
ಪ್ರಾತಿನಿಧಿಕ ಚಿತ್ರ
ಚರ್ಮದ ಹಲವು ಕಾಯಿಲೆಗಳಲ್ಲಿ ಸೋಂಕು ರೋಗಗಳೂ ಒಂದು. ಸೋಂಕು ರೋಗಗಳು ರೋಗಾಣುಗಳೆಂಬ ಸಣ್ಣ ಸಣ್ಣ ಜೀವಿಗಳಿಂದ ಉಂಟಾಗುವುದರಿಂದ ಇವು ಒಬ್ಬರಿಂದೊಬ್ಬರಿಗೆ ಸ್ಪರ್ಶದ ಮೂಲಕ ಹರಡುತ್ತವೆ. ಹಾಗಾಗಿ ಇವನ್ನು ಅಂಟುರೋಗಗಳೆಂದೂ ಕರೆಯಲಾಗುತ್ತದೆ. ಇತರ ಅಂಗಾಂಗಗಳಿಗೆ ಉಂಟಾಗುವಂತೆ, ಚರ್ಮಕ್ಕೂ ಬ್ಯಾಕ್ಟೀರಿಯಾ, ವೈರಾಣು, ಶಿಲೀಂಧ್ರ, ಮತ್ತು ಪರಾವಲಂಬಿಗಳಿಂದ ಸೋಂಕು ರೋಗಗಳು ಉಂಟಾಗುತ್ತವೆ. ಈಗ ಚರ್ಮಕ್ಕೆ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳಿಗೆ ಪಯೋಡರ್ಮ( Pyoderma ) ಎನ್ನುತ್ತಾರೆ. ಗ್ರೀಕ್ ಪದಗಳಾದ ಪಯೋ ಎಂದರೆ ಪಸ್ ಅಥವಾ ಕೀವು ಮತ್ತು ಡರ್ಮ ಎಂದರೆ ಚರ್ಮ.
ಬ್ಯಾಕ್ಟೀರಿಯಾ ರೋಗಗಳಲ್ಲಿ ಚರ್ಮದಲ್ಲಿ ಕೀವು ಉಂಟಾಗುವುದರಿಂದ ಈ ಹೆಸರು ಬಂದಿದೆ. ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ, ರಕ್ತದಲ್ಲಿನ ಬಿಳಿ ರಕ್ತಕಣಗಳು ಅವುಗಳನ್ನು ಕೊಂದು ತಾವೂ ಸಾಯುತ್ತವೆ. ಸತ್ತ ಬ್ಯಾಕ್ಟೀರಿಯಾಗಳು ಮತ್ತು ಬಿಳಿ ರಕ್ತಕಣಗಳ ಮಿಶ್ರಿತ ಗಟ್ಟಿಯಾದ ಹಳದಿ ದ್ರವವೇ ಕೀವು. ಈ ಪಯೋಡರ್ಮದಲ್ಲಿ ಪ್ರಾಥಮಿಕ ಪಯೋಡರ್ಮ ( Primary Pyoderma) ಮತ್ತು ದ್ವಿತೀಯ ಪಯೋಡರ್ಮ ( Secondary Pyoderma) ಎಂಬ ಎರಡು ಮುಖ್ಯ ವಿಧಗಳಿವೆ. ಪ್ರಾಥಮಿಕ ಪಯೋಡರ್ಮ, ಯಾವುದೇ ಪೂರ್ವ ಕಾರಣವಿಲ್ಲದೆ ಚರ್ಮದ ಮೇಲೆ ನೇರವಾಗಿ ಆಗುತ್ತದೆ. ಇದರಲ್ಲಿಯೂ ಅನೇಕ ರೋಗಗಳಿವೆ.
