ಮಕ್ಕಳು ಧೂಮಪಾನ ಮಾಡುವುದಕ್ಕೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಸಮಾಲೋಚಕರಾದ ಡಾ. ಡಿ.ಎಂ. ಹೆಗಡೆ ಅವರು ಉತ್ತರಿಸಿದ್ದಾರೆ.
ನನ್ನ ಮಗ ಕದ್ದು ಧೂಮಪಾನ ಮಾಡುತ್ತಾನೆ ಎಂಬ ಗುಮಾನಿ ಇದೆ. ಅದರಿಂದ ಅವನನ್ನು ಹೊರತರುವುದು ಹೇಗೆ?
ಗುಮಾನಿ ಇದ್ದ ಮಾತ್ರಕ್ಕೆ ಅದು ನಿಜವಾಗಿರಲಿಕ್ಕಿಲ್ಲ. ಸುಮ್ಮನೆ ಚಿಂತಿಸಬೇಡಿ. ಮಾಡದ ತಪ್ಪಿಗೆ ಶಿಕ್ಷೆ ನೀಡುವುದಾಗಲಿ, ಹಂಗಿಸಿ ಮಾತನಾಡುವುದಾಗಲಿ ಮಾಡಬೇಡಿ. ಅವ ಧೂಮಪಾನ ಮಾಡಿದ್ದು ನಿಜವಾಗಿದ್ದರೆ ಆಗಲೂ ಗದರಿಸಬೇಡಿ. ಹಾಳಾದೆ ಎಂದು ಕಿರುಚಾಡಬೇಡಿ. ಬೈದು, ಹೊಡೆದು ಮಾಡುವುದರಿಂದ ಇನ್ನೂ ಅವಮಾನವಾಗುತ್ತದೆ. ಆಗ ಅವನು ಇನ್ನೂ ಕೆರಳುತ್ತಾನೆ. ಮೊದಲಿಗೆ ಅವನ ಗೆಳೆಯರ ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳಿ. ದುಶ್ಚಟಗಳಿರುವ ಗೆಳೆಯರ ಸಹವಾಸದಿಂದ ದೂರವಿರುವಂತೆ ಮನವೊಲಿಸಿ. ಸಜ್ಜನರ ಸಹವಾಸ ಹಾಗೂ ಸದಭಿರುಚಿಯ ಹವ್ಯಾಸಗಳ ಮಹತ್ವವನ್ನು ತಿಳಿಸಿ. ಇವೆಲ್ಲಕ್ಕಿಂತಲೂ ಮೊದಲು ಆಗಾಗ ಮಗನ ಎದುರು ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ತೀರ ಸಹಜವಾಗಿ ಮಾತನಾಡಿ. ನೀವು ಧೂಮಪಾನ ಮಾಡುವ ಪಾಲಕರಾಗಿದ್ದರೆ ಹಾಗೆಲ್ಲ ಮಾತನಾಡುವುದು ಕಷ್ಟ. ಸಹಜವಾಗಿಯೇ ಮಗ ಧೂಮಪಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಕ್ಕಳು ಏಕೆ ಧೂಮಪಾನವನ್ನು ಶುರುಮಾಡುತ್ತಾರೆ ಎನ್ನುವುದನ್ನು ಪಾಲಕರು ಮೊದಲು ತಿಳಿದುಕೊಳ್ಳಬೇಕು. ಬಹುತೇಕ ಧೂಮಪಾನ ಮಾಡುವ ಪಾಲಕರ ಮಕ್ಕಳು ಸಹಜವಾಗಿ ಅದನ್ನು ಶುರುಮಾಡುತ್ತಾರೆ. ಸಹೋದರರಿಂದ, ಗೆಳೆಯರಿಂದ, ಸಿನಿಮಾಗಳಿಂದ ಪ್ರಭಾವಿತರಾಗಿ, ಕುತೂಹಲಕ್ಕಾಗಿ ಧೂಮಪಾನವನ್ನು ಶುರುಮಾಡುತ್ತಾರೆ. ಒತ್ತಡದಿಂದಲೂ, ಕೀಳರಿಮೆಯಿಂದಲೂ, ಸೋಲಿನ ಭಯದಿಂದಲೂ, ಖಿನ್ನತೆಯಿಂದಲೂ, ಸಿಗರೇಟಿನ ಆಕರ್ಷಣೆಯಿಂದಲೂ ಅಥವಾ ತಾನು ಧೂಮಪಾನ ಮಾಡುವುದರಿಂದ ಯಾರನ್ನೋ ಸೋಲಿಸಿದೆ, ತಾನು ಗೆದ್ದೆ ಎನ್ನುವ ಕ್ಷಣಿಕ ಸಮಾಧಾನಕ್ಕಾಗಿಯೂ ಧೂಮಪಾನವನ್ನು ಶುರುಮಾಡುತ್ತಾರೆ. ಹದಿಹರೆಯದಲ್ಲಿ ಈ ಚಟಕ್ಕೆ ಬೀಳುವವರ ಸಂಖ್ಯೆ ಹೆಚ್ಚು.
