ADVERTISEMENT

ಬೆಳೆಯುವ ಆಶಯಕ್ಕೆಬೇಕಿದೆ ಬೆಂಬಲ...

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 19:30 IST
Last Updated 15 ಡಿಸೆಂಬರ್ 2019, 19:30 IST
ಷಣ್ಮುಖಪ್ಪ
ಷಣ್ಮುಖಪ್ಪ   

ಜೀವನದಲ್ಲಿ ದೊಡ್ಡ ಸಾಧನೆಯ ಕನಸು ಹೊತ್ತವರಿಗೆ ಸುತ್ತಲಿನ ಯಾವುದೋ ಒಂದು ಸಣ್ಣ ಘಟನೆ ಸ್ಫೂರ್ತಿಯಾಗಬಹುದು. ಅದು ಅವರ ಬದುಕನ್ನೂ ಬದಲಿಸಬಹುದು. ಅದೇ ರೀತಿ ಸಿನಿಮಾದಲ್ಲಿ ಕಲಾವಿದರ ಪಾತ್ರ, ಅವರ ನಟನೆ ಕ್ರೀಡಾ ಬದುಕು ಕಟ್ಟಿಕೊಳ್ಳಲು ಪ್ರೇರಣೆಯೂ ಆಗಬಹುದು.

ಹೀಗೆ ನಟ ಬ್ರೂಸ್‌ ಲೀ ಅವರ ಸಾಹಸವನ್ನು, ಸಮರ ಕಲೆಯಲ್ಲಿ ಹೊಂದಿದ್ದ ಪ್ರಾವೀಣ್ಯತೆಯನ್ನು ಸಿನಿಮಾ ಮೂಲಕ ನೋಡಿ ಕರಾಟೆ ಕಲಿಯಲು ಆರಂಭಿಸಿದ್ದು ಷಣ್ಮುಖಪ್ಪ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ಷಣ್ಮುಖಪ್ಪ 16 ವರ್ಷದವರಿದ್ದಾಗಲೇ ಕರಾಟೆ‌ ತರಬೇತಿ ಆರಂಭಿಸಿದರು. ಅವರಿಗೆ ಈಗ 36 ವರ್ಷ ವಯಸ್ಸು.

ಹುಟ್ಟೂರಿನಲ್ಲಿ ಸ್ನೇಹಿತರು ಮಾಡುತ್ತಿದ್ದ ವ್ಯಾಯಾಮ, ಕರಾಟೆಯನ್ನು ಷಣ್ಮುಖಪ್ಪ ಅನುಕರಿಸುತ್ತಿದ್ದರು. ಕ್ರಮೇಣ ಇದರಿಂದ ಆಸಕ್ತಿ ಹೆಚ್ಚಾಗಿ ಕೆಲ ವರ್ಷಗಳಲ್ಲಿ ಕೊಪ್ಪಳದಲ್ಲಿ ಮೆಹಬೂಬ್‌ ಹುಸೇನ್‌ ಅವರ ಬಳಿ ವೃತ್ತಿಪರ ತರಬೇತಿ ಪಡೆದು, ಹಲವಾರು ಸ್ಪರ್ಧೆಗಳಲ್ಲಿ ಪದಕಗಳನ್ನು ಬೇಟೆಯಾಡಿದ್ದಾರೆ.

ADVERTISEMENT

ಗ್ರಾಮೀಣ ಪ್ರದೇಶದ ಬಡ ಕುಟುಂಬದ ಹಿನ್ನೆಲೆಯುಳ್ಳ ಷಣ್ಮುಖಪ್ಪ ಅವರ ಸಾಧನೆಗೆ, ಪ್ರತಿಭೆಗೆ ಬಡತನ ಅಡ್ಡಿಯಾಗಿಲ್ಲ. ಕರಾಟೆ ಕಲಿಯಲು ಆರಂಭಿಸಿದ ದಿನಗಳಲ್ಲಿ ಎದುರಿಸಿದ ನೋವು, ಸಂಕಷ್ಟಗಳನ್ನು ಎಲ್ಲರೂ ಅನುಭವಿಸಬಾರದು ಎನ್ನುವ ಕಾರಣಕ್ಕೆ ಯುವಪ್ರತಿಭೆಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ. ವಡ್ಡರಹಟ್ಟಿಯಲ್ಲಿ ನೆಲೆಸಿರುವ ಷಣ್ಮುಖಪ್ಪ ದಿವಂಗತ ನಾಗಪ್ಪ ಶಾವಂತಗೇರಿ ಹಾಗೂ ನಾಗಮ್ಮ ದಂಪತಿಯ ಪುತ್ರ.

ಸಿಂಧನೂರಿನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಷಣ್ಮುಖಪ್ಪ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. 2017ರಲ್ಲಿ ಚಂಡೀಗಡದಲ್ಲಿ ಜರುಗಿದ್ದ ಎರಡನೇ ಅಖಿಲ ಭಾರತ ಮಾರ್ಷಲ್‌ ಆರ್ಟ್ಸ್‌ ಸ್ಪರ್ಧೆಯಲ್ಲಿ ಈ ಗ್ರಾಮೀಣ ಪ್ರತಿಭೆ ಬ್ಲ್ಯಾಕ್‌ ಬೆಲ್ಟ್‌ ಕಟಾದಲ್ಲಿ ಮೊದಲ ಸ್ಥಾನ ಸಂಪಾದಿಸಿದ್ದರು. ಹೋದ ವರ್ಷ ವಿಶಾಖಪಟ್ಟಣದಲ್ಲಿ ಜರುಗಿದ್ದ ಇದೇ ಮಾದರಿಯ ಸ್ಪರ್ಧೆಯ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಹೋದ ವರ್ಷ ಗಂಗಾವತಿಯಲ್ಲಿ ನಡೆದಿದ್ದ ಪೆಂಕಾಕ್ ಸಿಲಟ್‌ ಸ್ಪರ್ಧೆಯ ಫೈಟ್‌ ಮಾಸ್ಟರ್‌ ವಿಭಾಗದಲ್ಲಿ ಬೆಳ್ಳಿ ಹೀಗೆ ಅನೇಕ ಟೂರ್ನಿಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ. ಕ್ಲಬ್‌, ರಾಜ್ಯಮಟ್ಟದ ಟೂರ್ನಿಗಳು, ಆಹ್ವಾನಿತ ಮತ್ತು ಮುಕ್ತ ಟೂರ್ನಿಗಳಲ್ಲಿ ಅವರು ತೋರಿಸಿದ ಸಾಹಸಕ್ಕೆ ಮನೆಯಲ್ಲಿರುವ ಪದಕಗಳೇ ಸಾಕ್ಷಿ.

ಹೆಚ್ಚು ದೈಹಿಕ ಶ್ರಮ ಬೇಡುವ ಕರಾಟೆಯಲ್ಲಿ ಉತ್ತಮ ಸಾಮರ್ಥ್ಯ ತೋರಿಸುವ ಸಲುವಾಗಿ ಷಣ್ಮುಖಪ್ಪ ನಿತ್ಯ ಬೆಳಿಗ್ಗೆ ಕನಿಷ್ಠ ಐದು ಕಿ.ಮೀ. ಓಡುವ ಅಭ್ಯಾಸ ಆರಂಭಿಸಿದರು. ನಂತರ ಓಡುವುದನ್ನೇ ವೃತ್ತಿಪರವಾಗಿ ಸ್ವೀಕರಿಸಿ ಮ್ಯಾರಥಾನ್‌, ಹಾಫ್‌ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

2018ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಮುಕ್ತ ಹಾಫ್‌ ಮ್ಯಾರಥಾನ್ ಸ್ಪರ್ಧೆಯನ್ನು ಎರಡು ಗಂಟೆ 14 ನಿಮಿಷ 14 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದರು. ಇದೇ ತಿಂಗಳು ಪುಣೆಯಲ್ಲಿ ನಡೆದಿದ್ದ ಮುಕ್ತ ಮ್ಯಾರಥಾನ್‌ ಸ್ಪರ್ಧೆಯನ್ನು ಐದು ತಾಸು 01.24 ಸೆಕಂಡುಗಳಲ್ಲಿ ತಲುಪಿದ್ದರು.