ಇಂಪೆಟಿಗೋ ( Impetigo) : ಇದು ಚಿಕ್ಕ ಮಕ್ಕಳಲ್ಲಿ ಬರುವ ಸಾಮಾನ್ಯ ತೊಂದರೆ. ಇದು ಹೆಚ್ಚಾಗಿ ಸಟಫೈಲೋಕಾಕಸ್ ಇಲ್ಲವೇ ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಇದರಲ್ಲಿ ಬುಲ್ಲಸ್ ( Bullous) ಮತ್ತು ನಾನ್ ಬುಲ್ಲಸ್ ( Nonbullous) ಎಂಬ ಬಗೆಗಳಿವೆ. ಬುಲ್ಲಸ್ ಬಗೆಯಲ್ಲಿ ಬುಲ್ಲಗಳೆಂಬ ದೊಡ್ಡ ನೀರ್ಗುಳ್ಳೆಗಳಾಗುತ್ತವೆ ಹಾಗೂ ಅವು ಒಡೆದು ಚರ್ಮ ಕಿತ್ತು ಬರುತ್ತದೆ ಹಾಗೂ ನೋಯುತ್ತದೆ. ಇದು ಕಂಕುಳು, ತೊಡೆ ಸಂದು, ಬೆರಳುಗಳ ಮಧ್ಯೆ, ಸ್ತನಗಳ ಕೆಳಗೆ, ಹಾಗೂ ಪೃಷ್ಠಗಳಲ್ಲಾಗುತ್ತದೆ. ನವಜಾತ ಶಿಶುಗಳಲ್ಲಿ, ಪುಟ್ಟ ಮಕ್ಕಳಲ್ಲಿ, ಹಾಗೂ ರೋಗನಿರೋಧಕಶಕ್ತಿ ಬಹಳ ಕಡಿಮೆಯಿರುವ ಮತ್ತು ಮೂತ್ರಪಿಂಡ ವೈಫಲ್ಯವಿರುವ ವಯಸ್ಕರಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡಾಗ ದೊಡ್ಡ ಪ್ರಮಾಣದಲ್ಲಿ ಚರ್ಮ ಕಿತ್ತು ಬರುತ್ತದೆ. ಇದನ್ನು ಸ್ಟಫೈಲೋಕಾಕಲ್ ಸ್ಕಾಲ್ಡೆಡ್ ಸ್ಕಿನ್ ಸಿಂಡ್ರೋಮ್ ( Staphylococcal Scalded Skin Syndrome) ಎನ್ನುತ್ತಾರೆ. ಇದೂ ಸೇರಿದಂತೆ ಬುಲ್ಲಸ್ ಇಂಪೆಟಿಗೋ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
ನಾನ್ ಬುಲ್ಲಸ್ ಇಂಪೆಟಿಗೋ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಇದರಲ್ಲಿ ಮೊದಲು ಸಣ್ಣ ನೀರ್ಗುಳ್ಳೆಗಳೂ ಕೀವ್ಗುಳ್ಳೆಗಳೂ ಆಗಿ ಅವು ಬೇಗನೆ ಒಡೆದು ಹಳದಿ, ಜೇನು ಬಣ್ಣದ ಹೆಕ್ಕಳೆಗಳಾಗುತ್ತವೆ. ಇದು ಹೆಚ್ಚಾಗಿ ಮೂಗು ಮತ್ತು ಬಾಯ ಬಳಿ, ಹಾಗೂ ಕೈಕಾಲುಗಳಲ್ಲಿ ಉಂಟಾಗುತ್ತದೆ. ನೋವು ಮತ್ತು ತುರಿಕೆಗಳಿರುತ್ತವೆ. ಇದು ಬಹಳ ಬೇಗನೆ ಅಂಟುವ ರೋಗ.
ಫಾಲಿಕ್ಯುಲೈಟಿಸ್ ( Folliculitis):ರೋಮಕೂಪದ ( Hair Follicle) ಮೇಲ್ಭಾಗದಲ್ಲಿ ಸ್ಟಫೈಲೋಕಾಕಸ್ ಬ್ಯಾಕ್ಟೀರಿಯಾ ಸೋಂಕಾದರೆ ಈ ತೊಂದರೆಯಾಗುತ್ತದೆ. ಸಣ್ಣ ಸಣ್ಣ ಕೀವು ಗುಳ್ಳೆಗಳಾಗುತ್ತವೆ. ಗಂಡಸರು ಗಡ್ಡ ಬೋಳಿಸುವಾಗ ರೋಮಕೂಪಗಳಿಗೆ ಗಾಯವಾಗಿ ಈ ಸೋಂಕಾಗಬಹುದು. ಮಧುಮೇಹ, ಕುಂದಿದ ರೋಗನಿರೋಧಕ ಶಕ್ತಿ, ಮೊದಲಾದ ಕಾರಣಗಳಿಂದ ಇದು ದೀರ್ಘಾವಧಿಯವರೆಗೆ ಮತ್ತೆ ಮತ್ತೆ ಆಗುತ್ತಿರಬಹುದು.
