ADVERTISEMENT

ನೆಗಡಿಯೇ? ಸೈನಸೈಟಿಸ್‌ಗೆ ತಿರುಗಬಹುದು!

ಡಾ.ರಾಘವೇಂದ್ರ ಎನ್.ಚಿಂತಾಮಣಿ
Published 7 ಜೂನ್ 2019, 19:30 IST
Last Updated 7 ಜೂನ್ 2019, 19:30 IST
Sick woman sitting at home and blowing her noseSickness Cold
Sick woman sitting at home and blowing her noseSickness Cold   

ಉ ಸಿರಾಟಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಲ್ಲಿ ನೆಗಡಿ, ಕೆಮ್ಮು ಮತ್ತು ಉಬ್ಬಸ ಸಹಜ. ವಾಸಿಯಾಗದ ನೆಗಡಿ ಕಫಾಧಿಕ್ಯ ಕೆಮ್ಮಿಗೂ, ಸತತವಾದ ಕೆಮ್ಮು, ಉಬ್ಬಸಕ್ಕೂ ಕಾರಣವಾಗುತ್ತದೆ. ಹೀಗಾಗಿ ನೆಗಡಿ ಬಂದ ಕೂಡಲೇ ಸೂಕ್ತ ಉಪಚಾರ ಮಾಡಿಕೊಂಡು ವಾಸಿ ಮಾಡಿಕೊಳ್ಳುವುದು ಬುದ್ಧಿವಂತಿಕೆ. ಪದೇ ಪದೇ ಕಾಡುವ ನೆಗಡಿಯು ಸೈನಸೈಟಿಸ್ ಅಥವಾ ಆಯುರ್ವೇದದಲ್ಲಿ ತಿಳಿಸುವ ‘ಪ್ರತಿಶ್ಯಾಯ’ಕ್ಕೆ ಎಡೆ ಮಾಡಿಕೊಡುತ್ತದೆ.

ಏನಿದು ಸೈನಸೈಟಿಸ್?
ಸೈನಸ್ ಕ್ಯಾವಿಟಿ ಎಂದರೆ ಒಂದು ಖಾಲಿ ಜಾಗ ಅಥವಾ ಕುಹರ ಎಂದರ್ಥ. ತಲೆ ಬುರುಡೆಯ ಮುಂಭಾಗದಲ್ಲಿ ಮೂಗಿನ ಅಕ್ಕಪಕ್ಕ, ಹಣೆಯ ಭಾಗ ಹಾಗೂ ಕಿವಿಗಳ ಪಕ್ಕದಲ್ಲಿ ಈ ಸೈನಸ್ ಕುಹರಗಳು ಇರುತ್ತವೆ. ಇದರ ಪ್ರಮುಖ ಕಾರ್ಯ ಬಾಹ್ಯ ಹಾಗೂ ಆಂತರಿಕ ಒತ್ತಡ ನಿವಾರಣೆ.

ಈ ಸೈನಸ್ ಕುಹರಗಳಲ್ಲಿ ಸ್ವಲ್ಪ ಮಟ್ಟಿಗೆ ದ್ರವಾಂಶ ಮತ್ತು ಗಾಳಿ ತುಂಬಿರುತ್ತದೆ. ಕೆಲವು ಸೋಂಕು ಕಾರಣಗಳಿಂದ ಇವುಗಳಲ್ಲಿನ ದ್ರವಾಂಶ ದೂಷಿತಗೊಂಡು ಸ್ಥಾನಿಕವಾಗಿ ಊತವನ್ನುಂಟು ಮಾಡಿ ಸೈನಸೈಟಿಸ್ ಅಥವಾ ಪ್ರತಿಶ್ಯಾಯಕ್ಕೆ ಕಾರಣವಾಗುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಇದರ ವಿವರಣೆಯನ್ನು ವಿಶೇಷವಾಗಿ ತಿಳಿಸಲಾಗಿದೆ.

ADVERTISEMENT

ಪ್ರಮುಖವಾಗಿ ಐದು ರೀತಿಯಲ್ಲಿ ಪ್ರತಿಶ್ಯಾಯದ ಸಮಸ್ಯೆಯನ್ನು ವಿವರಿಸಲಾಗಿದೆ.

*ವಾತಜ ಪ್ರತಿಶ್ಯಾಯ
*ಪಿತ್ತಜ ಪ್ರತಿಶ್ಯಾಯ
*ಕಫಜ ಪ್ರತಿಶ್ಯಾಯ
*ಸನ್ನಿಪಾತಜ ಅಥವಾ ದುಷ್ಟ ಪ್ರತಿಶ್ಯಾಯ
*ರಕ್ತಜ ಪ್ರತಿಶ್ಯಾಯ

ತ್ರಿದೋಷಗಳ ಆಧಾರದ ಮೇಲೆ ಕಾರಣ ಮತ್ತು ಲಕ್ಷಣಗಳು ಭಿನ್ನವಾಗಿರುತ್ತವೆ. ಪ್ರಸ್ತುತ ಸಂಕ್ಷೇಪವಾಗಿ ಪ್ರತಿಶ್ಯಾಯದ ಪ್ರಮುಖ ಕಾರಣ ಹಾಗೂ ಲಕ್ಷಣಗಳನ್ನು ವಿವರಿಸಲಾಗಿದೆ.

