ADVERTISEMENT

ಕ್ಷೇಮ–ಕುಶಲ | ಆ್ಯಂಟಿಬಯಾಟಿಕ್‌; ತಪ್ಪು– ಒಪ್ಪು

ಡಾ.ಕಿರಣ್ ವಿ.ಎಸ್.
Published 12 ಮೇ 2025, 23:30 IST
Last Updated 12 ಮೇ 2025, 23:30 IST
   

ಆರೋಗ್ಯಕ್ಷೇತ್ರದಲ್ಲಿ ಇಪ್ಪತ್ತನೆಯ ಶತಮಾನದ ಅತ್ಯಂತ ಮಹತ್ವದ ಸಾಧನೆ ಎಂದರೆ ಆ್ಯಂಟಿಬಯಾಟಿಕ್ ಔಷಧಗಳ ಆವಿಷ್ಕಾರ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಸೋಂಕುಗಳ ಚಿಕಿತ್ಸೆಗೆ ಪ್ರಾಯೋಗಿಕವಾಗಿ ಲಭ್ಯವಾದ ‘ಪೆನಿಸಿಲಿನ್’ ಎಂಬ ಆ್ಯಂಟಿಬಯಾಟಿಕ್, ಔಷಧವಿಜ್ಞಾನದ ಮಹಾಸಂಕ್ರಮಣವೊಂದಕ್ಕೆ ನಾಂದಿ ಹಾಡಿತು. ನೂರಾರು ಬಗೆಯ ಆ್ಯಂಟಿಬಯಾಟಿಕ್ ಔಷಧಗಳು ಈಗ ಲಭ್ಯವಿವೆ. ಇಂದಿಗೂ ಪ್ರತಿದಿನವೂ ಸಾವಿರಾರು ಪ್ರಾಣಗಳು ಆ್ಯಂಟಿಬಯಾಟಿಕ್ ಔಷಧಗಳ ನೆರವಿನಿಂದ ಉಳಿಯುತ್ತಿವೆ.

ಆ್ಯಂಟಿಬಯಾಟಿಕ್ ಔಷಧಗಳಿಗೆ ವ್ಯತಿರಿಕ್ತ ಪರಿಣಾಮಗಳೂ ಇವೆ. ಶರೀರದ ಮೇಲೆ ಅವುಗಳ ದುಷ್ಪರಿಣಾಮಗಳೂ ಸಾಕಷ್ಟಿವೆ. ಹೊಟ್ಟೆ ತೊಳಸುವುದು, ವಾಂತಿ, ಭೇದಿ, ತಲೆಸುತ್ತು, ರಕ್ತಕೋಶಗಳ ವ್ಯತ್ಯಯ, ಸುಸ್ತು, ಹಸಿವಾಗದಿರುವುದು ಮೊದಲಾದ ಅಡ್ಡಪರಿಣಾಮಗಳು ಆ್ಯಂಟಿಬಯಾಟಿಕ್ ಔಷಧಗಳನ್ನು ಸೇವಿಸುವ ಬಹಳಷ್ಟು ಜನರಲ್ಲಿ ಕಾಣುತ್ತವೆ. ಕೆಲವು ಆ್ಯಂಟಿಬಯಾಟಿಕ್ ಔಷಧಗಳು ಕೆಲವು ನಿರ್ದಿಷ್ಟ ವ್ಯಕ್ತಿಗಳಲ್ಲಿ ತೀವ್ರವಾದ ಅಲರ್ಜಿ ಪ್ರತಿಕ್ರಿಯೆಯ ಮೂಲಕ ಪ್ರಾಣಾಪಾಯವನ್ನೂ ಉಂಟುಮಾಡಬಲ್ಲವು. ಎಗ್ಗಿಲ್ಲದೆ ಬಳಸುವ ಆ್ಯಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾದಂಥ ಸೋಂಕುಕಾರಕ ಜೀವಿಗಳು ಪ್ರತಿರೋಧ ಬೆಳೆಸಿಕೊಳ್ಳಬಲ್ಲವು. ಇದರಿಂದ ಆ್ಯಂಟಿಬಯಾಟಿಕ್ ಔಷಧದ ಪರಿಣಾಮ ಕುಗ್ಗಿ, ಕೆಲಸಕ್ಕೆ ಬಾರದಂತಾಗುತ್ತದೆ. ಹೀಗಾಗಿ, ಆ್ಯಂಟಿಬಯಾಟಿಕ್ ಔಷಧಗಳ ಬಳಕೆಯ ಬಗ್ಗೆ ಕಟ್ಟೆಚ್ಚರ ಇರಬೇಕು.

