ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ಸೂರ್ಯನ ತಾಪದ ಅನುಭವ ಆಗುವುದು ಬೇಸಿಗೆಯಲ್ಲಿ ಸಹಜ. ದೇಹ ನಿರ್ಜಲೀಕರಣಗೊಳ್ಳದಂತೆ ಆದಷ್ಟು ದ್ರವಾಹಾರ ಸೇವಿಸುತ್ತಿದ್ದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ. ರಾಸಾಯನಿಕಗಳನ್ನು ಬಳಸಿದ ಪಾನೀಯಗಳಿಂದ ಅನಾರೋಗ್ಯವೇ ಹೆಚ್ಚು. ಹಾಗಾಗಿ ಮನೆಯಲ್ಲಿ ಸಿಗುವ ಕೆಲವೇ ಹಣ್ಣುಗಳನ್ನು ಬಳಸಿ ಅತ್ಯುತ್ತಮ ಪಾನೀಯಗಳು ತಯಾರಿಸಬಹುದು. ಇವುಗಳ ರೆಸಿಪಿ ನೀಡಿದ್ದಾರೆ ಪ್ರಭಾ ಪಿ. ಶಾಸ್ತ್ರಿ
ತಂಪು ಕೆಂಪು
ಬೇಕಾಗುವ ಸಾಮಗ್ರಿಗಳು: ಟೊಮೆಟೊ-2, ಲಿಂಬೆ ಹಣ್ಣು 1 ಹೋಳು, ಸಕ್ಕರೆ -3 ಚಮಚ, ಏಲಕ್ಕಿಪುಡಿ ಸ್ವಲ್ಪ
ಮಾಡುವ ವಿಧಾನ : ಮಿಕ್ಸ್ ಜಾರಿಗೆ ಟೊಮೆಟೊ ಹೆಚ್ಚಿಹಾಕಿ ನುಣ್ಣಗೆ ರುಬ್ಬಿ ಸೋಸಿಕೊಂಡು ಅದಕ್ಕೆ ಲಿಂಬೆರಸ, ಏಲಕ್ಕಿ ಪುಡಿ, ಸಕ್ಕರೆ ಹಾಗೂ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕದಡಿ ಐಸ್‌ಕ್ಯೂಬ್ ಸೇರಿಸಿ, ಕುಡಿಯಲು ಹಿತವಾದ ಪಾನೀಯ ಸಿದ್ಧ.
ತಂಪುಣಿಸಲು ಕಿವಿ–ಸವಿ
ಬೇಕಾಗುವ ಸಾಮಗ್ರಿಗಳು : ಕಿವಿ ಹಣ್ಣು-1 , ಪಾಲಕ್ 4 ಎಲೆ, ಸೇಬು ಹಣ್ಣು ಳಿ , ಉಪ್ಪು ಸ್ವಲ್ಪ
ಮಾಡುವ ವಿಧಾನ: ಕಿವಿಹಣ್ಣು ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ ಪಾಲಕ್ ಎಲೆ, ಸೇಬು ಹೆಚ್ಚಿ ಹಾಕಿ ನುಣ್ಣಗೆ ರುಬ್ಬಿ, ಒಂದು ಕಪ್ ನೀರು ಸೇರಿಸಿ ಸವಿಯಿರಿ. ಇದು ಮಧುಮೇಹಿಗಳಿಗೂ ಒಳ್ಳೆಯದು. ವಿಟಮಿನ್ -ಸಿ ಇಂದ ಕೂಡಿದ ಶಕ್ತಿ ವರ್ಧಕ ಈ ಪಾನೀಯ ಚರ್ಮಕ್ಕೆ ಕಾಂತಿ ನೀಡುತ್ತದೆ.
