ADVERTISEMENT

ಆರೋಗ್ಯ: ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚಿಸುವ ‌ಪ್ರೊಬಯೊಟಿಕ್ ಆಹಾರಗಳು

ಡಾ.ಸ್ಮಿತಾ ಜೆ ಡಿ
Published 14 ಜನವರಿ 2022, 9:06 IST
Last Updated 14 ಜನವರಿ 2022, 9:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋವಿಡ್–19 ಪ್ರಪಂಚಕ್ಕೆ ಲಗ್ಗೆಯಿಟ್ಟು ಎರಡು ವರ್ಷಗಳಾದರೂ ಸಂಪೂರ್ಣವಾಗಿ ಇದರಿಂದ ಮುಕ್ತಿಪಡೆಯುವ ಯಾವುದೇ ಸೂಚನೆಗಳು ಕಾಣುವಂತಿಲ್ಲ. ಕೋವಿಡ್–19 ನಮ್ಮೆಲ್ಲರ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳನ್ನು ತಂದಿತಾದರೂ ಬಿರುಗಾಳಿಯಂತೆ ನಮ್ಮ ಮೇಲೆ ಎರಗಿದೆ. ಬಿರುಗಾಳಿಯಿಂದ ಹೊರಬರಬಹುದಾದರೂಬಿರುಗಾಳಿ ಎರಗುವುದಕ್ಕಿಂತ ಮುಂಚಿನ ವ್ಯಕ್ತಿತ್ವ, ಹೊರಬಂದಾಗ ನಮ್ಮದಾಗಿರುವುದಿಲ್ಲ. ಇದೊಂದು ಪ್ರಚಲಿತ ಜಾಪನೀಸ್ ಗಾದೆ. ಆದುದರಿಂದ ಸಂಪೂರ್ಣವಾಗಿ ಕೋವಿಡ್–19ನಿಂದ ಮುಕ್ತಿ ಹೊಂದಲಾಗುವುದಿಲ್ಲ ಎಂಬುದು ಸತ್ಯವಾದಂತೆ ಅದರೊಟ್ಟಿಗೆ ಬದುಕುವುದನ್ನು ಕಲಿಯಬೇಕಿದೆ. ಇದಕ್ಕೆ ಪೂರಕ, ಸಮತೋಲನವಾದ ಆಹಾರ, ಆಂತರಿಕ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಲ್ಲ ಪೂರಕ ಆಹಾರ ಪದಾರ್ಥಗಳ ಸೇವನೆ, ಉತ್ತಮ ಜೀವನಶೈಲಿ, ವೈಯಕ್ತಿಕ ಸ್ವಚ್ಛತೆ ಹಾಗೂ ಕೋವಿಡ್ ನಿಯಮಗಳ ಪಾಲನೆ.

ಆದರೆ, ಇತ್ತೀಚಿನ ಅಧ್ಯಯನಗಳ ಪ್ರಕಾರ ಪೌಷ್ಠಿಕ ಆಹಾರದೊಂದಿಗೆ ‌ಪ್ರೊಬಯೊಟಿಕ್‌ ಆಹಾರಗಳ ಸೇವನೆ ನಮ್ಮ ಆಂತರಿಕ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯಕವೆಂಬುದಾಗಿದೆ. ‌ಪ್ರೊಬಯೊಟಿಕ್‌ ಆಹಾರ ಎಂದೊಡನೆ ನನಗೆ ನಮ್ಮ ಅಜ್ಜಿ ರಾತ್ರಿ ಉಳಿದ ಅನ್ನಕ್ಕೆ ಮೊಸರು ಕಲಸಿ ಒಗ್ಗರಣೆ ಹಾಕಿ ಕೊಡುತ್ತಿದ್ದ ಒಗ್ಗರಣೆ ಮೊಸರನ್ನದ ನೆನಪಾಗುತ್ತದೆ. ಆಗ ರುಚಿಯಾಗಿದೆ ಎಂಬುದನ್ನಷ್ಠೇ ಮನಸ್ಸಿನಲ್ಲಿಟ್ಟು ತಿನ್ನುತ್ತಿದ್ದ ಮೊಸರನ್ನದ್ದಲ್ಲಿ ‌ಪ್ರೊಬಯೊಟಿಕ್‌ ಅಂಶವಿದೆ ಎಂಬ ವಿಷಯ ನನಗೆ ವೈದ್ಯಯಾದ ಮೇಲೆ ತಿಳಿದದ್ದು.

