ADVERTISEMENT

ರೆಮ್‌ಡಿಸಿವಿರ್‌ ‘ರಾಮಬಾಣ’ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್‌– 19: ಪರಿಣಾಮದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೂ ಸಂದೇಹ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:05 IST
Last Updated 23 ಏಪ್ರಿಲ್ 2021, 20:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಹೆಪಟೈಟಿಸ್‌–ಸಿ ಗಾಗಿ ಅಭಿವೃದ್ಧಿಪಡಿಸಿದ ಬಳಿಕ ಎಬೋಲಾ ಮತ್ತು ಮಾರ್ಬಗ್‌ಗೂ ಬಳಕೆ ಮಾಡಿದ ರೆಮ್‌ಡಿಸಿವಿರ್‌ ಚುಚ್ಚುಮದ್ದಿಗೆ ಈಗ ದೇಶದಲ್ಲಿ ಭಾರಿ ಬೇಡಿಕೆ ಸೃಷ್ಟಿ ಆಗಿದೆ. ಆದರೆ, ಇದು ಕೋವಿಡ್‌–19ಗೆ ‘ರಾಮಬಾಣ’ವಲ್ಲಎಂದು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚರಿಸಿದೆ.

‘ಕೋವಿಡ್‌ನಿಂದ ಆಸ್ಪತ್ರೆಗೆ ದಾಖ ಲಾದ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ರೆಮ್‌ಡಿಸಿವಿರ್‌ ಪ್ರಯೋಜನಕಾರಿ ಎಂಬುದಕ್ಕೆ ಈವರೆಗೆ ಪೂರಕ ಸಾಕ್ಷ್ಯ ಸಿಕ್ಕಿಲ್ಲ. ಆದರೆ, ಅತ್ಯಂತ ಸಂಕೀರ್ಣ ಸ್ಥಿತಿ ತಲುಪಿದ ರೋಗಿಗಳಿಗೆ ಮಾತ್ರ ಷರತ್ತು ಬದ್ಧವಾಗಿ ಬಳಕೆ ಮಾಡಬಹುದು’ ಎಂದು ಅದು ಸ್ಪಷ್ಟಪಡಿಸಿದೆ.

ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು ಮಾತನಾಡಿದ್ದು, ‘ಕೋವಿಡ್‌ ರೋಗಿಗಳಲ್ಲಿ ರೆಮ್‌ಡಿಸಿವಿರ್‌ ಬಳಸಿ ಐದು ಕ್ಲಿನಿಕಲ್‌ ಪ್ರಯೋಗಗಳನ್ನು ನಡೆಸಲಾಗಿದೆ. ಇದರಿಂದ ಸಾವನ್ನು ತಡೆಯಲಿಕ್ಕಾಗಲಿ ಅಥವಾ ಕೃತಕ ಉಸಿರಾಟ ಸಾಧನದ ಅವಲಂಬನೆ ಕಡಿಮೆ ಮಾಡುವಲ್ಲಿ ನೆರವಾಗಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ರೆಮ್‌ಡಿಸಿವಿರ್‌ ಬಳಕೆ ವಿಚಾರವಾಗಿ ಕಳೆದ ವರ್ಷವೂ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಹೊರಡಿಸಿತ್ತು. ಈಗಲೂ ಹೆಚ್ಚಿನ ಕ್ಲಿನಿಕಲ್‌ ಪ್ರಯೋಗಗಳು ನಡೆಯುತ್ತಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಈ ಚುಚ್ಚುಮದ್ದು ಬಳಕೆ ಮಾಡಿದ ರೋಗಿಗಳಲ್ಲಿ ಸುಧಾರಣೆಗಳ ಲಕ್ಷಣಗಳು ಕಂಡು ಬರುತ್ತಿಲ್ಲವಾದ ಕಾರಣ ಷರತ್ತು ಬದ್ಧವಾಗಿ ಮಾತ್ರ ಬಳಸಬಹುದು. ಪ್ರಯೋಜನಕಾರಿ ಎಂದು ಕಂಡು ಬಂದಾಗ ಮಾತ್ರವೇ ಮಾರ್ಗಸೂಚಿ ಪರಿಷ್ಕರಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್‌ ತಾಂತ್ರಿಕ ಸಮಿತಿಯ ಮುಖ್ಯಸ್ಥೆ ಡಾ.ಮರಿಯಾ ವಾನ್‌ ಕೆರ್ಕ್ಹೋವ್ ತಿಳಿಸಿದ್ದಾರೆ.

