ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಬಹುಳಷ್ಟು ಮಂದಿ ತೂಕ ಕಡಿಮೆ ಮಾಡಿಕೊಳ್ಳಲು, ತೆಳ್ಳಗಾಗಲು ಏನೇನಲ್ಲ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಕೆಲವರಂತೂ ತೂಕ ಹೆಚ್ಚಳದಿಂದ ಎಷ್ಟು ಫ್ರಸ್ಟೇಟ್ ಆಗಿಬಿಟ್ಟಿರುತ್ತಾರೆ ಎಂದರೆ, ಬೊಜ್ಜು ಕರಗಿಸಲು ಯಾರು ಏನೇ ಹೇಳಿದರೂ ಮಾಡಲು ಸಿದ್ಧರಿರುತ್ತಾರೆ. ಹಾಗೆ ಬಹಳಷ್ಟು ಕಾಲದಿಂದ ಮಾಡುತ್ತಲೇ ಬಂದಿರುತ್ತಾರೆ, ಇದಕ್ಕಾಗಿ ಏನೆನಲ್ಲಾ ಮಾಡಲು ಹೋಗಿ ಬೇಸತ್ತು ಬಿಟ್ಟಿರುತ್ತಾರೆ. ಹೀಗೆ ಅವೈಜ್ಞಾನಿಕವಾಗಿ ತೂಕ ಕಡಿಮೆಯ ಮಾಡಿಕೊಳ್ಳುವ ಹುಸಿ ಪದ್ಧತಿಗಳಲ್ಲಿ ಒಂದು ಊಟ–ತಿಂಡಿಯನ್ನು ಬಿಡುವುದು. ಹಾಗಾದರೆ ನಿಜಕ್ಕೂ ಉಪವಾಸ ಮಾಡುವುದರಿಂದ, ಊಟ–ತಿಂಡಿ ಸ್ಕಿಪ್ ಮಾಡುವುದರಿಂದ ತೆಳ್ಳಗಾಗಲು ಸಾಧ್ಯವಿಲ್ಲ, ಇನ್ನಷ್ಟು ದೇಹ ತೂಕ ಹೆಚ್ಚುತ್ತದೆ ಯಾಕೆ ಎಂಬುದು ಈ ಲೇಖನದಲ್ಲಿದೆ.
ಉಪವಾಸ ಮಾಡೋದ್ರಿಂದ, ಊಟ ತಿಂಡಿಯನ್ನು ಸ್ಕಿಪ್ ಮಾಡೋದ್ರಿಂದ ಬೊಜ್ಜು ಕರಗುವುದಿಲ್ಲ, ಬದಲಾಗಿ ಇನ್ನಷ್ಡು ತೂಕ ಹೆಚ್ಚಾಗುತ್ತದೆ ಎಂಬುದನ್ನು ಕಳೆದ ಲೇಖನದಲ್ಲಿ ನಾನು ಕಾರಣ ಸಹಿತ ವಿವರಿಸಿದ್ದೆ. ಮಾತ್ರವಲ್ಲ ನಾವು ದಪ್ಪ ಆಗಿರುವುದು ತಿಂದಿದ್ದರಿಂದ ಅಲ್ಲ, ಬದಲಾಗಿ ತಿನ್ನದೇ ಇರುವುದರಿಂದ ಎಂತಲೂ ಹೇಳಿದ್ದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳ ಮಹಾಪೂರವೇ ಬಂದಿದೆ. ಬಹಳಷ್ಟು ಮಂದಿ ಬಹಳಷ್ಟು ಅನುಮಾನಗಳನ್ನು, ಪ್ರಶ್ನೆಗಳನ್ನು ಸಹ ಕೇಳಿದ್ದಾರೆ. ಅವುಗಳಲ್ಲಿ ಕೆಲವು ನಿಜಕ್ಕೂ ಉತ್ತಮ ಮತ್ತು ನೈಜ ಸಂದೇಹಗಳಾಗಿದ್ದು, ನಾನು ಅಂಥವಕ್ಕೆ ‘ಪ್ರಜಾವಾಣಿ‘ಯ ಇದೇ ಅಂಕಣದಲ್ಲಿ ಬರಹದ ರೂಪದಲ್ಲಿ ಪರಿಹಾರ ಸೂಚಿಸುತ್ತ ಹೋಗುತ್ತೇನೆ.
ಬಹುತೇಕರು ‘ತಿನ್ನುವದರಿಂದ ದಪ್ಪ ಆಗಿದ್ದಲ್ಲ ಎಂದಿದ್ದೀರಿ. ಇದು ಸಾರ್ವತ್ರಿಕ ನಂಬಿಕೆಯ ವಿರುದ್ಧ ಇದ್ದ ಹಾಗಿದೆಯಲ್ಲಾ? ಜಾಸ್ತಿ ತಿನ್ನುವುದರಿಂದಲೂ ತೂಕ ಹೆಚ್ಚಾಗುತ್ತದೆಯಲ್ಲಾ....’ ಎಂಬ ರೀತಿಯ ಸಂದೇಹ ವ್ಯಕ್ತಪಡಿಸಿದ್ದೀರಿ.
