ADVERTISEMENT

ಉತ್ಸಾಹದ ಬದುಕಿಗೆ ಸೂತ್ರಗಳು

ಸುಕೃತ ಎಸ್.
Published 5 ಮಾರ್ಚ್ 2021, 19:30 IST
Last Updated 5 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‌ಡೌನ್‌ ತೆರವಾಗಿ ಇಷ್ಟು ತಿಂಗಳು ಕಳೆದರೂ, ಲಾಕ್‌ಡೌನ್‌ ನಮ್ಮೊಳಗೆ ಸೃಷ್ಟಿಸಿದ ಜಡತ್ವ ಇನ್ನೂ ಬಿಟ್ಟಿಲ್ಲ. ಮನೆಯಿಂದಲೇ ಕೆಲಸ ನಿರ್ವಹಣೆ, ಒಂದೇ ರೀತಿಯ ಜೀವನಕ್ರಮ, ಮನೆಯಿಂದ ಹೊರಗೆ ಹೋಗುವುದಕ್ಕೆ ಭಯ... ಹೊರಗಡೆ ಪ್ರಪಂಚದೊಂದಿಗಿನ ಸಂಬಂಧವನ್ನು ನಾವು ಬಹುಪಾಲು ಕಡಿದುಕೊಂಡಿದ್ದೇವೆ – ಹೀಗೆ ನಾನಾ ಕಾರಣಗಳಿಂದಾಗಿ ಜಡತ್ವ ನಮ್ಮೊಳಗೆ ನುಸುಳಿ, ಬೇರು ಬಿಟ್ಟಿದೆ.

ರಾತ್ರಿ ಒಳ್ಳೆಯ ನಿದ್ರೆ ಮಾಡಿದ್ದರೂ ಬೆಳಿಗ್ಗೆ ಎದ್ದಾಗ ಲವಲವಿಕೆ ಇರುವುದಿಲ್ಲ. ಕೆಲವೊಮ್ಮೆ ಹಸಿವೆಯೇ ಆಗುವುದಿಲ್ಲ, ಇನ್ನು ಕೆಲವು ಬಾರಿ ಹೊಟ್ಟೆ ತುಂಬ ತಿಂದರೂ ಸ್ವಲ್ಪ ಸಮಯದಲ್ಲೇ ಹಸಿವೆಯಾದ ಹಾಗೆ ಅನಿಸುತ್ತದೆ. ಹಾಗಾದರೆ, ಇಂತಹ ತೊಂದರೆಗಳಿಂದ ಹೊರಬರುವುದು ಹೇಗೆ, ಈ ಎಲ್ಲಾ ಮಿತಿಗಳನ್ನು ಮೀರಿ, ಉತ್ಸಾಹ ಭರಿತ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ? ಮನೆಯಲ್ಲೇ ಇದ್ದೂ ಜಡತ್ವವನ್ನು ನಾವು ಮೀರಬಹುದು. ಅದಕ್ಕಾಗಿ ನಮ್ಮ ಜೀವನಕ್ರಮವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಷ್ಟೆ. ಈ ಏಳು ಸೂತ್ರಗಳನ್ನು ಅಳವಡಿಸಿಕೊಂಡರೆ ಒಂದಿಷ್ಟು ನಿರಾಳವಾಗಿ, ಆರಾಮವಾಗಿ ದಿನ ಕಳೆಯಬಹುದು.

10 ಬಾರಿ ದೀರ್ಘವಾಗಿ ಉಸಿರಾಡಿ

ADVERTISEMENT

ನಮ್ಮ ಮೊಬೈಲ್‌ಗಳಲ್ಲಿ ದೀರ್ಘವಾಗಿ ಉಸಿರಾಡುವ ತಂತ್ರಗಳ ಕುರಿತು ಹಲವು ಆ್ಯಪ್‌ಗಳು ಲಭ್ಯ ಇವೆ. ಆದರೆ, ಇದು ಎಲ್ಲರಿಗೂ ಲಭ್ಯವಿಲ್ಲ. ಲಭ್ಯವಿಲ್ಲ ಎನ್ನುವ ಕುರಿತು ಯೋಚನೆ ಬೇಡ. ಬೆಳಿಗ್ಗೆ ಎದ್ದ ತಕ್ಷಣವೇ, ನಮ್ಮ ಎಲ್ಲ ಗಮನವನ್ನು ಉಸಿರಾಟದ ಮೇಲಷ್ಟೆ ಕೇಂದ್ರೀಕರಿಸಿ, 10 ಬಾರಿ ದೀರ್ಘವಾಗಿ ಉಸಿರಾಡಿ ಸಾಕು. ನಮ್ಮ ಇಡೀ ದಿನವನ್ನು ಇದು ಉತ್ಸಾಹಭರಿತವಾಗಿಸಬಲ್ಲದು.

ಚೆನ್ನಾಗಿ ನೀರು ಕುಡಿಯಿರಿ

ಬಾಯಾರಿಕೆ ಆಗದಿದ್ದರೂ ಬೆಳಿಗ್ಗೆ ಎದ್ದ ಬಳಿಕ ನೀರು ಕುಡಿಯುವುದು ಆರೋಗ್ಯಕರ ಕ್ರಿಯೆ ಎಂದು ಪೋಷಕಾಂಶ ತಜ್ಞರು ಹೇಳುತ್ತಾರೆ. ನೀರು ಕುಡಿಯುವುದು ನಮಗೆ ನಾವೇ ಮಾಡಿಕೊಳ್ಳುವ ಉಪಕಾರ ಎಂಬ ಮಾತೂ ಇದೆ. ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವೂ ಇರುತ್ತದೆ. ಇದೂ ಸಹ ತಪ್ಪಲ್ಲ. ಇಂತಹ ಹವ್ಯಾಸ ಕೂಡ ನಮ್ಮನ್ನು ಉತ್ಸಾಹದಿಂದ ಇರಿಸಬಲ್ಲದು ಎಂದು ಹೇಳುತ್ತಾರೆ ತಜ್ಞರು.