ಆ್ಯಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಳ್ಳುವುದು ನಮ್ಮ ಕಾಲಘಟ್ಟದ ಅತ್ಯಂತ ಗಂಭೀರ ಸಮಸ್ಯೆಯಾಗುತ್ತಿದೆ. ಜಗತ್ತಿನ ಯಾವ ದೇಶವೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇಂತಹ ಪ್ರತಿರೋಧದ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ 2050ರ ವೇಳೆಗೆ ವಾರ್ಷಿಕವಾಗಿ ಸುಮಾರು ಒಂದು ಕೋಟಿ ಮಂದಿ ಚಿಕಿತ್ಸೆಯ ನಿಯಂತ್ರಣಕ್ಕೆ ಸಿಗದ ಸೋಂಕುಗಳಿಗೆ ಬಲಿಯಾಗುತ್ತಾರೆ ಎಂಬ ಆಘಾತಕಾರಿ ಅಂಶ ವ್ಯವಸ್ಥಿತ ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿದೆ.

ADVERTISEMENT

ಪರಿಣಾಮಕಾರಿ ಕ್ರಮಗಳು ಎಂದರೇನು? ತಾರ್ಕಿಕ ಆಲೋಚನೆಯ ಪ್ರಕಾರ ನಿರುಪಯುಕ್ತ ಔಷಧದ ಸ್ಥಾನದಲ್ಲಿ ಹೊಸ ಆ್ಯಂಟಿಬಯಾಟಿಕ್ ಔಷಧದ ಆವಿಷ್ಕಾರ ಆಗಬೇಕು. ಇದು ಸುಲಭದ ಮಾತಲ್ಲ. ಔಷಧ ಆವಿಷ್ಕರಣ ನಿಯಮಗಳು ವಿಪರೀತ ಕಠಿಣ. ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಹೀಗಾಗಿ ಆ್ಯಂಟಿಬಯಾಟಿಕ್ ಔಷಧಗಳ ಆವಿಷ್ಕರಣ ಪ್ರಕ್ರಿಯೆ ಬಹಳ ದುಬಾರಿಯೂ, ದೀರ್ಘಕಾಲಿಕವೂ ಆಗುತ್ತದೆ. ಹೊಸದೊಂದು ಆ್ಯಂಟಿಬಯಾಟಿಕ್ ಔಷಧವನ್ನು ಪತ್ತೆ ಮಾಡಲು ಸುಮಾರು 10-15 ವರ್ಷಗಳ ಕಾಲ ಹಿಡಿಯುತ್ತದೆ. ಇದಕ್ಕೆ ಆಗುವ ಖರ್ಚು ಸುಮಾರು ಒಂದು ಬಿಲಿಯನ್ ಡಾಲರ್ (ಸುಮಾರು 8500 ಕೋಟಿ ರೂಪಾಯಿಗಳು). ಇಷ್ಟು ಖರ್ಚು ಮತ್ತು ಕಾಲವನ್ನು ವ್ಯಯಿಸುವುದು ಕೆಲವೇ ದೈತ್ಯ ಔಷಧ ಕಂಪನಿಗಳಿಗೆ ಮಾತ್ರ ಸಾಧ್ಯ. ಹೀಗಿರುವಾಗ, ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಎಷ್ಟು ಹೊಸ ಆ್ಯಂಟಿಬಯಾಟಿಕ್ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲು ಸಾಧ್ಯ? ದುಬಾರಿ ಬೆಲೆಯನ್ನು ತೆತ್ತು ಅವುಗಳನ್ನು ಖರೀದಿಸಲು ಎಷ್ಟು ಜನರಿಗೆ ಚೈತನ್ಯ ಇದ್ದೀತು? ಅದನ್ನು ಜನರು ದುರುಪಯೋಗ ಪಡಿಸಿಕೊಂಡು, ಪ್ರತಿರೋಧ ಬೆಳೆಯುವಂತೆ ಮಾಡಿ ಹಾಳುಗೆಡವುದಿಲ್ಲವೆಂಬ ಖಾತ್ರಿ ಏನು? ತತ್ಕಾರಣ, ತಾರ್ಕಿಕವಾದರೂ ಇದು ಸಮರ್ಥವಾದ ಆಯ್ಕೆಯಲ್ಲ.