‘ರೆಮ್‌ಡಿಸಿವಿರ್‌ ಕೊರೊನಾ ವಿರುದ್ಧ ಆಶಾಕಿರಣ’ ಎಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಸೌಮ್ಯ ಸ್ವಾಮಿನಾಥನ್, ಸಣ್ಣ ಪುಟ್ಟ ಅಧ್ಯಯನಗಳಲ್ಲಿ ಅಲ್ಪಪ್ರಮಾಣದ ಪ್ರಯೋಜನ ಕಂಡು ಬಂದಿರಲೂಬಹುದು. ನ್ಯಾಷನಲ್‌ ಹೆಲ್ತ್‌ ಇನ್ಸ್‌ ಟಿಟ್ಯೂಟ್ ನಡೆಸಿರುವ ಪ್ರಯೋಗಗಳ ಪ್ರಕಾರ, ಮರಣ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಪ್ರಯೋಜನ ಕಂಡು ಬಂದಿದೆ. ಈ ಪ್ರಯೋಗಗಳು ಅತಿ ಸಣ್ಣ ಗುಂಪಿನಲ್ಲಿ ನಡೆಸಿದ್ದಾಗಿದೆ. ದೊಡ್ಡ ಗುಂಪುಗಳಲ್ಲಿ ನಡೆಸಿರುವ ಪ್ರಯೋಗದ ಫಲಿತಾಂಶ ಇನ್ನು ಕೆಲವೇ ವಾರಗಳಲ್ಲಿ ಬರಲಿದೆ’ ಎಂದು ಅವರು ಹೇಳಿದ್ದಾರೆ.

ರೆಮ್‌ಡಿಸಿವಿರ್‌ ಬಗ್ಗೆಯೂ ತಜ್ಞರ ಸಂದೇಹ?

ರೆಮ್‌ಡಿಸಿವಿರ್‌ ಒಂದು ವೈರಾಣು ನಿರೋಧಕ ಔಷಧ.

ಗಿಲೀಡ್‌ ಸೈನ್ಸಸ್‌, ಅಮೆರಿಕಾದ ‘ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್ಷನ್‌’(ಸಿಡಿಸಿ) ಮತ್ತು ಅಮೆರಿಕಾದ ‘ಆರ್ಮಿ ಮೆಡಿಕಲ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇನ್ಫೆಕ್ಷಿಯಸ್‌ ಡಿಸೀಸ್‌’ ಜಂಟಿಯಾಗಿ ಆರ್‌ಎನ್‌ಎ ಆಧಾರಿತ ಸಾಂಕ್ರಾಮಿಕ ತಡೆಗಾಗಿ ಅಭಿವೃದ್ಧಿ ಪಡಿಸಿವೆ. ಹೆಪಟೈಟಿಸ್‌(ಸಿ), ಎಬೋಲಾ ಮತ್ತು ಮಾರ್ಬಗ್‌ಗೂ ವೈರಸ್‌ಗಳ ವಿರುದ್ಧವೂ ಬಳಸಲಾಗಿತ್ತು. ಆದರೆ, ಹೇಳಿಕೊಳ್ಳುವಷ್ಟು ಪ್ರಯೋಜನ ಆಗಲಿಲ್ಲ.

ರೆಮ್‌ಡಿಸಿವಿರ್‌ ಬಳಕೆಯ ಬಗ್ಗೆ ‘ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌’ ನಲ್ಲಿ ತಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ. ‘ಇದು ಅತ್ಯಂತ ದುಬಾರಿ ಬೆಲೆಯದ್ದಾಗಿದೆ. ಕೋವಿಡ್‌ನ ಇತರ ಬಗೆಯ ಚಿಕಿತ್ಸೆಗಳಿಗೆ ಬಳಸಬಹುದಾದ ಹಣದ ಬಹುಭಾಗ ರೆಮಿಡಿಸಿಆರ್‌ನತ್ತ ಹರಿದು ಹೋಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.