ಏನಿದು‌ಪ್ರೊಬಯೊಟಿಕ್‌ ಆಹಾರ?
‌ಪ್ರೊಬಯೊಟಿಕ್ಸ್‌ಎಂದರೆ ಜೀವಂತ ಬ್ಯಾಕ್ಟೀರಿಯಾ, ಈಸ್ಟ್‌ ಮುಂದಾದ ಸೂಕ್ಷ್ಮಜೀವಿಗಳು ನಿಮ್ಮ ಪಚನಕ್ರಿಯೆಗೆ ಸಹಾಯಕವಾಗಬಲ್ಲದ್ದು ಎನ್ನಬಹುದಾಗಿದೆ. ಶರೀರದಲ್ಲಿ ಅನೇಕ ಜೀವಿಗಳು ನೆಲೆಯಾಗಿರುತ್ತವೆ. ಈ ಒಳ್ಳೆಯ ಸೂಕ್ಷ್ಮಜೀವಿಗಳು ಕೆಟ್ಟ ಸೂಕ್ಷ್ಮಜೀವಿಗಳನ್ನು ಶರೀರದಿಂದ ಹೊರಹಾಕಲು ಸಹಾಯಕ. ಇಂತಹ ಒಳ್ಳೆಯ ಸೂಕ್ಷ್ಮಜೀವಿಗಳನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ‌ಪ್ರೊಬಯೊಟಿಕ್‌ ಆಹಾರ ಎಂದು ಕರೆಯಬಹುದಾಗಿದೆ.

ADVERTISEMENT

‌ಪ್ರೊಬಯೊಟಿಕ್‌ ಆಹಾರಗಳು ಕಾರ್ಯನಿರ್ವಹಿಸುವ ಬಗೆ.
*ಇವುಗಳು ದೈಹಿಕ ಆರೋಗ್ಯದ ಸಮತೋಲನವನ್ನು ಕಾಪಾಡುತ್ತದೆ
* ಸೋಂಕಿಗೆ ಕಾರಣವಾಗುವಂತಹ ಸೂಕ್ಷ್ಮಜೀವಿ ದೇಹವನ್ನು ಪ್ರವೇಶಿಸಿದಾಗ ‌ಅದರ ವಿರುದ್ಧ ಹೋರಾಡಿ ಶರೀರದಿಂದ ಹೊರಹಾಕಲು ಸಹಾಯಮಾಡುತ್ತವೆ
* ಆಹಾರ ಪಚನಕ್ರಿಯೆಗೆ ಸಹಾಯಕ
* ವೈಟಮಿನ್‌ಗಳನ್ನು ಉತ್ಪಾದಿಸುತ್ತವೆ
* ಸೇವಿಸಿದ ಔಷಧಿಗಳನ್ನು ಹೀರಿಕೊಳ್ಳಲು ಸಹಾಯಕ
* ರೋಗನಿರೋಧಕ ಶಕ್ತಿವರ್ಧಕಗಳು ಎಂದು ಪರಿಗಣಿಸಬಹುದಾಗಿದೆ.

