ADVERTISEMENT

Pv Web Exclusive| ಮಾನಸಿಕ ಆರೋಗ್ಯದ ನಿರ್ಲಕ್ಷ್ಯವೇಕೆ?

ಸುಶೀಲಾ ಡೋಣೂರ
Published 14 ಅಕ್ಟೋಬರ್ 2020, 13:55 IST
Last Updated 14 ಅಕ್ಟೋಬರ್ 2020, 13:55 IST
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಸಮಾಲೋಚನೆಯ ಸೇವೆ ಪಡೆಯುವವರಲ್ಲಿ ಯುವಕರೇ ಹೆಚ್ಚು...
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಸಮಾಲೋಚನೆಯ ಸೇವೆ ಪಡೆಯುವವರಲ್ಲಿ ಯುವಕರೇ ಹೆಚ್ಚು...   
""

ಕೋವಿಡ್‌–19 ಪರಿಣಾಮ ಭಾರತವೂ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳಿಗೆ ಸಾಕಷ್ಟು ಅಡೆತಡೆಯುಂಟಾಗಿದೆ. ಆದರೆ ಯಾವ ದೇಶಗಳೂ ಮಾನಸಿಕ ಆರೋಗ್ಯವನ್ನು ಒಂದು ಮಹತ್ವದ ವಲಯ ಎಂದು ಪರಿಗಣಿಸುತ್ತಿಲ್ಲ. ಅದಕ್ಕೆ ಅಗತ್ಯವಿದ್ದಷ್ಟು ಆರ್ಥಿಕ ಬೆಂಬಲ ಸಿಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಕಳೆದ ವಾರ (ಶನಿವಾರ ಅ. 10) ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ಪ್ರಕಟಿಸಲಾದ ಸಮೀಕ್ಷೆಯ ವರದಿಯಲ್ಲಿ ಜಗತ್ತಿನಾದ್ಯಂತ ಮಾನಸಿಕ ಆರೋಗ್ಯಕ್ಕೆ ಸಿಗಬೇಕಾದಷ್ಟು ಮಹತ್ವ, ಬೆಂಬಲ ಸಿಗುತ್ತಿಲ್ಲ ಎನ್ನುವ ಅಂಶ ಒಳಗೊಂಡಿದೆ. ಅಷ್ಟೇ ಅಲ್ಲ, ಈ ವಲಯದಲ್ಲಿ ಹೆಚ್ಚಿನ ಹೂಡಿಕೆಯ ತುರ್ತು ಅಗತ್ಯವನ್ನು ಈ ವರದಿ ಒತ್ತಿ ಹೇಳುತ್ತದೆ.

ಕೋವಿಡ್‌–19 ವಿಶ್ವದಾದ್ಯಂತ ಶೇ 93ರಷ್ಟು ದೇಶಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳಿಗೆ ಅಡ್ಡಿಪಡಿಸಿದೆ. ಇದರಪರಿಣಾಮ ಒಂದು ಕಡೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮನೋವೈದ್ಯರ ಅಲಭ್ಯತೆ ಅನೇಕ ಸವಾಲುಗಳನ್ನು ಸೃಷ್ಟಿಸುತ್ತಿದೆ. ಈ ವಲಯವನ್ನು ತುರ್ತು ಅಗತ್ಯವೆಂದು ಪರಿಗಣಿಸಬೇಕು ಮತ್ತು ಹೆಚ್ಚಿನ ಆರ್ಥಿಕ ಬೆಂಬಲವನ್ನು ಘೋಷಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಒತ್ತಾಯಿಸಿದೆ.

ADVERTISEMENT

ಮಾನಸಿಕ ಆರೋಗ್ಯ ತಮ್ಮ ರಾಷ್ಟ್ರೀಯ ಕೋವಿಡ್‌–19 ಯೋಜನೆಗಳ ಒಂದು ಮಹತ್ವದ ಭಾಗವಾಗಿದೆ ಎಂದು ಡಬ್ಲುಎಚ್‌ಓ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 89 ದೇಶಗಳು ಪ್ರತಿಕ್ರಿಯಿಸಿವೆ. ಆದರೆ, ಕೇವಲ ಶೇ 17ರಷ್ಟು ದೇಶಗಳು ಮಾನಸಿಕ ಆರೋಗ್ಯಕ್ಕಾಗಿ ಆರ್ಥಿಕ ಬೆಂಬಲವನ್ನು ಹೊಂದಿವೆ.

ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚುವರಿ ಹಣದ ಅಗತ್ಯವಿದ್ದು, ಕೋವಿಡ್‌ 19 ಮುಂದುವರೆದಂತೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ/ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯ ಬೀಳುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆರೋಗ್ಯ ಬಜೆಟ್‌ಗಳಲ್ಲಿ ಮಾನಸಿಕ ಆರೋಗ್ಯಕ್ಕಾಗಿ (ಕ್ರಮವಾಗಿ ಶೇ 2ರಷ್ಟು ಮತ್ತು ಶೇ 1) ಈಗ ಮೀಸಲಿಟ್ಟಿರುವ ನಿಧಿ ಸಾಕಾಗುವುದಿಲ್ಲ. ಆ ಪ್ರಮಾಣ ಹೆಚ್ಚಾಗಬೇಕಾದ ಅಗತ್ಯವಿದೆ.

