ADVERTISEMENT

ಕ್ಷೇಮ–ಕುಶಲ: ಮೂತ್ರ ಸೋಂಕು; ಚಿಕಿತ್ಸೆಗೆ ಬೇಡ ಕೊಂಕು

ಡಾ.ಸತ್ಯನಾರಾಯಣ ಭಟ್ ಪಿ
Published 9 ಫೆಬ್ರುವರಿ 2026, 23:30 IST
Last Updated 9 ಫೆಬ್ರುವರಿ 2026, 23:30 IST
   
ಶಿವರಾತ್ರಿ ಬಂತಲ್ಲ. ಚಳಿಗಾಲ ಶಿವಶಿವಾ ಎಂದು ಹೋಗಿ ಬಿಡುತ್ತದೆ ಎಂಬ ವಾಡಿಕೆ ಮಾತು ಬಲು ಪ್ರಸಿದ್ಧ. ಇಂತಹ ಚಳಿ ದಿನ ಕಳೆದು ಸೆಕೆಗಾಲ ಆರಂಭದ ಋತು ಸಂಧಿಯ ಸಂದರ್ಭ. ಭೂಮಿ ಮತ್ತು ದೇಹದಲ್ಲಿ ನಾನಾ ಬದಲಾವಣೆಗಳ ಪರ್ವ. ಅಂತಹ ಸಂದರ್ಭಗಳಲ್ಲಿ ಹೊಸ ಸಮಸ್ಯೆಗಳು ದಾಂಗುಡಿಯಿಡುವವು. ಮೂತ್ರ ಎಂಬುದು ನಮ್ಮ ದೇಹದಿಂದ ಹೊರಹೋಗಬೇಕಾದ ‘ಮಲ’. ಅದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಾಡುವವು. ತಡೆ ಮತ್ತು ಪರಿಹಾರದ ಬಗೆಗೆ ಆಯುರ್ವೇದದ ಉಪಚಾರಗಳತ್ತ ಇರಲಿ ನಮ್ಮ ಚಿತ್ತ.

ಸುಶ್ರುತ ಸಂಹಿತೆಯ ಕಾಲಘಟ್ಟ ಕನಿಷ್ಠ ಐದು ಸಾವಿರ ವರ್ಷ ಪೂರ್ವದ್ದು ಎಂದಿಟ್ಟುಕೊಳ್ಳಿರಿ. ಕಾಶಿಯಲ್ಲೊಂದು ವೈದ್ಯಕೀಯ ವಿಶ್ವವಿದ್ಯಾಲಯ. ಅದರ ಕುಲಪತಿ ದಿವೋದಾಸ ಧನ್ವಂತರಿ. ಕಾಶೀರಾಜನೀತ. ಅವನ ಶಿಷ್ಯಗಣದ ಪೈಕಿ ದೊಡ್ಡ ಹೆಸರು ಸುಶ್ರುತನದು. ಗುರುಗಳು ಹೇಳಿದ ಸಕಲ ಸಂಗತಿಗಳನ್ನು ಈತನು ಸಂಕಲನಗೊಳಿಸಿದ ಸಂಹಿತೆ ಸುಶ್ರುತ ಸಂಹಿತೆ. ಗುರು ಶಿಷ್ಯರ ಸಂಭಾಷಣೆ ರೂಪದ ಸುಂದರ ಮತ್ತು ಸರಳ ಭಾಷೆಯ ಸಂಸ್ಕೃತ ಗ್ರಂಥ. ಶರೀರದ ಪ್ರತಿ ಒಂದು ಅಂಗ, ಪ್ರತ್ಯಂಗಗಳನ್ನು ಸಿಗಿ ಸಿಗಿದು ಪೂರ್ಣ ವಿವರ ನೀಡುವ ಮತ್ತು ಅಂಥ ಮೂಲೆ ಮೂಲೆಗಳಲ್ಲಿ ಒದಗುವ ಕಾಯಿಲೆಗಳ ನಿಖರ ಮಾಹಿತಿ ಸಂಹಿತೆಯ ಹೂರಣ.

