ADVERTISEMENT

ಬಿಸಿಲ ತಾಪಕ್ಕೆ ಶ್ವೇತ ವಸ್ತ್ರ

ಮನಸ್ವಿ
Published 17 ಏಪ್ರಿಲ್ 2021, 9:17 IST
Last Updated 17 ಏಪ್ರಿಲ್ 2021, 9:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಸಿಲಿನ ತಾಪ ದಿನ ದಿನಕ್ಕೂ ಏರುತ್ತಿದೆ. ಈ ಬಿಸಿಲ ಧಗೆ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಕಿರಿಕಿರಿ ಮೂಡಿಸುತ್ತದೆ. ಆ ಕಾರಣಕ್ಕೆ ದೇಹಕ್ಕೂ, ಮನಸ್ಸಿಗೂ ಇಷ್ಟವಾಗುವಂತಹ ಉಡುಪು ಧರಿಸುವುದು ಸೂಕ್ತ. ಈಗಂತೂ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಕಾರಣ ಮನೆಯಲ್ಲಿ ಧರಿಸಲು ಸುಲಭವಾಗುವ ಹಾಗೂ ಬೇಸಿಗೆಗೆ ಸೂಕ್ತ ಎನ್ನಿಸುವ ಉಡುಪುಗಳನ್ನು ಧರಿಸುವುದು ಉತ್ತಮ. ಅದರಲ್ಲೂ ಬೇಸಿಗೆಯಲ್ಲಿ ಧರಿಸಲು ಸುಲಭವಾಗುವ, ಸ್ಟೈಲಿಶ್ ಆಗಿರುವ, ಫ್ರಾಕ್‌ನಂತಿರುವ ದಿರಿಸುಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಈಗ ಕೋವಿಡ್‌ ಕಾರಣ ಮದುವೆ, ಮುಂಜಿಯಂತಹ ಕಾರ್ಯಗಳೂ ಝೂಮ್‌ನಲ್ಲೇ ನಡೆಯುವ ಕಾಲ ಬಂದಿದೆ. ಆ ಕಾರಣಕ್ಕೆ ಬೇಸಿಗೆಯೊಂದಿಗೆ ಕಚೇರಿ, ಸಮಾರಂಭಕ್ಕೂ ಹೊಂದುವಂತಹ ಉಡುಪುಗಳನ್ನು ಆಯ್ಕೆ ಮಾಡಿ ತೊಡಬೇಕಾಗುತ್ತದೆ.

ಶ್ವೇತ ವಸ್ತ್ರ
ಬೇಸಿಗೆಗೆ ಬಿಳಿ ಬಣ್ಣದ ಉಡುಪುಗಳು ಧರಿಸಲು ಸೂಕ್ತ ಎನ್ನಿಸುತ್ತವೆ. ಇವು ಸಾಧಾರಣ ಎನ್ನಿಸಿದರೂ ಬೇಸಿಗೆಗೆ ಮುದ ನೀಡುತ್ತವೆ. ಅಲ್ಲದೇ ಬೇಸಿಗೆಯ ಎಲ್ಲಾ ಸ್ಟೈಲ್‌ ಸಮಸ್ಯೆಗಳಿಗೆ ಬಿಳಿ ಬಣ್ಣ ನ್ಯಾಯ ಒದಗಿಸುತ್ತದೆ. ಬಿಳಿ ಬಣ್ಣದ ಮ್ಯಾಕ್ಸಿ ಥರದ ಡ್ರೆಸ್‌ಗಳು, ಕುರ್ತಾ ಪೈಜಾಮ, ಪಲಾಜೊ ಪ್ಯಾಂಟ್‌ಗಳು ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತವೆ. ಅದರಲ್ಲೂ ಪಫ್‌ ಸ್ಲೀವ್ಸ್‌ ಹಾಗೂ ಪಾಪ್ಲಿನ್‌ ಬಟ್ಟೆಯ ದಿರಿಸುಗಳನ್ನು ಮದುವೆಯಂತಹ ಕಾರ್ಯಕ್ರಮಗಳಿಗೂ ತೊಡಬಹುದು. ಮಿಡಿ, ಮಿನಿ ಡ್ರೆಸ್‌ಗಳು ಬೇಸಿಗೆಯಲ್ಲಿ ಧರಿಸಲು ಇಷ್ಟವಾಗುತ್ತದೆ. ಅಲ್ಲದೇ ಈ ತರಹದ ಸಾಧಾರಣ ಉಡುಪಿನೊಂದಿಗೆ ಹೆಚ್ಚು ಆಭರಣ ಧರಿಸಿದರೆ ಅಂದವಾಗಿ ಕಾಣಬಹುದು.