ವಿಶ್ವ ಆರೋಗ್ಯ ಸಂಸ್ಥೆ ಹಿಂದಿನಿಂದಲೂ ಮಾನಸಿಕ ಸಮಸ್ಯೆಗಳಿಗೆ ತುರ್ತು ಸ್ಪಂದನೆಯ ಅಗತ್ಯವನ್ನು ಸಾರಿ ಹೇಳುತ್ತಲೇ ಬಂದಿದೆ. ಕೋವಿಡ್‌–19 ಸಂದರ್ಭದಲ್ಲಿ ಇದರ ಅಗತ್ಯ ಇನ್ನೂ ಹೆಚ್ಚಿದೆ. ಆದರೆ ಅನೇಕ ರಾಷ್ಟ್ರಗಳು ಇದರ ಮಹತ್ವವನ್ನು ಅರಿಯುವಲ್ಲಿ ಸೋಲುತ್ತಿವೆ. ಮೊದಲೇ ಅಸ್ಥಿತ್ವದಲ್ಲಿರುವ ಮಾನಸಿಕ ಸಮಸ್ಯೆಗಳ ಜೊತೆಗೆ ಪ್ರತ್ಯೇಕತೆಯ ಭಯ, ಉದ್ಯೋಗ ಕಡಿತದ ಭಯ, ಸಂಬಳ ಕಡಿತದ ಭಯ ಸೇರಿ ಮಾನಸಿಕ ಒತ್ತಡ ಅಧಿಕವಾಗುತ್ತಿದೆ.ಈ ಒತ್ತಡದಿಂದ ಧೂಮಪಾನ, ಮದ್ಯಪಾನ ಮತ್ತು ಮಾದಕವಸ್ತುಗಳ ಬಳಕೆಯೂ ಹೆಚ್ಚುತ್ತಿದೆ. ಇದರಿಂದ ನಿದ್ರಾಹೀನತೆ ಮತ್ತು ಆತಂಕವನ್ನು ಎದುರಿಸುವಂತಾಗಿದೆ.

ಮನುಷ್ಯನ ಒಟ್ಟಾರೆ ಆರೋಗ್ಯ ಆತನ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆ. ಮನಸ್ಸೇ ಅನಾರೋಗ್ಯಕ್ಕೆ ತುತ್ತಾದಾಗ ಒಟ್ಟು ಆರೋಗ್ಯ ಹದಗೆಡುವುದರಲ್ಲಿ ಅನುಮಾನವಿಲ್ಲ. ಇದು ಕೇವಲ ಆರೋಗ್ಯ ಸಮಸ್ಯೆಯಷ್ಟೇ ಅಲ್ಲ, ಆತನ ಕೌಟುಂಬಿಕ ಸಂಬಂಧಗಳನ್ನೂ ತಟ್ಟುತ್ತದೆ, ಔದ್ಯೋಗಿಕ, ಸಾಮಾಜಿಕ ಸ್ವಾಸ್ಥ್ಯವೂ ಪ್ರಭಾವಕ್ಕೊಳಗಾಗುತ್ತದೆ. ಮಾನಸಿಕವಾಗಿ ಕುಸಿಯುವ ವ್ಯಕ್ತಿಯ ಬದುಕು ಹೀಗೆ ಎಲ್ಲಾ ವಿಧಗಳಿಂದ ಅದಃಪತನಕ್ಕೆ ಇಳಿಯುತ್ತದೆ.

ಆನ್‌ಲೈನ್‌ ಪರಿಹಾರದತ್ತ ಹೆಚ್ಚಿದ ಆಸಕ್ತಿ

ವೈಯಕ್ತಿಕ ಸೇವೆಗಳಿಗೆ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸಲು ಅನೇಕ ದೇಶಗಳು (70%) ಟೆಲಿಮೆಡಿಸಿನ್, ಟೆಲಿಥೆರಪಿ, ಆನ್‌ಲೈನ್‌ ಸೇವೆಯ ಅವಲಂಬನೆಯನ್ನು ಹೆಚ್ಚಿಸಿವೆ ಎನ್ನುವ ಡಬ್ಲುಎಚ್‌ಓ ವರದಿಯನ್ನು ಬೆಂಗಳೂರು ಮೂಲದ ‘ಪ್ರಾಕ್ಟೋ’ ಸಂಸ್ಥೆಯ ಸಮೀಕ್ಷೆಯೂ ಬೆಂಬಲಿಸಿದೆ. ಕೋವಿಡ್‌–19 ಅವಧಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಆನ್‌ಲೈನ್‌ ಹಾಗೂ ಟೆಲಿಮೆಡಿಸಿನ್ ಪ್ರವೃತ್ತಿ ಬೆಳೆಯುತ್ತಿದೆ ಎನ್ನುವ ಸಂಗತಿಯ ಬಗ್ಗೆ ಅದು ಗಮನ ಸೆಳೆದಿದೆ.