ಅಧಿಕ ತಂಪು ಪದಾರ್ಥಗಳ ಸೇವನೆ, ರಾತ್ರಿ ಜಾಗರಣೆ, ಶೀತಗಾಳಿ ಸೇವನೆ, ರಾಸಾಯನಿಕ ದ್ರವ್ಯಗಳ ತೀಕ್ಷ್ಣ ವಾಸನೆ, ರೋಗನಿರೋಧಕ ಶಕ್ತಿಯ ಕುಂದುವಿಕೆ, ಬ್ಯಾಕ್ಟೀರಿಯ, ವೈರಸ್ ಹಾಗೂ ಫಂಗಸ್, ಪದೇ ಪದೇ ಬಿಸಿ ನೀರು ಹಾಗೂ ತಣ್ಣೀರಿನ ಮಿಶ್ರ ಸೇವನೆ, ಜಂಕ್ ಮತ್ತು ಬೇಕರಿ ಪದಾರ್ಥಗಳ ಅಧಿಕ ಬಳಕೆ, ಮಳೆ-ಗಾಳಿ-ಚಳಿ, ಅಧಿಕ ಈಜು, ಮಲಮೂತ್ರಗಳ ವೇಗಧಾರಣೆ, ಅಗ್ನಿಮಾಂದ್ಯ ಹಾಗೂ ಅಜೀರ್ಣ, ಹವಾಮಾನ ಬದಲಾವಣೆ, ಋತುಗಳ ವೈಪರೀತ್ಯ ಇತ್ಯಾದಿ ಕಾರಣಗಳು ಪ್ರತಿಶ್ಯಾಯವನ್ನು ಉಂಟುಮಾಡುತ್ತವೆ.

ಪ್ರಮುಖ ಲಕ್ಷಣಗಳು
* ಹಣೆ ಮತ್ತು ಮೂಗಿನ ಪಕ್ಕೆಗಳಲ್ಲಿ ನೋವು, ಭಾರದ ಅನುಭವ
* ಮೂಗು ಕಟ್ಟುವುದು
* ದ್ರವದಂತೆ ಅಥವಾ ಕಫದ ಲೋಳೆಯಂತೆ ಮೂಗಿನಿಂದ ಸ್ರಾವ
* ಮೈಕೈ ನೋವು
* ಜ್ವರ ಬಂದಂತೆ ಅನುಭವ
* ಉಸಿರಾಟಕ್ಕೆ ಕಷ್ಟವಾಗುವುದು
* ಕಣ್ಣುರಿ ಹಾಗೂ ಕಣ್ಣು ಕೆಂಪಾಗಾಗುವುದು
* ಕೆಲವೊಮ್ಮೆ ಅಧಿಕ ಸೀನು
* ಮೂಗಿನ ಸುತ್ತಮುತ್ತಲೂ ಉರಿಯೂತ
* ಗಂಟಲು ಕೆರೆತ
* ಕೆಲವೊಮ್ಮೆ ಸಾಧಾರಣ ಅಥವಾ ಅಧಿಕ ಕೆಮ್ಮು
* ಕೆಲವೊಮ್ಮೆ ಮೂಗಿನಿಂದ ಕೀವು ಹಾಗು ರಕ್ತಸ್ರಾವ
* ಮುಖ, ಕಣ್ಣು, ಮೂಗು ಪ್ರದೇಶದಲ್ಲಿ ಬಾವು
* ಆಲಸ್ಯ

ಪಾರಾಗುವುದು ಹೇಗೆ?
ಹೊಸದಾಗಿ ಕಾಡುವ ಸೈನಸ್ ಸಮಸ್ಯೆ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿ ಉಂಟಾಗುವ ರೋಗನಿರೋಧಕ ಶಕ್ತಿಯಿಂದ ಯಾವುದೇ ಉಪಚಾರವಿಲ್ಲದೆಯೂ ಕೇವಲ ಐದರಿಂದ ಏಳು ದಿನಗಳ ಒಳಗೆ ನೆಗಡಿ ತನಗೆ ತಾನೇ ವಾಸಿಯಾಗುತ್ತದೆ. ವಾಸಿಯಾಗದ ನೆಗಡಿ ಒಮ್ಮೆ ಸೈನಸೈಟಿಸ್‌ಗೆ ಎಡೆ ಮಾಡಿಕೊಟ್ಟರೆ ಅದು ದೀರ್ಘಕಾಲದವರೆಗೆ ಕಾಡುತ್ತದೆ. ಬಹು ಕಾಲದಿಂದ ಈ ಸಮಸ್ಯೆ ಕಾಡುತ್ತಿದ್ದರೆ, ವೈದ್ಯರ ಮಾರ್ಗದರ್ಶನ ಹಾಗೂ ಚಿಕಿತ್ಸೆ ನೆರವಾಗುತ್ತದೆ. ಆಯುರ್ವೇದ ಚಿಕಿತ್ಸಾ ಕ್ರಮಗಳಿಂದ ದೀರ್ಘಕಾಲೀನ ಪ್ರತಿಶ್ಯಾಯವನ್ನು ಸಂಪೂರ್ಣ ವಾಸಿಮಾಡಬಹುದು.