ಮೂತ್ರ ಉತ್ಪತ್ತಿ, ಅದರ ಹಿಂದಿರುವ ಕಾರಣ, ಅದು ಏಕೆ ಮತ್ತು ಹೇಗೆ ದೇಹದಿಂದ ಹೊರ ಮುಖವಾಗಿ ಹರಿಯುವ ವಿಧಾನದ ಅನಿವಾರ್ಯ ಸಂಗತಿಗಳ ಸ್ಪಷ್ಟ ವಿವರದ ಒಂದು ನಿದರ್ಶನ ಓದಿರಿ. ‘ಸಾಗರಂ ಸರಿತಾಃ ಇವ’, ಎಂದರೆ ಮಳೆನೀರು ಕಿರುಕಣಿವೆಗಳಲ್ಲಿ ಸಂಗ್ರಹ. ಅನಂತರ ಕೊಂಚ ಹಿರಿಕಾಲುವೆ ಗುಂಟ ಅದರ ಹರಿವು. ಹಳ್ಳಗಳತ್ತ ಅದರ ತಿರುವು. ಕೊನೆಗೊಮ್ಮೆ ನದಿಯಾಗಿ ಅದು ಸಮುದ್ರ ಸೇರುವ ಉಪಮೆ! ಒಂದು ಸಂಗತಿ ಇಲ್ಲಿ ಮನದಟ್ಟು ಮಾಡಿಕೊಳ್ಳಿರಿ. ಕಾಶಿಯ ಗಂಗೆಯ ತಟದ ರಾಜ ದಿವೋದಾಸ ಧನ್ವಂತರಿ ಸಮುದ್ರ ಕಾಣಲು ಅದೆಷ್ಟು ಯೋಜನ ಪಯಣಿಸಬೇಕು ಲೆಕ್ಕ ಹಾಕಿರಿ. ಅಂತಹ ಸಮಸ್ತ ಸಂಗತಿಯ ಹಿನ್ನೆಲೆಯಲ್ಲಿ ಬರೆದಿರಿಸಿದ ಸಂಹಿತೆಯ ಪ್ರಗಲ್ಭ ಪ್ರಖರ ಪಾಂಡಿತ್ಯದ ಬುನಾದಿಯನ್ನೂ ತಿಳಿಯಿರಿ.

‘ವೃಕ್ಕ’ ಎಂದರೆ ಕಿಡ್ನಿ. ಅದರೊಳಗೆ ತಿರುಗುಮುರುಗಾಗಿ ಇಟ್ಟ ಆಲಿಗೆ(ಫನೆಲ್)ಗಳು ಹಲವು. ಇದಕ್ಕೆ ‘ಕೇಲಿಕ್ಸ್ ’ ಎಂಬ ಹೆಸರು. ದೇಹದ ನಾನಾ ಮೂಲೆಯ ರಕ್ತನಾಳಗಳ ಸುಸಂಬದ್ಧ ಜೋಡಣೆ ಎರಡು ಕಿಡ್ನಿಗಳ ರಚನೆಯ ಹಿಂದಿರುವ ಕಸರತ್ತು. ಕೂದಲೆಳೆಗಿಂತ ಕಿರಿ ಹಿರಿ ಲೋಮನಾಳಗಳು ಎರಡೂ ಕಿಡ್ನಿಯೆಂಬ ಮೂತ್ರಾಗಾರ ಕಾರ್ಖಾನೆಗೆ ಅಹರ್ನಿಶಿ ಮಲಿನ ರಕ್ತದ ಹರಿವಿಗೆ ಕಾರಣ. ದೇಹದ ಅನಗತ್ಯ ವಸ್ತುಗಳು ಆಲಿಕೆಯ ಮೂಲಕ ಸೋಸಿದಾಗ ಕೆಳಗಡೆ ಪ್ರವಹಿಸುತ್ತವೆ, ಅಲ್ಲಿ ತ್ಯಾಜ್ಯ ವಿಂಗಡಣೆ. ಪರಿಶುದ್ಧ ರಕ್ತ ಮತ್ತೆ ಹೃದಯಾಭಿಮುಖ ಚಲನೆ. ಶೇಖರಿತ ತ್ಯಾಜ್ಯ ಸಾಗರದತ್ತ ಹರಿಯುವ ಹಿರಿ ಕಿರಿ ನೀರ್ಗಾಲುವೆಗಳಂತೆ ಎರಡು ಸಣ್ಣ ನಲಿಕೆಗಳ ಮೂಲಕ ಬಸ್ತಿ ಎಂಬ ಬ್ಲಾಡರ್ (ಬಲೂನಿನಂತಹದು) ಸೇರುತ್ತದೆ. ಮೂತ್ರ ತಯಾರಾಯಿತು. ಅಲ್ಲಿ ಸಂವೇದನೆ ಶುರು. ಹೊರ ಹಾಕುವ ಜವಾಬುದಾರಿ ನಮ್ಮದು. ಮೂತ್ರ ಕಟ್ಟುವ, ಮುಂದೆ ದೂಡುವ ಮೂರ್ಖತನದಿಂದ ‘ಅಶ್ಮರೀ’ ಅಂದರೆ ಕಲ್ಲು ತಯಾರಿ. ಅವು ಹೊರಗಿನಿಂದ ಬಂದುದಲ್ಲ. ತ್ಯಾಜ್ಯದ ತುಣುಕುಗಳು ಒಟ್ಟಾಗಿ ಹಿಟ್ಟು ರೂಪದವು. ಕ್ರಮೇಣ ಅದು ಗಟ್ಟಿಯಾದೀತು. ಕೊನೆಗೆ ಅತೀವ ವೇದನೆ. ಯೂರೇಟು, ಒಕ್ಸಾಲೇಟು, ಫಾಸ್ಫೇಟ್ ಎಂಬಿತ್ಯಾದಿ ರಾಸಾಯನಿಕಗಳವು. ಟೊಮೆಟೊ ನಿರಂತರ ತಿಂದರೆ ಮೂತ್ರಾಶಯದ ಕಲ್ಲು ಬೆಳೆ ವಿಪುಲ. ಅದರಿಂದ ದೂರವಿರಿ. ಧಾರಾಳ ದ್ರವಾಹಾರ ಬಳಸಿರಿ. ಕಡು ಬೇಸಿಗೆಗೆ ಕಲ್ಲಂಗಡಿ ತಿನ್ನುವ ಮಾರ್ಗ ಒಳಿತಲ್ಲ. ಸಿಟ್ರಸ್ ಹಣ್ಣುಗಳ ಪಾನಕ, ಬೇಲದ ಮತ್ತು ಕಾಶಿ ಬಿಲ್ಪತ್ರೆ ಪಾನಕ ಅತ್ಯುತ್ತಮ. ಕೃತಕ ಗೊಬ್ಬರದ ಬಳಕೆಯ ಕಲ್ಲಂಗಡಿ, ಕರಬೂಜದ ಬಗ್ಗೆ ಕೊಂಚ ಎಚ್ಚರವಿರಿ.