ವ್ಯಾಯಾಮ

ವ್ಯಾಯಾಮವು ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಾಯಾಮ ಎಂದಾಕ್ಷಣ ಜಿಮ್‌ಗೆ ಹೋಗಬೇಕು; ಕಟ್ಟುನಿಟ್ಟಿನ ವ್ಯಾಯಾಮವೇ ಆಗಬೇಕು ಎಂದೇನಿಲ್ಲ. ಮನೆ ಸುತ್ತಲೂ ಓಡಾಡಿದರೂ ಸಾಕಾಗುತ್ತದೆ. ಏನಾದರೂ ಒಂದು ದೈಹಿಕ ಚಟುವಟಿಕೆ ಮಾಡಬೇಕು. ಅದು ಯೋಗವಾದರೂ ಸರಿ, ಸ್ಟ್ರೆಚ್‌ವರ್ಕ್‌ ಆದರೂ ಸರಿ, ಶ್ರಮದಾಯಕವಾಗಿರಬೇಕು. ಇದು ದೇಹದಲ್ಲಿ ಉತ್ತಮವಾದ ರಕ್ತ ಪರಿಚಲನೆಗೆ ಅನುಕೂಲ ಮಾಡುತ್ತದೆ.

ಸಕ್ಕರೆ ಸೇವನೆ ಬಗ್ಗೆ ಎಚ್ಚರ

ನಮ್ಮ ಆಹಾರ ಕ್ರಮದಲ್ಲಿ ಸಕ್ಕರೆ ಸೇವನೆ ಬಗ್ಗೆ ಸ್ವಲ್ಪ ಎಚ್ಚರಿಕೆ ಅಗತ್ಯ. ಹಾಗೆಂದ ಮಾತ್ರಕ್ಕೆ ಸಕ್ಕರೆ ಸೇವನೆಯನ್ನೇ ನಿಲ್ಲಿಸಬೇಕು ಎಂದರ್ಥವಲ್ಲ. ಆದರೆ, ಸಕ್ಕರೆಯನ್ನು ಅನಗತ್ಯವಾಗಿ, ಹೆಚ್ಚುವರಿ ಆಗಿ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಜೊತೆಗೆ, ಬೆಳಿಗ್ಗೆಯ ತಿಂಡಿ ಸಮಯದಲ್ಲಿ ಸಕ್ಕರೆ ಸೇವನೆ ಬಗ್ಗೆ ನಿಗಾ ಇರಿಸಿ.

ಮೊಬೈಲ್‌ ಬಳಕೆಯನ್ನು ಕಡಿಮೆ ಮಾಡಿ

ಬೆಳಿಗ್ಗೆ ಎದ್ದ ಕೂಡಲೆ ಮೂಡುವ ನಿಮ್ಮ ಆಲೋಚನೆಗಳನ್ನು ಬೇರೆ ಯಾರೋ ಪ್ರಭಾವಿಸಬಾರದು. ಆದ್ದರಿಂದ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಮೊಬೈಲ್‌ ನೋಡುವುದುನ್ನು ಕಡಿಮೆ ಮಾಡಿ.

ನಿಮಗೆ ಅಂತಲೇ ಸಮಯ ನೀಡಿ

ಕೆಲಸ ಕಾರ್ಯಗಳ ನಡುವೆ ನಾವು ಕಳೆದು ಹೋಗುತ್ತೇವೆ. ನಮ್ಮ ಬಗ್ಗೆ ನಾವು ಯೋಚನೆಯನ್ನೇ ಮಾಡುವುದಿಲ್ಲ. ನಮಗೆ ಅಂತಲೇ ನಾವು ದಿನದ ಕೆಲವು ನಿಮಿಷಗಳನ್ನಾದರೂ ಮೀಸಲಿರಿಸಿಕೊಳ್ಳಬೇಕು. ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಬಹುಮುಖ್ಯವಾಗುತ್ತದೆ.

ಎಲ್ಲರಿಗೂ ಒಂದೇ ರೀತಿಯ ಫಾರ್ಮುಲಾ ಕೆಲಸ ಮಾಡುವುದಿಲ್ಲ. ಒಬ್ಬೊಬ್ಬರ ದೇಹಗುಣ ಒಂದೊಂದು ರೀತಿ ಇರುತ್ತದೆ. ಆದರೆ, ಬೆಳಿಗ್ಗೆ ಎದ್ದ ಬಳಿಕ ಇವುಗಳಲ್ಲಿ ಯಾವುದಾದಾರು ಒಂದನ್ನಾದರೂ ಮಾಡಿದರೂ ಇಡೀ ದಿನವನ್ನು ನಾವು ಉತ್ಸಾಹದಿಂದ ಕಳೆಯಬಹುದು ಎನ್ನುತ್ತಾರೆ ತಜ್ಞರು.

ಬೇಕಾಗುವಷ್ಟು ಆಹಾರ

ನಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು. ತೀರಾ ಕಡಿಮೆ ಆಹಾರ ಸೇವನೆಯಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಸಿಗದೇ ಇರಬಹುದು. ಬೆಳಗಿನ ಆಹಾರವನ್ನು ಕಡ್ಡಾಯವಾಗಿ ಸೇವಿಸಬೇಕು. ಇದು ನಮ್ಮ ಇಡೀ ದಿನವನ್ನು ಉತ್ಸಾಹ ಭರಿತಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.