
ಪ್ರಾತಿನಿಧಿಕ ಚಿತ್ರ
ನಿರಂತರವಾಗಿ ಒಂದೆ ಕಡೆ, ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಪರಿಣಾಮವಾಗಿ ಬೆನ್ನು ನೋವು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಬೆನ್ನು ಮೂಳೆಯ ಆರೋಗ್ಯವನ್ನು ನಾವು ಗಂಭೀರವಾಗಿ ಪರಿಗಣಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಕುಳಿತಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು, ಧೂಮಪಾನದಿಂದ ದೂರ ಉಳಿಯುವುದು, ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸುವುದು, ನಿಯಮಿತ ದೈಹಿಕ ಚಟುವಟಿಕೆಯಂತಹ ಆರೋಗ್ಯಕರ ಅಭ್ಯಾಸಗಳನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಬಹುದು.
ಭಂಗಿ: ನಾವು ಕುಳಿತಿರಲಿ, ನಿಂತಿರಲಿ ಅಥವಾ ನಡೆಯುತ್ತಿರಲಿ, ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಬೆನ್ನುಮೂಳೆಯ ಡಿಸ್ಕ್‌ಗಳ ಮೇಲಿನ ಮತ್ತು ಬೆಂಬಲಿತ ಅಸ್ಥಿರಜ್ಜುಗಳ ಮೇಲಿನ ಒತ್ತಡವನ್ನು ನಿಯಮಿತವಾಗಿ ಕಡಿಮೆ ಮಾಡುವುದು ವಯೋಸಹಜವಾದ ಬೆನ್ನುಮೂಳೆಯ ಸವೆತ ಮತ್ತು ಸವಕಳಿಯನ್ನು ತಡೆಯಲು ಸಹಾಯ ಮಾಡುತ್ತದೆ.
ಭಾರ ಎತ್ತುವಾಗ: ಯಾವುದೇ ವಸ್ತುವನ್ನು ಎತ್ತುವಾಗ, ನಿಮ್ಮ ಮೊಣಕಾಲುಗಳು ಮತ್ತು ಸೊಂಟದ ಸಹಾಯದೊಂದಿಗೆ ಬಾಗಿ, ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ವಸ್ತುವನ್ನು ನಿಮ್ಮ ದೇಹಕ್ಕೆ ಹತ್ತಿರ ಹಿಡಿದುಕೊಳ್ಳಿ ಮತ್ತು ಎತ್ತಲು ನಿಮ್ಮ ಕಾಲುಗಳ ಶಕ್ತಿಯನ್ನು ಬಳಸಿ.
ಕುಳಿತುಕೊಳ್ಳುವ ಜಾಗ: ತರಗತಿಯಲ್ಲಿ ಕುಳಿತಿರುವ ಮಕ್ಕಳಾಗಿರಲಿ, ಕುಳಿತು ಕೆಲಸ ಮಾಡುವವರಾಗಲೀ ಅಥವಾ ಮನೆಯಲ್ಲಿ ಗೃಹಿಣಿಯಾಗಿರಲಿ, ಕುಳಿತುಕೊಳ್ಳುವ ಜಾಗಕ್ಕೆ ಆದ್ಯತೆ ನೀಡಿ. ಕಣ್ಣಿನ ನೇರಕ್ಕೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಲು ಡೆಸ್ಕ್ ಅನ್ನು ಹೊಂದಿಸಿಕೊಳ್ಳಿ. ದೀರ್ಘಕಾಲ ಕುಳಿತುಕೊಳ್ಳಲು ಕುರ್ಚಿಯಲ್ಲಿ ಸೊಂಟಕ್ಕೆ ಬೆಂಬಲ ನೀಡುವ ವಸ್ತುವನ್ನು ಬಳಸಿ. ಇದರಿಂದ ಬೆನ್ನು ಬಾಗುವುದನ್ನು ತಪ್ಪಿಸಬಹುದು.
ಕೋರ್ ಬಲಪಡಿಸುವ ವ್ಯಾಯಾಮಗಳು: ಬೆನ್ನು ನೋವಿಗಾಗಿ ವೈದ್ಯರ ಬಳಿ ಹೋದರೆ ಮೊದಲಿಗೆ ಸೂಚಿಸುವು ನಮ್ಮ ಕೋರ್ ಅನ್ನು ಬಲಪಡಿಸುವ ವ್ಯಾಯಾಮಗಳು. ಜಡ ಜೀವನಶೈಲಿಯು ಬೆನ್ನುಮೂಳೆಯ ಆರೋಗ್ಯಕ್ಕೆ ಕುತ್ತು ತರಬಹುದು. ಹಿಂಭಾಗದ ಸ್ನಾಯುಗಳ ಚಲನೆ, ಕೋರ್ ಬಲಪಡಿಸುವ ವ್ಯಾಯಾಮಗಳು ಬೆನ್ನು ನೋವಿನ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತವೆ.
ಆರೋಗ್ಯಕರ ಆಹಾರ ಸೇವಿಸಿ: ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವು ಮೂಳೆ ಸಾಂದ್ರತೆಗೆ ಒಳ್ಳೆಯದು.. ದೇಹದ ತೂಕ ಹೆಚ್ಚಾದಷ್ಟು ಬೆನ್ನಿನ ಮೇಲೆ, ಡಿಸ್ಕ್‌ಗಳ ಮೇಲೆ ಭಾರ ಹೆಚ್ಚಾಗುತ್ತದೆ. ಹೀಗಾಗಿ ಸೂಕ್ತ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವ ಮೂಲಕ ನಿರ್ಜಲೀಕರಣವನ್ನು ತಡೆಯುವ ಮೂಲಕ ಬೆನ್ನುಮೂಳೆಯ ಡಿಸ್ಕ್‌ಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ಆತಂಕದಿಂದ ಅಪಾಯ: ಉದ್ವೇಗ, ಅನಗತ್ಯ ಒತ್ತಡ ಮತ್ತು ಆತಂಕದಿಂದ ದೂರವಿರಿ. ಇವು ಸ್ನಾಯುಗಳ ಒತ್ತಡ ನೀಡಿ, ಬೆನ್ನುನೋವಿಗೆ ಕಾರಣವಾಗಬಹುದು ಅಥವಾ ಇರುವ ನೋವನ್ನು ಉಲ್ಬಣಗೊಳಿಸಬಹುದು.
ಲೇಖಕರು: ಡಾ. ಪ್ರಮೋದ್ ಸುದರ್ಶನ್, ಹಿರಿಯ ಸಲಹೆಗಾರರು, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಅಪೊಲೊ ಆಸ್ಪತ್ರೆ, ಬೆಂಗಳೂರು