ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಮಾಸ್ಕ್‌ ಧರಿಸಿದವರಿಗೂ ವೈರಸ್‌ನಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:16 IST
Last Updated 27 ನವೆಂಬರ್ 2020, 21:16 IST
   

ಕೊರೊನಾ ಸೋಂಕಿದ್ದವರು ಇತರರಿಗೆ ವೈರಸ್‌ ಹರಡುವುದನ್ನು ತಡೆಯಲು ಮಾಸ್ಕ್‌ ಧರಿಸಬೇಕು ಎಂದು ಇದುವರೆಗೆ ಪ್ರತಿಪಾದಿಸುತ್ತಿದ್ದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಇದೀಗ ಮಾಸ್ಕ್‌ ಧರಿಸಿದ ಆರೋಗ್ಯವಂತರಿಗೂ ಕೋವಿಡ್‌–19 ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿವೆ. ಮಾಸ್ಕ್‌ ಧರಿಸಿದವರು ಉಸಿರಾಡುವಾಗ ಗಾಳಿ ಫಿಲ್ಟರ್‌ ಆಗಿ ಇತರರ ಎಂಜಲಿನ ಅಥವಾ ಮೂಗಿನ ದ್ರವದ ಹನಿಗಳು ಶ್ವಾಸಾಂಗ ವ್ಯೂಹವನ್ನು ಸೇರುವ ಸಂಭವ ಬಹಳ ಕಡಿಮೆ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.

ಹತ್ತಿ ಬಟ್ಟೆಯಿಂದ ಮಾಡಿದ ಮಾಸ್ಕ್‌ನಿಂದಾಗಿ ಗಾಳಿಯಲ್ಲಿರುವ 10 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಎಂಜಲಿನ ಕಣಗಳೂ ಕೂಡ ಫಿಲ್ಟರ್‌ ಆಗುವುದರಿಂದ ಅಪಾಯ ಕಡಿಮೆ ಎಂದು ಸಿಡಿಸಿ ವರದಿ ಹೇಳಿದೆ.

ಹೆಚ್ಚು ದಾರದ ಕೌಂಟ್‌ಗಳಿರುವ ಬಹು ಪದರವಿರುವ ಹತ್ತಿ ಬಟ್ಟೆಯ ಮಾಸ್ಕ್‌ಗಳು ಈ ಸಣ್ಣ ಗಾತ್ರದ ಬಾಯಿ ಹಾಗೂ ಮೂಗಿನ ದ್ರವದ ಕಣಗಳಿಂದ ರಕ್ಷಣೆ ಒದಗಿಸುತ್ತವೆ. ಹಾಗೆಯೇ ಪಾಲಿಪ್ರೊಪಿಲೀನ್‌ ಬಟ್ಟೆಯಿಂದ ಮಾಡಿದ ಮಾಸ್ಕ್‌ ಕೂಡ ಟ್ರೈಬೊಎಲೆಕ್ಟ್ರಿಕ್‌ ಎಂಬ ಗುಣದಿಂದಾಗಿ ಹಾಗೂ ರೇಷ್ಮೆ ಬಟ್ಟೆಯ ಮಾಸ್ಕ್‌ ತೇವಾಂಶ ಮಾಸ್ಕ್‌ ಧರಿಸಿದ ವ್ಯಕ್ತಿಯ ಶ್ವಾಸಾಂಗ ವ್ಯೂಹವನ್ನು ಸೇರುವುದನ್ನು ತಡೆಯುತ್ತವೆ.

ADVERTISEMENT

ಈ ಮಾಸ್ಕ್‌ಗಳು ಶೇ 80ರಷ್ಟು ಪರಿಣಾಮಕಾರಿ. ಮನುಷ್ಯರ ಮೇಲೆ ನಡೆಸಿದ ಪ್ರಯೋಗದಿಂದ ಇದು ಸಾಬೀತಾಗಿದೆ. ಕೆಲವೊಂದು ಅಧ್ಯಯನದ ಪ್ರಕಾರ ಬಟ್ಟೆಯ ಮಾಸ್ಕ್‌ಗಳು ಸರ್ಜಿಕಲ್‌ ಮಾಸ್ಕ್‌ಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ತಿಳಿದು ಬಂದಿದೆ.

ಒಂದು ನಿಗದಿತ ಜಾಗದಲ್ಲಿ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿದರೆ ಇದರಿಂದಾಗುವ ಲಾಭ ಹೆಚ್ಚು ಎಂದು ಅಮೆರಿಕದ ಜಾನ್‌ ಹಾಪ್‌ಕಿನ್ಸ್‌ ಆರೋಗ್ಯ ಭದ್ರತೆ ಕೇಂದ್ರದ ಡಾ.ಅಮೇಶ್‌ ಎ. ಅಡಲ್ಜ ಹೇಳಿದ್ದಾರೆ. ವೈರಸ್‌ ಮೂಲವನ್ನು ನಿಯಂತ್ರಿಸುವುದು ಮಾತ್ರವಲ್ಲ, ಧರಿಸಿದವನಿಗೂ ಇದು ರಕ್ಷಣೆ ನೀಡುತ್ತದೆ ಎಂಬುದು ಬಹುಮುಖ್ಯ ಸಂಶೋಧನೆ ಎಂದೂ ಅವರು ಹೇಳಿದ್ದಾರೆ.

ಈ ಸಂಶೋಧನೆಯ ವಿವರಗಳಿಂದ ಸಾರ್ವಜನಿಕರಲ್ಲಿ ಮಾಸ್ಕ್‌ ಧರಿಸುವ ಬಗ್ಗೆ ಹೆಚ್ಚು ಜಾಗೃತಿ ಮೂಡಲಿದೆ. ಒಟ್ಟಿನಲ್ಲಿ ಈ ಮಾಸ್ಕ್‌ ಧರಿಸಿದರೆ ಧರಿಸಿದವರಿಗೆ ಹಾಗೂ ಸುತ್ತಲಿನವರಿಗೆ ರಕ್ಷಣೆ ನೀಡುತ್ತದೆ ಎಂದು ಡಾ.ಅಡಲ್ಜ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.