ಕೆಲವೊಂದು ಸರಳವಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳನ್ನು ಇಲ್ಲಿ ವಿವರಿಸಲಾಗಿದೆ.

* ಪ್ರತಿನಿತ್ಯ ನೀರನ್ನು ಚೆನ್ನಾಗಿ ಕುದಿಸಿ ಕಾಲುಭಾಗ ಇಳಿಸಿ ಸೇವಿಸಬೇಕು (ಬಿಸಿ ನೀರು ಮತ್ತು ತಣ್ಣೀರು ಬೆರೆಸಿ ಸೇವಿಸಬಾರದು).

* ಒಂದು ಲೋಟ ಬಿಸಿನೀರಿಗೆ ಕಾಲು ಚಮಚ ಹಸಿಶುಂಠಿ ರಸ ಬೆರೆಸಿ ಸೇವಿಸಿ (ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಲ್ಲಿ ಶುಂಠಿ ಅಪಥ್ಯ)

* ಕಾಲು ಚಮಚ ಕಾಳುಮೆಣಸಿನ ನುಣ್ಣನೆ ಪುಡಿಯನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಆಹಾರದ ನಂತರ ಸೇವಿಸಿ.

* ಅರಿಸಿನ ಕೊಂಬು ಅಥವಾ ಕಾಳು ಮೆಣಸನ್ನು ಕೆಂಡದ ಮೇಲೆ ಸುಟ್ಟು ಅದರಿಂದ ಬರುವ ಹೊಗೆಯನ್ನು ದಿನಕ್ಕೆರಡು ಬಾರಿ ಎಳೆದುಕೊಳ್ಳಿ.

* ಬಿಸಿನೀರಿನ ಹಬೆಗೆ ಎರಡು ಹನಿ ನೀಲಗಿರಿ ತೈಲವನ್ನು ಸೇರಿಸಿ ಪ್ರತಿನಿತ್ಯ ಒಮ್ಮೆ ಹಬೆ ತೆಗೆದುಕೊಳ್ಳಬೇಕು.

* ಹುರಳಿಕಟ್ಟಿನ ಸಾರು / ಕಷಾಯ, ಶುಂಠಿ ಕಷಾಯ, ಕಾಳುಮೆಣಸಿನ ಸಾರು ಇತ್ಯಾದಿ ಉತ್ತಮ.

* ಹಸಿಶುಂಠಿಯನ್ನು ಗಂಧದ ಕಲ್ಲಿನ ಮೇಲೆ ತೇಯ್ದು ಬಂದ ಗಂಧವನ್ನು ಹಣೆ ಹಾಗೂ ಮೂಗಿನ ಪಕ್ಕೆಗಳಿಗೆ ಲೇಪಿಸಿ.

* ಜಲನೇತಿ ಹಾಗೂ ಸೂತ್ರನೇತಿ ತಿಳಿದಿದ್ದರೆ ಅನುಸರಿಸುವುದು ಉತ್ತಮ.

* ತುಳಸಿ / ವೀಳ್ಯದೆಲೆ / ದೊಡ್ಡಪತ್ರೆ ಇವುಗಳಲ್ಲಿ ಯಾವುದಾದರೂ ಒಂದರೊಡನೆ ಎರಡು ಕಾಳು ಮೆಣಸು ಮತ್ತು ಎರಡು ಹರಳು ಉಪ್ಪು ಬೆರೆಸಿ ಪ್ರತಿನಿತ್ಯ ಎರಡು ಬಾರಿ ಸೇವಿಸಿ.

* ಒಣಶುಂಠಿ ಪುಡಿ ಮತ್ತು ಅತಿಮಧುರದ ಪುಡಿ ಸಮ ಪ್ರಮಾಣದಲ್ಲಿ ಬೆರೆಸಿ ಜೇನುತುಪ್ಪದೊಂದಿಗೆ ಕಾಲು ಚಮಚದಂತೆ ನಿತ್ಯ ಮೂರು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುವುದು.

ಇವುಗಳಿಂದ ದೂರವಿರಿ
ತಣ್ಣೀರು, ಮೊಸರು, ಎ.ಸಿ. ಮತ್ತು ಫ್ಯಾನ್ ಬಳಕೆ, ತಂಗಳು ಸೇವನೆ, ಸೌತೆಕಾಯಿ ಹಾಗೂ ಸೀಮೆಬದನೆಯಂತಹ ತಂಪು ತರಕಾರಿಗಳು, ಕೂಲ್ ಡ್ರಿಂಕ್ಸ್, ಜಂಕ್ ಪದಾರ್ಥಗಳು, ಕಲುಷಿತ ಆಹಾರ ಮತ್ತು ನೀರು, ಧೂಳು, ಹೊಗೆ, ತಂಗಾಳಿ ಸೇವನೆ ಇತ್ಯಾದಿ.

(ಲೇಖಕರು ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.