುತ್ತದೆ.

*ಮದುವೆಗೆ ಮೊದಲೇ ಲೈಂಗಿಕ ಸಂಪರ್ಕಮಾಡುವುದು ಸರೀನಾ? ಇದರಿಂದ ಮದುವೆಯಾದ ಮೇಲೆ ಏನಾದರೂ ಸಮಸ್ಯೆಯಾಗುತ್ತದೆಯೇ? ಹಸ್ತಮೈಥುನ ಮಾಡುವುದು ಸರೀನಾ?

ಹೆಸರು, ಊರು ಇಲ್ಲ.

-ಇಬ್ಬರು ವಯಸ್ಕ ವ್ಯಕ್ತಿಗಳು ಒಪ್ಪಿಕೊಂಡು ನಡೆಸುವ ಲೈಂಗಿಕ ಸಂಬಂಧಕ್ಕೆ ಕಾನೂನಿನಲ್ಲಿ ಮಾನ್ಯತೆಯಿದೆ. ಆದರೆ ವಿವಾಹಕ್ಕೆ ಮೊದಲು ನಡೆಸುವ ಲೈಂಗಿಕ ಸಂಬಂಧ ನಿಮ್ಮ ಮನಸ್ಥಿತಿಗೆ ಒಪ್ಪಿಗೆಯೇ? ಇದರ ಬಗೆಗೆ ಹಿಂಜರಿಕೆ ಭಯಗಳಿದ್ದರೆ ಅಂತಹ ಲೈಂಗಿಕ ಸಂಬಂಧದಲ್ಲಿ ನಿಮಗೆ ಸಿಗುವುದೇನು? ಜೀವನವೆಲ್ಲಾ ಇಂತಹ ಹಿಂಜರಿಕೆ, ಪಾಪಪ್ರಜ್ಞೆಯ ಭಾರವನ್ನು ಹೇಗೆ ಹೊರುತ್ತೀರಿ? ಮುಂದೆ ನೀವು ಮದುವೆಯಾಗುವ ವ್ಯಕ್ತಿಗೂವಿವಾಹಪೂರ್ವಲೈಂಗಿಕ ಸಂಬಂಧವಿದ್ದರೆ ಅದನ್ನು ನೀವು ಹೇಗೆ ಸ್ವೀಕರಿಸುತ್ತೀರಿ? ಇಂತಹ ಪ್ರಶ್ನೆಗಳಿಗೆ ನಿಮ್ಮೊಳಗೆ ಉತ್ತರ ಹುಡುಕಿಕೊಂಡು ಮುಂದಿನ ನಿರ್ಧಾರವನ್ನು ಮಾಡಿ.

ಹಸ್ತಮೈಥುನ ಸಂಪೂರ್ಣ ಆರೋಗ್ಯಕರ. ಇದರ ಕುರಿತು 15ನೇ ಆಗಸ್ಟ್‌ 2020ರ ಸಂಚಿಕೆಯ ಈ ಅಂಕಣದಲ್ಲಿ ವಿವರವಾಗಿ ಬರೆಯಲಾಗಿದೆ.

*ವಯಸ್ಸು 28, ಹೆಂಡತಿಗೆ 27. ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಹೆಂಡತಿ ದಪ್ಪ ಇದ್ದಾಳೆ. ಇನ್ನೂ ಮಕ್ಕಳಾಗಿಲ್ಲ. ನನಗೆ ಬೇಗ ಸ್ಖಲವಾಗುತ್ತದೆ. ಪರಿಹಾರ ತಿಳಿಸಿ.

ಅರುಣ್‌, ಊರಿನ ಹೆಸರಿಲ್ಲ.

ಸಂಭೋಗ ಎಷ್ಟು ಸಮಯ ನಡೆಯಬೇಕು ಎನ್ನುವುದಕ್ಕೆ ಮಾನದಂಡಗಳೇನಿಲ್ಲ. ಒಂದು ಸಾಮಾನ್ಯ ಅಂದಾಜಿನ ಪ್ರಕಾರ ಗಂಡು ಹೆಣ್ಣನ್ನು ಪ್ರವೇಶಿಸಿದ ಮೇಲೆ 3-7 ನಿಮಿಷಗಳಲ್ಲಿ ಸ್ಖಲವನಾಗುತ್ತದೆ. ಇದು ಸಮೀಕ್ಷೆಗಳಿಂದ ಹೊರಬಂದ ಅಂದಾಜು ಎಂದು ನೆನಪಿಡಿ. ಮಿಲನ ಪತಿಪತ್ನಿಯರಿಬ್ಬರಿಗೂ ತೃಪ್ತಿ ಕೊಡುವುದಷ್ಟೇ ಮುಖ್ಯ. ಹಾಗಾಗಿ ಪತ್ನಿಯ ಅನುಭವವನ್ನು ಕೇಳಿ. ಇಬ್ಬರೂ ಮುಕ್ತವಾಗಿ ಚರ್ಚೆಮಾಡಿ ಪರಸ್ಪರ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾ ತೃಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಔಷಧಿಗಳ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ವಸ್ತುಗಳನ್ನು ಬಳಸಿ ಮೋಸಹೋಗಬೇಡಿ. ಅಗತ್ಯವಿದ್ದರೆ ಲೈಂಗಿಕ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