ಆ್ಯಂಟಿಬಯಾಟಿಕ್ ಔಷಧಗಳನ್ನು ಜತನದಿಂದ ಬಳಸುವುದು ಮತ್ತೊಂದು ದಾರಿ. ಇದು ಕೇವಲ ನಿಯಮಗಳಿಂದ ಸಾಧ್ಯವಾಗುವ ಮಾತಲ್ಲ. ಪ್ರಗತಿಶೀಲ ದೇಶಗಳಲ್ಲಿ ಜನಸಾಮಾನ್ಯರಿಗೆ ಅನ್ವಯವಾಗುವ ಆರೋಗ್ಯಸಂಬಂಧಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಬಹಳ ಕಷ್ಟ. ಇಂತಹ ನಿಯಮಗಳು ಫಲಕಾರಿಯಾಗಲು ಸಮಷ್ಟಿಯ ಶಿಸ್ತು ಅಗತ್ಯವಾಗುತ್ತದೆ. ನಮ್ಮ ದೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಔಷಧಗಳನ್ನು ಮಾರಾಟ ಮಾಡುವ ಮಳಿಗೆಗಳು ವೈದ್ಯರ ಸಲಹೆಯ ಚೀಟಿ ಇಲ್ಲದೆ ಯಾವುದೇ ಆ್ಯಂಟಿಬಯಾಟಿಕ್ ಔಷಧವನ್ನಾದರೂ ಮಾರಾಟ ಮಾಡುತ್ತವೆ. ವೈದ್ಯರು ಯಾವಾಗಲೋ ಯಾವುದೋ ಅಸೌಖ್ಯಕ್ಕೆ ಬರೆದು ಕೊಟ್ಟಿದ್ದ ಔಷಧಗಳನ್ನು ಪುನಃ ಖರೀದಿಸಿ, ಪ್ರತಿಯೊಂದು ಕಾಯಿಲೆಗೂ ಬಳಸುವ ಜನರಿದ್ದಾರೆ. ಜೊತೆಗೆ, ಆ್ಯಂಟಿಬಯಾಟಿಕ್ ಔಷಧಗಳ ಬಗ್ಗೆ ತಮ್ಮ ವ್ಯಾಸಂಗದಲ್ಲಿ ಅಧ್ಯಯನವನ್ನೇ ಮಾಡದ ವೈದ್ಯಪದ್ದತಿಯವರೂ ಮುಕ್ತವಾಗಿ ಅವುಗಳನ್ನು ಸೇವಿಸುವ ಅಧಿಕೃತ ಸಲಹೆಗಳನ್ನು ನೀಡುತ್ತಾರೆ. ಆಸ್ಪತ್ರೆಗಳು ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವ ಉದ್ದೇಶದಿಂದ ಕಡಿಮೆ ಶಕ್ತಿಯ ಆ್ಯಂಟಿಬಯಾಟಿಕ್ ಔಷಧಗಳನ್ನು ಹೆಚ್ಚು ಕಾಲ ನೀಡುವ ಬದಲಿಗೆ, ಹೆಚ್ಚು ಶಕ್ತಿಯ ಆ್ಯಂಟಿಬಯಾಟಿಕ್ ಔಷಧಗಳನ್ನು ಕಡಿಮೆ ಕಾಲ ನೀಡುವ ಅಪಾಯಕಾರಿ ಪದ್ದತಿಗಳನ್ನು ಪಾಲಿಸುತ್ತವೆ.