ಮಗನ ವಯಸ್ಸು, ಮಕ್ಕಳು ಹಾಗೂ ಮನೆಯ ಪರಿಸರದ ಬಗ್ಗೆ ವಿವರಗಳನ್ನು ಕೊಟ್ಟಿಲ್ಲ. ಇರಲಿ; ನಿಮಗೆ ಒಬ್ಬನೇ ಮಗನಾಗಿದ್ದು, ಮೊದಲಿನಿಂದಲೂ ಅವನ ಎಲ್ಲ ತಪ್ಪುಗಳನ್ನೂ ಖಂಡಿಸುತ್ತಾ, ಆತ ತಪ್ಪನ್ನು ಮಾಡದೇ ಬೆಳೆಯಬೇಕು ಎನ್ನುವ ಆಸೆಯಿಂದ ಅವನಿಗೆ ಹೊಡೆದು, ಬಡಿದು, ಬೈಯ್ದು ಮಾಡಿರುತ್ತಿದ್ದರೆ, ಆತ ಪರೀಕ್ಷೆಯಲ್ಲಿ ನಪಾಸಾದಾಗಲೂ, ನೀವು ಅವನನ್ನು ನಿಂದಿಸಿ ಶಿಕ್ಷಿಸಿರುತ್ತಿದ್ದರೆ, ಆತ ಹದಿಹರೆಯಕ್ಕೆ ಬರುತ್ತಿದ್ದಂತೆಯೇ, ತೀವ್ರವಾದ ಮಾನಸಿಕ ಒತ್ತಡದಿಂದಾಗಿ ಧೂಮಪಾನವನ್ನು ಮಾಡಬಹುದು.
ಮಗ ಧೂಮಪಾನ ಮಾಡುತ್ತಿದ್ದಾನೆ ಎನ್ನುವುದನ್ನು ಪತ್ತೆ ಮಾಡಿ, ಅವನನ್ನು ಹೊಡೆದು ಬಡಿದು ಮನೆಯಿಂದ ಹೊರಗೆ ಹಾಕುವ ಮಾತನಾಡಬಹುದು. ಅವನನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸಬಹುದು. ಹಾಗೆ ಮಾಡುವುದರಿಂದ ಅವನು ಸುಧಾರಿಸಲಿಕ್ಕಿಲ್ಲ. ಬದಲಾಗಿ ಆತ ಇನ್ನೂ ಕೆಟ್ಟ ಚಟಗಳಿಗೆ ದಾಸನಾಗಬಹುದು. ಪರಿಸ್ಥಿತಿ ಬಿಗಡಾಯಿಸುತ್ತದೆ. ಎಲ್ಲರ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಿ.
ನೀವು ಕಳೆದು ಬಂದಿರುವ ಹದಿಹರೆಯದ ದಿನಗಳನ್ನು ಮರೆಯಬೇಡಿ. ನೀವು ಎದುರಿಸಿದ್ದ ಸಮಸ್ಯೆಗಳಿಗಿಂತಲೂ ಹೆಚ್ಚು ವೈವಿಧ್ಯಮಯವಾದ ಸಮಸ್ಯೆಗಳನ್ನು ನಿಮ್ಮ ಮಗ ಎದುರಿಸುತ್ತಿರಬಹುದು. ಅವನ ಸಂಪೂರ್ಣ ಏಕಾಂಗಿಯಾಗದಂತೆ, ಕುಗ್ಗದಂತೆ ನೋಡಿಕೊಳ್ಳಿ. ಆತ ತನ್ನ ಸ್ವಾತಂತ್ರ್ಯಕ್ಕಾಗಿ ಚಡಪಡಿಸಬಹುದು. ಆತ ಅಂತರ್ಮುಖಿಯಾಗಿ ನರಳುತ್ತಿರಬಹುದು. ಇಂಥ ಸನ್ನಿವೇಶದಲ್ಲಿ ಮಗನಿಗೆ ಆಸರೆಯಾಗಿ, ಸಂತೈಸಿರಿ.
ತಪ್ಪು ಮಾಡುತ್ತಾ ಕಲಿತುಕೊಳ್ಳುತ್ತಾ ಬೆಳೆಯುವುದನ್ನು ಪ್ರೋತ್ಸಾಹಿಸಿ. ಅವನ ಜೊತೆಗೆ ನೀವೂ ಹೊಸತನ್ನು ಕಲಿಯುತ್ತಿದ್ದೀರಿ ಎನ್ನುವುದನ್ನು ಗಮನಿಸಿ. ಅವನಿಗೆ ಸಿಗರೇಟಿನಿಂದ ಸಿಗುವುದಕ್ಕಿಂತ ಹೆಚ್ಚು ಭರವಸೆ ಹಾಗೂ ನೆಮ್ಮದಿ ನಿಮ್ಮಿಂದ, ಮನೆಯಲ್ಲಿ ಸಿಗುವಂತೆ ವರ್ತಿಸಿರಿ. ಅವನ್ನನು ಗೌರವಿಸಿ. ಅದಕ್ಕಿಂತಲೂ ಹೆಚ್ಚಾಗಿ ಅವನ ಮನಸ್ಸು ಸಮಾಧಾನವಾಗಿರುವಂತೆ ನೋಡಿಕೊಳ್ಳಿ. ಮಗನು ನೆಮ್ಮದಿಯಿಂದ ಬೆಳೆಯುತ್ತಿದ್ದರೆ ಮನೆಯೂ ಸಂತೋಷದ ಬೆಳಕಿನಿಂದ ಬೆಳಗುತ್ತದೆ. ಅದು ಸಂಸಾರದ ಯಶಸ್ಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.