ಹೀಗೆ ನಿರಂತರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಆನ್‌ಲೈನ್‌ ಮೂಲಕ ಜಿಪಿಎಸ್‌ ತಂತ್ರಜ್ಞಾನ ಆಧರಿಸಿದ ಓಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಲು ಆರಂಭಿಸಿದ್ದಾರೆ.

‘ದೇಶಾದ್ಯಂತ ನಿತ್ಯವೂ ಆನ್‌ಲೈನ್‌ ಮೂಲಕ ನಡೆಯುವ ಓಟದ ಸ್ಪರ್ಧೆ ಸಾಕಷ್ಟು ಜನಪ್ರಿಯವಾಗುತ್ತಿದೆ. ಅದರಲ್ಲಿ ನಿತ್ಯವೂ ಭಾಗವಹಿಸಿ ಕನಿಷ್ಠ ಐದು ಕಿ.ಮೀ. ಓಡುತ್ತೇನೆ. ಆ್ಯಪ್‌ ಬಳಸಿ ಸ್ಪರ್ಧೆ ನಡೆಸುವುದರಿಂದ ನಿಗದಿತ ಗುರಿ ಮುಟ್ಟಲು ತೆಗೆದುಕೊಳ್ಳುವ ಸಮಯ, ವಿಶ್ರಾಂತಿ ಪಡೆದ ಅವಧಿ ಹೀಗೆ ಎಲ್ಲ ಮಾಹಿತಿಯೂ ದಾಖಲಾಗುತ್ತದೆ. ಓಟದ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಿತ್ಯ ಈ ಅಭ್ಯಾಸ ಮಾಡುತ್ತೇನೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ’ ಎಂದು ಷಣ್ಮುಖಪ್ಪ ಹೇಳುತ್ತಾರೆ.

‘ಪಂಜಾಬ್‌ನಲ್ಲಿ ನಡೆದ ದ ಗ್ರೇಟ್‌ ರನ್‌ ಆಫ್‌ ಪಂಜಾಬ್‌ ಬೈಸಾಕಿ ಚಾಲೆಂಜ್‌ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ 15ನೇ ಸ್ಥಾನ ಗಳಿಸಿದ್ದೆ. 13 ದಿನ ನಡೆಯುವ ಸ್ಪರ್ಧೆಯಲ್ಲಿ ಪ್ರತಿನಿತ್ಯವೂ 13 ಕಿ.ಮೀ. ಗುರಿ ಮುಟ್ಟುವ ಸವಾಲು ಇರುತ್ತದೆ. ಆನ್‌ಲೈನ್‌ ಮೂಲಕವೂ ಈ ಸ್ಪರ್ಧೆ ನಡೆಯುತ್ತದೆ’ ಎಂದರು.

‘ಕರಾಟೆ ಮತ್ತು ಓಟದ ಸ್ಪರ್ಧೆಗಳಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡುವ ಗುರಿಯಿದೆ. ಆತ್ಮರಕ್ಷಣೆಯ ಕಲೆಯೂ ಆದ ಕರಾಟೆಯನ್ನು ಮಕ್ಕಳಿಗೆ ಹೇಳಿಕೊಡುವ ಆಸೆಯಿದೆ. ಸುಸಜ್ಜಿತ ಕ್ರೀಡಾಂಗಣ, ಸಿಂಥೆಟಿಕ್‌ ಟ್ರ್ಯಾಕ್‌ ಗಗನ ಕುಸುಮವಾಗಿರುವ ನಮಗೆ ಸೌಲಭ್ಯಗಳ ಕೊರತೆಯ ನಡುವೆಯೇ ಸಾಧನೆ ಮಾಡುವ ಸವಾಲು ನಮ್ಮ ಭಾಗದ ಮಕ್ಕಳ ಮುಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.