ನಮ್ಮ ಮೌಲ್ಯವನ್ನು ನಾವು ಅರಿತುಕೊಂಡು ನಮ್ಮನ್ನು ನಾವು ಅನುಮೋದಿಸಿಕೊಳ್ಳುವುದೇ ನಿಜವಾದ ಗೆಲುವು. ಬೇರೆಯವರು ನಮ್ಮ ಮೌಲ್ಯವನ್ನು ನಿರ್ಧರಿಸಿ, ನಮ್ಮನ್ನು ಮಾನ್ಯ ಮಾಡಲಿ, ಅನುಮೋದಿಸಲಿ ಎಂಬ ನಿರೀಕ್ಷೆಯೇ ಸೋಲು
ಸೋಲು–ಗೆಲುವಿನ ಪರಿಭಾಷೆಯಲ್ಲಿ ಬದುಕಿನ ಬಗೆಗೆ ಮಾತನಾಡುವವರು ನೀವಾದರೆ ಒಮ್ಮೆ ನಿಮ್ಮ ಈ ಅಭ್ಯಾಸವನ್ನು, ಅದರ ಹಿಂದಿರುವ ನಿಮ್ಮ ನಿಲುವನ್ನು ಆಳವಾದ ವಿಮರ್ಶೆಗೆ ಒಳಪಡಿಸುವುದು ಉತ್ತಮ. ಹೆಚ್ಚಿನ ಸಮಯ ನಾವು ಯಾವುಯಾವುದನ್ನೋ ಸೋಲು-ಗೆಲುವು ಎಂದು ಅರ್ಥೈಸುತ್ತಿರುತ್ತೇವೆ. ನಿಜವಾಗಿ ನೋಡಿದಾಗ ಅದು ಸೋಲು ಅಥವಾ ಗೆಲುವು ಯಾವುದೂ ಆಗಿರದೆ ಕೇವಲ ಜೀವನದ ಸಹಜ ಗತಿ, ಸಹಜ ಬದಲಾವಣೆ, ಸಹಜ ರೀತಿ, ಸಹಜ ಆಯ್ಕೆ ಆಗಿರುತ್ತದೆ ಅಷ್ಟೇ.
ನಮಗೆ ಬೇಕಾದ ಉದ್ಯೋಗ ದೊರೆಯದಿದ್ದರೆ, ಸಾಕಷ್ಟು ಸಂಪಾದಿಸದಿದ್ದರೆ, ಸಂಬಂಧಗಳಲ್ಲಿ ಮನಸ್ತಾಪಗಳಾಗಿ ಒಂಟಿಯಾಗಿ ಹೋದಂತೆನಿಸಿದರೆ, ಎಲ್ಲರಂತೆ ‘ತೋರಿಕೆಯ’ ಜೀವನ ಮಾಡಲಾಗದಿದ್ದರೆ; ಒಟ್ಟಿನಲ್ಲಿ ಎಲ್ಲದರಲ್ಲೂ ಸಮಾಜದ ಮುಂಚೂಣಿಯಲ್ಲಿ ‘ಮೆರೆಯದಿದ್ದರೆ’ ಅದನ್ನೆಲ್ಲಾ ಸೋಲೆನ್ನುವುದೇಕೆ?
ಜೀವನದ ಯಾವುದೋ ಸಂದರ್ಭದಲ್ಲಿ ‘ನಾನು ಸೋತೆ’ ಎಂಬ ಭಾವವುಂಟಾಗುತ್ತದೆಯಲ್ಲ, ಆ ಸಂದರ್ಭದಲ್ಲಿ ಹಾಗಿದ್ದರೆ ‘ಗೆದ್ದವರು’ ಯಾರು? ನಾವೇ ನಮ್ಮೊಡನೆ ಸ್ಪರ್ಧಿಸಲು ತಯಾರಾಗಿಸಿ ನಮ್ಮ ಮನಸ್ಸಿನಲ್ಲಿ ನಿಲ್ಲಿಸಿಕೊಂಡಿರುವ, ನಮ್ಮ ಸೋಲಿನಲ್ಲಿ ಗೆಲುವು ಕಾಣುತ್ತಿರುವ, ನಮ್ಮನ್ನು ಅಣಕಿಸಿ ಕೆಣಕುತ್ತಿರುವ, ನಮ್ಮ ದುಃಖದಲ್ಲಿ ಸಂತಸವನ್ನರಸುತ್ತಿರುವ ಆ ರಹಸ್ಯ ಶತ್ರುಗಳು ಯಾರು? ನಮ್ಮ ಸೋಲಿಗಾಗಿಯೇ ಕಾಯುತ್ತಿರುವ ಅವರಿಗೆ ನಾವೇಕೆ ನಮ್ಮ ಮನಸ್ಸಿನಲ್ಲಿ ಒಂದು ಅಧಿಕಾರಯುತ ಸ್ಥಾನ ನೀಡಿದ್ದೇವೆ?