ಮನೆಯಲ್ಲಿ ಧರಿಸುವ ಉಡುಪುಗಳು
ಬೇಸಿಗೆಯಲ್ಲಿ ಮನೆಯಲ್ಲಿ ಧರಿಸಲು ನೈಟ್‌ಗೌನ್‌ನಂತಹ ದಿರಿಸು ಹೆಚ್ಚು ಸೂಕ್ತ ಎನ್ನಿಸುತ್ತವೆ. ಅಗಲ ಪೈಜಾಮದಂತಹ ಕಾಟನ್‌ ಪ್ಯಾಂಟ್‌ಗಳು ಧರಿಸಲು ಆರಾಮದಾಯಕ ಎನ್ನಿಸುತ್ತವೆ. ಉದ್ದನೆಯ ಹಾಗೂ ಗಿಡ್ಡನೆಯ ಡ್ರೆಸ್‌ಗಳು ಸುಂದರವಾಗಿ ಕಾಣುತ್ತವೆ. ರಫಲ್‌ ಕೇಪ್ಡ್ ಸ್ಲೀವ್ಸ್‌, ರೌಂಡ್‌ ನೆಕ್‌ನ ಹತ್ತಿ ಹಾಗೂ ಲೆನಿನ್‌ ಟಾಪ್‌ಗಳು ಹೆಚ್ಚು ಸೂಕ್ತ.

ADVERTISEMENT

ರ‍್ಯಾಪ್‌ ದಿರಿಸು
ಕಟ್ಟಿಕೊಳ್ಳುವಂತಿರುವ ಅಥವಾ ಸುತ್ತಿಕೊಳ್ಳುವಂತಹ ದಿರಿಸುಗಳು ಕಚೇರಿ ಕೆಲಸಕ್ಕೆ, ವಾರಾಂತ್ಯದಲ್ಲಿ ಹೊರ ಹೋಗಲು ಹೆಚ್ಚು ಉಪಯುಕ್ತ ಎನ್ನಿಸುತ್ತವೆ. ಇವು ಧರಿಸಲು ಸುಲಭ ಹಾಗೂ ಧರಿಸಿದಾಗ ಟ್ರೆಂಡಿ ಲುಕ್ ನೀಡುತ್ತವೆ.

ನೆರಿಗೆಯ ಮ್ಯಾಕ್ಸಿ
ಗಿಡ್ಡನೆಯ ಫ್ರಾಕ್‌ ಬೇಸಿಗೆಯಲ್ಲಿ ಹೆಚ್ಚು ಸೂಕ್ತ ಉಡುಪು. ಅದರಲ್ಲೂ ಹೆಚ್ಚು ತಿಳಿಬಣ್ಣದ ಡ್ರೆಸ್‌ ಅನ್ನು ತೊಡಬೇಕು. ಹೆಚ್ಚು ನೆರಿಗೆಗಳಿರುವ ಮ್ಯಾಕ್ಸಿ ಡ್ರೆಸ್ ಕೂಡ ಸೌಂದರ್ಯವನ್ನು ಹೆಚ್ಚಿಸುತ್ತದೆ.

ವರ್ಕ್‌ ಫ್ರಂ ಹೋಂ ಉಡುಪು
ಈಗ ಕೊರೊನಾ ಹೆಚ್ಚುತ್ತಿರುವ ಕಾರಣ ಇನ್ನಷ್ಟು ಕಾಲ ಮನೆಯಿಂದಲೇ ಕಚೇರಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಝೂಮ್‌ನಲ್ಲಿ ಮೀಟಿಂಗ್‌ ಸೇರಿದಂತೆ ಇತರ ಕೆಲಸಗಳನ್ನು ಮಾಡಬೇಕಿದೆ. ಚೆನ್ನಾಗಿ ಕಾಣಿಸುವ ಹಾಗೂ ಬೇಸಿಗೆಗೆ ಹೊಂದುವ ಟೀ ಶರ್ಟ್‌ಗಳನ್ನು ಧರಿಸುವುದು ಉತ್ತಮ. ಬೇಸಿಗೆಯಲ್ಲಿ ಶಾರ್ಟ್‌ ಸ್ಲೀವ್ಸ್‌ ಹಾಗೂ ಸ್ಲೀವ್‌ಲೆಸ್‌ ಡ್ರೆಸ್‌ಗಳು ಹೆಚ್ಚು ಹೊಂದುತ್ತವೆ.

ಪೋಲ್ಕಾ ಡಾಟ್ ಉಡುಪು
ಪೋಲ್ಕಾ ಡಾಟ್ ಇರುವ ಚಿಕ್ಕ ಫ್ರಾಕ್‌ನಂತಹ ಉಡುಪುಗಳು ಮನೆಯಲ್ಲಿ ಮಾತ್ರವಲ್ಲ, ಹೊರಗಡೆ ಹೋಗುವಾಗಲೂ ಹೊಂದುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.