ADVERTISEMENT

Pv Web Exclusive: ವಿಶ್ವ ಹೃದಯ ದಿನ– ನಿಮ್ಮ ‘ಹೃದಯ’ದ ದನಿ ಆಲಿಸಿರುವಿರಾ?

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 5:59 IST
Last Updated 29 ಸೆಪ್ಟೆಂಬರ್ 2020, 5:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರೀತಿಯನ್ನು ನದಿಯಂತೆ ಎರೆದವರು ಇದ್ದಕ್ಕಿದ್ದಂತೆ ಕಾಲವಾಗಿಟ್ಟರೆ ಆಗುವ ನೋವನ್ನು ನುಂಗಿಕೊಳ್ಳುವುದು ಅಸಾಧ್ಯ. ಹೃದಯಾಘಾತದಿಂದ ತೀರಿಹೋದರಂತೂ ಅದನ್ನು ಹೇಳಿಕೊಂಡರೆ ಎದೆಭಾರವಾಗುತ್ತದೆ. ಸಕಾಲದಲ್ಲಿ ದೇಹ ನೀಡುವ ಎಚ್ಚರಿಕೆಗಳನ್ನು ಪ್ರೀತಿಪಾತ್ರರೂ ಹೇಳುವುದಿಲ್ಲ. ನಾವೂ ಅವರ ದನಿಯನ್ನು ಆಲಿಸುವುದಿಲ್ಲ. ಇದೀಗ ನಾನು ಹೇಳುವುದು ಇಷ್ಟೇ. ನಿಮ್ಮ ಹತ್ತಿರದವರ ದೈನಂದಿನ ಚಟುವಟಿಕೆಗಳು ಮತ್ತು ಅವರಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಬೇಕು. ದನಿಯನ್ನು ಆಲಿಸಬೇಕು. ಇಲ್ಲದೇ ಹೋದರೆ ಭಾರಿ ಬೆಲೆ ತೆರಬೇಕಾಗುತ್ತದೆ. ನನ್ನಂತೆ..

ಅಪ್ಪ, ‘ನಡೆದರೆ ಆರೋಗ್ಯ’ ಎಂದು ಯಾವಾಗಲೂ ಹೇಳುತ್ತಿದ್ದರು. ಕೆಲಸದಿಂದ ನಿವೃತ್ತರಾದ ಮೇಲೆ ಬೆಳಗಿನ ನಡಿಗೆ ತಪ್ಪಿದರೆ ಸಂಜೆಯಾದರೂ ನಡೆಯುವ ಅಭ್ಯಾಸವನ್ನು ಅವರು ತಪ್ಪಿಸುತ್ತಿರಲಿಲ್ಲ. ಇಂಥ ಅಪ್ಪನಿಗೆ 60 ಕಳೆಯುತ್ತಿದ್ದಂತೆ ಮಧುಮೇಹ ಬಂದಿತ್ತು. ರಕ್ತ ಪರೀಕ್ಷೆಗೆ ಆಗಾಗ ಕರೆದುಕೊಂಡು ಹೋಗುತ್ತಿದ್ದೆ. ಸಮೀಪದಲ್ಲಿ ಇರುವ ಸ್ಥಳಗಳಿಗೆ ಹೋಗಲು ಅವರು ಎಂದಿಗೂ ಬೈಕ್‌ ಬಳಸುತ್ತಿರಲಿಲ್ಲ. ಅಂತೆಯೇ ಆಸ್ಪತ್ರೆಗೆ ನಡೆದುಕೊಂಡೇ ಹೋಗೋಣ ಎನ್ನುತ್ತಿದ್ದರು. ಆದರೆ,ಒಂದು ದಿನ ಒಮ್ಮಿಂದೊಮ್ಮೆಗೆ ‘ನಡೆದರೆ ಸುಸ್ತಾಗುತ್ತದೆ. ಗಾಡಿಯಲ್ಲಿಯೇ ಹೋಗುವ’ ಎಂದು ಹೇಳಿಬಿಟ್ಟರು.