ಯಾರೊಡನೆಯೋ ಹೋಲಿಕೆ, ಸ್ಪರ್ಧೆ, ತೋರ್ಪಡಿ ಸಿಕೊಳ್ಳಲಾಗದ ಅಸೂಯೆ, ಒಳಗೇ ಕೊರೆಯುತ್ತಿರುವ ಕೀಳರಿಮೆ, ಯಾರಿಂದಲೋ ಸೈ ಎನಿಸಿಕೊಳ್ಳುವ ಮೂಲಕ ನಮ್ಮ ಯೋಗ್ಯತೆಯನ್ನು, ಪ್ರಾಮುಖ್ಯ
ವನ್ನು ಪ್ರತಿಷ್ಠಾಪಿಸಿಕೊಳ್ಳುವ ಹವಣಿಕೆ - ಇವುಗಳೇ ಅಲ್ಲವೇ ‘ನಾನು ಸೋತುಹೋದೆ’ ಎಂಬ ಭಾವದ ಹಿಂದಿರುವುದು?
‘ನಾನು ಸೋತುಹೋದೆ’ ಎನಿಸಿದಾಗಲೆಲ್ಲಾ ಯಾವಯಾವ ಭಾವಗಳು ನಿಮ್ಮನ್ನು ಹಾದುಹೋಗುತ್ತವೆ ಎನ್ನುವುದನ್ನು, ಆಗ ನಿಮ್ಮೊಳಗೇ ನಡೆಯುವ ಮಾತುಕತೆಗಳನ್ನು ಒಮ್ಮೆ ಅವಲೋಕಿಸಿ ನೋಡಿ; ನಿಮ್ಮೊಳಗೇ ನಿಮ್ಮ ಸೋಲಿನ ಬಗೆಗೆ ಮಾತನಾಡಿಕೊಳ್ಳುತ್ತಿರುವಾಗ ಆ ‘ಸೋಲನ್ನು’ ಹಂಗಿಸಿ, ಟೀಕಿಸಿ, ಅವಮಾನಿಸುತ್ತಿರುವ ಧ್ವನಿಯಿದೆಯೇ? ಯಾರದದು ಆ ಧ್ವನಿ? ‘ಸೋಲಿನ’ ಬಗೆಗಾಗುತ್ತಿರುವ ದುಃಖದ ಬಗ್ಗೆ ಸಹಾನುಭೂತಿಯ, ಸಮಾಧಾನದ ಮಾತುಗಳನ್ನಾಡುತ್ತಿರುವ ಧ್ವನಿಯಿದೆಯೇ? ನಮ್ಮೊಳಗೇ ನಮ್ಮ ಬಗ್ಗೆಯೇ ಶತ್ರುತ್ವದ ಭಾವ ಬಿತ್ತಿದವರಾರು?
ನಮ್ಮೊಳಗೇ ನಡೆಯುವ ಸೋಲು-ಗೆಲುವಿನ ಮಂಥನವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮೊಳಗೆ ಅಡಗಿರುವ ನಮ್ಮ ವ್ಯಕ್ತಿತ್ವದ ನೂರಾರು ಬಿಂಬಗಳನ್ನು, ನಮ್ಮ ಆಂತರ್ಯದ ಅನೇಕ ಚಹರೆಗಳನ್ನು ಕಾಣಬಹುದು. ಯಾರದೋ ಆಜ್ಞೆಯಂತೆ ನಡೆಯುವ, ಯಾರದೋ ಗಡಿರೇಖೆಗಳನ್ನು, ರೀತಿನೀತಿಗಳನ್ನು ಮೀರಿ ಹೋಗದಂತೆ ನಮ್ಮನ್ನು ನಾವೇ ತಟಸ್ಥಗೊಳಿಸಿಕೊಳ್ಳುವ, ಯಾರದೋ ಅಧಿಕೃತ ಮುದ್ರೆಗಾಗಿ ಹಂಬಲಿಸುವ, ಯಾರ್ಯಾರನ್ನೋ ಮೆಚ್ಚಿಸುವ, ಒಪ್ಪಿಸುವ, ಸದಾ ಅನ್ಯರ ಯಾವುದೋ ನಿರ್ದಿಷ್ಟವಿಲ್ಲದ ಆಳತೆಗೋಲಿಗೆ ಸರಿಯಾಗಿ ನಮ್ಮನ್ನು ಹೊಂದಿಸಿಕೊಳ್ಳುವ ಎಂದಿಗೂ ಮುಗಿಯದ ಹೋರಾಟದ ಹಾದಿಯನ್ನು ನಾವೇಕೆ ಆಯ್ದುಕೊಳ್ಳಬೇಕು? ನಮ್ಮನ್ನು ನಾವು ತೊರೆದು, ನಮ್ಮನ್ನು ನಾವೇ ಹೀನವಾಗಿರುವಂತೆ ಕಂಡುಕೊಳ್ಳುವ, ನಮ್ಮ ಮೌಲ್ಯವನ್ನು ನಾವೇ ಅನುಮಾನಿಸುವ ಪ್ರವೃತ್ತಿ ಹೇಗೆ ನಮ್ಮಲ್ಲಿ ಬೆಳೆದುಬಂದಿದೆಯಲ್ಲವೇ?