ಕೋವಿಡ್‌–19 ಆರಂಭವಾದಾಗಿನಿಂದ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವವರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ. ಮೊದಲೇ ಮನೋಸ್ವಾಸ್ಥ್ಯದ ಸಮಸ್ಯೆ ಹೊಂದಿರುವ ಜನರು ಹೆಚ್ಚಿನ ಸವಾಲನ್ನು ಎದುರಿಸುತ್ತಿದ್ದಾರೆ. ಅಂಥವರಿಗೆ ಸೂಕ್ತ ವೈದ್ಯಕೀಯ ನೆರವು ಕೂಡ ಸಿಗುತ್ತಿಲ್ಲ. ಇದನ್ನು ಮುಖ್ಯವಲ್ಲದ ವೈದ್ಯಕೀಯ ಸೇವೆಯ ಪಟ್ಟಿಗೆ ಸೇರಿಸಿರುವುದಿಂದ ಲಾಕ್‌ಡೌನ್‌ ಅವಧಿಯಲ್ಲಿ ಪೂರ್ಣ ಪ್ರಮಾಣದ ಬಂದ್‌ ಉಂಟಾಗಿತ್ತು. ಅನಂತರದ ದಿನಗಳಲ್ಲಿಯೂ ವೈದ್ಯರು ಕ್ಲಿನಿಕ್‌ಗಳತ್ತ ಬರುತ್ತಿಲ್ಲ. ದೊಡ್ಡ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸೇವೆಗೆ ಹಾಜರಾಗುವ ವೈದ್ಯರ ಸಂಖ್ಯೆ ಅರ್ಧಕ್ಕೆ ಕುಸಿದಿದೆ.

ಇದೆಲ್ಲದರ ಪರಿಣಾಮ ಆನ್‌ಲೈನ್‌ನಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸೇವೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತದೆ ‘ಪ್ರಾಕ್ಟೋ’. ಕಳೆದ ಆರು ತಿಂಗಳ ಅವಧಿಯಲ್ಲಿ ವೈದ್ಯರ ಅಲಭ್ಯತೆಯಿಂದಾಗಿ ಶೇ 665ರಷ್ಟು ಜನರು ಆನ್‌ಲೈನ್‌ ಪರಿಹಾರಕ್ಕೆ ಮುಂದಾಗಿದ್ದಾರೆ ಎನ್ನುತ್ತದೆ ಈ ಸಮೀಕ್ಷೆ.

ಯುವಪೀಳಿಗೆಯ ಮೇಲುಗೈ

ಮಾನಸಿಕ ಆರೋಗ್ಯದ ಬಗ್ಗೆ ಆನ್‌ಲೈನ್‌ನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾದವರ ಪೈಕಿ ಯುವ ಪೀಳಿಗೆಯ ಪಾಲೇ ದೊಡ್ಡದಿದೆ. 21ರಿಂದ 40 ವರ್ಷದ ಒಳಗಿನ ಶೇ 60ರಷ್ಟು ಜನರು ಆನ್‌ಲೈನ್‌ನಲ್ಲಿ ಭಯ, ಆತಂಕ, ಖಿನ್ನತೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದಾರೆ. ಅದರಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ನಂತರ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೋಲ್ಕತಾ ಇವೆ. ಆನ್‌ಲೈನ್‌ ಕನ್ಸಲ್ಟೇಶನ್‌ಗೆ ಮುಂದಾದವರಲ್ಲಿ ಮೆಟ್ರೊ ನಿವಾಸಿಗಳೇ ಹೆಚ್ಚು. ಶೇ 65 ಜನರು ಮೆಟ್ರೊ ನಗರಗಳಿಂದ ಬಂದವರಾಗಿದ್ದರೆ, ಶೇ 35ರಷ್ಟು ಜನ ನಗರ–ಪಟ್ಟಣಗಳ ನಿವಾಸಿಗಳು. ಅಂತಹ ನಗರಗಳ ಪೈಕಿ ಹುಬ್ಬಳ್ಳಿ ಒಳಗೊಂಡಂತೆ ಚಂಡೀಗಢ, ಲಕ್ನೌ, ಭುವನೇಶ್ವರ, ಜೈಪುರ, ಕಾನ್ಪುರ ಮತ್ತು ಅಹಮದಾಬಾದ್‌ ಸೇರಿವೆ. ಅದರಲ್ಲೂ ಪುರುಷರ ಸಂಖ್ಯೆಯೇ ಅಧಿಕವಾಗಿದ್ದು ಅವರು ಶೇ 70ರಷ್ಟು ಪಾಲನ್ನು ಪಡೆದಿದ್ದಾರೆ. ಶೇ 30ರಷ್ಟು ಮಹಿಳೆಯರು ಮಾತ್ರ ಆನ್‌ಲೈನ್‌ ಸೇವೆಯ ಬಳಕೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.