ಹಲವು ತಿಂಗಳ ಹಿಂದೆಯೇ ಪಕ್ಕೆಯ ಕೆಳಭಾಗದಲ್ಲಿ ನೋವು ಎನ್ನುತ್ತಿದ್ದರು. ಗ್ಯಾಸ್ಟ್ರಿಕ್ ಎಂದು ತಿಳಿದು, ಪರೀಕ್ಷಿಸಿಕೊಳ್ಳಲಿಲ್ಲ. ‘ವೈದ್ಯರ ಬಳಿ ಹೇಳಿದರೆ ಇದಕ್ಕಿನ್ನೆರಡು ಮಾತ್ರೆ ಬರೆಯುತ್ತಾರೆ. ಇದನ್ನು ನಾನೇ ನಿವಾಸಿಕೊಳ್ಳುವೆ’ ಎಂದುಕೊಂಡು ವೈದರ ಗಮನಕ್ಕೆ ಅವರು ತರಲಿಲ್ಲ. ನಡೆದರೆ ಸುಸ್ತಾಗುವುದು ಮುಂದುವರಿದಿತ್ತು. ಸ್ನೇಹಿತರೊಡಗೂಡಿ ಹತ್ತಿರದ ಜಿಲ್ಲೆಯಾದ ಕೊಡಗಿಗೆ ಹೋದರು. ಮಳೆ ವಿಪರೀತವಾಗಿ ಅಲ್ಲಿ ಭೂಕುಸಿತ ಸಂಭವಿಸಿತ್ತು. ಕುಸಿದ ಗುಡ್ಡಗಳನ್ನು ನೋಡುವ ಕುತೂಹಲದಿಂದ ಹೋಗಿದ್ದರು. ಆದರೆ, ಅಲ್ಲಿ ಬೆಟ್ಟ ಹತ್ತುವಾಗ ಅವರೇ ಕುಸಿದು ಬಿದ್ದರು. ಬಹುಶಃ ಅವರಿಗೆ ಅಲ್ಲಿ ಮೊದಲ ಹೃದಯಾಘಾತವಾಗಿದ್ದಿರಬೇಕು. ‘ಬೆಟ್ಟ ಹತ್ತಿದೆನಲ್ಲ. ಸುಸ್ತಾಯಿತಷ್ಟೇ. ಏನಿಲ್ಲ ಬಿಡಿ’ ಎಂದು ಜೊತೆಗಾರರಿಗೆ ಹೇಳಿಕೊಂಡು ಆರಾಮಾಗಿ ವಾಪಸಾಗಿ ಬಿಟ್ಟರು. ನಗುತ್ತಲೇ!

ADVERTISEMENT

ಈ ಘಟನೆಯಾದ ಮೇಲೆ ನಡೆದರೆ ತಾನೇ ಸುಸ್ತಾಗುವುದು. ನಡೆಯುವುದೇ ಬೇಡ ಎಂದು ಮನೆಯಲ್ಲಿಯೇ ಇದ್ದು ಬಿಟ್ಟರು. ಹೊರಗೆಲ್ಲೂ ಹೋಗುತ್ತಿರಲಿಲ್ಲ. ಅಪ್ಪ ಸ್ನೇಹಿತರು, ವಾಕಿಂಗ್‌ಗೆ ಬಾರದ್ದನ್ನು ಗಮನಿಸಿ ಬಲವಂತವಾಗಿ ಕರೆದೊಯ್ಯುತ್ತಿದ್ದರು. ‘ಮಾತಿಗಾದರೂ ಸಿಗುತ್ತಾರಲ್ಲ’ ಎಂದುಕೊಂಡು ಮತ್ತೆ ನಡಿಗೆ ಅಭ್ಯಾಸವನ್ನನು ಆರಂಭಿಸಿದರು. ಆದರೆ, ಆಗಾಗ ಒಂದಷ್ಟು ದೂರ ಹೋದರೆ ‘ಸುಸ್ತಾಗುತ್ತದೆ’ ಎಂದು ಕುಳಿತುಬಿಡುತ್ತಿದ್ದರು. ಇದನ್ನು ಗಮನಿಸಿದ ಅವರ ಸ್ನೇಹಿತರು ಆಸ್ಪತ್ರೆಗೆ ತೋರಿಸಲು ಹೇಳಿದರು. ಇವರು ‘ಗ್ಯಾಸ್‌ಸ್ಟ್ರಿಕ್ ಮಾರಾಯ, ಎಲ್ಲ ಸರಿಹೋಗುತ್ತದೆ’ ಎಂದು ಸುಮ್ಮನಾಗಿಸಿದ್ದರು. ಈ ವೇಳೆಗೆ ಕಣ್ಣು ನೋವು ಆರಂಭವಾಗಿತ್ತು.