ಮುಂದುವರಿದ ದೇಶಗಳಲ್ಲಿ ಜನರ ಆರೋಗ್ಯದ ಹೊಣೆಯನ್ನು ಸರ್ಕಾರ ವಹಿಸುತ್ತದೆ. ಅಲ್ಲಿನ ಚಿಕಿತ್ಸೆಗಳಿಗೆ ತಜ್ಞಸಮಿತಿಗಳನ್ನು ರಚಿಸಿರುವ ಕಟ್ಟುನಿಟ್ಟಿನ ನಿಯಮಾವಳಿಗಳು ಇರುತ್ತವೆ. ಯಾವುದಾದರೂ ನಿಯಮವನ್ನು ಉಲ್ಲಂಘಿಸಿದರೆ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಆದರೆ ನಮ್ಮಂತಹ ಬಹುತೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಜನಸಾಮಾನ್ಯರ ಆರೋಗ್ಯದ ಬಗ್ಗೆ ಸರ್ಕಾರ ಜವಾಬ್ದಾರಿ ವಹಿಸುವುದಿಲ್ಲ. ಆರೋಗ್ಯದ ಹೊಣೆಗಾರಿಕೆ ಜನರ ಸ್ವಂತದ್ದೇ ಆಗಿರುತ್ತದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳ ಪಾರುಪತ್ಯ ಹೆಚ್ಚು. ಜವಾಬ್ದಾರಿಯಿಂದ ವಿಮುಖವಾದ ವ್ಯವಸ್ಥೆಗೆ ಯಾವುದೇ ನಿಯಮವನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುವ ನೈತಿಕತೆ ಇಲ್ಲವಾಗುತ್ತದೆ. ಆ್ಯಂಟಿಬಯಾಟಿಕ್’ಗಳನ್ನು ಬೇಕಾಬಿಟ್ಟಿ ಉಪಯೋಗಿಸುವುದರ ದುಷ್ಪರಿಣಾಮಗಳನ್ನು ಇಡೀ ಪ್ರಪಂಚ ಅನುಭವಿಸಬೇಕಾಗುತ್ತದೆ. ಆ್ಯಂಟಿಬಯಾಟಿಕ್ ಬಳಕೆಯಲ್ಲಿ ಸಂಯಮ ಮತ್ತು ನಿಯಮಪಾಲನೆ ಸುರಕ್ಷೆಯ ಪ್ರಬಲವಾದ ಮಾರ್ಗವಾದರೂ, ಅದನ್ನು ಆಚರಣೆಗೆ ಯುಕ್ತವಾಗುವಂತೆ ಜಾರಿಗೊಳಿಸುವುದು ತೀರಾ ಕಷ್ಟ.

ಆಹಾರ, ನೈರ್ಮಲ್ಯ, ಶಿಸ್ತುಬದ್ಧ ಜೀವನಗಳು ಆರೋಗ್ಯರಕ್ಷಣೆಯ ಪ್ರಮುಖ ಭಾಗಗಳು. ಆರೋಗ್ಯವೆನ್ನುವುದು ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದು ಮಾತ್ರವಲ್ಲ; ಕಾಯಿಲೆ ಬಾರದಂತೆ ಸಂರಕ್ಷಿಸಿಕೊಳ್ಳುವುದು ಕೂಡ. ಲಭ್ಯವಿರುವ ಆ್ಯಂಟಿಬಯಾಟಿಕ್’ಗಳ ಸತ್ಪರಿಣಾಮಗಳು ನಮ್ಮ ಮುಂದಿನ ಪೀಳಿಗೆಗೂ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಸಂಘಟಿತ ಜವಾಬ್ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.