ADVERTISEMENT

ಬಾರ್ಲಿ ನೀರಿನ ಮತ್ತು ಎಳನೀರಿನ ಸೇವನೆಯ ಉಪಾಯ ಉತ್ತಮ. ಮತ್ತೆ ಎಳನೀರಿನ ಬೆಳೆಗೆ ಯದ್ವಾ ತದ್ವಾ ರಾಸಾಯನಿಕಗಳ ಒಳಸುರಿ ಬಗ್ಗೆ ಎಚ್ಚರವಿರಲಿ. ಬಾಟಲೀಕರಿಸಿದ ರ‍್ವೋ ನೀರಾಗಲೀ, ಉಳಿದ ಕೃತಕ ಪೇಯಗಳಾಗಲೀ ಖಂಡಿತ ಉಪಕಾರ ಮಾಡದು;ದೂರವಿರಿ. ಕಾದಾರಿದ ನೀರು, ತಾಜಾ ಹಣ್ಣಿನ ರಸ, ಕಬ್ಬಿನ ಹಾಲು ಕುಡಿದರೆ ಮೂತ್ರ ಸೋಂಕು ತಡೆಗೆ ವಿರಾಮ. ನೆನೆದ ಎಳ್ಳು ಮತ್ತು ಹೆಸರು ಕಾಳು ಪಾನಕ ಕುಡಿದಾಗ ಮೂತ್ರಾಂಗಗಳಿಗೆ ಉಪಕಾರ. ಬಿಸಿಲ ಬೇಗೆಗೆ ತಡೆ. ಮೊಸರು ಬೇಡ. ಹಾಲಿನ ಉತ್ಪನ್ನಗಳ ಬಗ್ಗೆ ಧಾರಾಳತನ ಉತ್ತಮ. ಅಚ್ಛ ಸ್ನೇಹ ಎಂದರೆ ಬೆಣ್ಣೆ ಮತ್ತು ತುಪ್ಪದ ಬಳಕೆ. ಬಿಸಿನೀರಿನ ಸಂಗಡ ಅದನ್ನು ಸೇವಿಸಿರಿ. ಮಜ್ಜಿಗೆಯ ಧಾರಾಳ ಬಳಕೆ, ಹಸಿ ತೆಂಗಿನಕಾಯಿ ಹಾಲು ಕುಡಿದರೆ ತಂಪು. ಮಲ ಮತ್ತು ಮೂತ್ರ ಸ್ರಾವಕ್ಕೆ ಸರಾಗ. ಉಪ್ಪಿನಂಶ ಕಡಿಮೆ ಬಳಸಿರಿ. ಖಾರವಂತೂ ಕೇವಲ ರುಚಿಗೆ ಮಾತ್ರ ಸಾಕು. ತಂಬಾಕು ಮದ್ಯದ ಚಟದಿಂದ ಬಿಸಿಲುಗಾಲದಲ್ಲಿ ಖಂಡಿತ ದೂರವಿರಿ. ಹಗಲು ನಿದ್ದೆಯಿಂದ ನಿಮಗೆ ವಿಶ್ರಾಂತಿ ದಕ್ಕೀತು. ಒಳಾಂಗಗಳ ಸೋಮಾರಿತನದಿಂದ ಕಫ ಹೆಚ್ಚಿ ಮೂತ್ರಾಂಗ ಬಳಲುವ ಅಪಾಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.