ಕಣ್ಣಿನಲ್ಲಿ ನೀರು ಸೋರುತ್ತಿತ್ತು. ಹೀಗಾಗಿ, ಅದರ ಚಿಕಿತ್ಸೆಗೆ ಹೆಚ್ಚು ಮಹತ್ವಕೊಟ್ಟರು. ‘ಮೊದಲು ಕಣ್ಣು ನೋವು ನಿಲ್ಲಲಿ. ಆಮೇಲೆ ಗ್ಯಾ‌ಸ್ಟ್ರಿಕ್‌ ಬಗ್ಗೆ ಯೋಚಿಸೋಣ’ ಎಂದು ಪರೀಕ್ಷೆಗೆ ಓಡಾಡಿದರು. 15 ದಿನದಲ್ಲಿ ಆ ನೋವನ್ನು ನಿವಾರಿಸಿಕೊಂಡಿದ್ದರು. ಈ ವೇಳೆಯಲ್ಲಿ ಓಡಾಟಕ್ಕೆ ಅವರು ಬೈಕ್‌ ಅವಲಂಬಿಸಿದ್ದರು. ಊಟವನ್ನು ಕಡಿಮೆ ಮಾಡಿದ್ದರು. ಹೆಚ್ಚು ತಿಂದರೆ ಎದೆ ಉರಿಯುತ್ತದೆ ಎಂದು ಹೇಳುತ್ತಿದ್ದರು. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತುಂಬಾ ಒತ್ತಾಯಿಸಿದೆವು. ವಾರದಲ್ಲಿ ಹಬ್ಬವೊಂದಿತ್ತು. ಹಬ್ಬ ಕಳೆದ ಮೇಲೆ ಪರೀಕ್ಷೆ ಮಾಡಿಸೋಣ ಎಂದು ಹೇಳಿದರು. ನಮಗೂ ಸಮಾಧಾನವಾಗಿತ್ತು.