ಬೇರೆಯವರು ನಮ್ಮ ಬಗೆಗೆ ಕೊಡಬಹುದು ಎಂದು ನಾವು ಭಾವಿಸಿರುವ ತೀರ್ಪುಗಳನ್ನು, ಅಭಿಪ್ರಾಯಗಳನ್ನು ನಮಗೆ ನಾವೇ ಕೊಟ್ಟುಕೊಳ್ಳುತ್ತಾ ಸಂಕಟಪಡುತ್ತಿರುತ್ತೇವೆ. ಆದರೆ ನಿಜವಾಗಲೂ ನಮ್ಮನ್ನು ಟೀಕಿಸುತ್ತಿರುವ ನಮ್ಮೊಳಗಿನ ಆ ‘ಅನ್ಯ ಧ್ವನಿ’ಯನ್ನು ಹೊರಪ್ರಪಂಚದಲ್ಲಿ ಪ್ರತಿನಿಧಿಸಬಹುದಾದ ವ್ಯಕ್ತಿಯೇನಾದರೂ ಸಿಕ್ಕಿ ಮಾತನಾಡಿಸಿದರೆ ಅವರು ನಮ್ಮ ಬಗೆಗೆ ಬೇರೆಯೇ ಧೋರಣೆ ಇಟ್ಟುಕೊಂಡಿರಬಹುದು. ಅದೂ ಅಲ್ಲದೆ ಅವರ ಅಭಿಪ್ರಾಯಗಳು ‘ಅವರು ಯಾರು?’ ಎನ್ನುವಂಥದ್ದನ್ನು ತೋರಿಸಿಕೊಡುವುದೇ ಹೊರತು ‘ನಾವು ಯಾರೆಂದು?’ ತೋರಿಸಿಕೊಡುವಂಥದ್ದಲ್ಲ. ಅವರು ನಮ್ಮ ಬಗ್ಗೆ ಒಂದು ಕ್ಷಣವೂ ಯೋಚಿಸದೇ ಇರಬಹುದು. ನಾವು ಮಾತ್ರ ಅವರ ವ್ಯಕ್ತಿತ್ವದ ಯಾವುದೋ ಅಮುಖ್ಯವಾದ ಭಾಗವನ್ನೇ ಮನಸ್ಸಿ
ನಲ್ಲಿಟ್ಟುಕೊಂಡು ಹೋರಾಡುತ್ತಿರಬಹುದು. ಅಂದರೆ ತಾತ್ಪರ್ಯವಿಷ್ಟು: ಯಾರ ಮನಸ್ಸಿನಲ್ಲಿ ನಾವು ಹೇಗೆ ಚಿತ್ರಿತವಾಗಿರುತ್ತೇವೆ ಎನ್ನುವುದು ಅಸ್ಪಷ್ಟತೆಗೆ ಆಸ್ಪದವೇ ಇಲ್ಲದಂತೆ ನಿಚ್ಚಳವಾಗಿ ನಮಗೆ ದಕ್ಕುವಂಥದ್ದಲ್ಲ. ಹಾಗಿದ್ದಮೇಲೆ ನಮ್ಮೊಳಗಿರುವ ‘ಆ ನಾಲ್ಕು ಜನರನ್ನು’, ‘ಆ ಅನ್ಯರನ್ನು’ ಮೆಚ್ಚಿಸುವ ಹುನ್ನಾರವೇಕೆ?