ಪತ್ನಿ ದಪ್ಪವಿರುವುದಕ್ಕಾಗಿ ನಿಮಗೆ ಬೇಸರವಿರುವಂತೆ ಕಾಣಿಸುತ್ತಿದೆ. ನಿಮ್ಮ ಬೇಸರ ಅವರ ಕೀಳರಿಮೆಯನ್ನು ಹೆಚ್ಚಿಸಿ ಲೈಂಗಿಕಕ್ರಿಯೆಯಲ್ಲಿ ಅವರು ಪೂರ್ಣಮನಸ್ಸಿನಿಂದ ಪಾಲುಗೊಳ್ಳುವುದಕ್ಕೆ ಅಡ್ಡಿಯಾಗುತ್ತದೆ. ಇದರಿಂದ ನೀವೂ ಸುಖವಂಚಿತರಾಗುತ್ತೀರಿ. ತೆಳ್ಳಗಾಗಲು ಪತ್ನಿಗೆ ಸಹಾಯಮಾಡುತ್ತಲೇ ಇರುವಂತೆಯೇ ಅವರನ್ನು ಒಪ್ಪಿಕೊಂಡರೆ ಲೈಂಗಿಕ ಸಂಬಂಧ ಉತ್ತಮಗೊಳ್ಳುತ್ತದೆ.

*ವಯಸ್ಸು 43. ಇತ್ತೀಚಿನ ದಿನಗಳಲ್ಲಿ ಶಿಶ್ನ ಸರಿಯಾಗಿ ಉದ್ರೇಕವಾಗುತ್ತಿಲ್ಲ. ನನಗೆ ಯಾವುದೇ ಕಾಯಿಲೆಯಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಮಧ್ಯವಯಸ್ಸು ಸಮೀಪಿಸಿದಂತೆ ಲೈಂಗಿಕತೆ ಹೆಚ್ಚು ಪರಿಚಿತ ಎನ್ನಿಸುತ್ತದೆ. ಜೊತೆಗೆ ದೇಹದಲ್ಲಿ ಟೆಸ್ಟೋಸ್ಟೆರೋನ್‌ ಹಾರ್ಮೋನ್‌ಗಳ ಪ್ರಮಾಣವೂ ಕಡಿಮೆಯಾಗುತ್ತಾ ಬರುತ್ತದೆ. ಹಾಗಾಗಿ ಉದ್ರೇಕವಾಗಲು ಇಬ್ಬರಿಗೂ ಸಮಯದ ಅಗತ್ಯವಿರುತ್ತದೆ. ಆದರೆ ಲೈಂಗಿಕ ತೃಪ್ತಿಯ ಮಟ್ಟ ಕಡಿಮೆಯಾಗುವುದಿಲ್ಲ. ಪತ್ನಿಯ ಜೊತೆ ಆತ್ಮೀಯವಾಗಿ ಹೆಚ್ಚುಹೆಚ್ಚು ಸಮಯವನ್ನು ಹಂಚಿಕೊಂಡರೆ ಉದ್ರೇಕ ಆಸಕ್ತಿ ತನ್ನಿಂದ ತಾನೇ ಮೂಡುತ್ತದೆ. ನಿಮ್ಮ ಪತ್ರದಲ್ಲಿ ಪತ್ನಿಯ ಬಗೆಗೆ ಯಾವುದೇ ವಿವರಗಳಿಲ್ಲ. ಅವರ ಆಸಕ್ತಿಗಳ ಬಗೆಗೆ ನೀವು ಗಮನಹರಿಸಿದ್ದೀರಾ? ಇಬ್ಬರಿಗೂ ಎಂತಹ ಲೈಂಗಿಕತೆ ಇಷ್ಟವಾಗುತ್ತದೆ ಎಂದು ಚರ್ಚೆ ಮಾಡಿದ್ದೀರಾ? ಮಲಗುವ ಕೋಣೆಯಿಂದ ಹೊರಗೆ ಇಬ್ಬರೂ ಒಟ್ಟಾಗಿ ಹೇಗೆ ಸಮಯ ಕಳೆಯುತ್ತೀರಿ? ಮುಕ್ತವಾಗಿ ಬೆರೆಯಲು ಮನೆಯಲ್ಲಿ ಅವಕಾಶಗಳಿವೆಯೇ? ಇಂತಹ ಹಲವಾರು ಅಂಶಗಳು ನಿಮ್ಮ ಉದ್ರೇಕ ಮತ್ತು ತೃಪ್ತಿಯನ್ನು ನಿರ್ಧರಿಸುತ್ತವೆ. ಅಗತ್ಯವಿದ್ದರೆ ಇಬ್ಬರೂ ಸೇರಿ ಲೈಂಗಿಕ ಮನೋಚಿಕಿತ್ಸಕರ ಸಹಾಯ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.