ಒಂದೆರಡು ದಿನ ಕಳೆದ ಮೇಲೆ ಮನೆಗೆ ಏನೋ ತೆಗೆದುಕೊಂಡು ಬರುತ್ತೇನೆ ಎಂದು ಹೊರಗೆ ಹೋದರು. ಅವರ ಸ್ನೇಹಿತರೂ ಸಿಕ್ಕಿದ್ದರು. ಚಹಾ ಕುಡಿಯಲು ಹೋಟೆಲ್‌ಗೆ ಹೋದಾಗ ಅಲ್ಲಿಯೇ ಕುಸಿದು ಬಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ‘ಹೃದಯಾಘಾತವಾಗಿದೆ. ಕೂಡಲೇ ದೊಡ್ಡ ಆಸ್ಪತ್ರೆಗೆ ಸೇರಿಸಿ’ ಎಂದು ಹೇಳಿದರು. ಅವರನ್ನು ಹೃದ್ರೋಗಗಳ ಆಸ್ಪತ್ರೆಗೆ ಸೇರಿಸಲಾಯಿತು. ಅಪ್ಪ, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಒಂದೆರಡು ದಿನವಿದ್ದರಷ್ಟೇ. ‘ಮಧುಮೇಹ ಹೆಚ್ಚಾಗಿದೆ. ಶ್ವಾಸಕೋಶದಲ್ಲಿ ನೀರು ತುಂಬಿದೆ. ಆಂಜಿಯೋಗ್ರಾಮ್‌ ನಾಳೆ ಮಾಡುತ್ತೇವೆ’ ಎಂದು ವೈದ್ಯರು ಹೇಳಿದ್ದರು. ಆದರೆ, ಅದಕ್ಕೂ ಮುಂಚೆಯೇ ಮತ್ತೆ ಹೃದಯಾಘಾತವಾಯಿತು. ಅಪ್ಪ ಉಳಿಯಲಿಲ್ಲ. ‘ಒಂದು ವಾರದ ಹಿಂದೆ ಬಂದಿದ್ದರೆ ಅವರನ್ನು ಉಳಿಸಬಹುದಿತ್ತು’ ಎಂದು ವೈದ್ಯರು ಹೇಳಿದ್ದರು. ಈ ಮಾತು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ. ನಮ್ಮ ನಿರ್ಲಕ್ಷ್ಯದಿಂದಲೇ ತಂದೆಯನ್ನು ಕಳೆದುಕೊಂಡೆವು ಎಂಬುದು ಕಾಡುತ್ತದೆ.

ಇಂಥವೇ ಘಟನೆಗಳು ಹಲವರಿಗೆ ಹಲವು ಮಾದರಿಯಲ್ಲಿ ಆಗಿವೆ. ಸ್ವರೂಪ, ಸಮಯ ಬೇರೆ ಬೇರೆ. ನನ್ನ ಸ್ನೇಹಿತನ ತಾಯಿಗೂ ಹೀಗೆಯೇ ಆಗಿತ್ತು. 60 ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಗೆ ತಲುಪಲು ಕಾರನ್ನು ವೇಗವಾಗಿ ಓಡಿಸಿ ಬಹುಬೇಗ ತಾಯಿಯನ್ನು ದಾಖಲಿಸಿದರೂ ಅವರು ಉಳಿಯಲಿಲ್ಲ. ವೈದ್ಯರು 10 ನಿಮಿಷ ಬೇಗ ಬರಬೇಕಿತ್ತು ಎಂದು ಅವನಿಗೆ ಹೇಳಿದ್ದರಂತೆ. ಆ ಘಳಿಗೆಯನ್ನು ಈಗಲೂ ಅವನು ನೆನೆದು ಹೇಳುತ್ತಾನೆ. ಹೇಳುವಾಗ ಎದೆಭಾರವೆನಿಸಿ ಸುಸ್ತಾಗಿಬಿಡುತ್ತಾನೆ. ಹತ್ತಿರದವರು ಹೃದಯಾಘಾತದಿಂದ ತೀರಿ ಹೋದಾಗ ಅದಕ್ಕೆ ನಾವೇ ಕಾರಣ ಎನಿಸಿಬಿಡುತ್ತದೆ. ಕಾಳಜಿ ವಹಿಸಲಿಲ್ಲ ಎನ್ನುವ ಅಪರಾಧಿ ‍ಪ್ರಜ್ಞೆ ನಮ್ಮನ್ನು ಕಾಡುತ್ತದೆ.

ಅಪ್ಪ ತೀರಿ ಹೋದ ಮೇಲೆ, ಅವರು ಆಯಾಸ ಎಂದು ಏಕೆ ಹೇಳುತ್ತಿದ್ದರು ಎಂಬುದನ್ನು ಗೂಗಲಿಸಿ ನೋಡಿದಾಗ ಈ ಆಯಾಸವನ್ನು ನಾನೇಕೆ ಆರಾಮಾಗಿ ತೆಗೆದುಕೊಂಡುಬಿಟ್ಟೆ ಎಂದೀಗ ಅನಿಸುತ್ತದೆ.