ಮಾಡಬಹುದಾದ್ದೇನು?
* ‌ಪ್ರೊಬಯೊಟಿಕ್‌ ಸೂಕ್ಷ್ಮಜೀವಿಗಳನ್ನು ಶರೀರದಲ್ಲಿ ಕೆಲವು ಆಹಾರಗಳನ್ನು ಹಾಗೂಪಾನೀಯಗಳನ್ನು ಕುಡಿಯುವುದರಿಂದ ಹೆಚ್ಚು ಮಾಡಿಕೊಳ್ಳಬಹುದಾಗಿದೆ.
* ಸಾಧಾರಣವಾಗಿ ಹುದುಗಬಲ್ಲ ( FERMENT ) ಆಹಾರ ಪದಾರ್ಥಗಳಾದ ಮೊಸರು, ಉಪ್ಪಿನಕಾಯಿ, ಡೈರಿ ಉತ್ಪನ್ನಗಳು, ಕೊಂಬೂಚ ( ಹುದುಗಿದ ಟೀ ), ಚೀಸ್, ಮೀಸೋಸೂಪ್ ಮುಂತಾದ ಆಹಾರಗಳನ್ನು ಸೇವಿಸುವುದರಿಂದ ಶರೀರದಲ್ಲಿ ಸ್ವಾಭಾವಿಕವಾಗಿ ‌ಪ್ರೊಬಯೊಟಿಕ್‌ ಅಂಶವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
* ಇವುಗಳಲ್ಲದೆ ಕೃತಕವಾಗಿ ಮಾತ್ರೆಗಳ ರೂಪದಲ್ಲಿ, ಪೌಡರ್‌ಗಳ ರೂಪದಲ್ಲಿ, ಪಾನೀಯಗಳ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ‌ಪ್ರೊಬಯೊಟಿಕ್‌ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಮಾಲೋಚನೆಯೊಂದಿಗೆ ಪಡೆಯಬಹುದಾಗಿದೆ.
* ‌ಪ್ರೊಬಯೊಟಿಕ್‌‌ಗಳನ್ನು ಹಿರಿಯರಿಂದ ಮಕ್ಕಳವರೆಗೆ ಬಳಸಬಹುದಾಗಿದ್ದು ಸೋಂಕಿನ ಸಂದರ್ಭದಲ್ಲಿ ಬಳಸಬಹುದಾಗಿರುವ ಅ್ಯಂಟಿಬಯಾಟಿಕ್‌ಗಳೊಂದಿಗೆ ಸೇವಿಸುವುದರಿಂದ ರೋಗಲಕ್ಷಣಗಳನ್ನು ತ್ವರಿತವಾಗಿ ಕಡಿಮೆ ಮಾಡಬಹುದಾಗಿದೆ. ಇದಲ್ಲದೆ ಮಲಬದ್ದತೆ, ಅತಿಸಾರ, ಆಸಿಡಿಟಿ, ಇಸುಬು ಮುಂತಾದ ತೊಂದರೆಗಳಲ್ಲಿ ಬಳಸಬಹುದಾಗಿದೆ.
* ಮಕ್ಕಳಿಗೆ ಕೊಡುವ ಆಹಾರದಲ್ಲಿ ಮೊಸರು, ಚೀಸ್ ಮುಂತಾದವುಗಳನ್ನು ಬಳಸುವುದರಿಂದ ಸ್ವಾಭಾವಿಕವಾಗಿ ಶರೀರದಲ್ಲಿ ‌ಪ್ರೊಬಯೊಟಿಕ್‌ ಅಂಶ ಹೆಚ್ಚುತ್ತದೆ.
* ಅಧ್ಯಯನಗಳ ಪ್ರಕಾರ ಕೋವಿಡ್–19 ಸೋಂಕಿನಿಂದ ಉಸಿರಾಟದ ಸೋಂಕಿನಿಂದ, ವೈರಾಣುವಿನ ಸೋಂಕುಗಳಿಂದ ಹೊರಬರಲು ‌ಪ್ರೊಬಯೊಟಿಕ್‌ ಆಹಾರಗಳು ಸಹಾಯಕ ಎಂದು ತಿಳಿಸುತ್ತವೆ.

ಮೇಲಿನ ಎಲ್ಲಾ ಕಾರಣಗಳಿಂದಾಗಿ ಪ್ರೊಬಯೊಟಿಕ್‌ ಆಹಾರಗಳನ್ನು ರೋಗನಿರೋಧಕ ಶಕ್ತಿವರ್ಧಕಗಳು ಎಂದು ಪರಿಗಣಿಸಬಹುದಾಗಿದೆ.

__

-ಡಾ.ಸ್ಮಿತಾ ಜೆ.ಡಿ., ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.