ಇದಕ್ಕೆ ಉತ್ತರ ಹೀಗಿದೆ: ಹೌದು ತಿನ್ನುವುದಕ್ಕೂ –ದೇಹ ತೂಕಕ್ಕೂ ಖಂಡಿತಾ ಸಂಬಂಧ ಇದೆ. ಆದರೆ ದಪ್ಪ ಆಗಿದ್ದು ಕೇವಲ ತಿಂದಿದ್ದರಿಂದಲೇ ಅಲ್ಲ ಮತ್ತು ತಿನ್ನದೇ ಇರುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಆಗುವುದಿಲ್ಲ ಎಂಬ ನನ್ನ ಮಾತಿಗೆ ತುಂಬ ಅರ್ಥಗಳಿವೆ. ಒಂದೊಂದಾಗಿ ನೋಡುತ್ತ ಹೋಗೋಣ. ಮೊಟ್ಟ ಮೊದಲನೆಯದಾಗಿ ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು, ಹೇಗೆ ತಿನ್ನಬೇಕು, ಯಾವುದನ್ನು ತಿನ್ನಬೇಕು ಎಂಬ ಬಗ್ಗೆ ಮೂಲಭೂತ ಮಾಹಿತಿಯ ಕೊರತೆ ಬಹುತೇಕರಿಗೆ ಇದೆ. ಇದರ ಜೊತೆಗೆ ಯಾವುದನ್ನೆಲ್ಲ ತಿನ್ನಲೇ ಬಾರದು, ಯಾವ್ಯಾವುದನ್ನು ಜಾಸ್ತಿ ತಿನ್ನಬಾರದು, ಯಾವಾಗ ತಿನ್ನಬಾರದು, ಹೇಗೆ ಮತ್ತು ಎಲ್ಲಿ ತಿನ್ನಬಾರದು, ಯಾವುದನ್ನೆಲ್ಲ ತಿನ್ನದೇ ಇರಬಾರದು ಎಂಬುದೂ ಸಹ ಮುಖ್ಯಾವಾಗುತ್ತದೆ. ಇದು ಆಹಾರ ವಿಜ್ಞಾನ. ನಮ್ಮ ತೂಕ ಹೆಚ್ಚಾಗಲು ಬಹುಮಖ್ಯ ಕಾರಣವೇ ಈ ಬಗೆಗಿನ ನಮ್ಮ ಮಾಹಿತಿಯ ಕೊರತೆ.
ಎಲ್ಲಕ್ಕಿಂತ ಮೊದಲಿಗೆ ಆಹಾರ ಸೇವನೆಯ ಬಗೆಗೆ ಒಂದು ಗುಟ್ಟನ್ನು ನಿಮಗೆ ಹೇಳಿಬಿಡುತ್ತೇನೆ. ಇದೊಂದನ್ನು ಪಾಲಿಸಿದರೆ, ನಿಮ್ಮ ಬೊಜ್ಜಿನ ಸಮಸ್ಯೆ ಅರ್ಧಕ್ಕರ್ಧ ಪರಿಹಾರವಾದಂತೆಯೇ ಸರಿ. ನೀವು ಇದಕ್ಕಾಗಿ ಆವು ತಜ್ಞರನ್ನೂ ಭೇಟಿ ಮಾಡಬೇಕಿಲ್ಲ, ಯಾವುದೇ ವೈದ್ಯರನ್ನು ಸಂಪರ್ಕಿಸಬೇಕಿಲ್ಲ, ಯಾವ ಜಿಮ್, ವ್ಯಾಯಾಮ, ಕಸರತ್ತು, ದೇಹದಂಡನೆ, ಉಪವಾಸ ಇತ್ಯಾದಿಗಳನ್ನು ಮಾಡಬೇಕಿಲ್ಲ. ವೃಥಾ ಹಣ ಖರ್ಚು ಮಾಡಿಕೊಂಡು ದೇಹಕ್ಕೆ ಒಗ್ಗದ, ಇಲ್ಲವೇ ಅಡ್ಡ ಪರಿಣಾಮ ಬೀರುವ ಪ್ರೋಟೀನ್ ಶೇಕ್‌ಗಳನ್ನಾಗಲೀ, ಸಪ್ಲಿಮೆಂಟ್‌ಗಳನ್ನಾಗಲೀ ಸೇವಿಸಬೇಕಿಲ್ಲ.