ಫರಂಕಲ್ ( Furuncle): ಸಾಮಾನ್ಯವಾಗಿ ಬಿಸಿಗುಳ್ಳೆ ಎಂದು ಕರೆಯಲಾಗುವ ಇದು, ರೋಮಕೂಪದ ಪೂರ್ಣ ಸೋಂಕಾಗಿರುತ್ತದೆ. ಕೆಂಪು ಗುಳ್ಳೆಯಾಗಿ, ಕ್ರಮೇಣ ಕೀವಿನಿಂದ ತುಂಬಿ ದಪ್ಪವಾಗುತ್ತದೆ. ಬಹಳ ನೋಯುತ್ತದೆ. ಅದು ಒಡೆದು ಕೀವು ಹೊರಬರಬಹುದು. ಇದೂ ಕೂಡ ಮಧುಮೇಹ, ರೋಗನಿರೋಧಕ ಶಕ್ತಿಯ ಕುಂದಿದ್ದರೆ ಊಟ, ನಿದ್ರೆಯಲ್ಲಿ ವ್ಯತ್ಯಾಸ ಉಂಟಾದರೆ, ಮಾನಸಿಕ ಒತ್ತಡದಿಂದಲೂ ಉಂಟಾಗಬಹುದು.
ಕಾರ್ಬಂಕಲ್ ( Carbuncle): ಹಲವಾರು ರೋಮಕೂಪಗಳು ಒಟ್ಟಿಗೆ ಸೋಂಕಿಗೀಡಾದಾಗ ಈ ತೊಂದರೆಯಾಗುತ್ತದೆ. ಒಂದು ದೊಡ್ಡ ಊತ ಉಂಟಾಗಿ ಕೀವು ಸೂಸುವ ಹಲವಾರು ರಂಧ್ರಗಳಾಗುತ್ತವೆ. ಸಾಮಾನ್ಯವಾಗಿ ಈ ತೊಂದರೆಯು ಮಧುಮೇಹ, ಕ್ಯಾನ್ಸರ್, ಏಡ್ಸ್ ರೋಗಿಗಳಿಗೆ ಹಾಗೂ ಆಹಾರ ಕೊರತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಆಗುತ್ತದೆ. ಸಾಮಾನ್ಯವಾಗಿ ಕುತ್ತಿಗೆ, ಬೆನ್ನುಗಳಲ್ಲಿ ಕಂಡುಬರುತ್ತದೆ. ನೋಡಲು ಕಲ್ಲಿದ್ದಲಿನಂತಿರುತ್ತದೆ. ಕಾರ್ಬಂಕಲ್ ಪದದ ಅರ್ಥ ಕಲ್ಲಿದ್ದಲು ಎಂದು.
ಹೈಡ್ರಡಿನೈಟಿಸ್ ಸಪ್ಪುರಟಿವ ( Hydradenitis suppurativa): ಬೊಜ್ಜು, ಆನುವಂಶಿಕ ಕಾರಣಗಳು, ಹಾರ್ಮೋನ್ ವ್ಯತ್ಯಾಸಗಳು, ಮೊದಲಾದ ಕಾರಣಗಳಿಂದ ಕಂಕುಳು ಚರ್ಮದಲ್ಲಿ ಕಂಡುಬರುತ್ತವೆ. ಇವೇ ಕೀವು ಸೂಸುವ ಗುಳ್ಳೆಗಳಾಗುತ್ತ, ವಾಸಿಯಾದಂತೆ ಒರಟು ಕಲೆಗಳಾಗುತ್ತದೆ. ಇದನ್ನು ಹೈಡ್ರಡಿನೈಟಿಸ್ ಸಪ್ಪುರಟಿವ ಎನ್ನುತ್ತಾರೆ. ಇದು ಹೆಚ್ಚಾಗಿ ಬೊಜ್ಜಿರುವ ಮಹಿಳೆಯರಲ್ಲಿ ಕಾಣಬಹುದು.