ಕಡೆಗೂ ನಮಗಿರುವುದು ನಾವೊಬ್ಬರೇ, ನಾವು ನಮ್ಮ ಬಗೆಗೆ ಯಾವ ಭಾವ ಹೊಂದಿದ್ದೇವೆ, ನಮ್ಮ ಅನುಭವಗಳನ್ನು ಹೇಗೆ ಸ್ವೀಕರಿಸುತ್ತೇವೆ, ನಮ್ಮ ಆಲೋಚನೆಗಳನ್ನು, ಭಾವನೆಗಳನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದಷ್ಟೇ ನಮಗೆ ನಿಜವಾಗಲೂ ದಕ್ಕುವಂಥದ್ದು ಮತ್ತು ಬಹುಕಾಲ ಉಳಿಯುವಂಥದ್ದು.
‘ಅನ್ಯ’ರ ದೃಷ್ಟಿಯಿಂದ ನಮ್ಮನ್ನು ನಾವು ತುಲನೆಗೊಳಪಡಿಸಿಕೊಂಡಾಗ ಮಾತ್ರ ಸೋಲೆಂಬ ಭಾವವಿದೆ. ನಮ್ಮನ್ನು ನಾವು ಸ್ನೇಹದಿಂದ, ಕರುಣೆಯಿಂದ ನೋಡಿಕೊಂಡಾಗ ಸೋಲೆಂಬ ಭಾವಕ್ಕೆ ಅಸ್ತಿತ್ವವೇ ಇಲ್ಲ. ನಮ್ಮ ಹೃದಯದ ಬಡಿತವನ್ನು ನಾವೇ ಅದುಮಿಟ್ಟು, ನಮ್ಮನ್ನು ಕಾಣುವ ನಮ್ಮ ಕಣ್ಣನ್ನೇ ಮುಚ್ಚಿಕೊಂಡು, ನಮ್ಮನ್ನು ‘ಅನ್ಯ’ರ ತಕ್ಕಡಿಯಲ್ಲಿಟ್ಟು ತೂಗಿ ನೋಡುತ್ತಾ ನಮಗೆ ನಾವೇ ಶತ್ರುವಾಗುವ ಸ್ವ ಪ್ರೇಮವಿಲ್ಲದ ಸ್ಥಿತಿಯೇ ನಿಜವಾದ ಅರ್ಥದಲ್ಲಿ ಸೋಲು.
ನಮ್ಮ ಮೌಲ್ಯವನ್ನು ನಾವು ಅರಿತುಕೊಂಡು ನಮ್ಮನ್ನು ನಾವು ಅನುಮೋದಿಸಿಕೊಳ್ಳುವುದೇ (self validation) ನಿಜವಾದ ಗೆಲುವು. ನಮ್ಮ ಮೌಲ್ಯವನ್ನು ಬೇರೆಯವರು ನಿರ್ಧರಿಸಿ, ನಮ್ಮನ್ನು ಮಾನ್ಯ ಮಾಡಲಿ, ಅನುಮೋದಿಸಲಿ (other validation) ಎಂಬ ನಿರೀಕ್ಷೆಯೇ ಸೋಲು.
ಹಾಗಾದರೆ ನಮಗೆ ಬೇರೆಯವರ ಪ್ರೋತ್ಸಾಹ, ಮೆಚ್ಚುಗೆ ಬೇಡವೇ? ಸಮಾಜ ಒಪ್ಪುವಂತೆ ಬಾಳುವುದು ಬೇಡವೇ? ನಿಜ; ಸಮಾಜದ ಮೆಚ್ಚುಗೆ, ಪ್ರೋತ್ಸಾಹ, ಮಾನ್ಯತೆ ಮನುಷ್ಯನ ಅಭ್ಯುದಯಕ್ಕೆ ಸಹಕಾರಿ. ಆದರೆ ಸಮಾಜದ ಮೆಚ್ಚುಗೆಯೇ ಗುರಿಯಾಗಿ, ಅದೇ ನಮ್ಮತನಕ್ಕೆ ಆಧಾರವಾದರೆ ಅದು ದೊರೆಯದೇ ಹೋದ ಸಂದರ್ಭದಲ್ಲಿ ಕಲ್ಪಿತ ತಿರಸ್ಕಾರದಿಂದ ಬಳಲಿ ನಾವು ಕುಸಿದು ಬೀಳಬಹುದು. ಅನೇಕ ಕಾರಣಗಳಿಗಾಗಿ ನಮ್ಮನ್ನು ಹೆಚ್ಚು ಜನ ಮೆಚ್ಚದಿರಬಹುದು. ಆದರೂ ನಾವು ನಂಬಿದ ತತ್ವಗಳಿಗಾಗಿ, ನಮ್ಮ ಆತ್ಮತೃಪ್ತಿ
ಗಾಗಿ, ನಮ್ಮ ಜೀವನಪ್ರೀತಿಯ ಅಭಿವ್ಯಕ್ತಿಗಾಗಿ ನಾವು ಬಾಳಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.