ಏನಪ್ಪಾ ಆ ಸೂತ್ರವೆಂದರೆ ’ಜೀವನದಲ್ಲಿ ಯಾವತ್ತೂ ಹಸಿವಾಗದೆಯೇ ಯಾವ ಕಾರಣಕ್ಕೂ, ಯಾರದೇ ಒತ್ತಾಯಕ್ಕೂ, ಎಂಥದ್ದೇ ಸನ್ನಿವೇಶದಲ್ಲೂ ಏನನ್ನೂ ತಿನ್ನಲೇಬೇಡಿ. ಮತ್ತು ಯಾವುದೇ ಕಾರಣಕ್ಕೂ ಹಸಿವಾದ ಮೇಲೆ ಖಾಲಿ ಹೊಟ್ಟೆಯಲ್ಲಿ ಇರಲೇಬೇಡಿ.’
ಈ ವಾಕ್ಯವನ್ನು ಹತ್ತು ಬಾರಿ ಬೇಕಿದ್ದರೆ ಓದಿ ಕೊಳ್ಳಿ. ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಮೊದಲ ಮಹಾಮಂತ್ರವೇ ಇದು. ನಮ್ಮ ನಡುವಿನ ಅರ್ಧದಷ್ಟು ಮಂದಿ ಹಸಿವಾಗಿ ತಿನ್ನುವುದಕ್ಕಿಂತ ಟೈಮ್ ಆಯ್ತು ಎಂಬ ಕಾರಣಕ್ಕೇ ತಿನ್ನುವುದು ಜಾಸ್ತಿ. ನೀವು ನೋಡಿ ಬೇಕಿದ್ದರೆ, ‘ಅಯ್ಯೋ (ಮಧ್ಯಾಹ್ನ) 2 ಗಂಟೆ/ 3 ಗಂಟೆ ಆಗೋಯ್ತು ಇನ್ನೂ ಊಟ ಮಾಡಿಲ್ಲ...’ ಅಂತಲೋ (ರಾತ್ರಿ)ಹತ್ತು ಗಂಟೆ ಆಯ್ತು, ಧಾರಾವಾಹಿ ಮುಗಿತು ಏಳಿ ಊಟ ಮಾಡೋಣ...‘ ಎಂದೋ ಹೇಳುತ್ತಾರೆ. ಇಲ್ಲವೇ ’ಆಫೀಸ್‌ಗೆ ಟೈಮಾಯ್ತು, ಕೆಲಸ ಇದೆ, ಬೇಗ ತಿಂಡಿ ತಿಂದು ಬೇಗ ಹೋರಡಬೇಕು... ಎನ್ನುವವರು ತುಂಬ ಸಿಗುತ್ತಾರೆ. ಇದನ್ನು ಹೊರತುಪಡಿಸಿ, ಊಟ–ಮತ್ತು ತಿಂಡಿಯನ್ನು ಹೊಟ್ಟೆ ಕೇಳುತ್ತಿದೆ, ಹಸಿವಾಗಿದೆ ಅದಕ್ಕಾಗಿ ಮಾಡುತ್ತೇನೆ ಎನ್ನುವವರು ಕೇವಲ ಶೇ10ರಷ್ಟು ಮಮದಿ ಮಾತ್ರವೇ? ಮೊದಲು ಗಡಿಯಾರ ನೋಡಿ ಊಟ–ತಿಂಡಿ ಮಾಡುವುದನ್ನು ನಿಲ್ಲಿಸಿ. ಹಸಿವಾಗುವವರೆಗೆ ಏನನ್ನೂ ತಿನ್ನಬೇಡಿ. ಒಂದೊಮ್ಮೆ ಹಸಿವೆಯೇ ಇಲ್ಲದಿದ್ದರೆ ಹಾಗೆಯೇ ಆಗಾಗಾ ನೀರನ್ನು ಸೇವಿಸುತ್ತ, ಹಸಿವಾಗುವವರೆಗೂ ಆಹಾರ ಸೇವನೆಯನ್ನು ಮುಂದೂಡಿ.