ಆರಾಮಿನ ಭರವಸೆ ಅಗಸೆ
ಬೇಕಾಗುವ ಸಾಮಗ್ರಿಗಳು: ಅಗಸೆ ಬೀಜ – 1 ಕಪ್, ರಾಗಿ – 1 ಕಪ್, ಬಾದಾಮಿ-1 ಕಪ್ ಗೋಡಂಬಿ -1 ಕಪ್, ಏಲಕ್ಕಿ-4, ಲವಂಗ-4, ಬೆಲ್ಲ 1 ಚಮಚ, ಹಾಲು – ಕಪ್
ಮಾಡುವ ವಿಧಾನ: ಅಗಸೆ ಬೀಜ, ರಾಗಿಯನ್ನು ಬೇರೆ ಬೇರೆಯಾಗಿ ಹುರಿದುಕೊಂಡು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಗೋಡಂಬಿ ಬಾದಾಮಿ ಏಲಕ್ಕಿ ಲವಂಗ ಹಾಕಿ ನುಣ್ಣಗೆ ಪುಡಿಮಾಡಿ ಡಬ್ಬಿಗೆ ತುಂಬಿಸಿ ಇಟ್ಟುಕೊಂಡು ಬೇಕಾದಾಗ ಒಂದು ಲೋಟ ತಣ್ಣಗಿನ ಹಾಲಿಗೆ 2 ಚಮಚ ಪುಡಿ ಬೆಲ್ಲ ಹಾಕಿ ಕದಡಿ ಸವಿಯಿರಿ.
ಘಮ ಘಮ ಗುಲಾಬಿ
ಬೇಕಾಗುವ ಸಾಮಗ್ರಿಗಳು: ಗುಲಾಬಿ ಹೂವು1, ಗೋಡಂಬಿ-4, ಬಾದಾಮಿ-4, ಹಾಲು-ಕಪ್, ಸಕ್ಕರೆ-2ಚಮಚ, ಏಲಕ್ಕಿಪುಡಿ ಸ್ವಲ್ಪ, ಮಿಲ್ಕ್ ಮೇಡ್-1 ಚಮಚ,
ಮಾಡುವ ವಿಧಾನ: ಗುಲಾಬಿ ಹೂವನ್ನು ದಳ ಬಿಡಿಸಿ ತೊಳೆದುಕೊಂಡು ನೀರುಹಾಕಿ ಕುದಿಯಲು ಇಡಿ. ಒಂದು ಕುದಿ ಬಂದಮೇಲೆ ಇಳಿಸಿ ಸೋಸಿ ಇಟ್ಟುಕೊಳ್ಳಬೇಕು. ಬಾದಾಮಿ, ಗೋಡಂಬಿಯನ್ನು ನಾಲ್ಕುಗಂಟೆ ಕಾಲ ನೆನಸಿಕೊಂಡು ಸ್ವಲ್ಪ ಹಾಲು, ಸಕ್ಕರೆ ಏಲಕ್ಕಿಪುಡಿ ಮಿಲ್ಕ್ ಮೇಡ್ ಹಾಕಿ ನುಣ್ಣಗೆ ರುಬ್ಬಿ ತಣ್ಣಗಾದ ಗುಲಾಬಿ ನೀರಿಗೆ ಬೆರಸಿ ಉಳಿದ ಹಾಲನ್ನು ಸೇರಿಸಿ ಕದಡಿ ಸವಿಯಿರಿ ದೇಹಕ್ಕೆ ತಂಪು ನೀಡುವ ಮಿಲ್ಕ್ಶೇಕ್.
ಭಲೆ ಭಲೆ ಕ್ಯಾರೆಟ್ ಕಿತ್ತಳೆ
ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಹಣ್ಣು-1 , ಕ್ಯಾರೆಟ್ , ಹುಳಿ ಲಿಂಬೆ ರಸ -1 ಚಮಚ, ಶುಂಟಿ ಸಣ್ಣ ತುಂಡು ಸ್ವಲ್ಪ ಉಪ್ಪು
ಮಾಡುವ ವಿಧಾನ: ಕ್ಯಾರೆಟ್ ತುರಿದುಕೊಂಡು ಮಿಕ್ಸಿ ಜಾರಿಗೆ ಹಾಕಿ ಕಿತ್ತಳೆ ಹಣ್ಣು ಬಿಡಿಸಿ ಹಾಕಿ, ಶುಂಠಿ ಉಪ್ಪು ಹಾಕಿ ನುಣ್ಣಗೆ ರುಬ್ಬಿ ಲಿಂಬೆ ರಸ ಹಾಕಿ ಒಂದು ಕಪ್ ನೀರು ಹಾಕಿ, ಕದಡಿ ಸವಿಯಿರಿ ಇದು ಮಧು ಮೇಹಿಗಳಿಗೂ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.