ಕುರ ಅಥವಾ ಆಬ್ಸೆಸ್ ( Abscess): ಮಧುಮೇಹ, ರೋಗನಿರೋಧಕ ಶಕ್ತಿ ಕುಂದುವಿಕೆ, ಕ್ಯಾನ್ಸರ್ ಚಿಕಿತ್ಸೆ, ಅಶುಚಿತ್ವ, ಮೊದಲಾದ ಕಾರಣಗಳಿಂದ ಬ್ಯಾಕ್ಟೀರಿಯಾ ಸೋಂಕು ವಾಸಿಯಾಗದೇ ಕುರವಾಗಬಹುದು. ಕುರವೆಂದರೆ ಕೀವು ತುಂಬಿದ ಒಂದು ಊತ. ಇದಕ್ಕೆ ಸೂಜಿಯಿಂದ ಚುಚ್ಚಿ ಕೀವನ್ನು ತೆಗೆಯಬೇಕು.
ಎರಿಸಿಪಿಲಸ್ ( Erysipelas) ಮತ್ತು ಸೆಲ್ಯುಲೈಟಿಸ್ ( Cellulitis): ಎರಿಸಿಪಿಲಸ್ ಚರ್ಮದ ಮೇಲ್ಪದರಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು, ನಿರ್ದಿಷ್ಟ ಅಂಚುಗಳ ಕೆಂಪು ಊತ ಇರುತ್ತದೆ. ಸೆಲ್ಯುಲೃಟಿಸ್ ಚರ್ಮದ ಒಳಭಾಗ ಮತ್ತು ಅಡಿಭಾಗಗಳನ್ನು ಬಾಧಿಸುವ ಬ್ಯಾಕ್ಟೀರಿಯಾ ಸೋಂಕಾಗಿದ್ದು, ಚಿಕಿತ್ಸೆ ಮಾಡದಿದ್ದರೆ ಮೈ ಎಲ್ಲ ಹರಡುತ್ತದೆ.
ದ್ವಿತೀಯ ಪಯೋಡರ್ಮ
ಚರ್ಮಕ್ಕೆ ಕಜ್ಜಿ, ಇಸುಬು, ಮೊದಲಾಗಿ ಬೇರೆ ಯಾವುದಾದರೂ ತೊಂದರೆಯಿದ್ದು ಅವುಗಳ ತುರಿಕೆಯಿಂದ ಗಾಯಗಳಾಗಿ ಇಲ್ಲವೇ ಏಟು ಬಿದ್ದು ಗಾಯಗಳಾಗಿ ಅವುಗಳಿಗೆ ಬ್ಯಾಕ್ಟೀರಿಯಾ ಸೋಂಕಾದರೆ ಅದನ್ನು ದ್ವಿತೀಯ ಪಯೋಡರ್ಮ ಎನ್ನುತ್ತಾರೆ.
ಚಿಕಿತ್ಸೆ ಹೇಗೆ?
ಚರ್ಮದ ಬ್ಯಾಕ್ಟೀರಿಯಾ ಸೋಂಕುಗಳಿಗೆ ಮುಖ್ಯ ಚಿಕಿತ್ಸೆ ಎಂದರೆ ಆ್ಯಂಟಿ ಬಯಾಟಿಕ್‌ಗಳು ಅಥವಾ ಜೀವನಿರೋಧಕ ಔಷಧಿಗಳು.
ಅಮಾಕ್ಸಿಸಿಲಿನ್, ಸೆಫಲೋಸ್ಪೋರಿನಂಥ ಮೊದಲಾದ ಮಾತ್ರೆ, ಸಿರಪ್‌ಗಳು. ಚರ್ಮಕ್ಕೆ ಸವರಲು ಫ್ಯುಸಿಡಿಕ್ ಆಮ್ಲ, ಮ್ಯುಪಿರೋಸಿನಂಥ ಮುಲಾಮುಗಳು ದೊರೆಯುತ್ತವೆ. ಇವನ್ನು ಚರ್ಮವೈದ್ಯರ ನಿರ್ದೇಶನದಲ್ಲಿ ಬಳಸಬೇಕು. ಜ್ವರವಿದ್ದರೆ ಪ್ಯಾರಾಸಿಟಮಾಲ್ ಹಾಗೂ ನೋವಿದ್ದರೆ ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತದೆ.