ಇನ್ನು ಶೇ.40ರಷ್ಟು ಮಂದಿ ಹಸಿವಾಗಿದ್ದರೂ ಹೊತ್ತು ಹೊತ್ತಿಗೆ ತಿನ್ನುವುದೇ ಇಲ್ಲ. ‘ಆಫೀಸಿಗೆ ಲೇಟಾಯ್ತು, ತಿಂಡಿ ತಿಂದು ಹೋಗಲು ಟೈಮಿಲ್ಲ, ಮಧ್ಯಾಹ್ನ ಬೇಗ ಊಟ ಮಾಡ್ಕೊಂಡ್ರಾಯ್ತು ಬಿಡು...‘ ಎನ್ನುವ ಮಂದಿ ನಮ್ಮ ನಡುವೆ ಬಹಳಷ್ಟು ಸಿಗುತ್ತಾರೆ. ಮೂರುಗಂಟೆ ಆಗೋಯ್ತು ಇನ್ನು ಊಟ ಮಾಡೋದು ಸರಿ ಹೋಗಲ್ಲ, ಸಂಜೆ ಏನಾದ್ರು ತಿಂಡಿ ತಿನ್ನಕೊಳ್ಳೋಣ ಎಂದೋ, ಸಿಕ್ಕಪಟ್ಟೆ ಸುಸ್ತಾಗಿದೆ, ಈಗ ಊಟ ಮಾಡೋ (ರಾತ್ರಿ) ಪೇಷನ್ಸ್ ಇಲ್ಲ, ಜ್ಯೋಸೋ, ಹಾಲೋ ಕುಡಿದು ಮಲ್ಕೋತೀನಿ, ಊಟ ಬೇಡ ಎಂದೋ ಸ್ಕಿಪ್ ಮಾಡುವವರು ಹೆಚ್ಚಿದ್ದಾರೆ. ಇನ್ನು ಗೃಹಿಣಿಯರಾಗಿದ್ದರೆ ಮನೆಕೆಲಸ, ಗಂಡ–ಮಕ್ಕಳ ಚಾಕರಿ, ಪೂಜೆ–ವ್ರತಗಳು, ವಾರ ಒಪ್ಪೊತ್ತಿನ ಹೆಸರಿನಲ್ಲಿ ತಿಂಡಿ–ಊಟಗಳ ಪರಿವೆಯನ್ನೇ ಬಿಟ್ಟು ಬಿಡುತ್ತಾರೆ.
ಇವೆರಡೂ ನಮ್ಮ ತೂಕ ಹೆಚ್ಚಳದಲ್ಲಿ ಬಹುಮಖ್ಯ ಪಾತ್ರವನ್ನು ವಹಿಸುತ್ತವೆ. ಹೀಗೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯೂಹವು ಶಿಸ್ತನ್ನು ಮರೆಯುತ್ತದೆ. ಅನಿಶ್ಚಿತ ಆಹಾರ ಸೇವನೆಯ ಸನ್ನಿವೇಶದಲ್ಲಿ ದೇಹಕ್ಕೆ ಬೇಕಾದ ಅಗತ್ಯ ಕ್ಯಾಲೋರಿಯನ್ನು ಬ್ಯಾಲೆನ್ಸ್ ಮಾಡಲು ಅನಿವಾರ್ಯವಾಗಿ ಕೊಬ್ಬಿನ ಶೇಖರಣೆ ಮಾಡಲು ಅಡಿಪೋಸ್ ಅಂಗಾಂಶಕ್ಕೆ ಪ್ರೇರಣೆಯನ್ನು ನೀಡುತ್ತದೆ. ಅಡಿಪೋಸ್ ಟಿಶ್ಯೂ ಎಂಬುದು ದೇಹದಲ್ಲಿ ಹೆಚ್ಚುವರಿ ಶಕ್ತಿಯನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸುವ ಮತ್ತು ಉತ್ಪಾದಿಸುವ ಮುಖ್ಯ ಅಂಗಾಂಶ. ಇದು ಚರ್ಮದ ಅಡಿಯಲ್ಲಿ (Subcutaneous fat) ಮತ್ತು ಆಂತರಿಕ ಅಂಗಗಳ ಸುತ್ತಲೂ (Visceral fat) ಕೊಬ್ಬನ್ನು ಶೇಖರಿಸಿಡುತ್ತದೆ. ಅಡಿಪೋಸ್ ಅಂಗಾಂಶವು ಕೊಬ್ಬನ್ನು ಇಂಧನವಾಗಿ ಸಂಗ್ರಹಿಸುವುದರ ಜೊತೆಗೆ, ದೇಹವನ್ನು ಶಾಖದಿಂದ ರಕ್ಷಿಸುತ್ತದೆ ಮತ್ತು ಮೆತ್ತನೆಯ ಪದರವನ್ನು ಒದಗಿಸುತ್ತದೆ.
ನಾವು ಅನಿಮಿಯಮಿತ ಆಹಾರ ಸೇವನೆ ಮಾಡುವುದರಿಂದ ಅಥವಾ ಊಟ–ತಿಂಡಿ ಸ್ಕಿಪ್ ಮಾಡುವುದು, ಅವೈಜ್ಞಾನಿಕ ಉಪವಾಸ ಮಾಡುವುದು ಮಾಡುವುದರಿಂದ ಮತ್ತೂ ದಪ್ಪ ಆಗುತ್ತೇವೆ ಏಕೆ ಎಂಬುದು ನಿಮಗೀಗ ಗೊತ್ತಾಯಿತಲ್ಲಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.