ವಿಶ್ವದಲ್ಲಿ ವರ್ಷಕ್ಕೆ 1.8 ಕೋಟಿ ಮಂದಿ ಹೃದ್ರೋಗದಿಂದ ಮೃತಪಡುತ್ತಾರೆ. ಅಂದರೆ ಮೃತಪಟ್ಟವರಲ್ಲಿ ಶೇ 31 ರಷ್ಟು ಮಂದಿ ಹೃದಯ ಸಂಬಂಧಿ ರೋಗಗಳಿಂದ ಮೃತಪಟ್ಟವರೇ ಆಗಿರುತ್ತಾರೆ. ಇವರಲ್ಲಿ 30ಕ್ಕೂ ಹೆ್ಚ್ಚು ಮಂದಿ ಭಾರತೀಯರು ಸೇರಿದ್ದಾರೆ.

ಹೃದಯಕ್ಕೆ ರಕ್ತ ಪೂರೈಸುವ ಎಡ ಪರಿಧಮನಿಗಳಲ್ಲಿ ಯಾವುದಾದರೊಂದು ಮುಚ್ಚಿದರೂ ಹೃದಯಾಘಾತ ಆಗುತ್ತದೆ. ರಕ್ತನಾಳಗಳಿಗೆ ಹಾನಿಯಾಗುವುದು ಹೃದಯಾಘಾತವಾದ ಹಿಂದಿನ ದಿನವಲ್ಲ. ಇದು ಹಲವು ವರ್ಷಗಳು, ತಿಂಗಳಿನಿಂದ ನಡೆಯುವ ಪ್ರಕ್ರಿಯೆ. ರಕ್ತನಾಳಗಳು ಕಿರಿದಾಗುತ್ತ ಹೋಗಿ ಶೇ 90ರಷ್ಟು ಮುಚ್ಚಿಹೋದರೆ ಉಸಿರಾಡಲು, ಯಾವುದೇ ಕೆಲಸ ಮಾಡಲು ಹೆಚ್ಚು ತೊಂದರೆ ಉಂಟಾಗುತ್ತದೆ. ಆಯಾಸವಾಗುತ್ತದೆ. ಇ.ಸಿ.ಜಿ ಮಾಡಿದಾಗಲೂ ಕೆಲವೊಮ್ಮೆ ಈ ತೊಂದರೆ ಬಗ್ಗೆ ಗೊತ್ತಾಗದು. ಆ್ಯಂಜಿಯೊಗ್ರಾಂ ಮಾಡಿದಾಗ ಗೊತ್ತಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಹೇಗೆ ಆಗುತ್ತಿದೆ ಎಂಬುದನ್ನು ನೋಡಲು ಇರುವ ವಿಶೇಷ ಎಕ್ಸ್‌ರೇ ಆ್ಯಂಜಿಯೊಗ್ರಾಂ’ ಆಗಿದೆ. ಅಪ್ಪನನ್ನು ಆಸ್ಪತ್ರೆ ಸೇರಿಸಿದಾಗಲೂ ಈ ಪರೀಕ್ಷೆ ಮಾಡಬೇಕು ಎಂದು ವೈದ್ಯರು ಹೇಳಿದ್ದರು.

ಹಲವು ದಿನಗಳ ಹಿಂದೆಯೇಆಸ್ಪತ್ರೆಗೆ ಕರೆತಂದಿದ್ದರೇ ಇಂದು ನಮ್ಮೆದುರು ಇರುತ್ತಿದ್ದರೇನೊ. ಅಪ್ಪನ ಹೃದಯದ ದನಿಯನ್ನು, ಅವರಲ್ಲಾದ ಬದಲಾವಣೆಗಳನ್ನು ತಿಂಗಳುಗಳ ಮೊದಲೇ ಗಮನಿಸಿದ್ದರೇ ಕೇಳುತ್ತಿತ್ತೇನೋ ಎಂದು ಈಗ ಅನಿಸುತ್ತದೆ. ಆದರೀಗ ಏನು ಮಾಡುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.