ಫರಂಕಲ್‌ಗಳಿಗೆ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯ ಶಾಖ ಕೊಡಬಹುದು. ಕೆಲವೊಮ್ಮೆ ಫರಂಕಲ್ ಮತ್ತು ಕುರಗಳಲ್ಲಿ ಸೂಜಿಯಿಂದ ಸಣ್ಣ ಛೇದನ ಮಾಡಿ ಕೀವನ್ನು ಹರಿಬಿಟ್ಟು ಪಟ್ಟಿ ಹಾಕುವ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಅಂತೆಯೇ ಸೆಲ್ಯುಲೈಟಿಸ್ ಮತ್ತು ಹೈಡ್ರಡಿನೈಟಿಸ್ ಸಪ್ಪುರಟಿವ ಔಷಧಿಗಳಿಂದ ಗುಣವಾಗದಿದ್ದರೆ ಇದೇ ರೀತಿಯ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಫರಂಕಲ್ ಗಳು ಪದೇ ಪದೇ ಆಗುತ್ತಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಜೀವಸತ್ವಗಳ ಔಷಧಿಗಳು ಬೇಕಾಗುತ್ತವೆ. ಹೈಡ್ರಡಿನೈಟಿಸ್ ಸಪ್ಪುರಟಿವ ಪದೇ ಪದೇ ಆಗುತ್ತಿದ್ದರೆ ಹಾಗೂ ಗುಣವಾಗದೇ ತೀವ್ರವಾಗಿದ್ದರೆ, ದೋಷಿತ ಚರ್ಮವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ. ಇದಕ್ಕೆ ಕೀವುಗುಳ್ಳೆಗಳನ್ನು ಸುಡುವ ಹಾಗೂ ಕೂದಲುಗಳನ್ನು ನಾಶಮಾಡುವ ಲೇಸರ್ ಚಿಕಿತ್ಸೆಯೂ ಇದೆ. ಬ್ಯಾಕ್ಟೀರಿಯಾಗಳ ಸೋಂಕುಗಳನ್ನು ತಡೆಗಟ್ಟಲು ಶುಚಿತ್ವ ಬಹಳ ಮುಖ್ಯ. ನಿತ್ಯ ಸ್ನಾನ, ಹಾಗೂ ಒಗೆದ ಬಟ್ಟೆಗಳನ್ನು ಧರಿಸುವುದು ಮುಖ್ಯ. ಒಳ್ಳೆಯ ಆಹಾರ ಸೇವನೆ, ನಿದ್ರೆ, ಮತ್ತು ವ್ಯಾಯಾಮಗಳಿಂದ ರೋಗನಿರೋಧಕ ಶಕ್ತಿ ಉತ್ತಮವಾಗಿಟ್ಟುಕೊಳ್ಳಬೇಕು.
ಮಧುಮೇಹ ಇರುವವರು ಚರ್ಮದ ವಿಷಯದಲ್ಲಿ ಎಚ್ಚರವಾಗಿರಬೇಕು. ಗಾಯಗಳಾಗದಂತೆ ನೋಡಿಕೊಳ್ಳಬೇಕು. ಗಾಯಗಳಾದರೆ ಆ್ಯಂಟಿಬಯಾಟಿಕ್ ಮುಲಾಮುಗಳನ್ನು ಅವುಗಳಿಗೆ ಸವರಬೇಕು. ಕಜ್ಜಿ, ಇಸುಬು, ಮೊದಲಾದ ತುರಿಕೆಯ ರೋಗಗಳನ್ನು ಬೇಗ ವಾಸಿಮಾಡಿಕೊಳ್ಳಬೇಕು. ಯಾರಿಗಾದರೂ ಈ ಸೋಂಕು ರೋಗಗಳಿದ್ದರೆ ಅವು ಅಂಟುವ ಕಾರಣದಿಂದ ಇತರರಿಗೆ ಹರಡುವುದನ್ನು ತಪ್ಪಿಸಲು ಬೇಗನೆ ಚಿಕಿತ್ಸೆ ಪಡೆಯಬೇಕು. ಹೀಗೆ ಚರ್ಮದ ಸೋಂಕು ರೋಗಗಳು ಬರದಂತೆ ನಿವಾರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.